ಶುಕ್ರವಾರ, ಏಪ್ರಿಲ್ 3, 2020
19 °C

ಕಾಂಗ್ರೆಸ್-ತೃಣಮೂಲ ಮಧ್ಯೆ ಬಿರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್  ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ನಡುವಣ ಗೆಳೆತನದಲ್ಲಿ ಒಡಕು ಮೂಡಿದೆ.`ತೃಣಮೂಲ ಕಾಂಗ್ರೆಸ್ ಪಕ್ಷವು ಸಿಪಿಎಂ ಪಕ್ಷದ ಬಿ ತಂಡದಂತೆ ಕೆಲಸ ಮಾಡುತ್ತಿದೆಯಲ್ಲದೆ ಬಿಜೆಪಿಯ ಆಜ್ಞೆಗಳನ್ನೂ ಪಾಲಿಸುತ್ತಿರುವಂತಿದೆ~ ಎಂದು ಕಾಂಗ್ರೆಸ್ ಸಂಸದೆ ದೀಪಾ ದಾಸ್‌ಮುನ್ಶಿ ಮಂಗಳವಾರ ಹೇಳಿದ್ದ ಮಾತುಗಳು ಬುಧವಾರ ತೃಣಮೂಲ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ.ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರಯತ್ನವನ್ನು ಸಿಪಿಎಂ ವಿರೋಧಿಸಿತ್ತು.  ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಮಾತ್ರ ಸಿಪಿಎಂ ಜೊತೆ ಕೈಜೋಡಿಸಿ ವಿಶ್ವಾಸಘಾತುಕತನ ಎಸಗಿದೆ ಎಂದೂ ದೀಪಾ ಅವರು ಟೀಕಿಸಿದ್ದರು.ದೀಪಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಸರ್ಕಾರದ ಕ್ರೀಡಾ ಸಚಿವ ಮದನ್ ಮಿತ್ರ `ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುವ ಕಸರತ್ತು ನಡೆಸುವುದಕ್ಕಿಂತ, ಧೈರ್ಯವಿದ್ದರೆ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ನೋಡೋಣ~ ಎಂದಿದ್ದಾರೆ.ಇನ್ನೊಬ್ಬ ಸಚಿವ ಹಕೀಮ್ ಮಾತನಾಡಿ `ತೃಣಮೂಲ ಕಾಂಗ್ರೆಸ್‌ನ ಬೆಂಬಲವಿಲ್ಲದಿದ್ದರೆ, ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನಾಮಾವಶೇಷಗೊಳ್ಳುತ್ತದೆ, ಅಷ್ಟೇ~ ಎಂದಿದ್ದಾರೆ.ಕೇಂದ್ರದ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್‌ನ ನಂತರ ಅತಿ ದೊಡ್ಡ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್‌ನ ವಿರೋಧ ಕಟ್ಟಿಕೊಂಡರೆ ಯುಪಿಎ ಸರ್ಕಾರದ ಉಳಿವು ಕಷ್ಟ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ.ಆದರೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 180 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಅವಲಂಬಿಸಿಲ್ಲ. ಆದರೂ ಆ ಪಕ್ಷವನ್ನು ತನ್ನ ಸರ್ಕಾರದೊಳಗೆ ಸೇರಿಸಿಕೊಂಡಿದೆ.ಎರಡೂ ಪಕ್ಷಗಳ ನಡುವೆ ಸಂಬಂಧ ಈ ತೆರನಾಗಿ ಹಳಸಿರುವಾಗಲೇ, ಸರ್ಕಾರದ ಪ್ರತಿಷ್ಠಿತ ಕಟ್ಟಡ ಒಂದಕ್ಕೆ `ಇಂದಿರಾ ಭವನ~ ಎಂದು ಹೆಸರಿದ್ದುದನ್ನು ಅಳಿಸಿ, ಬಂಗಾಳಿ ಕವಿ ಖಾಜಿ ನಜ್ರುಲ್ ಇಸ್ಲಾಂ ಎಂದು ಪುನರ್‌ನಾಮಕರಣ ಮಾಡಲು ಸರ್ಕಾರ ಹೊರಟಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.`ದೇಶದ ಪ್ರಸಿದ್ಧ ವ್ಯಕ್ತಿಯೊಬ್ಬರ ಹೆಸರನ್ನು ಈ ರೀತಿ ಅಗೌರವದಿಂದ ಕಾಡುವುದು ಸರಿಯಲ್ಲ~ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.ಕಟ್ಟಡದ ಹೆಸರನ್ನು ಬದಲಿಸುವ ಸರ್ಕಾರದ ನಿಲುವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ವ್ಯಾಪಕ ಪ್ರತಿಭಟನೆ ನಡೆಸಿದರು.`ಇಂದಿರಾ ಗಾಂಧಿ ಹಿಂದೆ ಮಮತಾ ಬ್ಯಾನರ್ಜಿಯವರ ನಾಯಕಿಯಾಗಿದ್ದರು ಎಂಬುದನ್ನು ಮಮತಾ  ಮರೆಯದಿರಲಿ~ ಎಂದೂ ರಶೀದ್ ಹೇಳಿದ್ದಾರೆ. ಇಂತಹ ವಿಷಯಗಳ ಕುರಿತು ತಮ್ಮ ಪಕ್ಷದ ವಕ್ತಾರರು ಪ್ರತಿಕ್ರಿಯಿಸುತ್ತಾರೆ ಎಂದು ಮಮತಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)