ಗುರುವಾರ , ಜೂನ್ 17, 2021
21 °C

ಕಾಂಗ್ರೆಸ್ ವಿರುದ್ಧ ರಶ್ದಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಈಚೆಗೆ ನಡೆದ ಜೈಪುರ ಸಾಹಿತ್ಯ ಉತ್ಸವದಲ್ಲಿ ತಾವು ಪಾಲ್ಗೊಳ್ಳದಿರುವಂತಹ ಸಂದರ್ಭ ಸೃಷ್ಟಿಯಾಗಿದ್ದಕ್ಕೆ ದಿಯೊಬಂದ್‌ನ ಮತಾಂಧತೆ ಕಾರಣವಲ್ಲ, ಕಾಂಗ್ರೆಸ್ ಪಕ್ಷದ `ನಿಷ್ಪ್ರಯೋಜಕ ಚುನಾವಣಾ ಲೆಕ್ಕಾಚಾರ ಕಾರಣ~ ಎಂದು ವಿವಾದಿತ ಲೇಖಕ ಸಲ್ಮಾನ್ ರಶ್ದಿ ಶನಿವಾರ ಹರಿಹಾಯ್ದಿದ್ದಾರೆ.`ಇದೆಲ್ಲಾ ನಡೆಯದು~ ಎಂದು ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿರುವ ರಶ್ದಿ, ಇಂತಹ ಕೆಲಸ ಮಾಡಿದ್ದಕ್ಕೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಬೇಕಾಯಿತು ಎಂದು ಜರಿದಿದ್ದಾರೆ.`ಇಂಡಿಯಾ ಟುಡೆ~ ಸಮಾವೇಶದಲ್ಲಿ ಶನಿವಾರ ರಾತ್ರಿ `ಸ್ವಾತಂತ್ರ್ಯದ ಮುಖಾಮುಖಿ: ನಾನು ನಾನೇ ಮತ್ತು ನಾನಿರುವುದೇ ಹೀಗೆ~ ವಿಷಯದ ಬಗ್ಗೆ ಮಾತನಾಡಿದ ಅವರು, ಇಂತಹ ರಾಜಕಾರಣಿಗಳಿಗಿಂತಲೂ ದೇಶದ ಮತದಾರರು ಬುದ್ಧಿವಂತರಾಗಿದ್ದಾರೆ. ಈಗಿರುವುದಕ್ಕಿಂತ ಉತ್ತಮ ನಾಯಕರ ಅಗತ್ಯ ಭಾರತಕ್ಕೆ ಇದೆ~ ಎಂದರು.ದೇಶದ ಮುಸ್ಲಿಮರು ಮತ್ತು ಹಿಂದೂಗಳಲ್ಲಿ ಶೇ 95ರಷ್ಟು ಜನರಿಗೆ ಹಿಂಸಾಚಾರದಲ್ಲಿ ಆಸಕ್ತಿ ಇಲ್ಲ. ಆದರೆ ಮೂಲಭೂತವಾದಿಗಳಿಂದ ದಿವಂಗತ ಎಂ.ಎಫ್.ಹುಸೇನ್ ಸೇರಿದಂತೆ ಇತರ ಕಲಾವಿದರು, ಬರಹಗಾರರಿಗೆ ಪ್ರತಿ ದಿನವೂ ಬೆದರಿಕೆ ಉಂಟಾಗುತ್ತಲೇ ಇದೆ. ಅವರ ದನಿಯನ್ನು ಅಡಗಿಸಲಾಗುತ್ತಿದೆ ಎಂದರು. ಆದರೆ ಇಂತಹ ವಿಷಯಗಳ ಬಗ್ಗೆ ಜನ ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಜನ ನಿದ್ದೆ ಹೋಗಿದ್ದಾರೆ, ಅವರನ್ನು ಎಚ್ಚರಿಸಬೇಕಾಗಿದೆ ಎಂದರು.ತಾವು ಭಾಗವಹಿಸುತ್ತಿರುವ ಕಾರಣಕ್ಕೇ ಇಂದಿನ ಸಮಾವೇಶಕ್ಕೆ ಹಾಜರಾಗದ ಪ್ರಮುಖರಾದ ಒಬರ್ ಅಬ್ದುಲ್ಲ, ಅಖಿಲೇಶ್ ಯಾದವ್, ಪಾಕಿಸ್ತಾನದ ಇಮ್ರಾನ್ ಖಾನ್ ಅವರನ್ನೂ ರಶ್ದಿ ತರಾಟೆಗೆ ತೆಗೆದುಕೊಂಡರು. ಕೆಲ ರಾಜಕಾರಣಿಗಳಿಗೆ ಇದ್ದಕ್ಕಿದ್ದಂತೆಯೇ ಕೆಲಸದ ಒತ್ತಡ ಸೃಷ್ಟಿಯಾಗಿಬಿಡುತ್ತದೆ ಎಂದು ವ್ಯಂಗ್ಯವಾಡಿದರು. ಅದರಲ್ಲೂ ತಮ್ಮ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ಇಮ್ರಾನ್ ಖಾನ್ ಅವರತ್ತ ತೀವ್ರ ವಾಗ್ದಾಳಿ ನಡೆಸಿದ ರಶ್ದಿ, ಮುಲ್ಲಾಗಳು ಮತ್ತು ಸೇನೆಯ ನೆರವಿನಿಂದ ಇಮ್ರಾನ್ ಪಾಕಿಸ್ತಾನದ ಆಡಳಿತಾಧಿಕಾರಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.ಪಾಕಿಸ್ತಾನದಲ್ಲಿ ಒಸಾಮ ಬಿನ್ ಲಾಡೆನ್ ಸಾಕಷ್ಟು ಕಾಲದಿಂದಲೂ ನೆಲೆಸಿದ್ದರಿಂದ ಇಸ್ಲಾಂಗೆ ಧಕ್ಕೆಯಾಗಿದೆ. ವಿಕಿಲೀಕ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಸಾಕ್ಷ್ಯಗಳು, ಪಾಕ್ ಸೇನೆ ಮತ್ತು ಐಎಸ್‌ಐ ಅಧಿಕಾರಿಗಳು ಅಬೊಟ್ಟಾಬಾದ್‌ನಲ್ಲಿ ಲಾಡೆನ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದುದನ್ನು ಬಹಿರಂಗಪಡಿಸಿವೆ. ಇಂತಹವರ ಜೊತೆ ಕುಳಿತು ಭಾರತ ಮಾತುಕತೆ ನಡೆಸಬೇಕೆಂದು ಇಮ್ರಾನ್ ಬಯಸುತ್ತಿದ್ದಾರೆ ಎಂದು ಟೀಕಿಸಿದರು.ಒಂದು ಕಾಲದಲ್ಲಿ ಇಮ್ರಾನ್ ಕ್ರಿಕೆಟ್ ಮೈದಾನದಲ್ಲಿ ಇರುತ್ತಿದ್ದಾಗ ನಾನು ಅವರಿಗೆ ಹೆದರುತ್ತಿದ್ದೆ. ಆದರೆ ಈಗ ಕಾಲ ಬದಲಾಗಿದೆ. ನನ್ನ ಬೌನ್ಸ್‌ಗಳಿಗೆ ಅವರೇ ಹೆದರುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದ ಅವರು, `ಸಟಾನಿಕ್ ವರ್ಸಸ್~ ಬಗ್ಗೆ ಅವರು ಬಯಸುವುದಾದರೆ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ ಎಂದು ಸವಾಲೆಸೆದರು. ಆದರೆ ಕೆಲ ಕ್ಷಣ ಮೌನದ ಬಳಿಕ, ಎಲ್ಲಿ ಬೇಕಾದರೂ ಎಂದು ಹೇಳಲಾಗದು, ಯಾಕೆಂದರೆ ಹಾಗೆ ಹೇಳುವುದು ಸಹ ಅಪಾಯಕಾರಿ ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.