ಸೋಮವಾರ, ಏಪ್ರಿಲ್ 12, 2021
26 °C

ಕಾಂಬೋಡಿಯಾಕ್ಕೆ ಪ್ರಧಾನಿ ಸಿಂಗ್ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಬೋಡಿಯಾಕ್ಕೆ ಪ್ರಧಾನಿ ಸಿಂಗ್ ಆಗಮನ

ನಾಂಪೆನ್ (ಪಿಟಿಐ): ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗ ಸಭೆಯಲ್ಲಿ (ಇಎಎಸ್)ಭಾಗವಹಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಬೋಡಿಯಾದ ರಾಜಧಾನಿಯಾದ ಇಲ್ಲಿಗೆ ಭಾನುವಾರ ಆಗಮಿಸಿದರು.ಶೃಂಗಸಭೆಯು ಸೋಮವಾರ ಆರಂಭವಾಗಲಿದೆ.ಐರೋಪ್ಯ ಮತ್ತು ಪಶ್ಚಿಮದ ಇತರ ರಾಷ್ಟ್ರಗಳಲ್ಲಿ ಆರ್ಥಿಕ ಸಂಕಷ್ಟ ಉಲ್ಬಣ ಸ್ಥಿತಿಯಲ್ಲಿರುವ ಸಮಯದಲ್ಲಿ ನಡೆಯುತ್ತಿರುವ  ಶೃಂಗಸಭೆಯು ಭಾರತಕ್ಕೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. `ಆಸಿಯಾನ್~, `ಇಎಎಸ್~ ರಾಷ್ಟಗಳೊಂದಿಗೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಿ ಆರ್ಥಿಕ ಸಹಕಾರ ವೃದ್ಧಿಸಲು ಇದು ಅವಕಾಶ ಕಲ್ಪಿಸಿದೆ.ಈ ಸಮಯದಲ್ಲೇ `ಆಸಿಯಾನ್~ ರಾಷ್ಟ್ರಗಳ ಜೊತೆಗೆ ಸೇವೆ ಮತ್ತು ಬಂಡವಾಳ ಹೂಡಿಕೆ ಕ್ಷೇತ್ರಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಭಾರತ ಮಾತುಕತೆ ನಡೆಸಲಿದೆ. ಮೂರು ದಿನಗಳವರೆಗೆ ಇಲ್ಲಿರುವ ಪ್ರಧಾನಿ ಸಿಂಗ್ ಅವರು, ಚೀನಾ ಪ್ರಧಾನಿ ವೆನ್ ಜಿಯಾಬಾವೊ ಸೇರಿದಂತೆ ಇತರ ದೇಶಗಳ ಮುಖಂಡರನ್ನು ಭೇಟಿಯಾಗುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ  ಒಬಾಮ ಕೂಡ ನಾಂಪೇನ್‌ಗೆ ಆಗಮಿಸಲಿದ್ದು, ಅವರನ್ನು  ಸಿಂಗ್ ಭೇಟಿಯಾಗುವರೇ ಎಂಬುದು ಇನ್ನೂ ತಿಳಿದಿಲ್ಲ.`ಇಎಎಸ್~ 18 ರಾಷ್ಟ್ರಗಳ ಸಂಘಟನೆಯಾಗಿದ್ದು, ಏಷ್ಯಾ- ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿ ಸಾಧಿಸುವ ಮಂಚೂಣಿ ವೇದಿಕೆ ಯಾಗಿದೆ.ಎಫ್‌ಡಿಐ ನಿರ್ಧಾರ ಅಚಲ: ಶರ್ಮ
ಪ್ರಧಾನಿಯವರ ವಿಶೇಷ ವಿಮಾನ: ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರ ವಲಯದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸುವ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ.  ವಿರೋಧ ಪಕ್ಷಗಳ ಯಾವುದೇ ಸವಾಲನ್ನು ಸಂಸತ್‌ನಲ್ಲಿ ಸಮರ್ಥವಾಗಿ ಎದುರಿಸಲಾಗುವುದು ಎಂದು ವಾಣಿಜ್ಯ ಸಚಿವ ಆನಂದ್ ಶರ್ಮ ಹೇಳಿದರು.ನವದೆಹಲಿಯಲ್ಲಿ ವಿಶೇಷ ಸಭೆ

ನವದೆಹಲಿ ವರದಿ: ಕಾಂಬೋಡಿಯಾಕ್ಕೆ ಹೊರಡುವುದಕ್ಕೂ ಮುನ್ನ ನವದೆಹಲಿಯಲ್ಲಿ ಹೇಳಿಕೆ ನೀಡಿದ ಪ್ರಧಾನಿ ಸಿಂಗ್, `ಪೂರ್ವದತ್ತ ನೋಟ ನೀತಿ~ಯಲ್ಲಿ ಹೇಳಿರುವಂತೆ `ಆಸಿಯಾನ್~ 10 ಸದಸ್ಯ ರಾಷ್ಟ್ರಗಳ ಜೊತೆಗಿನ ಮೈತ್ರಿ ಬಹಳ ಮಹತ್ವದ್ದು ಎಂದರು.`ಪೂರ್ವ ಏಷ್ಯಾ ರಾಷ್ಟ್ರಗಳಿಗೆ ನಾವು ಸ್ನೇಹ ಹಸ್ತಚಾಚಿದ 20ನೇ ವರ್ಷದ ಆಚರಣೆ ಮತ್ತು `ಆಸಿಯಾನ್~ ಶೃಂಗದ 10ನೇ ವರ್ಷಾಚರಣೆಯ ನೆನಪಿಗಾಗಿ ಮುಂದಿನ ತಿಂಗಳು ನವದೆಹಲಿಯಲ್ಲಿ ವಿಶೇಷವಾದ ಸಭೆ ನಡೆಸಲಾಗುವುದು~ ಎಂದರು.`ಈ ಶೃಂಗಸಭೆಯು ನವದೆಹಲಿಯಲ್ಲಿ ನಡೆಯುವ ವಿಶೇಷ ಸಭೆಗೆ ಸಿದ್ಧತೆ ನಡೆಸಲು ಉತ್ತಮ ಅವಕಾಶ ಕಲ್ಪಿಸಿದೆ. ವಿಶೇಷ ಸಭೆಯು ಏಷ್ಯಾದ ರಾಷ್ಟ್ರಗಳೊಂದಿಗೆ ಭಾರತದ ಬಾಂಧವ್ಯವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ~ ಎಂಬ ಆಶಯ ವ್ಯಕ್ತಪಡಿಸಿದರು.`ಈ ಶೃಂಗದ ಮೂಲಕ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವವನ್ನು ಸಾಧಿಸಲು ಪ್ರಯತ್ನಿಸಲಾಗುವುದು. ಇದು `ಆಸಿಯಾನ್~ ಮತ್ತು ಇದರ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಒಳಪಟ್ಟಿರುವ ಮಿತ್ರ ರಾಷ್ಟಗಳನ್ನು ಒಳಗೊಂಡ ಆರ್ಥಿಕ ಸಮುದಾಯವನ್ನು ಹುಟ್ಟುಹಾಕಲು ಇರಿಸುತ್ತಿರುವ ಬಹು ದೊಡ್ಡ ಹೆಜ್ಜೆಯಾಗಲಿದೆ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.