ಭಾನುವಾರ, ಜನವರಿ 26, 2020
28 °C

ಕಾಡಿನ ಹುಡುಗ ಸುಬ್ರಹ್ಮಣ್ಯನ ಸುತ್ತ

-ಸುರೇಶ್ ನಾಗಲಮಡಿಕೆ. Updated:

ಅಕ್ಷರ ಗಾತ್ರ : | |

ಕಾಡಿನ ಹುಡುಗ ಸುಬ್ರಹ್ಮಣ್ಯನ ಸುತ್ತ

ಮ್ಮ ದೇಶದಲ್ಲಿ  ದಕ್ಷಿಣದಲ್ಲೇ ಹೆಚ್ಚು ಸಂಚರಿಸಿರುವ ಮತ್ತು ಪೂಜೆಗೊಳ್ಳುತ್ತಿ ರುವವನು ಸುಬ್ರಹ್ಮಣ್ಯ. ಅದರಲ್ಲೂ ತಮಿಳುನಾಡಿನಲ್ಲಿ ಈತನನ್ನು ಕುಲದೇವರ ಸ್ಥಾನ ಕೊಟ್ಟು ಪೂಜಿಸುತ್ತಾರೆ. ಮೂಲತಃ ಈತ ಬೆಟ್ಟಗಳ ದೈವ. ಕರ್ನಾಟಕದಲ್ಲಿ ಮೂರು ಕಡೆ ನೆಲೆಸಿದ್ದಾನೆ ಎಂಬ ಪ್ರತೀತಿ. ಕುಕ್ಕೆ, ಘಾಟಿ, ನಾಗಲಮಡಿಕೆ.

ಇವುಗಳನ್ನು ಆದಿ, ಮಧ್ಯ, ಅಂತ್ಯ ಎಂದು ಕರೆಯಲಾಗುತ್ತದೆ. ಸುಬ್ರಹ್ಮಣ್ಯನನ್ನು ಕಾರ್ತಿಕೇಯ, ಸ್ಕಂದ, ಷಣ್ಮುಖ, ನಾಗರಾಜ, ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಈತನನ್ನು ಮುರುಗನೆಂದು ಕರೆಯುತ್ತಾರೆ. ಅಲ್ಲಿ ಮನುಷ್ಯಾಕೃತಿಯಲ್ಲಿ ಕಂಡರೆ, ಕರ್ನಾಟಕದ ಹಲವೆಡೆ ಹಾವಿನ ಹೆಡೆ ರೂಪದಲ್ಲಿ, ಹುತ್ತದ ರೂಪದಲ್ಲಿ ಕಾಣಿಸುತ್ತಾನೆ.  ವಾಸ್ತವವಾಗಿ ಶೈವ ಪರಂಪರೆಗೆ ಸೇರಿದ ಷಣ್ಮುಖ ಶಾಕ್ತಕ್ಕೂ ಸೇರಿದವನು. ಈತನನ್ನು ಸಾಕಿದವರು ಯೋಗಿನಿಯರು. ಷಣ್ಮುಖನಿಗೆ ‘ಗುಹ ’ ಎಂಬ ಹೆಸರು ಅಂಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಳಿಕೊಳ್ಳಬೇಕಾದ ವಿಚಾರವೆಂದರೆ ಶೈವ ಪರಂಪರೆಗೆ ಸೇರಿದ ಈತನನ್ನು ವೈಷ್ಣವರು ಕಸಿದದ್ದು ಯಾವಾಗ? ಬುಡಕಟ್ಟು ಜನಾಂಗಗಳ ಆರಾಧ್ಯ ದೈವವಾದ ಷಣ್ಮುಖನು ಅವರಿಂದ ಜಾರಿದ್ದು ಹೇಗೆ? ದ್ರಾವಿಡ ಸಂಸ್ಕೃತಿಯ ಪ್ರತೀಕವೆಂದು ಕಾಣುವ ಇವನ ಚರಿತ್ರೆಗೆ ಮಡಿವಂತಿಕೆಯನ್ನು ಯಾಕಾಗಿ ತುರುಕಿದರು? ಮಡೆ ಮಡೆಸ್ನಾನ ಈತನ ಚರಿತ್ರೆಯಲ್ಲಿ ಇದೆಯಾ? ಎಂಬೆಲ್ಲ ಪ್ರಶ್ನೆಗಳು ಉದ್ಭವಗೊಂಡಾಗ ಅದಕ್ಕೆ ಉತ್ತರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ.

ನಂಬಿಕೆ ಮತ್ತು ಮೂಢನಂಬಿಕೆಗಳ ತೊಯ್ದಾಟದಲ್ಲಿ ದೇವರ ಮತ್ತು ಭಕ್ತಿಯ ಪ್ರಶ್ನೆ ಬಹು ಮುಖ್ಯವಾದದ್ದು. ಜನಪದರ ಲೋಕದೃಷ್ಟಿಯೊಂದು ನಮ್ಮಲ್ಲಿ ಯಾವಾಗಲೂ ಕೆಲಸ ಮಾಡುತ್ತಿರುತ್ತದೆ.   ಮಡೆ ಮಡೆಸ್ನಾನ– ಈ ಪದ್ಧತಿ ಯಾವ ಪುರಾಣಗಳಲ್ಲೂ, ಅದರಲ್ಲೂ ಸ್ಕಂದ ಪುರಾಣಗಳಲ್ಲೂ ನಮಗೆ ಲಭ್ಯವಾಗುವುದಿಲ್ಲ. ಈಚೆಗೆ ಬಂದಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸುಬ್ರಹ್ಮಣ್ಯನ ಚರಿತ್ರೆಯನ್ನು ಹೇಳುವ ಪುಸ್ತಕದಲ್ಲೂ ಇದು ಇಲ್ಲ. ಈ ಪುಸ್ತಕವನ್ನು ಕಾವ್ಯಾಲಯದವರು ಪ್ರಕಟಿಸಿದ್ದಾರೆ.ಈ ದೇವರು ಬೆಟ್ಟಗಳಲ್ಲಿ ಹೆಚ್ಚು ತನ್ನ ಬದುಕನ್ನು ಕಳೆದವನು.  ಜನಪದರು ಈತನನ್ನು ಸ್ವೀಕರಿಸಿರುವುದು ಕಾಡಿನ ದೈವವಾಗಿ. ಇದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ ಸುಬ್ರಹ್ಮಣ್ಯನ ಹೆಂಡತಿ ವಲ್ಲೀದೇವಿ ಬುಡಕಟ್ಟಿನವಳು. ಇವಳು ಕೋಯಾ ಜನಾಂಗದ ನಾಯಕನಾದ ನಂಬಿರಾಜನ ಮಗಳು. ವಲ್ಲಿಯ ಸೌಂದರ್ಯಕ್ಕೆ ಮಾರುಹೋದವನು ಕುಮಾರ. ‘ವೇಲ್’ ಎಂದರೆ ಈಟಿ. ಕೋಯಾ ಜನಾಂಗ ಅರಣ್ಯವಾಸಿಯಾಗಿದ್ದು ಬೇಟೆಗಾಗಿ ಈಟಿಯನ್ನೇ ಉಪಯೋಗಿಸುತ್ತಾರೆ.

ಪ್ರತೀ ವರ್ಷವೂ ಅವರು ಈ ಆಯುಧವನ್ನು ಪೂಜಿಸುತ್ತಾರೆ. ಈ ಈಟಿಯನ್ನು ಆಯುಧವನ್ನಾಗಿ ಧರಿಸಿರುವ ಕುಮಾರಸ್ವಾಮಿಯು ಇವರ ಆರಾಧ್ಯ ದೈವವಾಗಿದ್ದಾನೆ. (ಪುಟ  ೧೫೭, ಸುಬ್ರಹ್ಮಣ್ಯ ಚರಿತ್ರೆ, ತೆಲುಗು ಮೂಲ ಗಣಪತಿ ಸಚ್ಚಿದಾನಂದ ಸ್ವಾಮೀಜಿ) ಬೇಡರ ಈಟಿಗೆ ವೈದಿಕರು ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ. ಆದರೆ ಕೋಯಾ ಜನಾಂಗದ ಬಹುದೊಡ್ಡ ನಾಯಕ ದೈವ ಸುಬ್ರಹ್ಮಣ್ಯನೇ ಆಗಿದ್ದಾನೆ. ಇನ್ನು ಕರ್ನಾಟಕದಲ್ಲಿ ಆಚರಣೆಗಳಲ್ಲಿ ಸುಬ್ರಹ್ಮಣ್ಯನು ಹುತ್ತದ ರೂಪದಲ್ಲೇ ಇದ್ದಾನೆ.ಕನ್ನಡದ ಗಟ್ಟಿ ಸಂಶೋಧಕರಲ್ಲಿ ಒಬ್ಬರಾದ ಶಂಬಾ ಅವರು ನಾಗಾರಾಧನೆ ಕುರಿತು ಚರ್ಚಿಸುವಾಗಲೂ ದ್ರಾವಿಡ ಸಂಸ್ಕೃತಿಯ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸುತ್ತಾರೆ. ಕುಕ್ಕೆಯಲ್ಲಿಯೇ ಪೂಜೆಗೊಳ್ಳುತ್ತಿರುವ ದೇವರು ಯಾರ ದೇವರು? ಘಾಟಿ ಮತ್ತು ನಾಗಲಮಡಿಕೆಗಳಲ್ಲಿ ಪೂಜೆಯಾಗುತ್ತಿರುವ ಸ್ವರೂಪಗಳು ಯಾವ ಬಗೆಯವು? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಕುಕ್ಕೆಯಲ್ಲಿ ಮತ್ತು ನಾಗಲಮಡಿಕೆಯಲ್ಲಿ ಸದ್ಯ ಊರಾಚೆ ಆದಿ ಸುಬ್ರಹ್ಮಣ್ಯರು ನೆಲೆಸಿದ್ದಾರೆ. ವಾಸ್ತವವಾಗಿ ಅವರೇ ಮೂಲವೆಂದು ಭಾವಿಸಬಹುದು.ಏಕೆಂದರೆ ಹುತ್ತ ಮತ್ತು ಹಾವಿನ ಹೆಡೆಯಾಕಾರದ ಆಕೃತಿಗಳು ಇಲ್ಲಿ ಇವೆ. ನಮ್ಮ ಜನಪದರೇ ಇವುಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ಈ ದೇವರು ಮೂಲತಃ ಬುಡಕಟ್ಟಿನ ಜನಾಂಗಗಳದ್ದು. ಕುಕ್ಕೆಯಲ್ಲಿ ಮಲೆಕುಡಿಯರು, ಘಾಟಿ ಮತ್ತು ನಾಗಲಮಡಿಕೆಯಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದವು. (ಈಗಲೂ ಅವರು ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ). ಹುತ್ತ, ಹಾವು, ಹಾಲು ಇವೆಲ್ಲವನ್ನು  ಪ್ರತಿಮೆಗಳಾಗಿ ಸ್ವೀಕರಿಸಿದಾಗ ಶಂಬಾ, ಅಗ್ನಿ, ಸೂರ್ಯ, ಇಂದ್ರ, ಒಂದು ಗುಂಪಾಗಿ ಚರ್ಚೆಗೆ ಎತ್ತಿಕೊಂಡಿದ್ದರೆ, ನೀರು, ಹಾಲು, ವಿಷ, ಕತ್ತಲೆ, ಹಾವು, ಚಂದ್ರ, ಮತ್ತೊಂದು ಗುಂಪು.

ನೀರು, ಹಾಲು ಶಕ್ತಿಯ ಸಂಕೇತವೂ ಹೌದು.  ಸಂತಾನಪ್ರಾಪ್ತಿಗಾಗಿ ಹುತ್ತಕ್ಕೆ ಹಾಲೆರೆಯುವುದು ಮೌಢ್ಯವಲ್ಲ. ಅದು ನಂಬಿಕೆ. ಇದು ಬೇರು. ಆದರೆ ಮಡೆ ಮಡೆಸ್ನಾನ ಆ ಬೇರನ್ನು ಸೀಳುವ ಮೌಢ್ಯ. ಈ ಮಡೆ ಮಡೆಸ್ನಾನ ಸುಬ್ರಹ್ಮಣ್ಯನಿಗೆ ಅಂಟಿಕೊಂಡಿರುವುದು; ಅಂಟಿಸಿರುವುದು ದುರಂತ. ಮಡೆ ಮಡೆಸ್ನಾನವನ್ನು ಆಚರಣೆ ಮಾಡುತ್ತಿರುವವರೆಲ್ಲಾ ಕೆಳಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ.ಕುಕ್ಕೆಯಲ್ಲಿ ಎಲೆಯ ಮೇಲೆ ಹೊರಳಾಡಿದರೆ, ನಾಗಲಮಡಿಕೆಯಲ್ಲಿ ಈ ಸಮುದಾಯಗಳು ಬ್ರಾಹ್ಮಣರು ಊಟ ಮಾಡಿದ ಎಲೆಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಅಲ್ಲಿಯೇ ಸಣ್ಣದಾಗಿ ಹರಿಯುವ ಪಿನಾಕಿನಿ ನದಿಯಲ್ಲಿ ಎಸೆದು ಮಿಂದು ಬರುತ್ತಾರೆ. ಈ ಪದ್ಧತಿ ಯಾವೊಬ್ಬ ಮಾನವಂತನಿಗೂ ನಾಚಿಸುವ ಸಂಗತಿಯಾಗಿದೆ. ಷಷ್ಠಿ ಕಲ್ಪನೆಯನ್ನು ತಂದಿದ್ದು ಯಾರು ? ಎಂಬ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಕೇಳಿಕೊಳ್ಳಬಹುದು. ಜನಪದರ ಪ್ರಕಾರ ಅದು ಸುಬ್ರಹ್ಮಣ್ಯನ ಜನನದ ದಿನ, ಇಂದ್ರನ ಮಗಳಾದ ದೇವಸೇನೆಯೊಂದಿಗಿನ ವಿವಾಹವಾಗಿದ್ದ ದಿನ ಕೂಡ ಆಗಿದೆ. ನಾಗಲಮಡಿಕೆಯಲ್ಲಿ ಆಚರಣೆ ಈ ರೀತಿ ಇದೆ. ಇಲ್ಲಿನ ಜನ ಷಷ್ಠಿಯ ದಿನದಂದು ಸೇವಿಸುವ ಆಹಾರ ಬುಡಕಟ್ಟಿನ ರೂಪಿನದು.  ಸುಬ್ರಹ್ಮಣ್ಯನ ದರ್ಶನದ ನಂತರ ಅವರು ಬದನೆಕಾಯಿಯಿಂದ ತಯಾರಿಸಿದ ಗೊಜ್ಜು ಮತ್ತು ಹೆಸರುಬೇಳೆ ಸೇರಿಸಿ ಬೇಯಿಸಿದ ಅನ್ನವನ್ನು ತಿನ್ನುತ್ತಾರೆ. ಬ್ರಾಹ್ಮಣರು ಇದನ್ನು ಸೇವಿಸುವುದಿಲ್ಲ. ಇಲ್ಲಿಯೂ ಬುಡಕಟ್ಟು  ನಂಬಿಕೆಗಳೇ ಉಳಿದು ಬಂದಿರುವುದನ್ನು ಕಾಣಬಹುದು. ಹಾಗಾಗಿ ಮಡೆ ಮಡೆಸ್ನಾನವೆನ್ನುವುದು ಉದ್ದೇಶಪೂರ್ವಕವಾಗಿ ಮುಗ್ಧಜನರ ಮೇಲೆ ಹೇರಿದ್ದೇ ಹೊರತು ಅದು ನಂಬಿಕೆ ಅಲ್ಲ.ಇಷ್ಟಕ್ಕೂ ಈಗಾಗಲೇ ಚರ್ಚೆಯಾಗಿರುವ ಹಾಗೆ ಸುಬ್ರಹ್ಮಣ್ಯನು ಕೂಡಾ ಒಬ್ಬ ಕಾಡಿನ ಹುಡುಗ. ತಿರುಪತಿಯ ತಿಮ್ಮಪ್ಪನೂ ಕೂಡಾ ಸುಬ್ರಹ್ಮಣ್ಯನೇ ಎಂಬ ವಾದಗಳೂ ಇವೆ. ಮರಾಠಿಯ ಖ್ಯಾತ ಸಂಶೋಧಕರಾದ ಢೇರೆಯವರು ಕೂಡಾ ತಿರುಪತಿ ತಿಮ್ಮಪ್ಪನನ್ನು ಬುಡಕಟ್ಟು ದೈವವೆಂದೇ ಚರ್ಚಿಸಿರುವುದರ ಹಿನ್ನೆಲೆಯು ನೆನಪಿಗೆ ಬರುತ್ತದೆ.ಸುಬ್ರಹ್ಮಣ್ಯನು ಅನೇಕ ಜನರಿಗೆ ತಮಿಳು ಭಾಷೆಯನ್ನು ಕಲಿಸಿದ ಎಂಬುದು ಒಂದು ಪ್ರತೀತಿ. ಅಷ್ಟೇ ಅಲ್ಲ, ತಮಿಳುನಾಡಿನಲ್ಲಿ ಸುಬ್ರಹ್ಮಣ್ಯ ಗುಹೆಗಳಲ್ಲಿ ಹೆಚ್ಚು ಇದ್ದ. ಆದುದರಿಂದ ಈತನಿಗೂ ಸಿದ್ಧರಿಗೂ ಸಂಬಂಧವಿದೆ. ಒಂದು ಆಲಯದಲ್ಲಿ ಹದಿನೆಂಟು ಮಂದಿ ಸಿದ್ಧರಲ್ಲಿ ಒಬ್ಬನಾದ ಭೊಗಮುಖಿ ಎಂಬ ಸಿದ್ಧರ ಆಲಯವೂ ಇದೆ  ಎಂದು ಸಚ್ಚಿದಾನಂದರು ಹೇಳುತ್ತಾರೆ.ಮಾತ್ರವಲ್ಲ ಪಿನ್ನಾಕುಮಲೈ ಎಂಬ ಹೆಸರಿನ ಬೆಟ್ಟದಲ್ಲಿ ನೆಲೆಸಿದ್ದ ಕುಮಾರನನ್ನು ಖಾದರ್ ನೆಂಬ ಮುಸ್ಲಿಂ ನವಾಬ ದರ್ಶಿಸಿ ಖಾದೇಶ್ವರ ಲಿಂಗವನ್ನು ನಿರ್ಮಿಸಿ ಹೋಗುತ್ತಾನೆ. ಇದು ಭಾರತೀಯ ನೆಲದಲ್ಲಿ  ಸಾಮರಸ್ಯಕ್ಕೆ ಸಂಕೇತವಾಗಿದೆ.   ಮಡೆ ಮಡೆಸ್ನಾನ ಪದ್ಧತಿ ಎಷ್ಟರ ಮಟ್ಟಿಗೆ ಪ್ರಭಾವಿಯಾಗಿ ಕಾಡುತ್ತದೆ ಎಂದರೆ ಆಳುವ ಪ್ರಭುತ್ವಕ್ಕೆ ಸಡ್ಡು ಹೊಡೆಯುವಷ್ಟು. ಇದು ಪರಂಪರೆ ಎನ್ನುವಂತೆ ವಾದಿಸುತ್ತಿರುವ ಕೆಲವು ಮೂಲಭೂತವಾದಿಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ.

ಇದು ಅಸಮಾನತೆಯ ದೊಡ್ಡ ಸಂಕೇತವಾಗಿದೆ. ಮುಗ್ಧ ಜನರಲ್ಲಿ ಧಾರ್ಮಿಕ ನಂಬಿಕೆ ಎನ್ನುವಂತೆ ನಂಬಿಸುತ್ತಿರುವುದು ಈ ನೆಲದ ದುರಂತ.  ಸಮಾನತೆಯಲ್ಲಿ ವಿಶ್ವಾಸ ಇರಿಸಿರುವವರು ಇದನ್ನು ಸಮರ್ಥಿಸಿ ಮಾತನಾಡುವುದಿಲ್ಲ. ಸುಬ್ರಹ್ಮಣ್ಯ ಯಾವಾಗಲೂ ದ್ರಾವಿಡ ಸಂಸ್ಕೃತಿಯ ಪ್ರತೀಕವಾಗಿದ್ದಾನೆ.

-ಸುರೇಶ್ ನಾಗಲಮಡಿಕೆ.

ಪ್ರತಿಕ್ರಿಯಿಸಿ (+)