ಸೋಮವಾರ, ಜೂನ್ 21, 2021
30 °C

ಕಾಡು ಹಕ್ಕಿಗಳ ಕಲರವ

ದಯಾನಂದ Updated:

ಅಕ್ಷರ ಗಾತ್ರ : | |

ಆಳೆತ್ತರದ ಡೋಲುಗಳನ್ನು ಬಾರಿಸುತ್ತಿದ್ದ ಯುವಕರ ತಲೆ ಮೇಲೆ ಕೊಂಬು, ಕವಡೆ, ಹಕ್ಕಿಪುಕ್ಕಗಳಿಂದ ಮಾಡಿದ ಕಿರೀಟ. ಡೋಲಿನ ತಾಳಕ್ಕೆ ಹೆಜ್ಜೆ ಹಾಕುವ ಯುವತಿಯರ ಪಾದಗಳಲ್ಲಿ ಭೂಮಿಗೆ ನೋವಾಗುವುದೇನೋ ಎಂಬಂಥಾ ಮೆದು ಘಾತ. ಆದರೂ ಎಲ್ಲರ ಮುಖಗಳಲ್ಲೂ ಕಾಡಿನಿಂದ ಪಟ್ಟಣಕ್ಕೆ ಹೊಸದಾಗಿ ಹಾರಿಬಂದ ಹಕ್ಕಿಗಳ ದಿಗಿಲು.ನೆಹರು ಯುವ ಕೇಂದ್ರ ನಗರದಲ್ಲಿ ಆಯೋಜಿಸಿರುವ ಒಂದು ವಾರದ ನಾಲ್ಕನೇ ಬುಡಕಟ್ಟು ಯುವ ಜನರ ಸಂಸ್ಕೃತಿ ವಿನಿಮಯ ಸಮಾವೇಶದಲ್ಲಿ ಪಾಲ್ಗೊಂಡಿರುವ ಯುವಕ ಯುವತಿಯರು ಯವನಿಕದಲ್ಲಿ ತಮ್ಮ ಕಲೆಗಳ ಪ್ರದರ್ಶನದಲ್ಲಿ ತೊಡಗಿದ್ದರು.ದೇಶದ ನಾನಾ ಭಾಗಗಳ ಆದಿವಾಸಿ ಯುವಕ ಯುವತಿಯರನ್ನು ನೆಹರು ಯುವ ಕೇಂದ್ರ ಬುಡಕಟ್ಟು ಸಂಸ್ಕೃತಿ ವಿನಿಮಯದ ಹೆಸರಲ್ಲಿ ಒಂದು ಗೂಡಿಸುವುದು ಸಮಾವೇಶದ ಉದ್ದೇಶ. ಕಾಡಿನ ನಡುವೆಯೇ ಬೆಳೆದ ಈ ಕಾಡಿನ ಮಕ್ಕಳಿಗೆ ನಾಡಿನ ನಾಗರಿಕತೆಯ ಬಗ್ಗೆ ಅದೆಂಥದೋ ಹೊಸತನದ ಬೆರಗು.

 

ನಗರದ ಸೆಳೆತದ ಜೊತೆಗೇ ನಾಡಿನ ಈ ಆಧುನಿಕತೆ ತಮ್ಮನ್ನೆಲ್ಲಿ ನೆಲೆ ತಪ್ಪಿಸುತ್ತದೋ ಎಂಬಂಥ ಆತಂಕ. ನಾಡಿನ ಜನ ಎಲ್ಲಿ ತಮ್ಮ ಕಲೆಯನ್ನು ಕಡೆಗಣ್ಣಿಂದ ಕಾಣುತ್ತಾರೋ ಎಂಬ ಅಳುಕು.`ನಮ್ಮ ಕಾಡಿನಿಂದ ಹೊರಬಂದು ಮೊದಲು ಶಾಲೆ ಕಲಿತಿದ್ದೇ ನಾನು. ಪದವಿ ಓದಿ ಸ್ವಸಹಾಯ ಸಂಘದ ಮೂಲಕ ಕಾಡಿನ ನನ್ನ ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿಗೆ ಸಂಸ್ಕೃತಿ ವಿನಿಮಯ ಕಾರ್ಯಕ್ರಮಕ್ಕೆ ತಂಡದ ನಾಯಕನಾಗಿ ಬಂದಿರುವುದು ಸಂತೋಷ ತಂದಿದೆ~ ಎಂದು ಹೆಮ್ಮೆಯಿಂದ ನುಡಿದಿದ್ದು ಸೌತಾಲ್ ನೃತ್ಯ ತಂಡದ ನಾಯಕ ಬಿಹಾರದ ಜಿಮೈ ಜಿಲ್ಲೆಯಿಂದ ಬಂದಿರುವ ಪ್ರದೀಪ್ ಯಾದವ್.`ಡೋಲ್ ನಾಚ್ ನೃತ್ಯ ದೇಶದಲ್ಲೇ ಭಿನ್ನವಾದುದು. ಆಳೆತ್ತರದ ಡೋಲುಗಳನ್ನು ಹೊತ್ತು ಬಾರಿಸುವುದು ದೈಹಿಕ ಶ್ರಮದ ಕಲೆ. ಜೊತೆಗೆ ಜೋಂಗ್ರಿ ಹೆಜ್ಜೆ ಹಿಡಿದು ಹೆಜ್ಜೆ ಹಾಕುವ ಯುವತಿಯರ ಪಾದದ ಲಯವೂ ಭಿನ್ನವಾದುದು~ ಎಂದವರು ಪಶ್ಚಿಮ ಬಂಗಾಳದ ಡೋಲ್ ನಾಚ್ ತಂಡದ ನಾಯಕ ರೋದೋವ್.`ಕಾಡು ಬಿಟ್ಟು ಹೊರಬಂದಿದ್ದು ಇದೇ ಮೊದಲು. ಓಡಾಡುತ್ತಿದ್ದರೆ ಮುಗಿಯದ ಊರು ಇದು. ಬೆಂಗಳೂರಿನ ಹೆಸರೇ ಕೇಳಿರದ ನಮಗೆ ಈ ಊರನ್ನು ನೋಡುವ ಅವಕಾಶ ಸಿಕ್ಕಿದ್ದು ಅದೃಷ್ಟ~ ಎಂದು ಭಾವುಕಳಾಗಿದ್ದು ಚತ್ತೀಸ್‌ಗಡದ ನೃತ್ಯ ತಂಡದ ನಾಯಕಿ ಚೌರಾಲಾ.ಇಲ್ಲಿ ಕಲಿತ ಕಲೆಗಳನ್ನು ತಮ್ಮ ಕಾಡಿನ ಹಳ್ಳಿಗಳಲ್ಲಿ ಇತರರಿಗೂ ಕಲಿಸುವ ಇಚ್ಛೆ ಇರುವ ಈ ಕಾಡಿನ ಹಕ್ಕಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯವೂ ನೆಹರು ಯುವ ಕೇಂದ್ರದಿಂದ ನಡೆದಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.