ಸೋಮವಾರ, ಮೇ 16, 2022
30 °C

ಕಾಣದ ಸೌಕರ್ಯ: ಸೊರಗಿದ ಸಂತೆ ಮೈದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಣದ ಸೌಕರ್ಯ: ಸೊರಗಿದ ಸಂತೆ ಮೈದಾನ

ವಿಜಯಪುರ: ಕಸ ವಿಲೇವಾರಿಯಾಗದಿರುವ ಕಾರಣ ಸಂತೆ ಮೈದಾನದಲ್ಲಿ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿದೆ ಎಂದು ಇಲ್ಲಿನ ತರಕಾರಿ ಮಾರಾಟಗಾರರು ದೂರಿದ್ದಾರೆ.ಕಳೆದ ಮೂರು ತಿಂಗಳಿನಿಂದ ಇಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗಿಲ್ಲ. ಬದಲಾಗಿ ಕಲ್ಲು ಚಪ್ಪಡಿಯ ಕೆಳಗೆ ಕಸವನ್ನು ಸುರಿದು ರಾಶಿ ಮಾಡಲಾಗಿದೆ. ಈ ಕಾರಣ ವ್ಯಾಪಾರಗಾರರು ಮತ್ತು ಗ್ರಾಹಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಎಲ್ಲರೂ ರಸ್ತೆ ಬಳಿಯೇ ತರಕಾರಿಯನ್ನು ರಾಶಿ ಹಾಕಿಕೊಂಡು ಮಾರಾಟಮಾಡುತ್ತಿರುವುದರಿಂದ ಸಂತೆಗೆ ಬರುವ ಗ್ರಾಹಕರು ಓಡಾಡಲೂ ಕಷ್ಟವಾಗುತ್ತಿದೆ ಎನ್ನುತ್ತಾರೆ ತರಕಾರಿ ಕಮಿಶನ್ ಏಜೆಂಟ್ ವೆಂಕಟೇಶಪ್ಪ.ಶುಕ್ರವಾರದ ಸಂತೆಗೆ ವಿಜಯಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರೂ ಸೇರುತ್ತಾರೆ. ಈಗಿರುವ ಸಂತೆ ಮೈದಾನವು ಕಿರಿದಾಗಿದೆ. ಇರುವ ಸಂತೆಮೈದಾನದಲ್ಲಿ ಒಂದೆಡೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಕಲ್ಲು ಚಪ್ಪಡಿಗಳಿವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸಂತೆಮೈದಾನವನ್ನು ಸಜ್ಜುಗೊಳಿಸಬೇಕಿದೆ ಎನ್ನುತ್ತಾರೆ ತರಕಾರಿ ಮಾರಾಟಗಾರ ನಾಗರಾಜು.ಕಳೆದ 35 ವರ್ಷಗಳಿಗೂ ಹಿಂದಿನಿಂದಲೂ ನಮ್ಮ ಕುಟುಂಬದವರೇ ಸಂತೆಯಲ್ಲಿ ಸುಂಕ ವಸೂಲಿ ಮಾಡುತ್ತೇವೆ. ಈ ವರ್ಷ 1.60 ಲಕ್ಷ ರೂ.ಗೆ ಟೆಂಡರ್ ಪಡೆದಿದ್ದು, ಟೆಂಡರ್ ವೇಳೆಯಲ್ಲಿ ಸಂತೆಯ ಒಂದು ದಿನ ಮುಂಚೆಯೇ ಮೈದಾನವನ್ನು ಸ್ವಚ್ಚಗೊಳಿಸುವುದಾಗಿ ಪುರಸಭೆಯು ಷರತ್ತಿನಲ್ಲಿ ತಿಳಿಸಿದೆ. ಆದರೂ ಸಂತೆಮೈದಾನವನ್ನು ಶುಚಿಗೊಳಿಸಿಲ್ಲ ಎಂದು ಸುಂಕವಸೂಲಿಗಾರ ಕಲೀಂಪಾಶಾ ದೂರುತ್ತಾರೆ.ಟೆಂಡರ್‌ನಲ್ಲಿ ಕರೆದಷ್ಟು ಮೊತ್ತವನ್ನು ಹರಾಜು ಪ್ರಕ್ರಿಯೆ ಮುಗಿದ ತಕ್ಷಣ ಕಟ್ಟಿಸಿಕೊಳ್ಳುತ್ತಾರೆ. ಆದರೆ ಸ್ವಚ್ಛತೆ ಕಾಯ್ದುಕೊಳ್ಳುವ, ಸೌಲಭ್ಯಗಳನ್ನು ಕಲ್ಪಿಸುವ ಕುರಿತಾದ ದೂರುಗಳಿಗೆ ಪುರಸಭೆಯು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಕಲೀಂಪಾಶಾ ಅವರ ದೂರು.ಶೌಚಾಲಯ ಬೇಕು: ಇಲ್ಲಿನ ಸಂತೆ ಮೈದಾನದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯು 8 ವರ್ಷಗಳ ಹಿಂದೆ ನಿರ್ಮಿಸಿರುವ ಶೌಚಾಲಯವು ಇನ್ನು ಬಿಡುಗಡೆಯ ಭಾಗ್ಯ ಕಾಣದಿರುವುದು ಮಾಲಿನ್ಯವನ್ನು ಇಮ್ಮಡಿಗೊಳಿಸಿದೆ ನಾಲ್ಕು ಲಕ್ಷ ರೂ ವೆಚ್ಚದಲ್ಲಿ 2003 ರಲ್ಲಿ ತರಾತುರಿಯಲ್ಲಿ ನಿರ್ಮಾಣವಾದ ಈ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಒದಗದೆ ಕಾಂಪೌಂಡ್ ಒಳಗೇ ಅವಿತುಕೊಂಡು ನಿರುಪಯುಕ್ತವಾಗಿದೆ.ಸಂತೆ ಮೈದಾನದಲ್ಲಿರುವ ಎರಡು ಶೌಚಾಲಯಗಳ ಸಬ್ಸಿಡಿ ಹಾಗೂ ಬಡ್ಡಿ ಸೇರಿದಂತೆ 5.32 ಲಕ್ಷ ಪಾವತಿಸಿದರೆ ಮಾತ್ರ ನಿರ್ಮೂಲನಾ ಮಂಡಳಿಯು ನಿರ್ಮಾಣಗೊಂಡಿರುವ ಶೌಚಾಲಯಗಳನ್ನು ಪುರಸಭೆಗೆ ಬಿಟ್ಟುಕೊಡುತ್ತದೆ ಅಲ್ಲಿಯವರೆಗೂ ಅದು ಮಂಡಳಿಯ ವಶದಲ್ಲಿರುತ್ತದೆ. ಈ ರೀತಿ ಮುಂಚೆಯೇ ನಿರ್ಣಯವಾಗಿದೆ. ಶೌಚಾಲಯವನ್ನು ಪುರಸಭೆಗೆ ಬಿಟ್ಟುಕೊಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಸಹ ಯಾವುದೇ ಕ್ರಮಗಳು ಜರುಗಿಲ್ಲ ಎಂಬು ಸ್ಥಳೀಯರ ದೂರು.ನೀರಿಲ್ಲ: ಸಂತೆ ದಿನಗಳಂದು ಬರುವ ರೈತರು, ಗ್ರಾಹಕರು, ಮಾರಾಟಗಾರರಿಗೆ ಅನುಕೂಲವಾಗುವಂತೆ ಸಂತೆ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ರೈತ ಮುನಿರಾಜು ಒತ್ತಾಯಿಸಿದ್ದಾರೆ.ಸಂತೆ ಮೈದಾನದ ಸುತ್ತಮುತ್ತ ಹೋಟೆಲ್‌ಗಳೂ ಇಲ್ಲ. ಬೇಸಿಗೆ ದಿನಗಳಲ್ಲಂತೂ ಅನೇಕ ವರ್ಷಗಳಿಂದ ಕುಡಿಯುವ ನೀರಿಗೆ ಆಹಾಕಾರವಿದೆ. ಆದ್ದರಿಂದ ಪುರಸಭೆಯು ಈ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸುವುದು ಸೂಕ್ತ ಎಂದು ತರಕಾರಿ ಮಾರಾಟ ಮಾಡುವ ಲಕ್ಷ್ಮಮ್ಮ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.