ಸೋಮವಾರ, ಮೇ 23, 2022
30 °C

ಕಾದರವಳ್ಳಿಯಲ್ಲಿ ವಾಂತಿಭೇದಿ ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ಹುಣಶಿಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾದರವಳ್ಳಿ ಗ್ರಾಮದಲ್ಲಿ ವಾಂತಿಭೇದಿ ಪ್ರಕರಣಗಳು ಪತ್ತೆಯಾಗಿದ್ದು, ತಾತ್ಕಾಲಿಕ ಕ್ಲಿನಿಕ್ ತೆರೆಯಲಾಗಿದೆ.ಕಾದರವಳ್ಳಿ ಗ್ರಾಮದ ನಿವಾಸಿ ಬಸವಣ್ಣಿ ಗಣಾಚಾರಿ (75) ಅವರು ವಾಂತಿಭೇದಿಯಿಂದ ಸೋಮವಾರ ಮೃತಪಟ್ಟಿದ್ದಾರೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಜಿಲ್ಲಾ ಸಮೀಕ್ಷಾಧಿಕಾರಿ ಡಾ. ಜಗದೀಶ ನುಚ್ಚಿನ, ಜಿಲ್ಲಾ ಎಪಿಡೆಮಿಯಾಲಾಜಿಸ್ಟ್ ಡಾ. ರಜನೀಶ ಮೇಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶೈಲಜಾ ತಮ್ಮಣ್ಣವರ, ಬೈಲಹೊಂಗಲ ತಾಲ್ಲೂಕು ವೈದ್ಯಾಧಿಕಾರಿ ಡಾ. ಪಲ್ಲೇದ ಮಂಗಳವಾರ ಕಾದರವಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಮದ ಗಣಾಚಾರಿ ಓಣಿ ಹಾಗೂ ಹರಿಜನಕೇರಿ ಓಣಿಯಲ್ಲಿ ಜೂನ್ 28ರಿಂದ ಇದುವರೆಗೆ 13 ವಾಂತಿಭೇದಿ ಪ್ರಕರಣಗಳು ವರದಿಯಾಗಿರುವುದು ಬೆಳಕಿಗೆ ಬಂದಿತು. ಈ ಎರಡು ಓಣಿಗಳಲ್ಲಿ ಸುಮಾರು 500 ಜನಸಂಖ್ಯೆ ಇದ್ದು, 100 ಮನೆಗಳಿವೆ. ರೋಗಿಗಳ ಚಿಕಿತ್ಸೆಗಾಗಿ ಡಾ. ಪಾಟೀಲ ನೇತೃತ್ವದಲ್ಲಿ ತಾತ್ಕಾಲಿಕ ಕ್ಲಿನಿಕ್ ತೆರೆಯಲಾಗಿದ್ದು, ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಗ್ರಾಮದಲ್ಲಿನ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿದ್ದು, ಗಟಾರು ನೀರು ಸೇರಿರುವುದರಿಂದ  ಕಲುಷಿತಗೊಂಡ ನೀರನ್ನು ಸೇವಿಸಿದ ಜನರು ವಾಂತಿಭೇದಿಯಿಂದ ಬಳಲುತ್ತಿರುವುದು ವೈದ್ಯರ ತಂಡಕ್ಕೆ ಬೆಳಕಿಗೆ ಬಂತು. ಮನೆ ಮನೆಗೆ ಭೇಟಿ ಮಾಡಿ ಆರೋಗ್ಯ ಕಾರ್ಯಕರ್ತರು ಹ್ಯಾಲೋಜನ್ ಮಾತ್ರೆಗಳನ್ನು ಹಾಗೂ ಓ.ಆರ್.ಎಸ್. ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಜನರಿಗೆ ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯುವಂತೆ ಆರೋಗ್ಯ ಶಿಕ್ಷಣ ನೀಡುತ್ತಿದ್ದಾರೆ.`ಕುಡಿಯುವ ನೀರಿನ ಪೈಲ್‌ನಲ್ಲಿ ಕೊಳಚೆ ನೀರು ಸೇರಿರುವುದರಿಂದ ವಾಂತಿಭೇದಿ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಮದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರನ್ನು ತಾತ್ಕಾಲಿಕವಾಗಿ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ. ಪ್ರಕರಣಗಳಿಂದ ಮಲದ ಎರಡು ಮಾದರಿಗಳನ್ನು ಮತ್ತು ಗ್ರಾಮದ ಮೂರು ಕಡೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ತರಲಾಗಿದೆ. ರೋಗ ಉಲ್ಬಣಗೊಳ್ಳದಂತೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಡಾ. ಜಗದೀಶ ನುಚ್ಚಿನ್ `ಪ್ರಜಾವಾಣಿ'ಗೆ ತಿಳಿಸಿದರು.`ಬಸವಣ್ಣಿ ಗಣಾಚಾರಿ ಅವರಿಗೆ ಚಿಕಿತ್ಸೆ ನೀಡಿರುವ ವರದಿಯನ್ನು ಪರಿಶೀಲಿಸಿದಾಗ, ಅವರಿಗೆ ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು ಎಂಬುದು ತಿಳಿದು ಬಂದಿದೆ. ಅವರು ವಾಂತಿಭೇದಿ ಇರಲಿಲ್ಲ' ಎಂದು ಡಾ. ನುಚ್ಚಿನ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.