ಬುಧವಾರ, ಏಪ್ರಿಲ್ 14, 2021
24 °C

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಜೆ.ಎನ್. ಹಾವನೂರ ಹೇಳಿದರು.

ಬೆಟಗೇರಿಯ ಗಾಂಧಿನಗರದ ಸಮುದಾಯ ಭವನದಲ್ಲಿ ಇತ್ತೀಚೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆಶ್ರಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಸಮಾಜದಲ್ಲಿರುವ ಬಾಲ್ಯವಿವಾಹ, ವರದಕ್ಷಿಣೆ ಪಿಡುಗು, ಲಿಂಗ ತಾರತಮ್ಯ, ಭ್ರೂಣಹತ್ಯೆ, ಸ್ತ್ರೀ ದೌರ್ಜನ್ಯ ಸೇರಿದಂತೆ ಇತರ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಕಾನೂನು ಅರಿವು ಹೊಂದಬೇಕಿದೆ. ಮಹಿಳೆಯೊಬ್ಬಳು ಕಾನೂನು ಅರಿವು ಹೊಂದಿದಲ್ಲಿ ಎಲ್ಲರಲ್ಲಿ ಜ್ಞಾನ ಮೂಡಿಸಿ ಶಾಂತಿ, ಸೌಹಾರ್ದ ಬದುಕು ಸಾಗಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟರು.‘ಎಲ್ಲ ಸಮಸ್ಯೆಗಳಿಗೆ ಪರಿಹಾರವಿದ್ದು, ಮೌಢ್ಯತೆ, ಕೀಳರಿಮೆ ತೊರೆದು, ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸುವ ಸದುದ್ಧೇಶದಿಂದ ಕಾನೂನು ರಥ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ದಿನಗಳ ಕಾಲ ಸಂಚರಿಸ ಲಾಗುವುದು’ ಎಂದು  ತಿಳಿಸಿದರು.ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಾ ವಾರದ ಮಾತನಾಡಿ, ‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸ್ತ್ರೀ ಶಕ್ತಿ ಯೋಜನೆ ಸಾಲ ಸೌಲಭ್ಯ, ಪ್ರೋತ್ಸಾಹಧನ ಸಹಕಾರಿಯಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.ವಕೀಲ ಆರ್.ಎಸ್. ಜವಳಿ ಅವರು ‘ಕೌಟುಂಬಿಕ ದೌರ್ಜನ್ಯ ತಡೆ ನಿಷೇಧ ಕಾಯ್ದೆ’ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀಕಾಂತಮ್ಮ ತ್ವರಿತ ನ್ಯಾಯಾಲಯದ ಪೀಠಾಸೀನಾಧಿಕಾರಿ ಎಂ.ಎಸ್. ಪಾಟೀಲ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಎಸ್.ಎಂ. ಜಾಲವಾದಿ, ಪ್ರಧಾನ ದಿವಾಣಿ ನ್ಯಾಯಾಧೀಶರಾದ ಎಲ್.ಆರ್. ಕುರಣೆ, ಕಾವೇರಿ, ತಹಸೀಲ್ದಾರ ಡಿ.ಬಿ. ಕೊಣ್ಣೂರ, ಎಸ್.ಎಸ್. ಹುರಕಡ್ಲಿ ಮತ್ತಿತರರು ಹಾಜರಿದ್ದರು.

ನ್ಯಾಯಾಧೀಶ ಉಮೇಶ ಮೂಲಿಮನಿ ಸ್ವಾಗತಿಸಿದರು. ಎ.ಎಸ್. ಮಕಾನದಾರ ಕಾರ್ಯಕ್ರಮ ನಿರೂಪಿಸಿದರು. ಬಿ.ಎನ್. ಸಂಶಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.