ಶನಿವಾರ, ಮೇ 8, 2021
26 °C

ಕಾಫಿನಾಡಿನಲ್ಲಿ ಅರಳುತ್ತಿರುವ ಟೇಸ್ಟಿವರ್ಲ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರಮ, ಆತ್ಮವಿಶ್ವಾಸ ಮತ್ತು ಒಂದು ನಿರ್ದಿಷ್ಟ ಗುರಿ ಇದ್ದರೆ ಗ್ರಾಮಾಂತರ ಪ್ರದೇಶದಲ್ಲೂ  ಒಂದು ಉದ್ದಿಮೆ ಸ್ಥಾಪಿಸಿ ಸಾಧನೆ ಮಾಡಬಹುದು ಎಂಬುದನ್ನು ಚಿಕ್ಕಮಗಳೂರು ಜಿಲ್ಲೆಯ ಯುವಕ ಅರವಿಂದ್ ಎಂ. ಎನ್. ತೋರಿಸಿಕೊಟ್ಟಿದ್ದಾರೆ. ಇವರು ಪ್ರತಿಷ್ಠಿತ ವ್ಯಾಪಾರಸ್ಥ ಕುಟುಂಬದಿಂದ ಬೆಳೆದು ಬಂದವರು. ಹಾಗೆಯೇ ಇವರೊಬ್ಬ ಉತ್ತಮ ಕಾಫಿ ಬೆಳೆಗಾರರು ಕೂಡ. ಬೆಂಗಳೂರಿನ ಕ್ರೈಸ್ಟ್ ಕಾಲೇಜ್‌ನಲ್ಲಿ  ಬಿಬಿಎಂ ಪದವಿ ಪಡೆದು ತಮ್ಮ ಹುಟ್ಟೂರಿನಲ್ಲಿಯೇ ಏನಾದರೂ ಸಾಧಿಸಬೇಕೆಂಬ ಛಲದಿಂದ 2001 ರಲ್ಲಿ ತಿಂಡಿ ತಿನಿಸುಗಳ ಉತ್ಪಾದನೆ ಸಂಸ್ಥೆ ಪ್ರಾರಂಭಿಸಿದರು. ಸ್ಥಳೀಯರಿಗೆ ಅದರಲ್ಲೂ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದೇ ಇವರ ಆಸೆಯಾಗಿತ್ತು. ತಮ್ಮ 28ನೇ ವಯಸ್ಸಿನಲ್ಲಿ ಮೊದಲಿಗೆ ಮನೆಯಲ್ಲಿಯೇ ಚಕ್ಕುಲಿ, ಕೋಡುಬಳೆ ಮಾಡುವುದನ್ನು ಕಲಿತರು.  ನೆಂಟರ ಮನೆಗೆ ಹೋದಾಗ ತಿಂಡಿ ಕೊಟ್ಟರೆ ಅದು ಚೆನ್ನಾಗಿದ್ದರೆ ಅದನ್ನು ಹೇಗೆ ಮಾಡುವುದೆಂದು ಕಲಿತರು. ಬೇಕರಿ ಮಾಲ್‌ಗಳಿಗೆ ಹೋಗಿ ಹೊಸ ಹೊಸ ತಿಂಡಿಗಳ ರುಚಿ ನೋಡಿದರು.  ಸ್ಥಳೀಯ ಜನರಿಂದ ಪಾಕದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡು ತಮ್ಮ ಸಂಸ್ಥೆಗೆ  `ಟೇಸ್ಟಿ ವರ್ಲ್ಡ್~ (Tasty world) ಎಂಬ ಹೆಸರಿಟ್ಟು ರುಚಿಕರವಾದ ತಿಂಡಿ ತಿನಿಸುಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡರು. ಪ್ರತಿಷ್ಠಿತ ಮನೆತನದಲ್ಲಿ ಜನಿಸಿ ಚಕ್ಕುಲಿ, ಕೋಡುಬಳೆ ತಯಾರಿಕೆ ಉದ್ದಿಮೆಯಲ್ಲಿ ತೊಡಗುವುದೇ ಎಂದು ಆರಂಭದಲ್ಲಿ ಅನೇಕರು ಗೇಲಿ ಮಾಡಿದರೂ ಇವರು ಎದೆಗುಂದಲಿಲ್ಲ.ದಕ್ಷಿಣ ಭಾರತದ ರುಚಿಕರವಾದ ತಿಂಡಿ ತಿನಿಸುಗಳಾದ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆಯಂತಹ ತಿಂಡಿ ತಿನಿಸುಗಳನ್ನು ಕೇವಲ 5 ಜನರನ್ನು ಕೆಲಸಕ್ಕೆ ಇಟ್ಟುಕೊಂಡು ತಯಾರಿಸಲು ಆರಂಭಿಸಿದರು.  ಹಲವು ಯಂತ್ರಗಳನ್ನು ಸ್ವತಃ ಅರವಿಂದ್ ಅವರೇ ವಿನ್ಯಾಸ ಮಾಡಿ ರಚನೆ ಮಾಡಿದರು. ಒಳ್ಳೆಯ ಗುಣಮಟ್ಟದ ಹಾಗು ರುಚಿಕರವಾದ ತಿಂಡಿ ತಿನಿಸುಗಳ ಉತ್ಪಾದನೆಯ ನಂತರ ಜನರನ್ನು ಆಕರ್ಷಿಸುವಂತಹ ಪ್ಯಾಕೇಜ್‌ಗಳ ಕಡೆಗೆ ಗಮನ ಹರಿಸಲಾಯಿತು.  ಆರಂಭಿಕ ದಿನಗಳಲ್ಲಿ ಸರಿಯಾದ ಮಾರುಕಟ್ಟೆ ದೊರೆಯದ ಕಾರಣ ಸಂಸ್ಥೆಯು ಮೊದಲಿಗೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮಾತ್ರ ಮಾರಾಟ ಆರಂಭಿಸಿತು.ನಂತರ ಬೆಂಗಳೂರಿಗೆ ವಿಸ್ತರಿಸಿತು. ನಿಧಾನವಾಗಿ `ಟೇಸ್ಟಿ ವರ್ಲ್ಡ್~ ಉತ್ಪನ್ನಗಳ ರುಚಿ  ಹಾಗೂ ಗುಣಮಟ್ಟವನ್ನು ಗ್ರಾಹಕರು ಗುರುತಿಸಿದರು. 5 ವರ್ಷದ ನಂತರ ಈ ಸಂಸ್ಥೆಯು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿತು.  ಈ ಮೂಲಕ ಆಡಳಿತ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರ ಸತತ ಪರಿಶ್ರಮಕ್ಕೆ ಉತ್ತಮ ರೀತಿಯ ಪ್ರತಿಫಲ ದೊರಕಿದಂತಾಯಿತು.ಸಂಸ್ಥೆಯು 2005ರಲ್ಲಿ ರಾಜ್ಯದಲ್ಲಿ  ಸಿದ್ಧಪಡಿಸಿದ `ಸೇವಿಸಲು ಸಿದ್ಧ~ (ready toeat) ಗುಲಾಬ್ ಜಾಮೂನಿನ ವಿತರಣೆ ಆರಂಭಿಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಚಿಕ್ಕಮಗಳೂರಿನ ಸ್ಥಳೀಯ ರೈತರಿಂದ ಪರಿಶುದ್ಧ ಹಸುವಿನ ಹಾಲು ಖರೀದಿಸಿ, ಉತ್ತಮವಾದ ಖೋವಾ  ಸ್ವತಃ ತಯಾರಿಸಿ ಅದರಿಂದ ಜಾಮೂನು ತಯಾರಿಸಲಾಗುತ್ತಿದೆ.2005 ಮತ್ತು 2007 ರ ಅವಧಿಯಲ್ಲಿ ಆಸ್ಟ್ರೇಲಿಯಾ ದೇಶಕ್ಕೂ ಉತ್ಪಾದನೆಗಳನ್ನು ರಫ್ತು ಮಾಡಲಾಗಿತ್ತು. ಆದರೆ, ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ನಡೆಸುತ್ತಿದ್ದುದರಿಂದ ಸ್ಥಳೀಯ ಮಾರುಕಟ್ಟೆಯ ಬೇಡಿಕೆಗಳು ಜಾಸ್ತಿಯಾಗಿ ಅದನ್ನು ಪೂರೈಸಲು ಸಾಧ್ಯವಾಗದಿರುವುದರಿಂದ ರಫ್ತು ಮತ್ತು ವಿದೇಶಿ ವ್ಯಾಪಾರ  ನಿಲ್ಲಿಸಲಾಯಿತು.ನಂತರ ಸಂಸ್ಥೆಯು  ಕೈಗಾರಿಕೆ ಪ್ರದೇಶದಲ್ಲಿ ಎರಡು ಎಕರೆ ಜಮೀನು ಖರೀದಿಸಿ, ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಿತು. ಹೊಸ ತಯಾರಿಕಾ ಘಟಕವು ಪ್ರತಿ ದಿನಕ್ಕೆ ಒಟ್ಟು 5000 ಕೆ.ಜಿ.ಗಳಷ್ಟು ಸರಕು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.ಸ್ವಯಂಚಾಲಿತ ತಿಂಡಿ ಕರಿಯುವ ಯಂತ್ರ ಹಾಗೂ ಪ್ಯಾಕೇಜಿಂಗ್ ಯಂತ್ರಗಳನ್ನು ಹೊಂದಿದ್ದು, ತನ್ನ ಪ್ಯಾಕೇಜಿಂಗ್ ಗುಣಮಟ್ಟ  ಉನ್ನತೀಕರಿಸಿತು. ಹೊಸ ರೀತಿಯ ಪ್ಯಾಕೇಜಿಂಗ್ ಜೊತೆಗೆ ಅದರಲ್ಲಿ ನೈಟ್ರೋಜನ್ ಗ್ಯಾಸನ್ನು ತುಂಬುವುದರ ಮೂಲಕ ತಿಂಡಿ ತಿನಿಸುಗಳ ಗುಣಮಟ್ಟ ಹಾಗೂ ರುಚಿ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಯಿತು. ಕರಿದ ತಿಂಡಿಗಳು ಜಾಸ್ತಿ ಎಣ್ಣೆ  ಹೀರದ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಯಿತು. ಸಂಸ್ಥೆಯು  ಅಂತರ್ಜಾಲದ ಮೂಲಕ ವಿಶ್ವದಾದ್ಯಂತ ವ್ಯವಹಾರ ನಡೆಸಲು ಮುಂದಾಗಿದೆ.  ಪರಿಸರ ರಕ್ಷಣೆಗಾಗಿ, ಡೀಸೆಲ್ ಮತ್ತು ಐಉ ಬಳಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತಯಾರಿಕೆಗೆ ಬೇಕಾಗುವ ಇಂಧನಕ್ಕೆ ಕಾಫಿ ತೋಟಗಳಿಂದ ಸಿಗುವ ಸೌದೆಯಿಂದ ನಡೆಯುವ ಬಾಯರ್ಲ್‌ಗಳನ್ನು ಸ್ಥಾಪಿಸಲಾಗಿದೆ.

ಇದರಿಂದ 95 % ಐಉ ಮತ್ತು ಡೀಸೆಲ್‌ಗಳ ಬಳಕೆ ಕಡಿಮೆಯಾಗಿದೆ.

ಕರಿದ ತಿಂಡಿಗಳ ಎಣ್ಣೆ ದೊಡ್ಡ ಪ್ರಮಾಣದಲ್ಲಿ ಉಳಿಯುತ್ತಿತ್ತು, ಈ ಎಣ್ಣೆಯನ್ನು ಹಾಳು ಮಾಡದೇ ಬಯೋಡೀಸೆಲ್ ಆಗಿ ಪರಿವರ್ತನೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಈ ಎಣ್ಣೆಯನ್ನು ಜನರೇಟರ್ ಮತ್ತು ಸಾಗಾಣಿಕ ವಾಹನಗಳಿಗೆ ಉಪಯೋಗಿಸುತ್ತಿದ್ದಾರೆ. ಯೂರೋಪ್ ಮತ್ತು ಅಮೆರಿಕದಲ್ಲಿ ಈ ಪದ್ಧತಿ ಇದೆ.  ಇದೇ ರೀತಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ತಮ್ಮ ನೂತನ ಕಟ್ಟಡದಲ್ಲಿ ಮಳೆ ನೀರಿನ ಸಂಸ್ಕರಣಾ ಘಟಕದಲ್ಲಿ ವರ್ಷಕ್ಕೆ ಸುಮಾರು 26 ಸಾವಿರ ಲೀಟರ್ ಮಳೆ ನೀರನ್ನು ಸಂಗ್ರಹಿಸಬಹುದಾಗಿದೆ.ಸಂಸ್ಥೆಯು ಸುಮಾರು 18 ಬಗೆಯ ತಿಂಡಿ ತಿನಿಸುಗಳ ಉತ್ಪಾದನೆಯಲ್ಲಿ ನಿರತವಾಗಿದ್ದು, ಚಕ್ಕುಲಿ, ನಿಪ್ಪಟ್ಟು, ಖಾರಾ ಚಕ್ಕುಲಿ, ಕೋಡುಬಳೆ, ವಿಶೇಷ ರೀತಿಯ ಕೋಡುಬಳೆ, ಖಾರಾಪುರಿ, ಮಸಾಲ ಖಾರಾಪುರಿ, ಖಾರಾಬೂಂದಿ, ಬಾಳೆಕಾಯಿ ಖಾರಾ ಚಿಪ್ಸ್, ಬಾಳೆಕಾಯಿ, ಕರಿಮೆಣಸು ಚಿಪ್ಸ್, ಹುಳಿ ಮುರುಕು, ಬೆಳ್ಳುಳ್ಳಿ ಮುರುಕು, ಈರುಳ್ಳಿ ಮುರುಕು, ರಿಬ್ಬನ್ನ್ ಮುರುಕು, ಖೋವಾ ಜಾಮೂನು, ರಸಂ ಪುಡಿ, ಸಾಂಬಾರ್ ಪುಡಿ, ಮಾಹಿತಿಗೆ ಅಂತರಜಾಲ ತಾಣ ಡಿಡಿಡಿ.ಠಿಠಿಡಿಟ್ಟ್ಝ.ಜ್ಞಿ ಕ್ಕೆ ಭೇಟಿ ನೀಡಬಹುದು.`ಟೇಸ್ಟಿ ವರ್ಲ್ಡ್~  ಸಂಸ್ಥೆಯು ಈಗ ದೇಶದಲ್ಲಿ ತನ್ನ ವೈವಿಧ್ಯಮಯ ಉತ್ಪನ್ನಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಿದ್ದು, ವಿದೇಶದಲ್ಲಿ ಕೂಡ ಗ್ರಾಹಕರನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ರೈತರನ್ನು ಒಗ್ಗೂಡಿಸಿ ಭತ್ತ ಮತ್ತು ಬಾಳೆಕಾಯಿ ಬೆಳೆಸಿ, ಉತ್ತಮ ಬೆಲೆ ಕೊಟ್ಟು ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.