ಬುಧವಾರ, ಜೂಲೈ 8, 2020
26 °C

ಕಾಮಕಸ್ತೂರಿ ಕೆಂಡಸಂಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ಮರುಕಳಿಸುವಂತೆ ‘ಬೆಂಕಿ ಬಿರುಗಾಳಿ’ಯೂ ಮರುಕಳಿಸಿದೆ. ಸುಮಾರು ಎರಡೂವರೆ ದಶಕದ ಹಿಂದೆ ತೆರೆಕಂಡಿದ್ದ ‘ಬೆಂಕಿ ಬಿರುಗಾಳಿ’ ಹೆಸರಿನ ಹೊಸ ಚಿತ್ರ ಈಗ ಸೆಟ್ಟೇರಿದೆ.ಹಳೆಯ ಚಿತ್ರ ನೆನಪಿಸಿಕೊಳ್ಳಿ: ವಿಷ್ಣುವರ್ಧನ್ ಹಾಗೂ ಶಂಕರನಾಗ್ ಬೆಂಕಿ-ಬಿರುಗಾಳಿ ಆಗಿ ಜೀವತುಂಬಿದ್ದ ಚಿತ್ರವದು. ಇಬ್ಬರೂ ಈಗ ನೆನಪಷ್ಟೇ. ಇವರಿಬ್ಬರ ಜಾಗಕ್ಕೆ ಯಾರು ಎಂದು ಊಹಿಸಿಕೊಳ್ಳುವ ಮೊದಲು, ಸ್ವಲ್ಪ ನಿಧಾನಿಸಿ. ಈ ಕಾಲದ ಬೆಂಕಿ-ಬಿರುಗಾಳಿಯಾಗಿ ನಟಿಸುತ್ತಿರುವುದು ನಾಯಕರಲ್ಲ, ನಾಯಕಿಯರು! ನಮಿತಾ ಹಾಗೂ ಸಲೋನಿ ಎನ್ನುವ ಆಮದು ಚೆಲುವೆಯರೇ ಈ ಪ್ರಚಂಡ ಜೋಡಿ.ಕಳೆದ ವಾರ ನಡೆದ ಚಿತ್ರದ ಮುಹೂರ್ತದಲ್ಲಿ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ರವಿಚಂದ್ರನ್. ಎಸ್.ಕೆ.ಬಷೀದ್ ‘ಬೆಂಕಿ ಬಿರುಗಾಳಿ’ಯ ನಿರ್ದೇಶಕರು. ನಿರ್ಮಾಣ ಕೂಡ ಅವರದ್ದೇ. ಕನ್ನಡದಲ್ಲಿದು ಅವರ ಮೂರನೇ ಚಿತ್ರ. ಆಕ್ಷನ್ ಹಾಗೂ ಥ್ರಿಲ್ಲರ್ ಎಂದು ತಮ್ಮ ಚಿತ್ರವನ್ನು ಬಣ್ಣಿಸಿದ ನಿರ್ದೇಶಕರು, ಕಥೆಯನ್ನು ಗುಟ್ಟಾಗಿಡುವ ಉದ್ದೇಶದಿಂದ ಅಳೆದೂ ತೂಗಿ ಮಾತನಾಡಿದರು. ಅವರ ಪ್ರಕಾರ, ಚಿತ್ರದಲ್ಲಿ ನಮಿತಾ ಬೆಂಕಿಯಾಗಿ ಕಾಣಿಸಿಕೊಂಡರೆ, ಸಲೋನಿ ಬಿರುಗಾಳಿಯ ಪ್ರತೀಕ. 

ಎಸ್.ಕೆ.ಬಷೀದ್

ಕೆಂಡಸಂಪಿಗೆ, ಕಾಮಕಸ್ತೂರಿಯಂಥ ಈರ್ವರು ಚೆಲುವೆಯರ ನಡುವೆ ರಿಷಿ ಎನ್ನುವ ಹೊಸ ಹುಡುಗ ನಟಿಸುತ್ತಿದ್ದಾನೆ. ಅಲ್ಲಿಗಿದು ತ್ರಿಕೋನ ಪ್ರೇಮಕಥೆ ಎಂದಾಯಿತು.ನಮಿತಾ ಕನ್ನಡಕ್ಕೆ ಹೊಸಬಳೇನಲ್ಲ. ದಕ್ಷಿಣಭಾರತ ಚಿತ್ರರಂಗದಲ್ಲಿ ಸೆಕ್ಸಿ ತಾರೆಯೆಂದೇ ಹೆಸರಾದ ನಮಿತಾ, ‘ನೀಲಕಂಠ’ ಹಾಗೂ ‘ಹೂ’ ಚಿತ್ರಗಳಲ್ಲಿ ರವಿಚಂದ್ರನ್ ಜೊತೆ ಬಿಡುಬೀಸಾಗಿ ನಟಿಸಿದ್ದರು. ‘ನಮಿತಾ ಐ ಲವ್ ಯು’ ಎನ್ನುವ ಮತ್ತೊಂದು ಚಿತ್ರದಲ್ಲೂ ಆಕೆ ನಟಿಸುತ್ತಿದ್ದಾರೆ. ಸಲೋನಿ ಕೂಡ ಕನ್ನಡ ಪ್ರೇಕ್ಷಕರಿಗೆ ಪರಿಚಿತಳೇ. ‘ಬುದ್ಧಿವಂತ’ ಚಿತ್ರದ ಪಂಚರಂಗಿಯರಲ್ಲಿ ಸಲೋನಿಯೂ ಒಬ್ಬಳು.ರಾಯಚೂರಿನ ಪ್ರತಿಭೆ ಶ್ರೀಲೇಖಾ ಸಂಗೀತ ನೀಡುತ್ತಿರುವ ‘ಬೆಂಕಿ ಬಿರುಗಾಳಿ’ಗಾಗಿ ಒಟ್ಟು ಎಂಬತ್ತೈದು ದಿನಗಳ ಚಿತ್ರೀಕರಣ ನಡೆಸಲು ನಿರ್ದೇಶಕರು ಪ್ಲಾನ್ ಮಾಡಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಚೆನ್ನೈ ಜೊತೆಗೆ ಮಲೇಷಿಯಾ, ಬ್ಯಾಂಕಾಕ್ ಹಾಗೂ ಸ್ವಿಟ್ಜರ್‌ಲೆಂಡ್‌ಗಳಲ್ಲೂ ಚಿತ್ರೀಕರಣ ನಡೆಸಲಾಗುತ್ತದಂತೆ. ಕಡಲ ತಡಿಯಲ್ಲೇ ಹತ್ತು ದಿನಗಳ ಚಿತ್ರೀಕರಣ ನಡೆಯಲಿದೆಯಂತೆ.ಬಷೀದ್ ‘ಬೆಂಕಿ ಬಿರುಗಾಳಿ’ ತೆರೆಕಂಡ ನಂತರ, ಅದನ್ನು ಇತರ ಭಾಷೆಗಳಿಗೂ ಡಬ್ ಮಾಡಲು ಉದ್ದೇಶಿಸಿದ್ದಾರೆ. ಹಾಗೆ ಡಬ್ ಮಾಡಿದರಷ್ಟೇ ಲೆಕ್ಕಾ ಪಕ್ಕಾ ಆಗುತ್ತದೆ ಎನ್ನುವ ಅಂದಾಜು ಅವರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.