ಮಲೆನಾಡಿನ ಕಾಡಿಗೆ ಬೆಂಕಿ ತಗುಲಿ ಆಗಿರುವ ನಷ್ಟ ಊಹಿಸಲಾರದಷ್ಟು. `ವೈವಿಧ್ಯತೆಯ ವನ್ಯಜೀವಿಯ ತೊಟ್ಟಿಲು~ ಕಾಳ್ಗಿಚ್ಚಿನ ಜ್ವಾಲೆಗೆ ತತ್ತರಿಸಿದೆ. ಜೀವಜಂತುಗಳ ಅರೆಬೆಂದ ಕಳೇಬರಗಳಿಂದ ಈಗ `ಕಮಟು ವಾಸನೆ~ ಹರಡುತ್ತಿದೆ.

ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯ ವಲಯದ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆಯೇ ನೂರಾರು ಎಕರೆ ಪ್ರದೇಶಕ್ಕೆ ವ್ಯಾಪಿಸಿತು.

ಬೆಂಕಿಯ ಕೆನ್ನಾಲಿಗೆಯಿಂದ ಜೀವ ಉಳಿಸಿಕೊಳ್ಳಲು ಕಾಡು ಪ್ರಾಣಿಗಳು ದಿಕ್ಕಾಪಾಲಾಗಿ ಓಡಿದವು. ಮೂಕ ಪ್ರಾಣಿಗಳ ಆಕ್ರಂದನ ಕಾಡಂಚಿನ ಜನರ ಕಿವಿಗಳಿಗೆ ಅಪ್ಪಳಿಸಿದೆ. ಒಣಗಿ ನಿಂತ ಬಿದಿರಿನ ಮೆಳೆಗಳಿಗೆ ತಗುಲಿದ ಬೆಂಕಿಯಿಂದ ಸಿಡಿಯುವ ಬಿದಿರಿನ ನಿರಂತರ ಶಬ್ದ ದಟ್ಟವಾಗಿ ಆವರಿಸಿಕೊಂಡ ಹೊಗೆ ಕಾಡಿನ ನಡುವೆ ಇರುವ ಹಳ್ಳಿಗರ ಎದೆ ನಡುಗಿಸಿದೆ.

ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಅಲಸೆ ಗ್ರಾಮದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದ ಬಸವನಗದ್ದೆ, ಹೊನ್ನಾಸುಗದ್ದೆ, ಕಳ್ಳಿಗದ್ದೆ, ಹಣಗೆರೆಕಟ್ಟೆ, ಕೊಂಬಿನಕೈ, ಸಿಂಧುವಾಡಿ, ಸಕ್ರೆಬೈಲು, ಸಿರಿಗೆರೆ, ತಮ್ಮಡಿಹಳ್ಳಿ ಪ್ರದೇಶದ ನೂರಾರು ಎಕರೆ ಪ್ರದೇಶದ ದಟ್ಟಕಾಡು ಅಕ್ಷರಶಃ ನಾಶವಾಗಿದೆ.

ಕಾಡಿನ ನಡುವೆ ಇರುವ ಹಳ್ಳಿಗಳ ರೈತರ ಒಕ್ಕಲು ಮಾಡದ ಬತ್ತದ ಗೊಣಬೆಗಳು (ಬಣವೆ), ದನದ ಕೊಟ್ಟಿಗೆ, ವಾಸದ ಮನೆ ಸೇರಿದಂತೆ ಅಡಿಕೆ, ಬಾಳೆ, ರಬ್ಬರ್ ತೋಟಗಳು ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಕರಕಲಾಗಿವೆ. ಜಾನುವಾರುಗಳು ಸಾವಿಗೀಡಾಗಿವೆ.

ಹೊತ್ತಿ ಉರಿಯುತ್ತಿರುವ ಬೆಂಕಿಯಿಂದ ಬರುವ ಶಬ್ದ ಹಳ್ಳಿಗರ ಎದೆಯಲ್ಲಿ ನಡುಕ ಹುಟ್ಟಿಸಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ.

ಕೈಮೀರಿದ ಕಾಳ್ಗಿಚ್ಚಿನ ರುದ್ರನರ್ತನದಿಂದಾಗಿ ಅಗ್ನಿಶಾಮಕ ದಳದ ವಾಹನಗಳು ಕಾಡಿನೊಳಗೆ ಪ್ರವೇಶ ಪಡೆಯದೆ ರಸ್ತೆಯಂಚಲ್ಲಿ ನಿಂತು ಕೈಚೆಲ್ಲಿದವು. ಹಳ್ಳಿಗರ ಮನೆಗಳಿಗೆ ತಗುಲಿದ ಬೆಂಕಿಯನ್ನು ನಂದಿಸುವಲ್ಲಿ ಮಾತ್ರ ಉಪಯೋಗಕ್ಕೆ ಬಂದವು.

ಕಾಳ್ಗಿಚ್ಚಿನಿಂದಾಗಿ ವನ್ಯಜೀವಿಗಳ ಜೀವಕ್ಕೆ ಕುತ್ತು ಬಂದಿದೆ. ಕಡವೆ, ಜಿಂಕೆಗಳ ಹಿಂಡು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿವೆ. ಗೂಡು ಕಟ್ಟಿ ಮೊಟ್ಟೆ ಇಟ್ಟು ಕಾವು ಕುಳಿತ ಅಸಂಖ್ಯ ಪಕ್ಷಿಗಳು ಗೂಡಿನಲ್ಲಿಯೇ ಸಾವು ಕಂಡಿವೆ.

ಹಾವು, ಮೊಲ, ಬರ್ಕ, ಚಿಪ್ಪುಹಂದಿ, ಮುಳ್ಳುಹಂದಿ, ಉಡ, ಕೊಂಡಬಾಲಬೆಕ್ಕು, ಕಬ್ಬೆಕ್ಕು, ಹಾರುಬೆಕ್ಕು, ಅಳಿಲು, ಕಾಡುಕುರಿಗಳು ಜೀವ ರಕ್ಷಣೆಯ ಪ್ರಯತ್ನ ನಡೆಸಿ ಸೋತಿವೆ. ಕಾಡುಕೋಳಿ, ನವಿಲು, ಚಿಟ್ಟುಕೋಳಿ, ಹೆಜ್ಜೇನು, ತುಡವೆಜೇನು, ನಸರಿಜೇನು, ಕೋಲುಜೇನುಗಳು ದಿಕ್ಕೆಟ್ಟಿವೆ. ಹಿಂದೆಂದೂ ಕಂಡು ಕೇಳಿರದ ಭೀಕರ ಅನಾಹುತ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸಂಭವಿಸಿದೆ.

ನೆಲಕ್ಕುರುಳಿದ ಬೆಲೆಬಾಳುವ ಬೃಹತ್ ಗಾತ್ರದ ಮರಗಳು ಸುಟ್ಟು ಬೂದಿಯಾಗಿವೆ. ಅಮೂಲ್ಯ ಗಿಡಮೂಲಿಕೆಗಳು ಬೆಂಕಿಗೆ ಬಲಿಯಾಗಿವೆ. ಕಳೆದ ಒಂದು ವರ್ಷದ ಹಿಂದೆ ಬಿದಿರಿಗೆ ತಗುಲಿದ ಕಟ್ಟೆಯಿಂದಾಗಿ (ರೋಗ) ಒಣಗಿ ನಿಂತ ಬಿದಿರ ಮೆಳೆಗಳಿಗೆ ತಗುಲಿದ ಬೆಂಕಿ ಇಮ್ಮಡಿಗೊಳ್ಳಲು ಕಾರಣವಾಗಿದೆ. ಎಲೆ ಉದುರಿಸುವ ಕಾಡು ಇದಾಗಿದ್ದರಿಂದ ಉದುರಿದ ತರಗೆಲೆ ಕಾಡಿನ ವಿಸ್ತಾರಕ್ಕೆ ಬಿದ್ದಿರುವುದು ಅತಿ ವೇಗವಾಗಿ ಬೆಂಕಿ ವ್ಯಾಪಿಸಲು ಕಾರಣವಾಗಿದೆ.

ಕಳೆದ ಮೂರು ತಿಂಗಳಿನಿಂದ ಮಂಗನ ಕಾಯಿಲೆಯಿಂದ ಹೈರಾಣಾಗಿ ಹೋಗಿದ್ದ ಈ ಭಾಗದ ಜನರು ಕಾಡಿನ ಉಣ್ಣಿಯಿಂದ (ಒಣಗು) ರಕ್ಷಣೆ ಪಡೆಯಲು ಕಾಡಿಗೆ ಬೆಂಕಿ ಇಟ್ಟಿರಬಹುದು ಎಂಬ ಶಂಕೆ ಕೆಲವರಿಂದ ವ್ಯಕ್ತವಾಗಿದೆ. ದಾರಿಹೋಕರು, ಕಿಡಿಗೇಡಿಗಳು ಕಾಡಿಗೆ ಬೆಂಕಿ ಇಟ್ಟಿರಬಹುದು ಎನ್ನಲಾಗುತ್ತಿದೆ.

ಅರಣ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಲು, ಸೇಡು ತೀರಿಸಿಕೊಳ್ಳಲು ಮರಗಳ್ಳರು ಬೆಂಕಿ ಹತ್ತಿಸಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. `ಫೈರ್ಲೈನ್~ ನಿರ್ಮಿಸಿದ್ದರೆ ಇಂಥ ಅವಘಡ ಸಂಭವಿಸುತ್ತಿರಲಿಲ್ಲ.

ಸ್ಥಳೀಯರೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಉತ್ತಮ ಬಾಂಧವ್ಯ ಇರಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದ್ದರೆ ಅಗ್ನಿ ಅನಾಹುತವನ್ನು ತಪ್ಪಿಸಬಹುದಿತ್ತು. ಇಂಥ ವಿಚಾರದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಅನಾಹುತಕ್ಕೆ ಕಾರಣ ಎನ್ನುವ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿವೆ.

ಕೊಂಚ ತಣ್ಣಗಾದ ಕಾಳ್ಗಿಚ್ಚು ಉಳಿದ ಕಾಡಿನಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಲು ಇದು ಸೂಕ್ತ ಸಮಯವಾಗಿದೆ. ಬಹುತೇಕ ಕಡೆಗಳಲ್ಲಿ ಒಣಗಿನಿಂತ ಬಿದಿರ ಮೆಳೆಗಳು ಅಪಾಯದ ಸಂಕೇತದಂತೆ ಗೋಚರಿಸುತ್ತಿವೆ. ಗ್ರಾಮ ಅರಣ್ಯ ಸಮಿತಿಗಳ ನೆರವಿನೊಂದಿಗೆ ಗ್ರಾಮಸ್ಥರಲ್ಲಿ ಕಾಳ್ಗಿಚ್ಚಿನ ಕುರಿತು ಜನ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಕಾಳ್ಗಿಚ್ಚಿನ ಭಯದಿಂದ ಇನ್ನೂ ಜನರು ದೂರ ಸರಿದಿಲ್ಲ. ಮಳೆ ಸುರಿಯದ ಹೊರತು ಕಾಡಿಗೆ ಮತ್ತು ಜನ ಜೀವನಕ್ಕೆ ಅಪಾಯ ತಪ್ಪಿದ್ದಲ್ಲ.

ಕೇವಲ ಒಂದು ಇಲಾಖೆಯಿಂದ ಕಾಡು ಉಳಿಯಲಾರದು. ಪರಿಸರದ ಮಹತ್ವ ಹೆಚ್ಚಿರುವ ಇಂದಿನ ದಿನಗಳಲ್ಲಿ ನೈಸರ್ಗಿಕ ಕಾಡಿನ ಸೃಷ್ಟಿ ಸುಲಭದ ಮಾತಲ್ಲ. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಕಾಡಿನ ರಕ್ಷಣೆಗೆ ತೊಡಕಾಗಿರುವುದು ಒಂದು ಭಾಗವಷ್ಟೆ.

ಚಿಕ್ಕ ಚಿಕ್ಕ ವಿಚಾರಗಳನ್ನು ಬೆಟ್ಟ ಮಾಡಿ ಕಾನೂನಿನ ಕಣ್ಣಿನಡಿಯಲ್ಲಿಯೆ ನೋಡುವ ಇಲಾಖೆ, ಕಾಡಿನೊಳಗೆ ವಾಸಿಸುವ ಸ್ಥಳೀಯ ಜನರ ವಿಶ್ವಾಸ ಗಳಿಸಿ ಜಾಗೃತಿ ಮೂಡಿಸದೆ ಹೋದರೆ, ಕಾಡಿನ ಬೆಂಕಿ ಆರಲಾರದೇನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.