ಶುಕ್ರವಾರ, ಮೇ 20, 2022
19 °C

ಕಾರು ಡಿಕ್ಕಿ: ಏಳು ಮಕ್ಕಳಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಕಾರು ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಕ್ಕೆ ಬಂದಿದ್ದ ಏಳು ಮಕ್ಕಳು ಗಾಯಗೊಂಡ ಘಟನೆ ಕಬ್ಬನ್ ಉದ್ಯಾನದಲ್ಲಿ ಭಾನುವಾರ ಸಂಜೆ ನಡೆದಿದೆ.ಚಿಕ್ಕಪೇಟೆಯ ಆರ್.ಟಿ.ಸ್ಟ್ರೀಟ್‌ನ ಮಂಜು (16), ಸಂತೋಷ (17), ಕಾಶೀಶ್ (6) ಮತ್ತು ಮಾಂಗಿಲಾಲ್ (11) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೌರವ್, ಅರ್ಜುನ್ ಕುಮಾರ್ ಮತ್ತು ಕಿರಣ್‌ಕುಮಾರ್ ಎಂಬ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಮನೆಪಾಠದ ಶಿಕ್ಷಕಿ ಸಂಗೀತಾ ಅವರು ಮಕ್ಕಳನ್ನು ಪ್ರವಾಸಕ್ಕಾಗಿ ಕರೆ ತಂದಿದ್ದರು. ವಿಧಾನಸೌಧ, ಹೈಕೋರ್ಟ್ ವೀಕ್ಷಿಸಿದ ಬಳಿಕ ಸಂಜೆ 6.30ರ ಹೊತ್ತಿನಲ್ಲಿ ಕಬ್ಬನ್ ಉದ್ಯಾನದ ಒಳಭಾಗದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಮಕ್ಕಳಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ನಾಲ್ಕು ಮಕ್ಕಳ ತಲೆ, ಕಾಲು ಮತ್ತು ಕೈಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಕಾರು ಮತ್ತು ಚಾಲಕ ರಮೇಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಲಾರಿ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿಸಾವು

ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾಂಕ್ರಿಟ್ ಮಿಶ್ರಣದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕನಕಪುರ ಮುಖ್ಯರಸ್ತೆಯ ಸಾರಕ್ಕಿ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.ಉತ್ತರಹಳ್ಳಿ ಸಮೀಪದ ಭುವನೇಶ್ವರಿ ನಗರದ ನಿವಾಸಿ ಪ್ರಕಾಶ್ (35) ಸಾವನ್ನಪ್ಪಿದವರು. ಅವರು ಪೈಂಟರ್ ಕೆಲಸ ಮಾಡುತ್ತಿದ್ದರು. ಸಾರಕ್ಕಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತು. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಅವರ ಮೇಲೆ ಅದೇ ಲಾರಿಯ ಚಕ್ರ ಹರಿದು ಸಾವನ್ನಪ್ಪಿದರು.ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರು ಅಡ್ಡಗಟ್ಟಿ ದರೋಡೆ

ಪ್ರಯಾಣಿಕರ ಸೋಗಿನಲ್ಲಿ ಕಾರನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು ಚಾಲಕನನ್ನು ಕಾರಿನಿಂದ ಹೊರಗೆ ಎಳೆದು ವಾಹನವನ್ನು ದರೋಡೆ ಮಾಡಿದ ಘಟನೆ ಮೈಕೋ ಲೇಔಟ್ ಸಮೀಪದ ಬಿ.ಜಿ.ರಸ್ತೆಯಲ್ಲಿ ಶನಿವಾರ ಹಾಡಹಗಲೇ ನಡೆದಿದೆ.ಕಾರು ಚಾಲಕ ನಾಗರಾಜ್ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಅವರು ನೂತನ ಇನ್ನೋವಾ ಕಾರಿನಲ್ಲಿ ವರ್ತೂರು ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಜೆ.ಡಿ.ಮರ ಸಮೀಪದ ಬಿ.ಜಿ ರಸ್ತೆಯಲ್ಲಿ ಮೂವರು ಕಿಡಿಗೇಡಿಗಳು ವಾಹನವನ್ನು ನಿಲ್ಲಿಸಿದರು. ಪ್ರಯಾಣಿಕರೆಂದು ತಿಳಿದ ನಾಗರಾಜ್ ಅವರು ವಾಹನ ನಿಲ್ಲಿಸಿದಾಗ ಕಾರಿನಿಂದ ಅವರನ್ನು ಕೆಳಗಿಳಿಸಿ ವಾಹನ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಬಂಧನ

ಕೊಲೆ ಪ್ರಕರಣವೊಂದರ ಆರೋಪಿಯಾಗಿರುವ ರವಿ ಉರುಫ್ ಕಾಟಾ ರವಿ ಎಂಬಾತನನ್ನು ಗೂಂಡಾಕಾಯ್ದೆಯಡಿ ನಗರ ಪೊಲೀಸರು ಬಂಧಿಸಿದ್ದಾರೆ.ರವಿ 1991ರಲ್ಲಿ ಮಹಾಲಕ್ಷ್ಮಿಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾನೆ.ಈತನ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ, ಅತ್ಯಾಚಾರ ಸೇರಿದಂತೆ ಒಟ್ಟು 15 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ಪ್ರಕರಣವೊಂದರಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರವಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.