ಬುಧವಾರ, ಮೇ 18, 2022
24 °C

ಕಾರ್ಮಿಕ ಇಲಾಖೆಗೆ ಅನುದಾನ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೇಂದ್ರದ ಈ ಸಾಲಿನ ಬಜೆಟ್‌ನಲ್ಲಿ ತಮ್ಮ ಇಲಾಖೆಗೆ ಶೇ. 20ರಿಂದ 25ರಷ್ಟು ಅನುದಾನ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಅನುದಾನದಿಂದ ಕಾರ್ಮಿಕರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡುವ ಉದ್ದೇಶವಿದೆ ಎಂದು ತಿಳಿಸಿದರು.ಅಸಂಘಟಿತ ವಲಯಕ್ಕೆ ಸೇರಿದ ಹಮಾಲರು, ಬಡ ವ್ಯಾಪಾರಿಗಳು, ಮನೆಗೆಲಸದವರನ್ನೂ ಆರೋಗ್ಯ ಯೋಜನೆಯ ವ್ಯಾಪ್ತಿಗೆ ತರಲು ಚಿಂತನೆ ನಡೆದಿದ್ದು ಬರುವ ಬಜೆಟ್‌ನಲ್ಲಿ ಅದನ್ನು ಸೇರ್ಪಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾರ್ಮಿಕರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಐಟಿಐ ಸಂಸ್ಥೆಗಳನ್ನು ಸ್ಥಾಪಿಸಿ ಯುವಕರಿಗೆ ತರಬೇತಿ ನೀಡುವುದು ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.ದೇಶದ ಎಲ್ಲಾ ಇಎಸ್‌ಐ ಆಸ್ಪತ್ರೆಗಳ ಚಟುವಟಿಕೆಗಳನ್ನು ಕಂಪ್ಯೂಟರೀಕರಣ ಮಾಡಲಾಗುತ್ತಿದ್ದು 6 ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಸೌಲಭ್ಯ ಜಾರಿಗೆ ಬಂದರೆ ಕಾರ್ಮಿಕರು ದೇಶದ ಯಾವುದೇ ಭಾಗದಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ರೋಗಿಯ ಎಲ್ಲ ವಿವರಗಳನ್ನೂ ಕಂಪ್ಯೂಟರ್ ಮೂಲಕ ಪಡೆಯಬಹುದಾಗಿದೆ. ಮಾಲೀಕರು ಕೂಡಾ ಕಾರ್ಮಿಕರ ಪಾಲಿನ ಹಣವನ್ನು ಇಂಟರ್ನೆಟ್ ಮೂಲಕವೇ ಸಂದಾಯ ಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.ಕಾರ್ಮಿಕ ಇಲಾಖೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದನ್ನು ಜಾರಿಗೊಳಿಸಲು ರಾಜ್ಯ ಸರ್ಕಾರದ ಸಹಕಾರ ಮಹತ್ವದ್ದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಆಸಕ್ತಿ ವಹಿಸಬೇಕು. ಬಜೆಟ್‌ನಲ್ಲಿ ಹಣ ನಿಗದಿ ಮಾಡಿ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ತೋರಿಸಬೇಕು ಎಂದು ಹೇಳಿದರು.ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯು ಹಲವಾರು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ ಕರ್ನಾಟಕ, ರಾಜಸ್ಥಾನ, ಕೆಲವು ಕೇಂದ್ರಾಡಳಿತ ಪ್ರದೇಶಗಳು ಯೋಜನೆಯನ್ನು ಗಂಭೀರವಾಗಿ ಜಾರಿಗೊಳಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಪತ್ರಕರ್ತರ ವೇತನ ಮಂಡಳಿಯ ಶಿಫಾರಸುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಅದನ್ನು ಕೇಂದ್ರ ಸಚಿವ ಸಂಪುಟದ ಮುಂದೆ ತರಲು ಟಿಪ್ಪಣಿ ಸಿದ್ಧಪಡಿಸಲಾಗಿದ್ದು, ಸಂಬಂಧಿಸಿದ ಇಲಾಖೆಗಳಾದ ಹಣಕಾಸು, ಮಾಹಿತಿ ಇಲಾಖೆ, ಕಂಪೆನಿ ವ್ಯವಹಾರಗಳ ಇಲಾಖೆಗಳಿಗೆ ಕಳಿಸಿ ಅವರಿಂದ ಅಭಿಪ್ರಾಯ ಪಡೆದು ಸಚಿವ ಸಂಪುಟದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.ಇದಕ್ಕೂ ಮುಂಚೆ ನಡೆದ ಸ್ಥಳೀಯ ಇ.ಎಸ್.ಐ ಆಸ್ಪತ್ರೆಯ ಆಧುನೀಕರಣ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯದ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, ರಾಜ್ಯದ ಖಾಸಗಿ ಶಾಲೆ, ಕಾಲೇಜುಗಳು, ನರ್ಸಿಂಗ್ ಹೋಮ್ ಹಾಗೂ ಆಸ್ಪತ್ರೆಗಳನ್ನೂ ಇ.ಎಸ್.ಐ. ವ್ಯಾಪ್ತಿಗೆ ತರುವ ಉದ್ದೇಶವಿದೆ. ಇದರಿಂದಾಗಿ ಸುಮಾರು ಒಂದು ಕೋಟಿ ಜನರಿಗೆ ನೆರವು ದೊರೆಯಲಿದೆ ಎಂದು ತಿಳಿಸಿದರು.ರಾಜ್ಯದ ಇ.ಎಸ್.ಐ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದ್ದು ಇನ್ನಷ್ಟು ವೈದ್ಯರ ನೇಮಕದ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಸಂಚಾರಿ ಇ.ಎಸ್.ಐ. ಆಸ್ಪತ್ರೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.