ಭಾನುವಾರ, ಜನವರಿ 19, 2020
23 °C

ಕಾಲಾವಕಾಶ ಕೋರಿದ ಪಾಲಿಕೆ ಮೇಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ಅನುಮೋದನೆಯಿಲ್ಲದೆ 467 ಕೋಟಿ ರೂಪಾಯಿ ಬೃಹತ್ ಮೊತ್ತದ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್) ನೀಡುವ ಮೂಲಕ ಭಾರಿ ಅಕ್ರಮ ನಡೆಸಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಚಂದ್ರಶೇಖರ್ ಮಾಡಿದ ಗಂಭೀರ ಆರೋಪಕ್ಕೆ ಪಾಲಿಕೆ ಆಡಳಿತದಿಂದ ಸಕಾರಾತ್ಮಕ ಉತ್ತರ ದೊರೆಯಲಿಲ್ಲ.ಈ ಸಂಬಂಧ ಎರಡು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆಯ ನಂತರ ಶುಕ್ರವಾರ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಉತ್ತರ ನೀಡಿದ ನಂತರ ಮೇಯರ್ ಪಿ. ಶಾರದಮ್ಮ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ಸಭೆಗೆ ಒದಗಿಸಲು ಕಾಲಾವಕಾಶ ಕೋರಿದರು. ಅದಕ್ಕೆ ಚಂದ್ರಶೇಖರ್ ಕೂಡ ಒಪ್ಪಿಗೆ ಸೂಚಿಸಿದರು.ಶಂಕರಲಿಂಗೇಗೌಡ ಅವರು ಮಾತನಾಡಿ, 2003-04ರಿಂದ 2010-11ರ ಅವಧಿಯಲ್ಲಿ ಬಿಬಿಎಂಪಿಯು ಕೆಆರ್‌ಐಡಿಎಲ್ ಸಂಸ್ಥೆಗೆ 265 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಮಾತ್ರ ನೀಡಿದ್ದು, ಸರ್ಕಾರದ ಆದೇಶ ಹಾಗೂ ನಿಯಮಾನುಸಾರವೇ ಕಾಮಗಾರಿಗಳನ್ನು ವಹಿಸಲಾಗಿದೆ. ಒಂದು ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರವೇ ನೇರವಾಗಿ ಸಂಸ್ಥೆಗೆ ಕಾಮಗಾರಿಗಳನ್ನು ನೀಡಿದ್ದರೆ ಅದಕ್ಕೆ ಪಾಲಿಕೆ ಹೊಣೆಯಲ್ಲ ಎಂದು ಸ್ಪಷ್ಟಪಡಿಸಿದರು.2003ರಿಂದ 2009ರ ನಡುವೆ ಕೆಆರ್‌ಐಡಿಎಲ್‌ಗೆ 125 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ನೀಡಲಾಗಿದೆ. ಈ ಪೈಕಿ 29 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ, 8 ಕೋಟಿ ವೆಚ್ಚದಲ್ಲಿ ಶೌಚಾಲಯ ಹಾಗೂ 88 ಕೋಟಿ ರೂಪಾಯಿ ವೆಚ್ಚದಲ್ಲಿ `ನರ್ಮ್~ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. 2009-10ರಲ್ಲಿ 67 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಮಂಜೂರು ಮಾಡಲಾಗಿದ್ದು, ಈ ಪೈಕಿ 35 ಕೋಟಿ ರೂಪಾಯಿ ವೆಚ್ಚದ ಕೆಲಸಗಳು ಮುಗಿದಿವೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.2010-11ನೇ ಸಾಲಿನಲ್ಲಿ 73 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ವಹಿಸಲಾಗಿದೆ. `ಜಾಬ್ ಕೋಡ್~ ನೀಡದ ಕಾರಣ ಮಿಲ್ಲರ್ ರಸ್ತೆಯಲ್ಲಿ ನಿರ್ವಹಿಸಿದ ಕಾಮಗಾರಿಗಳ ಬಿಲ್‌ಗಳನ್ನು ಸೇರಿಸಲಾಗಿಲ್ಲ. ಒಟ್ಟಾರೆ ಸಂಸ್ಥೆಗೆ 120 ಕೋಟಿ ರೂಪಾಯಿ ಬಿಲ್ ಪಾವತಿ ಬಾಕಿ ಇದೆ ಎಂದು ಅವರು ಹೇಳಿದರು.ಶಾಲಾ- ಕಾಲೇಜು, ಅಂಗನವಾಡಿ ಕಟ್ಟಡ, ವಸತಿನಿಲಯ ಕೊಠಡಿ ಹಾಗೂ ಕಟ್ಟಡಗಳು, ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ ಹಾಗೂ ಸಿಬ್ಬಂದಿ ವಸತಿಗೃಹಗಳ ನಿರ್ಮಾಣ ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳಲ್ಲದೆ, ಇತರೆ ಕಾಮಗಾರಿಗಳನ್ನು ನಿರ್ವಹಿಸಲು ಸರ್ಕಾರ ವಿನಾಯಿತಿ ನೀಡಿತ್ತು ಎಂದು ಆಯುಕ್ತರು ತಿಳಿಸಿದರು.ಅಧಿಕಾರಿಗಳ ಮಾಹಿತಿ ತಪ್ಪೇ?: 
ಆಯುಕ್ತರ ಉತ್ತರಕ್ಕೆ ತೃಪ್ತರಾಗದ ಚಂದ್ರಶೇಖರ್, `ಆಯುಕ್ತರ ಉತ್ತರ ಸಮಂಜಸವಾಗಿದೆ. ಆದರೆ, ನನ್ನ ಪ್ರಶ್ನೆಗೆ ಪಾಲಿಕೆ ಅಧಿಕಾರಿಗಳು ನೀಡಿದ ಮಾಹಿತಿ ತಪ್ಪೇ? ಈ ಬಗ್ಗೆ ಸ್ಪಷ್ಟನೆ ನೀಡಬೇಕು~ ಎಂದು ಪಟ್ಟು ಹಿಡಿದರು.ಆಯುಕ್ತ ಶಂಕರಲಿಂಗೇಗೌಡ, `ಹಿರಿಯ ಸದಸ್ಯರು ಮಾಡಿರುವ ಆರೋಪವನ್ನು ಸರಿ- ತಪ್ಪು ಎಂದು ನಾನು ವಿಶ್ಲೇಷಿಸುವ ಗೋಜಿಗೆ ಹೋಗುವುದಿಲ್ಲ. ಅಲ್ಲದೆ, ಕೆಆರ್‌ಐಡಿಎಲ್ ಸಂಸ್ಥೆಯನ್ನು ಸಮರ್ಥಿಸುವ ಉದ್ದೇಶವೂ ನನಗಿಲ್ಲ. ಆದರೆ, ಸಂಸ್ಥೆಯೇ 265 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನಷ್ಟೇ ವಹಿಸಲಾಗಿದೆ ಎಂದು ಮಾಹಿತಿ ನೀಡಿದೆ. ಸರ್ಕಾರದ ಆದೇಶ ಹಾಗೂ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಪಾಲಿಕೆಯು ತನ್ನ ಇತಿಮಿತಿಯೊಳಗೆ ಸಂಸ್ಥೆಗೆ ಕಾಮಗಾರಿಗಳನ್ನು ವಹಿಸಿದೆ~ ಎಂದರು.ಈ ನಡುವೆ ಸರ್ಕಾರದ ಆದೇಶವಿಲ್ಲದೆ ಸಂಸ್ಥೆಯು ಅನಧಿಕೃತವಾಗಿ ಕಾಮಗಾರಿಗಳನ್ನು ನಿರ್ವಹಿಸಿದೆ ಎಂದು ಚಂದ್ರಶೇಖರ್ ಆರೋಪಿಸಿದರು. ಆನಂತರವೂ ತಮ್ಮ ವಾದ ಮುಂದುವರಿಸಿ, ಪಟ್ಟು ಹಿಡಿದಿದ್ದರಿಂದ ಮಧ್ಯ ಪ್ರವೇಶಿಸಿದ ಮೇಯರ್ ಪಿ. ಶಾರದಮ್ಮ ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಮುಂದಿನ ಸಭೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆ- ಸಭೆ ಮುಂದೂಡಿಕೆ: ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಪಿ.ಎನ್. ಸದಾಶಿವ ಆಡಿದ ಮಾತಿನಿಂದ ಕೆರಳಿದ ಚಂದ್ರಶೇಖರ್, ಮೇಯರ್ ಪೀಠದ ಮುಂಭಾಗಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸದಸ್ಯರು ಅವರನ್ನು ಬೆಂಬಲಿಸಿ ಸದಾಶಿವ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಮೇಯರ್ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.ಭೋಜನ ವಿರಾಮದ ನಂತರ ಸೇರಿದ ಸಭೆಯಲ್ಲಿ ಸದಾಶಿವ ಅವರು, ಚಂದ್ರಶೇಖರ್ ಅವರ ಬಗ್ಗೆ ಬಳಸಿದ ಪದವನ್ನು ವಾಪಸು ಪಡೆದರು. `ನಾಲ್ಕು ಬಾರಿ ಪಾಲಿಕೆ ಸದಸ್ಯರಾಗಿ, ಮಾಜಿ ಮೇಯರ್ ಆಗಿ ಹಾಗೂ ಒಮ್ಮೆ ಶಾಸಕರಾಗಿ 467 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಅನಗತ್ಯ ಆರೋಪ ಮಾಡಲು ನಿಮಗೆ ನಾಚಿಕೆಯಾಗಬೇಕು~ ಎಂದು ಸದಸ್ಯ ಸದಾಶಿವ ಟೀಕಿಸಿದ್ದರು. ಬಿಸಿ ಬಿಸಿ ಚರ್ಚೆ ನಡುವೆ ಅಕಸ್ಮಾತ್ ಬಳಸಿದ ಈ ಪದವನ್ನು ವಾಪಸು ಪಡೆಯುತ್ತೇನೆ ಎಂದು ಸದಾಶಿವ ಹೇಳಿದರು. ಚಂದ್ರಶೇಖರ್ ಕೂಡ `ಸದಾಶಿವ ಅವರ ದೊಡ್ಡತನವನ್ನು ಸ್ವಾಗತಿಸುತ್ತೇನೆ~ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.

ಪ್ರತಿಕ್ರಿಯಿಸಿ (+)