ಶನಿವಾರ, ಮಾರ್ಚ್ 6, 2021
21 °C

ಕಾಲು ಬೆರಳಿನಿಂದ ಬರೆದ ಯುವಕನಿಗೆ ಅತ್ಯುತ್ತಮ ಶ್ರೇಣಿ

ಪ್ರಜಾವಾಣಿ ವಾರ್ತೆ/ ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

ಕಾಲು ಬೆರಳಿನಿಂದ ಬರೆದ ಯುವಕನಿಗೆ ಅತ್ಯುತ್ತಮ ಶ್ರೇಣಿ

ಚಿಕ್ಕೋಡಿ: ಎರಡು ಕೈಗಳಿಲ್ಲ, ಒಂದು ಕಾಲೂ ಊನಗೊಂಡಿದೆ. ಅವರು ದೈಹಿಕವಾಗಿ ಅಂಗವಿಕಲನಾದರೂ ಅಪರಿಮಿತವಾದ ಆತ್ಮವಿಶ್ವಾಸವಿ ಹೊಂದಿದ್ದಾರೆ. ಅದ್ಭುತವಾದ ಬುದ್ಧಿ ಶಕ್ತಿಯ ಜೊತೆಗೆ ಸಾಧಿಸುವ ಛಲವಿದೆ. ಅಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರತಿಶತ 78 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.ಹೌದು, ತಾಲ್ಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಹನುಮಾನ ಬಬನ ಹೊನಖಾಂಡೆ ಎಂಬ ವಿದ್ಯಾರ್ಥಿ ತಾನು ಅಂಗವಿಕಲ ನೆಂಬ ಕೊರಗನ್ನು ಹಚ್ಚಿಕೊಳ್ಳದೇ ಕಠಿಣ ಪರಿಶ್ರಮದ ಮೂಲಕ ಈ ವಿಶಿಷ್ಠ ಸಾಧನೆಯನ್ನು ಸಾಕಾರಗೊಳಿಸಿದ್ದಾರೆ. ಹನುಮಾನ್ ಬಿ.ಕಾಂ ಶಿಕ್ಷಣವನ್ನು ಪಡೆದು ಕೆಎಎಸ್‌ ಅಥವಾ ಐಎಎಸ್‌­ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಅತ್ಯುನ್ನತ ಸಾಧನೆಗೈಯುವ ಹಿರಿದಾದ ಗುರಿ ಹೊಂದಿದ್ದಾರೆ.ಅಥಣಿ ತಾಲ್ಲೂಕಿನ ಆಜೂರ ಗ್ರಾಮದ ದಲಿತ ಕುಟುಂಬದ ಬಡ ದಂಪತಿಗೆ ಹಿರಿಮಗನಾಗಿ ಜನಿಸಿದ ಹನುಮಾನ, ಹುಟ್ಟಿನಿಂದಲೇ ಎರಡು ಕೈಗಳು ಮತ್ತು ಒಂದು ಕಾಲು ಇಲ್ಲದ ವಿಕಲಚೇತನ. ಆದರೇನಂತೆ, ಜೀವನ ದಲ್ಲಿ ಸಾಧನೆ ಮಾಡಬೇಕೆಂಬ ಉತ್ಕಟ ಆಕಾಂಕ್ಷೆ. ಪ್ರಾಥಮಿಕ ಶಿಕ್ಷಣವನ್ನು ಆಜೂರ ಮತ್ತು ಖಿಳೇಗಾಂವದಲ್ಲಿ ಪೂರೈಸಿ, ಏಳನೇ ತರಗತಿಯಿಂದ ಹುಬ್ಬಳ್ಳಿಯ ಅಂಗವಿಕಲ ಬಾಲಕ–ಬಾಲಕಿಯರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಪ್ರವೇಶ ಪಡೆದರು. ಅಲ್ಲಿನ ಶೃದ್ಧೆಯಿಂದ ಅಧ್ಯಯನ ಗೈದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.63 ರಷ್ಟು ಅಂಕಗಳನ್ನು ಪಡೆದು ಹಿರಿದಾದ ಸಾಧನೆಗೈದರು.ಅಲ್ಲಿಂದ ಪಿಯುಸಿ ಶಿಕ್ಷಣವನ್ನು ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪಡೆದರು. ಇಲ್ಲಿ ಹನುಮಾನ ಅವರ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು ಚಿಕ್ಕೋಡಿಯ ಸಹಾರಾ ಗ್ರಾಮೀಣಾ ಭಿವೃದ್ಧಿ ಸಂಸ್ಥೆ. ಕಾಲೇಜಿಗೆ ಪ್ರವೇಶ, ವಸತಿ ನಿಲಯದ ಪ್ರವೇಶ ಸೇರಿದಂತೆ ಕಲಿಕಾ ಸಾಮಗ್ರಿ ಸೇರಿದಂತೆ ಇತರ ವ್ಯವಸ್ಥೆಗಳನ್ನು ಸಂಸ್ಥೆಯ ಸಂಸ್ಥಾಪಕ ರಾಜ್‌ ಜಾಧವ ಒದಗಿಸಿಕೊಟ್ಟಿ ರುವುದನ್ನು ಹನುಮಾನ ಹೊನಖಾಂಡೆ ಕೃತಜ್ಞತೆಯಿಂದ ಸ್ಮರಿಸುತ್ತಾರೆ.‘ಮೂವರು ತಮ್ಮಂದಿರು, ನಾಲ್ವರು ತಂಗಿಯರನ್ನು ಒಳಗೊಂಡ ತುಂಬು ಕುಟುಂಬ. ಕಷ್ಟದಲ್ಲೇ ತಮ್ಮನ್ನೆಲ್ಲಾ ಸಾಕಿ ಸಲಹುತ್ತಿರುವ ಅಮ್ಮ ಅಪ್ಪನಿಗೆ ತಾನು ಹೊರೆಯಾಗದೇ ಉತ್ತಮ ಶಿಕ್ಷಣ  ಪಡೆದು ಕುಟುಂಬಕ್ಕೆ ಆಸರೆಯಾಗುವ ಹಿರಿಯಾಸೆ ಹೊಂದಿದ್ದೇನೆ. ಉತ್ಕಟ ವಾದ ಇಚ್ಛೆಯೇ ಸಾಧನೆಗೆ ಸ್ಪೂರ್ತಿ ಯಾಗಿದೆ’ ಎನ್ನುತ್ತಾರೆ ಹನುಮಾನ್.‘ತರಗತಿಗಳಲ್ಲಿ ಉಪನ್ಯಾಸಕರು ನೀಡುತ್ತಿದ್ದ ಬೋಧನೆಯನ್ನು ಮನನ ಮಾಡಿಕೊಳ್ಳುವ ಜೊತೆಗೆ ದಿನವೂ ವಿದ್ಯಾರ್ಥಿನಿಲಯದಲ್ಲಿ ಕನಿಷ್ಠ ನಾಲ್ಕು ತಾಸು ಅಭ್ಯಾಸ ಮಾಡುತ್ತಿದ್ದೆ’ ಎನ್ನುವ ಹನುಮಾನ್ ಕಾಲಿನಿಂದಲೇ ಬರೆಯ ಬಲ್ಲ ಪ್ರತಿಭಾನ್ವಿತ ವಿದ್ಯಾರ್ಥಿ. ಊಟವನ್ನೂ ಕಾಲಿನ ಬೆರಳುಗಳ ಸಹಾಯದಿಂದಲೇ ಮಾಡುತ್ತಾರೆ.‘ಹನುಮಾನ ದೈಹಿಕವಾಗಿ ವಿಕಲ ನಾಗಿದ್ದರೂ ಸ್ವಾಭಿಮಾನಿ ಮತ್ತು ಸಧೃಡ ಮನಸ್ಸಿನ ಹುಡುಗ. ತನಗೆ ದುಡ್ಡು ಬೇಡ. ಜೀವನ ಸಾಧನೆಗೆ ಮಾರ್ಗದರ್ಶನ ನೀಡಿ ಎನ್ನುತ್ತಾನೆ. ಆತನ ಶಿಕ್ಷಣ ಮುಗಿಯುವವರೆಗೆ ಸೂಕ್ತ ಮಾರ್ಗದರ್ಶನ ಮತ್ತು ತನುಮನ ಧನದಿಂದ ಸಹಾಯ ನೀಡಲು ಸಹಾರಾ ಸಂಸ್ಥೆ ಕಟ್ಟಿಬದ್ಧವಾಗಿದೆ. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆತ ಶೇ.78 ರಷ್ಟು ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವುದು ತಮಗೆ ಹೆಮ್ಮೆ ಮೂಡಿಸಿದೆ’ ಎನ್ನುತ್ತಾರೆ ಸಹಾರಾ ಸಂಸ್ಥೆಯ ಸಂಸ್ಥಾಪಕ ರಾಜ್‌ ಜಾಧವ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದರೆ ಇನ್ನಷ್ಟು ಸಾಧನೆಗೆ ಪ್ರೇರಣೆ ದೊರಕಿ ದಂತಾಗುತ್ತದೆ. ಸಂಪರ್ಕಕ್ಕೆ: ಹನುಮಾನ ಹೊನಖಾಂಡೆ –99003 01261.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.