ಸೋಮವಾರ, ಜೂನ್ 21, 2021
29 °C

ಕಾಲ ಗತಿಸಿದರೂ ಕಳೆಗಟ್ಟಿರುವ ನಾಣ್ಯ-ನೋಟು

ಪ್ರಜಾವಾಣಿ ವಾರ್ತೆ ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು:  ಕೋಟಿ ಮೌಲ್ಯದ ನೋಟು, ಸಾವಿರ ಕೈಗಳಲ್ಲಿ ಓಡಾಡಿದರೂ ಸವೆಯದ ನಾಣ್ಯ, ಹಳೆಯ ಬಣ್ಣದ ವೈಯ್ಯಾರದೊಂದಿಗೆ ಹೊಸ ಪ್ಲಾಸ್ಟಿಕ್ ಚೀಲದಲ್ಲಿ ಬೆಚ್ಚಗೆ ಕುಳಿತಿದ್ದ ಬಾಂಡ್ ಪೇಪರ್‌ಗಳು. ಕಾಲದ ಜೊತೆ ಸೆಣೆಸಿದರೂ ಸವೆಯದ ನೋಟು, ನಾಣ್ಯ, ಪೇಪರ್‌ಗಳ ಸುತ್ತ ವೀಕ್ಷಕ-ವಿದ್ಯಾರ್ಥಿಗಳ ಚಿತ್ತ ಅಲ್ಲಿ ನೆಟ್ಟಿತ್ತು... ಸ್ಥಳೀಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪರಂಪರೆ ಕೂಟ ಹಾಗೂ ಧಾರವಾಡ ಫಿಲಾ ಐಲೆಂಡ್ ಅಸೋಸಿಯೇಟ್ಸ್ ಆಶ್ರಯದಲ್ಲಿ ಇತ್ತೀಚೆಗೆ ಕಿತ್ತೂರು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ನಾಣ್ಯ ಪ್ರದರ್ಶನದ ಚಿತ್ರಣವಿದು.ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ತುಂಬ ಅಪರೂಪದ ಹಾಗೂ ಅಷ್ಟೇ ಅಂದದ ನಾಣ್ಯ-ನೋಟು-ಬಾಂಡ್ ಪೇಪರ್‌ಗಳನ್ನು ನೂರಾರು ಜನ  ಕುತೂಹಲದಿಂದ ವೀಕ್ಷಿಸಿ ಖುಷಿ ಪಟ್ಟರು.  ದೇಶದ ಪ್ರಥಮ ಪಂಚ್‌ಮಾರ್ಕ್ ನಾಣ್ಯಗಳು, ಕುಶಾನರು, ಶಾತವಾಹನ, ಕದಂಬ, ಚೋಳ ದೊರೆಗಳಾಳಿದ  ಪ್ರಾಚೀನ ನಾಣ್ಯಗಳು, ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಹಾಂಗೀರ, ಷಹಜಹಾನ್, ಔರಂಗಜೇಬ ಕಾಲದ ಮತ್ತು  ವಿಜಯನಗರ, ಮೈಸೂರು, ವಿಜಾಪುರ, ಹೈದರಾಬಾದ್, ಕಛ್, ಬರೋಡಾ, ಗ್ವಾಲಿಯರ್, ಮೇವಾರ ರಾಜ್ಯ ಸಂಸ್ಥಾನಗಳ ನಾಣ್ಯಗಳು ಗತ ಇತಿಹಾಸದ ಮೆಲುಕು ಹಾಕುವಂತೆ ಮಾಡಿದವು.ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್, ಪೋರ್ಚುಗೀಸ್, ಫ್ರೆಂಚ್ ಹಾಗೂ ಸ್ವಾತಂತ್ರ್ಯ ನಂತರದ ಭಾರತದ ನಾಣ್ಯ ಮತ್ತು ನೋಟುಗಳು ಈ ಅಪೂರ್ವ ಪ್ರದರ್ಶನದಲ್ಲಿ ವೀಕ್ಷಕರ ಗಮನ ಸೆಳೆದವು.ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಸೀಸ್, ಪೋಟಿನ್ ಲೋಹದಿಂದ ಸಿದ್ಧಪಡಿಸಲಾಗಿದ್ದ ನಾಣ್ಯಗಳು, ಪ್ಲಾಸ್ಟಿಕ್ ಒಳಗೊಂಡಿದ್ದ ವಿದೇಶಿ ನೋಟುಗಳು ಸಹಸ್ರಾರು ವರ್ಷಗಳ ಇತಿಹಾಸದ ಝಲಕು ಕಣ್ಮುಂದೆ ಕ್ಷಣ ಹಾದು ಹೋಗುವಂತೆ ಮಾಡಿದವು.ಹೇರ್‌ಪಿನ್, ಗಿಟಾರ್ ಆಕಾರದ  ನಾಣ್ಯಗಳು, ಪ್ರಾಣಿಗಳ ಚಿತ್ರಗಳಿದ್ದ ನಾಣ್ಯ, ಬಿದಿರಿನಿಂದ ತಯಾರಿಸಲಾದ ನಾಣ್ಯ, ಹೆಲ್ ನೋಟು, ಅತಿ ದೊಡ್ಡದಾದ ನೋಟು, ಬೇರ್ಪಡಿಸದೇ ಇದ್ದ, 32 ನೋಟುಗಳನ್ನು ಹೊಂದಿದ್ದ ಅಖಂಡ ಶೀಟು, ಕೋಟಿ ಮುಖಬೆಲೆಯ ನೋಟು, ಮುದ್ರಣ ದೋಷವುಳ್ಳ ವಿಚಿತ್ರ ಆಕಾರದ ನೋಟು, ನಾಣ್ಯಗಳು ಅಲ್ಲಿದ್ದವು.ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಪತಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಈ ಅಪರೂಪದ ಪ್ರದರ್ಶನವನ್ನು ಉದ್ಘಾಟಿಸಿದರು. ಕಿತ್ತೂರು ನಾಡ ಲಿಂಗಾಯತ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸೋಮಶೇಖರ ಬಿಕ್ಕಣ್ಣವರ, ಗೌರವ ಕಾರ್ಯದರ್ಶಿ ಆರ್. ವೈ. ಪರವಣ್ಣವರ, ನಿರ್ದೇಶಕ ಚಂದ್ರಶೇಖರ ದಳವಾಯಿ ಸೇರಿದಂತೆ ಅನೇಕರು ಸಾಕ್ಷಿಯಾಗಿದ್ದರು.ಭರತ್‌ಕುಮಾರ್ ಸುಣಗಾರ, ಮಹಮ್ಮದ್ ಯೂನಸ್ ಸವಣೂರ, ವಿಕಾಸ ಚವ್ಹಾಣ, ರಾಘವೇಂದ್ರ ಪೈ ಹಾಗೂ ಆಕಾಶ್ ಹುಬ್ಬಳ್ಳಿ  ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.