ಗುರುವಾರ , ಜೂನ್ 24, 2021
22 °C

ಕಾವ್ಯಕ್ಕೆ ಪೂರ್ವ ನಿರ್ಧರಿತ ಮಿತಿ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವ್ಯಕ್ಕೆ ಪೂರ್ವ ನಿರ್ಧರಿತ ಮಿತಿ ಬೇಡ

ತುಮಕೂರು: ಕವಿಯೇ ಕವಿತೆ ಓದುವುದನ್ನು ಕೇಳುವ ಸಂದರ್ಭದಲ್ಲಿ ಅದರ ಲಯಕ್ಕಿರುವ ಶಕ್ತಿ ಅರಿವಾಗುತ್ತದೆ. ಮನದ ಅರ್ಥಗಳು ಧ್ವನಿಸುತ್ತವೆ ಎಂದು ಕವಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.ನಗರದಲ್ಲಿ ಭಾನುವಾರ ನಡೆದ ವಡ್ಡಗೆರೆ ನಾಗರಾಜಯ್ಯನವರ `ಗೋಸಂಗಿ~ ಕವನ ಸಂಕಲನದ ಕಾವ್ಯ ವಾಚನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾವ ತಿಳಿಯುವ ಕುತೂಹಲ ಎಲ್ಲ ಕಾವ್ಯಪ್ರೇಮಿಗಳಿಗೂ ಇರುತ್ತದೆ ಎಂದರು.ಕಾವ್ಯವನ್ನು ಕಾವ್ಯವಾಗಿ ಪರಿಗಣಿಸದೆ ಅದನ್ನು ಬರೆದವರ ಹಿನ್ನೆಲೆಯ ಮೇಲೆ ಗುರುತಿಸುವುದು ಸಮಕಾಲೀನ ಕನ್ನಡ ಕಾವ್ಯದ ಮಿತಿ. ದಲಿತರು, ಅಸ್ಪೃಷ್ಯರು, ತುಳಿತಕ್ಕೆ ಒಳಗಾದವರು, ಇಂಥ ಜಾತಿ, ಇಂಥ ಲಿಂಗ ಅಥವಾ ಇಂಥ ವರ್ಗಕ್ಕೆ ಸೇರಿದವರು ಬರೆದ ಕಾವ್ಯ ಎಂಬ ತೀರ್ಮಾನದಿಂದಲೇ ಕವಿಯಾದವನು ಕಾವ್ಯ ರಚನೆ ಪ್ರಾರಂಭಿಸುವುದು ಇಂಥ ಮಿತಿಯ ವ್ಯಾಪ್ತಿಗೆ ಸೇರುತ್ತದೆ ಎಂದು ತಿಳಿಸಿದರು.ವಡ್ಡಗೆರೆ ಕಾವ್ಯದ ಸಾಲುಗಳಲ್ಲಿ ಕಾಣಿಸುವ ನನ್ನಜನ, ನನ್ನವರು ಎಂಬ ಪದಗಳೂ ಇಂಥ ಬದ್ಧತೆಯಿಂದಲೇ ಬಂದಿರಬಹುದು. ಜಾತಿಯ ಅನುಭವಕ್ಕೆ ಸೀಮಿತವಾದ ರಚನೆಗಳನ್ನು ದಲಿತ ಕಾವ್ಯ ಎಂದು ವ್ಯಾಖ್ಯಾನಿಸಲಾಗುತ್ತಿದೆ. ದಲಿತರ ಅನುಭವದಿಂದ ಮೂಡಿ ಬಂದ ಕಾವ್ಯಕ್ಕೆ ದಲಿತ ಕಾವ್ಯ ಎಂಬ ಹಣೆಪಟ್ಟಿ ಕಟ್ಟುವುದರಿಂದ ಕನ್ನಡ ಕಾವ್ಯ ಸಂದರ್ಭದಲ್ಲಿ ಮೂಡಿಬಂದ ಮಹತ್ವದ ಕಾವ್ಯದ ಅಂಶವನ್ನು ಮರೆ ಮಾಚಿದಂತೆ ಆಗುತ್ತದೆ ಎಂದು ಹೇಳಿದರು.ಇಂಥ ಮಿತಿಯನ್ನು ಕವಿ- ಓದುಗ ಮತ್ತು ವಿಮರ್ಶಕ ಸಮೂಹ ಈಗಾಗಲೇ ಒಪ್ಪಿಕೊಂಡಿದೆ. ಆದರೆ ನಿಜವಾದ ಕಾವ್ಯ ಎಲ್ಲ ಮಿತಿಗಳನ್ನು ದಾಟಿ ಹೊಸ ದನಿ ಆಗಿ ಮೂಡಿ ಬರುತ್ತದೆ. ಕಾವ್ಯದ ಸತ್ವ ಎಲ್ಲರಿಗೂ ಅರಿವಾಗುವಂತೆ ಮಾಡಲು ಪೂರ್ವ ನಿರ್ಧಾರಿತ ಮಿತಿಗಳನ್ನು ದಾಟಿ ಹೊಸ ಬಗೆ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಸಾಹಿತಿ ಸಿ.ನರಸಿಂಹಯ್ಯ ಮಾತನಾಡಿ, ದಲಿತರು ಪರಂಪರೆಯ ಜೊತೆಗೆ ಅನುಸಂಧಾನ ಮಾಡುವಾಗ ವೇದಾತೀತವಾದ ಅಮೂರ್ತ ಪ್ರತಿಮೆಗಳನ್ನು ಕಾವ್ಯದ ಮೂಲಕ ವ್ಯಕ್ತಪಡಿಸುತ್ತಾರೆ. ವಡ್ಡಗೆರೆ ನಾಗರಾಜಯ್ಯ ಸಹ ಈ ಪರಂಪರೆಗೆ ಸೇರಿದವರು ಎಂದು ಅನಿಸಿಕೆ ವ್ಯಕ್ತಪಡಿಸಿದರು.ಚಿಂತಕರಾದ ಡಾ.ಸೋ.ಮು.ಭಾಸ್ಕರಾಚಾರ್, ನಿರಂಜನದಾಸ್ ರಾಜ್ಭಾನ್, ಡಾ.ರಘುಪತಿ, ತುಂಬಾಡಿ ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.