ಭಾನುವಾರ, ಜನವರಿ 19, 2020
23 °C

ಕಿಂಗ್ ಖಾನ್ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರುಖ್ ಖಾನ್ ಮಗಳು ಸುಹಾನಾಗೆ ಈಗ ಹತ್ತು ವರ್ಷ. ಅವಳು ಅಪ್ಪ ನಟಿಸಿದ ಕೆಲವು ಚಿತ್ರಗಳನ್ನು ನೋಡಲು ನಿರಾಕರಿಸುತ್ತಿದ್ದಳು. ಯಾವ ಚಿತ್ರದಲ್ಲೂ ಅಪ್ಪ ಸಾಯಕೂಡದು ಎಂಬುದು ಅವಳ ಷರತ್ತು.ಹಿಂದೆ ಶಾರುಖ್ ಕೆಲವು ಚಿತ್ರಗಳಲ್ಲಿ ಮೃತಪಟ್ಟಿರುವ ದೃಶ್ಯಗಳಿವೆ. ಬುದ್ಧಿ ಬಂದಂತೆ ಮಗಳು ಆ ಚಿತ್ರಗಳನ್ನೂ ನೋಡಬೇಕು ಎಂದು ಪಟ್ಟು ಹಿಡಿದಾಗ ಶಾರುಖ್ ಹಾಗೂ ಅವರ ಹೆಂಡತಿ ಗೌರಿ ತುಂಬಾ ತಲೆಕೆಡಿಸಿಕೊಂಡರು. ಸಾಯುವ ದೃಶ್ಯ ನೋಡಿದರೆ ಸುಹಾನಾ ಚೀರುತ್ತಾಳೆ. ಗೋಳೋ ಅಂತ ಅಳುತ್ತಾಳೆ. ಅದನ್ನು ನೋಡಿದರೆ ತಮಗೂ ದುಃಖವಾಗುತ್ತದೆ ಎಂಬುದೇ ಇಬ್ಬರಿಗೂ ಚಿಂತೆ.ಶಾರುಖ್‌ಗೆ ಒಂದು ಉಪಾಯ ಹೊಳೆಯಿತು. ಯಾವ್ಯಾವ ಚಿತ್ರಗಳಲ್ಲಿ ಅವರು ಮೃತಪಟ್ಟಿದ್ದಾರೋ, ಆ ದೃಶ್ಯಗಳಿಗೆಲ್ಲಾ ಕತ್ತರಿ ಹಾಕಿಸಿದರು.ಆಮೇಲೆ ಮಗಳಿಗೆ ಆ ಸಿನಿಮಾಗಳನ್ನು ತೋರಿಸಿದರು. ಸುಹಾನಾಗೆ ಖುಷಿಯಾಯಿತು. ತನ್ನಪ್ಪ ಯಾವ ಚಿತ್ರದಲ್ಲೂ ಸತ್ತೇ ಇಲ್ಲ ಎಂದೇ ಅವಳು ಕೆಲವು ವರ್ಷ ನಂಬಿದ್ದಳು. ಅವಳು ಬೆಳೆಯುತ್ತಾ ಹೋದಂತೆ ಕೆಲವರು ಸ್ನೇಹಿತರಾದರು. ಅವರಲ್ಲಿ ಸುಹಾನಾ ಅಭಿಮಾನಿಗಳೂ ಇದ್ದರೆನ್ನಿ. ಅವರೊಡನೆ ಮಾತನಾಡುವಾಗ ಸುಹಾನಾ ತನ್ನಪ್ಪ ಯಾವ ಚಿತ್ರದಲ್ಲೂ ಸತ್ತೇ ಇಲ್ಲ ಎಂದು ಹೇಳಿದಳು.ಅದು ಚರ್ಚೆಗೆ ಕಾರಣವಾಗಿ, ಶಾರುಖ್ ಮೃತಪಟ್ಟಿರುವ ಚಿತ್ರಗಳು ಯಾವುವು ಎಂಬುದು ಸುಹಾನಾಗೆ ತಿಳಿಯಿತು. ನಿಜ ಏನೆಂದು ಹೇಳಲೇಬೇಕು ಎಂದು ಅಪ್ಪ-ಅಮ್ಮನಲ್ಲಿ ಪಟ್ಟುಹಿಡಿದಳು.ಆಮೇಲೆ ವಿಧಿಯಿಲ್ಲದೆ ಶಾರುಖ್, ಗೌರಿ ಅವಳಿಗೆ ಸತ್ಯ ಹೇಳಿದ್ದೇ ಅಲ್ಲದೆ ಆ ಚಿತ್ರಗಳ ಯಾವ ದೃಶ್ಯಗಳನ್ನೂ ಕತ್ತರಿಸದೆ ತೋರಿಸಿದರು. ತನ್ನ ಅಪ್ಪ ಸಿನಿಮಾದಲ್ಲಿ ಸಾಯುವ ದೃಶ್ಯವನ್ನು ಕಂಡು ಸುಹಾನಾ ಮೊದಲು ಜೋರಾಗಿ ಅತ್ತಳು. ಎರಡು ದಿನ ಅಪ್ಪನ ಸಾವಿನ ದೃಶ್ಯವೇ ಕಣ್ಣಮುಂದೆ ಬಂದು ಬಿಕ್ಕುತ್ತಿದ್ದಳು. ಆಮೇಲೆ ಪದೇಪದೇ ನೋಡುತ್ತಾ ಹೋದಂತೆ ಅದು ಬರೀ ಅಭಿನಯ, ತನ್ನಪ್ಪನಿಗೆ ಅದೇ ಕೆಲಸ ಎಂಬ ಅರಿವು ಅವಳಿಗಾಯಿತು.

*

ಶಾರುಖ್ ಮಗ ಆರ್ಯನ್ ವಯಸ್ಸು ಹದಿನಾಲ್ಕು. ಅವನಿಗೆ ವಿಡಿಯೋಗೇಮ್ ಗೀಳು. ಅಪ್ಪ `ರಾ.ಒನ್~ ಸಿನಿಮಾ ಮಾಡಲು ಅದೇ ಕಾರಣವೆನ್ನಿ. ನಿತ್ಯ ಅವನು ಗೆಳೆಯರನ್ನು ಸೇರಿಸಿಕೊಂಡು ವಿಡಿಯೋಗೇಮ್ ಆಡುತ್ತಾನೆ.ಆಪ್ತ ಸ್ನೇಹಿತರು ಕೀಲಿಯಲ್ಲಿ ನಿಯಂತ್ರಿಸುವ ಆಟಗಳಲ್ಲಿನ ಪಾತ್ರಗಳಿಗೆ ಅವನು ಮನಸೋಇಚ್ಛೆ ಕೀಲಿ ಒತ್ತುತ್ತಲೇ ಹೊಡೆಯುತ್ತಾನೆ. ಎದುರಾಳಿಗಳ ನಿಯಂತ್ರಣದಲ್ಲಿರುವ ವಿಡಿಯೋಗೇಮ್ ಪಾತ್ರಗಳು ನೆಲಕ್ಕೊರಗಿದಾಗ ಅವನಿಗೆ ಸಂಭ್ರಮ. ಮಗ ವಿಡಿಯೋಗೇಮ್‌ನಲ್ಲಿ ಗೆಲ್ಲುವುದನ್ನು ಕಂಡು ಶಾರುಖ್ ಖಾನ್ ಕೂಡ ತುಂಬಾ ಖುಷಿ ಪಟ್ಟಿದ್ದಿದೆ.ಈಗ ಆರ್ಯನ್‌ಗೆ ತನ್ನಪ್ಪ ತೆರೆಮೇಲೆ ಹೊಡೆದಾಡಬೇಕು ಎಂಬುದೇ ಆಸೆ. ಶಾರುಖ್ ಕೂಡ ಮಗನ ಬಯಕೆ ಈಡೇರಿಸಲೆಂದೇ ಮೈಹುರಿ ಮಾಡಿಕೊಂಡಿದ್ದು. ಹಗ್ಗ ಕಟ್ಟಿಕೊಂಡು ಎಲ್ಲಿಂದೆಲ್ಲಿಗೋ ಜಿಗಿಯುವಂಥ ಸಾಹಸಗಳನ್ನು ಮಾಡಿದ್ದು. ಆರ್ಯನ್‌ಗೆ ಅಪ್ಪ ಸಾಯುವ ಚಿತ್ರಗಳನ್ನು ನೋಡಲು ಹಿಂಜರಿಕೆಯೂ ಇಲ್ಲ, ಭಯವೂ ಇಲ್ಲ. ಆ ಸಿನಿಮಾದಲ್ಲಿ ಅಪ್ಪ ಸಾಯುತ್ತಾರಾದರೂ ಅವರೇ ಹೀರೋ ಎಂದು ಅವನು ತಂಗಿಗೆ ಸಮಾಧಾನ ಹೇಳುತ್ತಾನೆ.

*

ಶಾರುಖ್ ಖಾನ್‌ಗೂ ವಿಡಿಯೋ ಗೇಮ್ ಎಂದರೆ ಇಷ್ಟ. ಇನ್ನು ಸಿನಿಮಾಗಳಲ್ಲಿ ತಾವು ಸಾಯುವುದು ಸರಿಯಲ್ಲ ಎಂದು ಅವರು ಪದೇಪದೇ ಅಂದುಕೊಂಡಿದ್ದಾರೆ. ಮಗಳ ಖುಷಿಗಾಗಿಯೇ ತಾವು ಸಾಯುವ ದೃಶ್ಯಗಳಿರುವ ಚಿತ್ರಗಳನ್ನು ಅವರು ನಿರಾಕರಿಸಿದ ಉದಾಹರಣೆಯೂ ಇದೆ. `ಡಾನ್ 2~ನಲ್ಲಿ ಅವರು ಮಗನ ಬಯಕೆ ಈಡೇರಿಸುವ ರೀತಿಯಲ್ಲೇ ಕೆಲವು ದೃಶ್ಯಗಳಲ್ಲಿ ಹೊಡೆದಾಡಿದ್ದಾರೆ.ಮಕ್ಕಳನ್ನು ಇಷ್ಟೊಂದು ಇಷ್ಟಪಡುವ ಶಾರುಖ್, ಅವರ ಹಿತದೃಷ್ಟಿಯಿಂದಲೇ ತೆರೆಮೇಲೆ ನಾಯಕಿಯರ ಜೊತೆ ಎಲ್ಲೆ ಮೀರಿದ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ. ಅಧರಚುಂಬನದಿಂದ ಅವರೀಗ ಮಾರುದೂರ. ಅದನ್ನೆಲ್ಲಾ ನೆರವೇರಿಸಲು ಅನೇಕ ನಾಯಕರಿದ್ದಾರೆಂಬುದು ಅವರ ಇಂಗಿತ.ಮಕ್ಕಳಿಗೆ ಹಿಂಸೆ ಹೇಗಿರುತ್ತದೆ ಎಂಬುದು ಕಾರ್ಟೂನ್‌ಗಳಿಂದ ಅರಿವಿಗೆ ಬಂದಿರುತ್ತದೆ. ಹಾಗಾಗಿ ಚಿತ್ರಗಳಲ್ಲೂ ಹೊಡೆದಾಟ ತೋರಿಸಿದರೆ ಅದು ಅವರಿಗೆ `ರಿಲೀಫ್~ನಂತೆ ಕಾಣುತ್ತದೆ. ಆದರೆ, ಸೆಕ್ಸ್ ಹಾಗಲ್ಲ. ಅದನ್ನು ಸಿನಿಮಾಗಳು ಮಾರಲೇಕೂಡದು ಎಂಬುದು ಶಾರುಖ್ ನಿಲುವು.ಹೀಗೆಲ್ಲಾ ಇರುವ ಶಾರುಖ್ ಮನೆಯ ಮಹಡಿಗೆ ಹೋಗಿ ಒಬ್ಬರೇ ನಿಂತು ಆಕಾಶ ನೋಡುತ್ತಾ, ನಕ್ಷತ್ರಗಳ ಹೊಳಪು ಕಣ್ತುಂಬಿಕೊಂಡು ಆಗಾಗ ನಿಂತುಬಿಡುತ್ತಾರೆ. ಮಗನೋ ಮಗಳೋ ಬಂದು ನೀನು ಕೂಡ `ಸ್ಟಾರ್~ ಅಲ್ಲವೇ ಎಂದು ಕೇಳಿದರೆ, ಶಾರುಖ್ `ಅಲ್ಲ~ ಎಂದು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರಂತೆ.ಅಪ್ಪ- ಮಕ್ಕಳ ನಿಜ ಬದುಕಿನ ಈ ಕಥೆ ಮಜವಾಗಿದೆಯಲ್ಲವೇ?

 

 

ಪ್ರತಿಕ್ರಿಯಿಸಿ (+)