ಸೋಮವಾರ, ಮೇ 10, 2021
25 °C

ಕೀಲುಬಾಧೆ: ನೂರು ಶಿಕ್ಷಕರಿಗೆ ಉಚಿತ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸ್ಪರ್ಶ್ ಆಸ್ಪತ್ರೆಯು ಕಳೆದ ವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆಯ ಅಂಗವಾಗಿ, ಕೀಲುಬಾಧೆಯಿಂದ ನರಳುತ್ತಿರುವ 100 ಮಂದಿ ನಿವೃತ್ತ ಶಿಕ್ಷಕ-ಶಿಕ್ಷಕಿಯರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವ `ಗುರುನಮನ~ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಂಸ್ಥೆಯ ನಿವೃತ್ತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಅವರು ಸೋಮವಾರ ಚಾಲನೆ ನೀಡಿದರು.ಸ್ಪರ್ಶ್ ಪ್ರತಿಷ್ಠಾನವು ಜರ್ಮನಿಯ ಹ್ಯಾಂಬರ್ಗ್‌ನ `ಎಂಡೋ ಕ್ಲಿನಿಕ್~ ಸಹಯೋಗದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಜರ್ಮನಿಯಲ್ಲಿ ಕೀಲುನೋವು ಸಂಬಂಧಿ ಶಸ್ತ್ರಚಿಕಿತ್ಸೆಯ ಯಶಸ್ವಿ ಪ್ರಮಾಣ ಶೇ 99.2ರಷ್ಟಿದೆ. ಆದರೆ ಭಾರತದಲ್ಲಿ ಈ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ. ದೇಶದ ಬಡವರಿಗೂ ಇಂಥ ಚಿಕಿತ್ಸೆ ಲಭ್ಯವಾಗಬೇಕು~ ಎಂದರು.`ಮಕ್ಕಳು ಉತ್ತಮ ನಾಗರಿಕರಾಗಲು ತಂದೆ-ತಾಯಿ ಕಲಿಸಿದ ಶಿಸ್ತು, ಸಂಯಮ, ಸಮಾಜದೊಂದಿಗೆ ಬೆರೆಯುವ ಗುಣವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಮೌಲ್ಯವರ್ಧನೆಯ ಅರ್ಧ ಪಾಲು ಪೋಷಕರಿಂದ ಬರುತ್ತದೆ. ಉಳಿದರ್ಧ ಶಿಕ್ಷಕರಿಂದ ಬರುತ್ತದೆ~ ಎಂದರು.ನಿವೃತ್ತ ಶಿಕ್ಷಕರ ಕಾಯಿಲೆಯನ್ನು ಗುಣಪಡಿಸಲು ಮುಂದಾದ ಸ್ಪರ್ಶ್‌ನ ಪ್ರಯತ್ನವನ್ನೂ ಅವರು ಸ್ಮರಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಮಾತನಾಡಿ, `ಬರೀ ಶಿಕ್ಷಕರ ದಿನವನ್ನು ಆಚರಿಸುವುದರಿಂದ ಶಿಕ್ಷಕರಿಗೆ ನೈಜ ನಮನ ಸಲ್ಲಿಸಿದಂತೆ ಆಗುವುದಿಲ್ಲ. ನಿವೃತ್ತಿಯ ನಂತರ ಪರಾವಲಂಬಿಯಾಗುವ ಶಿಕ್ಷಕರಿಗೆ ಇಂಥ ಚಿಕಿತ್ಸೆಗಳನ್ನು ಉಚಿತವಾಗಿ ನೆರವೇರಿಸಲು ಇತರ ಆಸ್ಪತ್ರೆಗಳೂ ಮುಂದೆ ಬರಬೇಕು~ ಎಂದರು.ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಪಾಟೀಲ್ ಮಾತನಾಡಿ, `ಕಳೆದ ವರ್ಷದಿಂದ ಪ್ರತಿಷ್ಠಾನವು ಈ ಕಾರ್ಯಕ್ರಮ ಏರ್ಪಡಿಸುತ್ತಿದೆ. ಈ ಮೂಲಕ ತನ್ನ ಗುರುನಮನ ಸಲ್ಲಿಸುತ್ತಿದೆ. ಕೀಲುಬಾಧೆ ಶಸ್ತ್ರಚಿಕಿತ್ಸೆಗೆ ಬಳಕೆ ಮಾಡುವ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.ವಾಸ್ತವವಾಗಿ ಈ ಉಪಕರಣದ ಬೆಲೆ ಐದು ಸಾವಿರ ರೂಪಾಯಿ. ಆದರೆ ವಿದೇಶದಿಂದ ಆಮದು ಮಾಡಿಕೊಳ್ಳುವುದರಿಂದ ಆಮದು ಸುಂಕ, ಮತ್ತಿತರ ಖರ್ಚುಗಳು ಸೇರಿ 70 ಸಾವಿರ ರೂಪಾಯಿಗೆ ತಲುಪುತ್ತದೆ. ಆದ್ದರಿಂದ ಸರ್ಕಾರವೇ ಈ ಉಪಕರಣ ತಯಾರಿಸುವ ಘಟಕವನ್ನು ಸ್ಥಾಪಿಸಬೇಕು~ ಎಂದು ಹೇಳಿದರು.`ಸರ್ಕಾರ ಜಾರಿಗೆ ತಂದಿರುವ ಯಶಸ್ವಿನಿ ವಿಮಾ ಯೋಜನೆಯ ವ್ಯಾಪ್ತಿಯಲ್ಲಿಯೂ ಕೀಲುಬಾಧೆಯನ್ನು ಸೇರಿಲ್ಲ. ಆದರೆ ಇಂದು ಹಲವಾರು ಮಂದಿಗೆ ಕೀಲುಬಾಧೆ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರ ಯಶಸ್ವಿನಿಯ ವ್ಯಾಪ್ತಿಯಲ್ಲಿ ಈ ಕಾಯಿಲೆಯನ್ನೂ ಸೇರಿಸಬೇಕು. ಸ್ಪರ್ಶ್‌ನಂತೆ ಇತರೆ ಆಸ್ಪತ್ರೆಗಳು ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆ ನೆರವೇರಿಸಲು ಮುಂದೆ ಬರಬೇಕು~ ಎಂದು ನುಡಿದರು.ಇದಕ್ಕೂ ಮುನ್ನ ಕಳೆದ ವರ್ಷ ಉಚಿತ ಶಸ್ತ್ರಚಿಕಿತ್ಸೆಗೆ ಒಳಗಾದ ನಿವೃತ್ತ ಶಿಕ್ಷಕರಾದ ಅಬ್ದುಲ್ ಬೇಗ್, ಕಮಲಾಕ್ಷಿ ಶೆಟ್ಟಿ, ನಳಿನಿಯಮ್ಮ ಅವರು ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ತೋರಿದ ಕಾಳಜಿಯನ್ನು ಸ್ಮರಿಸಿದರು.ಈ ಬಾರಿಯ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರು, ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ಅರ್ಹ ನಿವೃತ್ತ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.