ಗುರುವಾರ , ಫೆಬ್ರವರಿ 25, 2021
31 °C

ಕುಂಚದಲ್ಲಿ ಅರಳಿದ ಹಳ್ಳಿ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂಚದಲ್ಲಿ ಅರಳಿದ ಹಳ್ಳಿ ಬದುಕು

ಧಾರವಾಡ: ಗ್ರಾಮದ ಮಾರುಕಟ್ಟೆಯಲ್ಲಿ ಹೂ ಮಾರುವ ಹೂವಾಡಗಿತ್ತಿ, ಹಣ್ಣು ಮಾರುವ ಮಾಯಕಾರ್ತಿ, ದೇವಸ್ಥಾನದ ಮುಂಬದಿಯಲ್ಲಿ ನಿಂತಿರುವ ಜೋಯಿಸರು, ಮಗಳ ತಲೆಯಲ್ಲಿ ಹೇನು ಬಿಡಿಸುತ್ತಿರುವ ತಾಯಿ, ಜೀವನದ ಸಂಧ್ಯಾಕಾಲವನ್ನು ಕಳೆಯುತ್ತಿರುವ ಅಜ್ಜಿಯರು, ಜೋಗತಿ ಹಾಡುತ್ತಿರುವ ಜೋಗವ್ವ. ಆಹಾ... ಇವು ಚಿತ್ರಗಳೋ ಇಲ್ಲ ಜೀವಂತ ಪಾತ್ರಗಳೋ ಎಂದು ಅನ್ನಿಸುವಷ್ಟು ಆಕರ್ಷಕವಾಗಿವೆ ಈ ಕಲಾಕೃತಿಗಳು.

ಕರ್ನಾಟಕ ವಿದ್ಯಾವರ್ಧಕ ಸಂಘದ 123ನೇ ಸಂಸ್ಥಾಪನಾ ದಿನದ ಅಂಗವಾಗಿ ಇಲ್ಲಿನ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಗುರುವಾರದಿಂದ ಆರಂಭವಾದ ಚಿತ್ರ ಪ್ರದರ್ಶನದಲ್ಲಿ ಕಂಡುಬಂದ ಕಲಾವಿದ ಆರ್.ಸೂರಿ ಅವರ ಕಲಾಕೃತಿಗಳಿವು. ಗ್ರಾಮೀಣ ಬದುಕಿನ ಜನಪದೀಯ ಹಾಗೂ ಸಾಂಸ್ಕೃತಿಕ ಸೊಗಡು ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ.`ಆಯಿಲ್ ಆನ್ ಕ್ಯಾನ್ವಾಸ್~ ಮತ್ತು `ಚಾರ್ಕೋಲ್~ ಮಾಧ್ಯಮದಲ್ಲಿ ರಚಿಸಲಾಗಿರುವ ಈ ಕೃತಿಗಳನ್ನು ಸಭಾಂಗಣದ ಎರಡೂ ಬದಿಯಲ್ಲಿ ನೇತು ಹಾಕಲಾಗಿದೆ. ಸಭಾಂಗಣದ ಎಡಬದಿ ಚಾಕೋಲ್‌ನಲ್ಲಿ ರಚಿಸಿದ ಎಮ್ಮೆಗಳ ವಿವಿಧ ಭಂಗಿಗಳು ನಮ್ಮ ಬಾಲ್ಯಕಾಲದಲ್ಲಿ ಅವುಗಳೊಂದಿಗಿನ ಒಡನಾಟವನ್ನು ನೆನಪಿಸುತ್ತವೆ. ಎಮ್ಮೆ ತನ್ನ ಮೈಗಂಟಿದ ತಿಗಣಿಯನ್ನು ತೆಗೆಯಲು ಕಾಲನ್ನು ಬಳಕೆ ಮಾಡುವ ಬಗೆ, ಹೊಲದಲ್ಲಿ ಒಟ್ಟಾಗಿ ಮೇಯುತ್ತಿರುವ ಚಿತ್ರಗಳು ಇಲ್ಲಿವೆ.ವರ್ಣಚಿತ್ರಗಳಲ್ಲಿ ಅವರವರ ಭಾವಕ್ಕೆ ತಕ್ಕಂತೆ ಚಿತ್ರಗಳು ಗಮನ ಸೆಳೆಯುತ್ತವೆ. ಅದರಲ್ಲಿ ಮುಖ್ಯವಾದುದು ಮಹಿಳೆಯೊಬ್ಬಳು ತನ್ನ ಮಗುವನ್ನು ಬಟ್ಟೆಯೊಂದರಲ್ಲಿ ಕಟ್ಟಿ ಬಗಲಲ್ಲಿಟ್ಟುಕೊಂಡು ಯಾರನ್ನೋ ತೋರಿಸುತ್ತಿರುವ ಹಾಗೂ ಆ ಚಿತ್ರಕ್ಕೆ ಪೂರಕವಾಗಿ ಸೂರ್ಯ ರಶ್ಮಿಯನ್ನು ಬಳಸಿದ ಬಗೆ ಕಲಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಬ್ಬದ ದಿನದಂದು ಬಸವನನ್ನು ಮನೆಯಿಂದ ಮನೆಗೆ ಕರೆದೊಯ್ದು ಸನಾದಿಯಿಂದ ಬಾಲಕನೊಬ್ಬ ನಾದ ಹೊರಡಿಸುವ ಚಿತ್ರ, ಜಾತ್ರೆಯಲ್ಲಿ ಯುವಕರ ಗುಂಪು  ಬಣ್ಣಗಳನ್ನು ಬಳಿದುಕೊಂಡ ಚಿತ್ರವೂ ನೋಡುಗರ ಮೆಚ್ಚುಗೆಯ ಚಿತ್ರವಾಗಿದೆ. ಇದೇ 23ರವರೆಗೆ ಈ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1, ಸಂಜೆ 4ರಿಂದ ರಾತ್ರಿ 8.30ರವರೆಗೆ ನೋಡುಗರಿಗೆ ಮುಕ್ತ ಅವಕಾಶವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.