ಭಾನುವಾರ, ಜುಲೈ 25, 2021
21 °C

ಕುಂವೀ, ಈಶ್ವರಪ್ಪ ಮಾತಿನ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂವೀ, ಈಶ್ವರಪ್ಪ ಮಾತಿನ ಜಟಾಪಟಿ

ಶಿವಮೊಗ್ಗ: ಸಾಹಿತಿಗಳು ವೇದಿಕೆಗಳನ್ನು ಬಳಸಿಕೊಳ್ಳುವ ವಿಚಾರ, ಸಾಹಿತಿ ಕುಂ. ವೀರಭದ್ರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ನಡುವಿನ ಜಟಾಪಟಿಗೆ ಕಾರಣವಾಯಿತು. ಈ ಮಾತಿನ ಜಟಾಪಟಿಗೆ ಭಾನುವಾರ ನಡೆದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಸಾಕ್ಷಿಯಾಯಿತು.ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪಾಲ್ಗೊಂಡು ಮೊದಲು ಮಾತನಾಡಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಕೆ.ಎಸ್‌. ಈಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಗಳಿರುವುದು ಕನ್ನಡದ ನೆಲ, ಜಲ, ಭಾಷೆಯನ್ನು ನಾಡಿನ ಜನರಿಗೆ ತಲುಪಿಸಿ, ನಾಡನ್ನು ಒಗ್ಗೂಡಿಸಲು. ಆದರೆ, ಕೆಲ ಸಾಹಿತಿಗಳು ಆ ಜವಾಬ್ದಾರಿಯನ್ನು ಮರೆತು, ಸ್ವಪ್ರತಿಷ್ಠೆಗೆ ವೇದಿಕೆಗಳನ್ನು ಬಳಸಿಕೊಳ್ಳುತ್ತ್ದ್ದಿದಾರೆ ಎಂದು ಟೀಕಿಸಿದರು.ಸ್ವಪ್ರತಿಷ್ಠೆಗಾಗಿಯೇ ಸಾಹಿತ್ಯ ಪರಿಷತ್ತಿನ ವೇದಿಕೆಗಳನ್ನು ಬಳಸಿ ಕೊಂಡು, ಮತ್ತೊಬ್ಬ ವ್ಯಕ್ತಿ, ಪಕ್ಷವನ್ನು ಗುರಿಯಾಗಿರಿಸಿಕೊಂಡು ಯಾವುದೋ ವಿಚಾರದ ಮೇಲೆ ಟೀಕೆ ಮಾಡುವುದು, ತಮ್ಮ ಭಾವನೆಗಳನ್ನು ಎಲ್ಲರೂ ಕೇಳಬೇಕು ಎಂಬ ಧೋರಣೆ ಸರಿ ಅಲ್ಲ. ಅದಕ್ಕಾಗಿಯೇ ಬೇರೆಬೇರೆ ಜಾಗಗಳಿವೆ. ಅಲ್ಲಿ ಬೇಕಾದರೆ ತೊಡೆ ತಟ್ಟಿ ಹೋರಾಟಕ್ಕೆ ಬನ್ನಿ ಸಾಹಿತಿಗಳಿಗೆ ಸವಾಲು ಹಾಕಿದರು.  ನಾಡಿಗೆ ಸಮಸ್ಯೆ ಎದುರಾದಾಗ ನಾವೆಲ್ಲರೂ ಒಂದೇ. ಆದರೆ, ಅಲ್ಲೊಂದು ಇಲ್ಲೊಂದು ಒಡಕು ಬರುತ್ತಿರುತ್ತವೆ. ಸಮ್ಮೇಳನದ ಅಧ್ಯಕ್ಷರ ಬಗ್ಗೆಯೂ ಅಪಸ್ವರ ಕೇಳಿಬಂತು. ಈ ಮನೋಭಾವ ಹೋಗದಿದ್ದರೆ ಸಾಮಾನ್ಯ ಜನ ನಾಡಿನ ಸಾಹಿತ್ಯದ ಹಿರಿಮೆ, ಗರಿಮೆ ತಲುಪಲು ಹಿಂದೇಟು ಹಾಕುತ್ತಾರೆ ಎಂದು ತೀಕ್ಷ್ಣವಾಗಿ ಹೇಳಿದರು.ಫ್ಯಾಸಿಸ್ಟ್‌ ಧೋರಣೆ ಸರಿ ಅಲ್ಲ: ಈಶ್ವರಪ್ಪ ತಮ್ಮ ಮಾತು ಮುಗಿಸಿ ವೇದಿಕೆಯಿಂದ ನಿರ್ಗಮಿಸಿದ ಬೆನ್ನಲ್ಲೇ ಮಾತಿಗಿಳಿದ ಸಾಹಿತಿ ಕುಂ. ವೀರಭದ್ರಪ್ಪ, ಭಾಷಣದುದ್ದಕ್ಕೂ ಈಶ್ವರಪ್ಪ ಅವರ ಮಾತಿಗೆ ತಿರುಗೇಟು ನೀಡಿದರು. ಲೇಖಕರು ಸಾರ್ವಕಾಲಿಕ ಶಾಸಕರು. ಅವರು ಸಮಾಜದ ಒಳಗಿನ ಎಚ್ಚರವನ್ನು ಸದಾ ಕಾಪಾಡುವ ಚಳವಳಿಯನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ನೀವು ಇದನ್ನು ಮಾತನಾಡಿ ಎನ್ನುವ ಹಕ್ಕು ಯಾರಿಗೂ ಇಲ್ಲ. `ನಮಗೆ ಈ ರೀತಿ ತಿವಿಯುವ ಮಾತನಾಡಬೇಡಿ~ ಎನ್ನುವುದು ನಿರಂಕುಶವಾದ `ಫ್ಯಾಸಿಸ್ಟ್‌~ ಧೋರಣೆ ಎಂದು  ಚುಚ್ಚಿದರು.ಸುಮ್ಮನಿರುವ ಲೇಖಕ ಇತಿಹಾಸದಲ್ಲಿ ಎಲ್ಲಿಯೂ ಕಾಣ ಸಿಗುವುದಿಲ್ಲ. ಜನರನ್ನು ಜಾಗೃತಗೊಳಿಸುವುದು, ರಾಜಕಾರಣಿಗಳ ಕಿವಿಹಿಂಡುವ ಕೆಲಸ ಮಾಡುವುದು ಅವನ ಕೆಲಸ. ನಮ್ಮನ್ನು ಆಳುವ ಜನರಿಗೆ ಸಾಂಸ್ಕೃತಿಕ ತಿಳಿವಳಿಕೆ ಇಲ್ಲದಿದ್ದರೆ ರೂಕ್ಷರಾಗುತ್ತಾರೆ ಎಂದು ಟೀಕಿಸಿದರು.`ಇವನಾರವ ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಿರಯ್ಯ~ ಎನ್ನುವವರ ನಾಡು ನಮ್ಮದು. ಹೀಗಿರುವಾಗ ಒಂದು ಸಣ್ಣ ಟೀಕೆಯನ್ನೂ ಸಹಿಸಿ ಕೊಳ್ಳದಿರುವುದು ವರ್ತಮಾನದ ದುರಂತ ಎಂದು ಮೂದಲಿಸಿದ ಅವರು, ಸಾಹಿತಿಗಳಲ್ಲಿ ಎರಡು ವರ್ಗಗಳಿವೆ. ಒಂದು ವರ್ಗ ಸರ್ಕಾರವನ್ನು ಓಲೈಸುತ್ತಾ, ಶುದ್ಧ ಸಾಹಿತ್ಯವನ್ನು ಹೊಗಳುತ್ತಾ ಬರುತ್ತದೆ.ಆ ವರ್ಗ ಸಾಮಾಜಿಕ ಎಚ್ಚರದ ಬಗ್ಗೆ ಮಾತನಾಡುವ ಗೋಜಿಗೂ ಹೋಗುವುದಿಲ್ಲ. ಈ ನಿಟ್ಟಿನಲ್ಲಿ ನಾ. ಡಿಸೋಜ ಹೇಳಿದಂತೆ ಲೇಖಕನನ್ನೂ ಇಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ ಎನ್ನುವುದು ಅಕ್ಷರಶಃ ಸತ್ಯ ಎಂದರು.ಪಂಪ ಪ್ರಶಸ್ತಿಗೆ ಆಗ್ರಹ: ಆಳುವ ವರ್ಗದ ಧೋರಣೆಯಿಂದ ಸಾಂಸ್ಕೃತಿಕ ಚಟುವಟಿಕೆಗಳು ನಿಂತುಹೋಗಿವೆ. ಸಾಹಿತಿ ಚಂದ್ರಶೇಖರ ಪಾಟೀಲ ಅವರಿಗೆ `ಪಂಪ ಪ್ರಶಸ್ತಿ~ ನೀಡಬೇಕು ಎಂದು ಶಿಫಾರಸು ಮಾಡಿ 2ವರ್ಷವಾದರೂ ಪ್ರಶಸ್ತಿ ನೀಡುತ್ತಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ದೊಡ್ಡತನ ತೋರಬೇಕು ಎಂದು ಒತ್ತಾಯಿಸಿದರು.ಸ್ವಿಸ್‌ ಬ್ಯಾಂಕ್‌ನಲ್ಲಿ ಲಕ್ಷಾಂತರ ಕೋಟಿ ರೂ ಬಿದ್ದಿದೆ. ಪುಣ್ಯಕ್ಕೆ ರಾಜ್ಯದ ರಾಜಕಾರಣಿಗಳು ಹಣವನ್ನು ಸ್ವಿಸ್‌ ಬ್ಯಾಂಕ್‌ನಲ್ಲಿಡದೇ, ಎಡ-ಬಲ ರಸ್ತೆಗಳಲ್ಲಿ ಕಟ್ಟಡಗಳನ್ನು ಕಟ್ಟಿದ್ದಾರೆ. ಇದನ್ನು ಆಕ್ಷೇಪಿಸಲು ಬರುವುದೇ ಇಲ್ಲವಲ್ಲ ಎಂದು ಸೂಚ್ಯವಾಗಿ ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಜಯಾ ರಾಜಶೇಖರ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.