ಭಾನುವಾರ, ಜೂನ್ 20, 2021
23 °C

ಕುಗ್ರಾಮಕ್ಕೆ ತಹಸೀಲ್ದಾರ ಕಾಲ್ನಡಿಗೆ

ಸಿದ್ಧಲಿಂಗಸ್ವಾಮಿ ವಸ್ತ್ರದ Updated:

ಅಕ್ಷರ ಗಾತ್ರ : | |

ಕುಗ್ರಾಮಕ್ಕೆ ತಹಸೀಲ್ದಾರ ಕಾಲ್ನಡಿಗೆ

`ಮಂತ್ರಿ ಮಹೋದಯರು ಋತುಮಾನದಲ್ಲಿ ಬರುವ ಪಕ್ಷಿಗಳಂತೆ ಆಗಾಗ ಬರುತ್ತಾರೆ, ಹೋಗುತ್ತಾರೆ. ಆದರೆ ಅಧಿಕಾರಿಗಳು ಸರ್ಕಾರದ ಶಾಶ್ವತ ಮೆದುಳಿನಂತೆ ಕಾರ್ಯ ನಿರ್ವಹಿಸುತ್ತಾರೆ~ ಎಂಬುದು ಸಾರ್ವಜನಿಕ ಆಡಳಿತದಲ್ಲಿ ಜನಜನಿತವಾದ ಮಾತು.ಪ್ರಾಮಾಣಿಕತೆಯಿಂದ ಕೆಲಸ ಮಾಡುವ  ಅಧಿಕಾರಿಗಳನ್ನು ಜನರು  ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ ಎಂಬುದನ್ನು  ಹಿರಿಯ ಕಂದಾಯ ಅಧಿಕಾರಿಗಳಾಗಿದ್ದ ನವರತ್ನ ರಾಮರಾಯರು ತಮ್ಮ `ಕೆಲವು ನೆನಪುಗಳು~ ಕೃತಿಯಲ್ಲಿ ಚಿತ್ರಿಸಿದ್ದಾರೆ.

 

ಹೀಗೆ ಜನ ನೆನೆಯುವಂತಹ ಕೆಲಸ ಮಾಡಿದವರ ಸಾಲಿನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿ ಡಾ. ಬಿ. ಉದಯಕುಮಾರ ಶೆಟ್ಟಿ ಅವರನ್ನು ಸೇರಿಸಬಹುದು.ಎರಡು ವರ್ಷ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಹಸೀಲ್ದಾರರಾಗಿ ಕಾರ್ಯನಿರ್ವಹಿಸಿ ಇದೀಗ ಕಾರವಾರ ನಗರಸಭೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ ಅವರು. ಅಂಕೋಲೆ ತಾಲ್ಲೂಕಿನಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳು ಅವರ ಆಡಳಿತದ ಕುಶಲತೆಗೆ ಸಾಕ್ಷಿಯಾಗಿವೆ.   ಕಂದಾಯ ಇಲಾಖೆಯ ಸಿಬ್ಬಂದಿಗಳು 1993 ರಿಂದ 2003 ರ ಅವಧಿಯಲ್ಲಿ ಕೈಬರಹದ ಭೂ ದಾಖಲೆಗಳ ಗಣಕೀಕರಣ ಸಮಯದಲ್ಲಿ  ತಾಲ್ಲೂಕಿನ ಮೊರಳ್ಳಿ, ಬಳಲೆ, ಉಳುವೆರೆ ಗ್ರಾಮಗಳ ವ್ಯಾಪ್ತಿಯಲ್ಲಿನ ಸುಮಾರು 75 ಎಕರೆ ಅರಣ್ಯ ಭೂಮಿಗೆ ತಮ್ಮ ಕೈಚಳಕದಿಂದ ನಕಲಿ ಪಹಣಿಗಳನ್ನು ಸೃಷ್ಟಿಸಿ ಖಾಸಗಿಯವರ ಪಾಲಾಗುವಂತೆ ಮಾಡಿದ್ದರು.

 

ಈ ಕುರಿತು 2004 ರಲ್ಲಿಯೇ ಸಲ್ಲಿಸಿದ್ದ ಸಾರ್ವಜನಿಕ ದೂರನ್ನು ಮೇಲಾಧಿಕಾರಿಗಳು ಪರಿಗಣಿಸಿರಲಿಲ್ಲ. 2009 ರಲ್ಲಿ ಇಲ್ಲಿಗೆ ತಹಸೀಲ್ದಾರರಾಗಿ ಬಂದ ಉದಯಕುಮಾರ, ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ  ಪರಭಾರೆಯಾಗಿದ್ದ ಜಮೀನನ್ನು ಅರಣ್ಯ ಇಲಾಖೆಗೆ ಮರಳಿಸಿ, ತಪ್ಪಿತಸ್ಥ ಸಿಬ್ಬಂದಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡದ್ದು ತಾಲ್ಲೂಕಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ. ಬಡಗೇರಿಯ ಹಾಲಕ್ಕಿ ಕೊಪ್ಪದಲ್ಲಿನ ಜನರು ಆವರಣ ಗೋಡೆಯಿಲ್ಲದ ತೆರೆದ ಬಾವಿಗಳ ನೀರನ್ನು ಕುಡಿದು ಇಲಿಜ್ವರದ ಹಾವಳಿಯಿಂದ ನಲುಗಿದ್ದರು. ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಆರೋಗ್ಯ ರಕ್ಷಣೆ ಉಪವಿಧಿಯನ್ನು ಬಳಸಿಕೊಂಡು ಬಾವಿಗಳನ್ನು ಶುಚಿಗೊಳಿಸಿ ಆವರಣ ಗೋಡೆ ನಿರ್ಮಿಸಿದ್ದರಿಂದ ಅಲ್ಲಿನ ಜನರು ನೆಮ್ಮದಿಯಿಂದ ಜೀವಿಸುವಂತಾಗಿದೆ.

 

ತಹಸೀಲ್ದಾರರ ಈ ಕಾರ್ಯವನ್ನು  ಹಾಲಕ್ಕಿಗಳು ಎಂದಿಗೂ ಮರೆಯುವುದಿಲ್ಲ ಎಂದು ಇಲ್ಲಿನ ನಿವಾಸಿಯಾಗಿರುವ ನಾಡೋಜ ಪುರಸ್ಕೃತೆ ಜಾನಪದ ಹಾಡುಹಕ್ಕಿ ಎಂದೇ ಪ್ರಸಿದ್ಧವಾಗಿರುವ ಸುಕ್ರಿ ಬೊಮ್ಮು ಗೌಡ ಹೇಳುತ್ತಾರೆ.ಅರಣ್ಯದಂಚಿನ ರಾಮನಗುಳಿ, ಕಲ್ಲೇಶ್ವರ, ಕಮ್ಮಾಣಿ, ಹೆಗ್ಗಾರ ಮುಂತಾದ ಗ್ರಾಮಗಳಲ್ಲಿ ಡೆಂಗ್ಯೂ ಜ್ವರ ಹರಡಿದಾಗ ಸಮರೋಪಾದಿಯಲ್ಲಿ ತುರ್ತು ಕ್ರಮ ಜರುಗಿಸಿ ಸುಮಾರು 468 ಜನರಿಗೆ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡು ನೆರವಾದರು.

 

ಮುಖ್ಯವಾಗಿ ಅಂಗವಿಕಲರು, ವಿಧವೆಯರು, ವೃದ್ಧರನ್ನು ಹುಡುಕಿಕೊಂಡು ಹೋಗಿ ಪಿಂಚಣಿ ಮಂಜೂರಿ ಮಾಡಿರುವುದು ರಾಜ್ಯಮಟ್ಟದಲ್ಲಿ ಅಧಿಕಾರಿಯೊಬ್ಬರ ದಾಖಲೆಯಾಗಿದೆ.

 

ಬುಡಕಟ್ಟು ಸಮುದಾಯದ ಸಿದ್ದಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಅನ್ವಯ ಸಾಮಾಜಿಕ ನ್ಯಾಯವನ್ನು ಒದಗಿಸುವುದಕ್ಕಾಗಿ ಶ್ರಮಿಸಿದ ಉದಯ್, ಸಿದ್ದಿಗಳು ವಾಸಿಸುವ ರಾಮನಗುಳಿ ಅರಣ್ಯ ಪ್ರದೇಶಗಳಲ್ಲಿ ಸುರಿವ ಮಳೆಯಲ್ಲಿಯೇ ಕಾಲ್ನಡಿಗೆಯಲ್ಲಿ ಸಂಚರಿಸಿ ಸಮೀಕ್ಷೆ ನಡೆಸಿದ್ದರು.ಅಂತಿಮವಾಗಿ  127 ಅರ್ಹ ಸಿದ್ದಿಗಳಿಗೆ ಹಕ್ಕುಪತ್ರಗಳನ್ನು ಸರ್ಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಗುಡಿಸಲುವಾಸಿಗಳಾಗಿರುವ ಸಿದ್ದಿಗಳಿಗೆ ಬಸವ ಇಂದಿರಾ ವಸತಿ ಯೋಜನೆ ಮೂಲಕ ಸೂರು ನಿರ್ಮಿಸಿಕೊಳ್ಳಲು ಸರ್ಕಾರದ ನೆರವು ದೊರೆಯಲು ಅವಕಾಶವಾಗಿದೆ ಎಂದು ತಾ.ಪಂ. ಸದಸ್ಯೆ ವಿದ್ಯಾ ಸಿದ್ದಿ ಹೇಳುತ್ತಾರೆ. 2008 ರಲ್ಲಿ ನೆರೆಹಾವಳಿ ಸಂದರ್ಭದಲ್ಲಿ ತುರ್ತು ಕ್ರಮ ಕೈಗೊಂಡು ತೊಂದರೆಗೊಳಗಾದ ಜನರನ್ನು ರಕ್ಷಿಸಿದ್ದು ಉಲ್ಲೇಖನೀಯ. ತದಡಿ ಸಮುದ್ರ ಪ್ರದೇಶದಲ್ಲಿ ದೋಣಿ ದುರಂತ ಸಂಭವಿಸಿದಾಗ ರಾತ್ರಿಯಿಡೀ ಸ್ಥಳದಲ್ಲಿಯೇ ನಿಂತು ಪರಿಹಾರ ಕಾರ್ಯದ ಉಸ್ತುವಾರಿ ಮಾಡಿದರು.

 

ಈ ದುರ್ಘಟನೆಯಲ್ಲಿ ಬಲಿಯಾದ ಐವರು ಮೀನುಗಾರರ ಸಂಬಂಧಿಗಳಿಗೆ 24 ಗಂಟೆಗಳಲ್ಲಿ ಸರ್ಕಾರದ ನೆರವು ದೊರೆಯುವಂತೆ  ಕ್ರಮ ಕೈಗೊಂಡರು. ಇದುವರೆಗೂ ಯಾವುದೇ ಅಧಿಕಾರಿ ಮತ್ತು ಜನಪ್ರತಿನಿಧಿ ಕಾಲಿಡದಿದ್ದ ದಟ್ಟ ಕಾನನದ ನಡುವಿನ ಅತ್ತಿಸವಲು, ತಲಮನೆ, ಶಮೆಗುಳಿ, ಲಕ್ಕಿಮನೆ, ಕವಲಳ್ಳಿ ಮುಂತಾದ  ಕುಣಬಿಗಳು ಮತ್ತು ಕರಿಒಕ್ಕಲು ಸಮುದಾಯದ ಜನರು ವಾಸಿಸುವ ಸ್ಥಳಗಳಿಗೆ ಸಿಬ್ಬಂದಿಗಳು, ಜಿ.ಪಂ. ಉಪಾಧ್ಯಕ್ಷ ಉದಯ ಡಿ. ನಾಯ್ಕ ಮತ್ತು ಕೆಲವು ಪತ್ರಕರ್ತರೊಂದಿಗೆ 70 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ಜನರ ಕುಂದು ಕೊರತೆಗಳನ್ನು ಬಗೆಹರಿಸಿದರು. ಈ ಕೆಲವು ಸಂಗತಿಗಳು ಅಧಿಕಾರಿ ಉದಯ್ ಅವರ ಕಾರ್ಯತತ್ಪರತೆಯನ್ನು ಸೂಚಿಸುವಂತಿವೆ.ಅಧ್ಯಯನಶೀಲ ಗುಣ ಹೊಂದಿರುವ ಉದಯ್ ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ರಂಗದ ಮೇಲೆ ಮಿಂಚಿದವರು. ರಾಷ್ಟ್ರೀಯ ಉತ್ಸವ ಸಮಿತಿ ರಚಿಸಿ,  ಸ್ವಾತಂತ್ರ್ಯೋತ್ಸವ, ಗಣರಾಜ್ಯ ದಿನ, ನಾಡಹಬ್ಬ  ಹಾಗೂ ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ ಮುಂತಾದ ಮಹಾತ್ಮರ ಜಯಂತಿ ಸಮಾರಂಭಗಳಲ್ಲಿ ಜನಸಮುದಾಯದ  ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಮೂಲಕ  ಅರ್ಥಪೂರ್ಣವಾಗಿ ಆಚರಿಸಲು ಕಾರಣರಾದರು.

 

ಇವರ ಯೋಜನಾಬದ್ಧ ಮತ್ತು ಫಲಿತಾಂಶ ಕೇಂದ್ರಿತ ಕಾರ್ಯನಿರ್ವಹಣಾ ಶೈಲಿ ಹಿಂದುಳಿದ ಜನರ ನೆಮ್ಮದಿಗೆ ಕಾರಣವಾಗಿದೆ. ಅಧಿಕಾರಿಯೊಬ್ಬ ತನ್ನ ಮಿತಿಯಲ್ಲೇ ಜನರಿಗೆ ನೆರವಾಗಬಹುದು ಉದಯ್ ಅವರ ಕೆಲಸಗಳು ಉತ್ತಮ ಉದಾಹರಣೆಯಾಗಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.