ಶುಕ್ರವಾರ, ಫೆಬ್ರವರಿ 26, 2021
30 °C

ಕುಟುಂಬವನ್ನು ಮೀರಿನಿಂತ ಸಂಸಾರ

–ಎಚ್.ಎ. ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

ಕುಟುಂಬವನ್ನು ಮೀರಿನಿಂತ ಸಂಸಾರ

ಕಂಬಗಳ ಮರೆಯಲ್ಲಿ

ಲೇ: ಸುನಂದಾ ಪ್ರಕಾಶ ಕಡಮೆ

ಬೆ: ರೂ. 130; ಪು: 152

ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ಕನ್ನಡದ ಕಾದಂಬರಿ ಪ್ರಕಾರದಲ್ಲಿ ‘ಕುಟುಂಬ’ ಮತ್ತು ‘ಸಂಸಾರ’ದ ಪರಿಕಲ್ಪನೆಯನ್ನು ಪರಸ್ಪರ ವಿಭಿನ್ನವಾಗಿ ಕಾಣುವ ಯತ್ನಗಳನ್ನು, ಬಹುಪಾಲು ವೈಯಕ್ತಿಕ ಅನುಭವಗಳನ್ನು ವ್ಯಕ್ತಪಡಿಸುವ ವೇದಿಕೆಯನ್ನಾಗಿಸಿಕೊಳ್ಳಲಾಗಿದೆ. ಕೂಡುಕುಟುಂಬಗಳ ಕಾಲಕ್ಕೆ ರಕ್ತಸಂಬಂಧಗಳಿಂದ ಮಾತ್ರ ರೂಪಿತವಾದ ಸಂಸಾರಗಳ ಕಥೆ, ಕಾದಂಬರಿ ಮತ್ತು ಸಿನಿಮಾಗಳು ಬಹುದೂರ ಸಾಗಿಬಂದಿವೆ.ಒಳಾಂಗಣವಾಗಿ ಮನೆ ಮತ್ತು ಹೊರಾಂಗಣವಾಗಿ ರಸ್ತೆ ಸಾಧಾರಣವಾಗಿ ಕೂಡುವುದು ಎಂದಿಗೂ ಭಿನ್ನ ಭಿನ್ನ ನೆಲೆಗಳಾಗಿಯೇ. ಅವುಗಳು ಒಟ್ಟಾದಾಗಲೂ ಅದು ಬೇರೆ ಇದು ಬೇರೆ ಎಂಬ ಪ್ರಜ್ಞೆ ಕನ್ನಡದ ಓದುಗರಲ್ಲಿ ಎಂದಿಗೂ ನಿಶ್ಚಿತವೇ. ರಕ್ತಸಂಬಂಧದಾಚೆಗಿನ ಸಂಸಾರವೆಂಬುದರ ಕಲ್ಪನೆಯು ನಗರವೂ ಅಲ್ಲದ ಗ್ರಾಮಾಂತರವೂ ಅಲ್ಲದ ಆವರಣದಲ್ಲಿ ನಮ್ಮ ನೈಜ ಬದುಕಿನಲ್ಲಿ ಆಚರಣೆಗೆ ಬಂದಿರುವಾಗಲೂ ಈ ಮಾತು ನಿಜವೇ.ಈ ಹಿನ್ನೆಲೆಯಲ್ಲಿ ಸುನಂದ ಪ್ರಕಾಶ ಕಡಮೆಯವರ ‘ಕಂಬಗಳ ಮರೆಯಲ್ಲಿ’ ಕಥಾಸಂಕಲನದ ಹದಿನೈದು ಕಥೆಗಳಲ್ಲಿ ಸಂಸಾರವೆಂಬ ವ್ಯಾಖ್ಯೆಯನ್ನು ಪುನರ್‌ರೂಪಿಸುವ ಸಾಧ್ಯತೆಗಳನ್ನು ಶೋಧಿಸಲಾಗಿದೆ. ಸಾಮಾಜಿಕ ವರ್ಗಗಳು ಮತ್ತು ತಂತ್ರಜ್ಞಾನ ಇವೆರಡೂ ಗಂಭೀರ ಹಿನ್ನೆಲೆಗಳಾಗಿ ಕಳೆದ ಹಲವು ದಶಕಗಳ ಕನ್ನಡ ಕಥೆಗಳನ್ನು ನಿಯಂತ್ರಿಸಿವೆ. ಇಲ್ಲಿನ ಕಥೆಗಳಲ್ಲಿ ಇವುಗಳನ್ನು ಆದಷ್ಟು ತೆಳುವಾಗಿ, ಇಲ್ಲವೇ ಇಲ್ಲವೆನ್ನಿಸುವಷ್ಟು ಪ್ರಮಾಣದಲ್ಲಿ ಬಳಸಿರುವುದು ಕಥನ ಪ್ರಕಾರದ ಸ್ವಾಯತ್ತತೆಯಲ್ಲಿ ಇರಿಸಿರುವ ಅಗಾಧ ನಂಬಿಕೆಯಂತಲೂ ಕಾಣುತ್ತದೆ.ಸುನಂದಾ ಕಥೆ ಹೇಳುವಾಗ, ಆದಿ-ಅಂತ್ಯ-ಸಮಸ್ಯೆಯ ರೂಢಿಗತ ಕಥನಕ್ರಮದ ನಿರೂಪಣೆಗಿಂತಲೂ ಅನುಭವದ ಆಯಾಮಗಳ ವೈವಿಧ್ಯತೆಯನ್ನು ಶೋಧಿಸುವಲ್ಲೇ ಆಸಕ್ತರಾಗಿರುತ್ತಾರೆ. ಮನೆಯಲ್ಲಿ ಕಂಡ ಹಾವು ಕಥಾನಾಯಕಿಯ ಮನದಲ್ಲಿ ಮತ್ತು ಓದುಗರಲ್ಲಿ ಕಾಡುವಂತೆ, ಆ ಸಮಸ್ಯೆಯ ಅಂತ್ಯವು ಕಾಡುವಂತಹುದಲ್ಲ (ಜೀವ ಗೋಡೆಯ ನಡುವೆ). ಅದೊಂದು ಊನವಾಗಲೀ, ತುರ್ತಾಗಲೀ ಅಲ್ಲ. ವಸುಧೇಂದ್ರರ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಕಥೆಗಿಂತಲೂ ಭಿನ್ನವಾಗಿ ಕಾಡುವ, ಉದರದ ಒತ್ತಡದ ಅದೇ ಸಮಸ್ಯೆಯೊಂದನ್ನು ಸುಭದ್ರಕ್ಕ ಹೆಣ್ಣಾಗಿ, ವಯಸ್ಕಳಾಗಿ, ಕಿರಿಯರೊಂದಿಗಿನ ಸಂಬಂಧವಾಗಿ, ಮೂರು ತಲೆಮಾರುಗಳ ನಡುವೆ ನಡೆವ ದೈನಂದಿನ ವಹಿವಾಟಿನ ಪಲ್ಲಟದ ‘ವಾಸನೆ’ಯಾಗಿ ಅರಳಿಸಿಕೊಳ್ಳುವ ರೀತಿಯು ಅಸಹ್ಯವನ್ನೂ ಸಹ್ಯವಾಗಿಸುವ ಕ್ರಮ.ಆರ್ಥಿಕ ಸಮತೋಲನಕ್ಕಾಗಿ, ತನ್ನ ಸಂಸಾರವನ್ನು ಪೊರೆಯುವ ಒಡೆಯರಿಗಾಗಿ ಕೃತಕ ಗರ್ಭಧಾರಣೆ ಮಾಡಿಕೊಳ್ಳುವ ಹೆಣ್ಣು ಕೊನೆಗೆ ತನ್ನ ಸಾಮಾನ್ಯ ಅನುಭವ ಜಗತ್ತಿನಿಂದ ಅದು ವಿಭಿನ್ನವೂ, ಭೀತಿಯುತವೂ ಆಗತೊಡಗಿದಾಗ, ಅದನ್ನು ತೊರೆದು ಹೋಗುವ ಪ್ರಸಂಗವು ಕಥೆಯಾಗುವುದಕ್ಕಿಂತಲೂ ಒಂದು ಅನುಭವವಾಗಿ ಕಾಡುವಂತಹದ್ದು (ನಡುಹಗಲಿನ ಮೌನ). ಮನುಷ್ಯರಲ್ಲದ ಜೀವಿಗಳ ಬದುಕಿನ ಘಟನೆಗಳ ಅನುಭವಗಳು (ಸುದರ್ಶನ ಚಕ್ರ), ವಿವಿಧ ತಲೆಮಾರಿನ ಹೆಂಗಸರ ಅನುಭವಗಳನ್ನು ಕಿಟಕಿಯ ರೂಪಕಗಳನ್ನಾಗಿಸುವ ಕಥೆಗಳಲ್ಲಿ (ನನ್ನೊಳಗಿನ ಕಿಟಕಿ) ಈ ಲೇಖಕಿಯ ಸಂಸಾರ-ನಿರ್ವಚನದ ಸಾಮರ್ಥ್ಯವು ಪ್ರಾಯೋಗಿಕ ನೆಲೆಯನ್ನು ದಾಟಿ ಹೋಗುವ ತಾಳ್ಮೆಯನ್ನು ಗಮನಿಸಬಹುದು.ಆದರೆ ಓದುಗರ ತಾಳ್ಮೆಯನ್ನೂ ಪರೀಕ್ಷಿಸಬಲ್ಲ ಸಾಮರ್ಥ್ಯವೂ ಇಂತಹ ಕಥೆಗಳಿಗಿವೆ. ಇದಕ್ಕೆ ಕಾರಣ ಶುದ್ಧಾಂಗ ಕಥನದ ಬದಲಿಗೆ ಅನುಭವಕಥನ, ಕಾವ್ಯ ಹಾಗೂ ದಿನಚರಿಯ ಬರವಣಿಗೆಯ ಹೂರಣದ ಸಮ್ಮಿಶ್ರಣವೂ ಈ ಕಥೆಗಳಲ್ಲಡಗಿದೆ.ಸೃಜನಶೀಲ ಪ್ರತಿಭೆಯ ಅನಾವರಣಕ್ಕಾಗಿ ನಿರ್ಮಿತಿಗಳನ್ನು (ಫಾರ್ಮ್ಸ್) ಒಡೆದುಹಾಕಿದಾಗ, ಒಂದೇ ಮಾಧ್ಯಮದ (ಸಾಹಿತ್ಯ) ಹಲವು ಅಭಿವ್ಯಕ್ತಿ ಕ್ರಮಗಳು (ಕಾವ್ಯ, ಪ್ರಾಸ, ಅನುಭವಕಥನ) ಒಟ್ಟುಗೂಡಿದಾಗ ಅವುಗಳಲ್ಲಿನ ಯಾವುದೋ ಒಂದು ಮಾಧ್ಯಮದ (ಉದಾಹರಣೆಗೆ: ಕಥೆ) ಮೇಲುಗೈ ಅನಿವಾರ್ಯ.ಇಲ್ಲಿನ ಹದಿನೈದು ಕಥೆಗಳಲ್ಲಿ ಮೂರ್ನಾಲ್ಕರಲ್ಲಾದರೂ ಈ ಮೇಲುಗೈ ಇದೆ. ಇದನ್ನು ಸಾಂಸ್ಕೃತಿಕ ಅಧ್ಯಯನದ ನಿಟ್ಟಿನಿಂದ, ರೂಢಿಗತ ಸಂಸಾರದ ಪೂರ್ವಸ್ಮರಣೆಗೆ ನಿಷ್ಠರಾಗಿರುವುದರೊಂದಿಗೆ ಹೋಲಿಸಿಬಿಟ್ಟರೆ, ಈ ಲೇಖಕಿಯ ಕಥೆಗಳನ್ನು ಮೂರು ವಿಧಗಳಾಗಿ ವಿಂಗಡಿಸಿಬಿಡಬಹುದು: ಕವಲು ಹಾದಿಗಳನ್ನೂ ಸೇರಿಸಿಕೊಂಡಂತೆ ಮುಖ್ಯದಾರಿಯ ಒಂದು ಭೂನಕ್ಷೆಯನ್ನೇ ಒಂದು ಮಾರ್ಗವಾಗಿಸಿಕೊಳ್ಳುವ ಕ್ರಮದಲ್ಲಿ ಕಥೆಯಾಗಿ ಕುತೂಹಲ ಕೆರಳಿಸಬಲ್ಲ ಕಥೆಗಳು (ಕುಡಿ ಕಟ್ಟಿದ ದೀಪ); ಈ ನಿರ್ಮಿತಿಯನ್ನು ಒಡೆದು ಹಾಕಲಿಕ್ಕಾಗಿ ಪ್ರಜ್ಞಾಪೂರ್ವಕವಾಗಿ ಅಪೂರ್ಣ ಕವಲುಗಳ ನಿರ್ಮಿತಿಯ ಕ್ರಮವೇ ಕಥೆಯಾಗಿಬಿಡುವ ಸೊಬಗು (ದೊಡ್ಡಾಲದ ಮರ); ಮತ್ತು ರೂಪಕದ ಅತಿಭಾರದಿಂದ ಕುಸಿಯಬಲ್ಲ ಅಥವ ಸಾಂಸ್ಕೃತಿಕ ಅಧ್ಯಯನಕ್ಕೆ ಪರ್ಯಾಯವನ್ನು ಒದಗಿಸಲು ಯತ್ನಿಸುವ ಕಥೆಗಳು (ನನ್ನೊಳಗಿನ ಕಿಟಕಿಯಲ್ಲಿನ ಸ್ತ್ರೀವಾದಿ ಮೀಮಾಂಸೆಯ ಜಳಕು). ಈ ಮೂರನ್ನೂ ಒಮ್ಮತವಾಗಿಸದಿರುವುದು ಈ ಪುಸ್ತಕದ ಕೊರತೆಯಾದರೆ, ವೈರುಧ್ಯವೆನ್ನಿಸುವಂತೆ, ಈ ಮೂರು ವಿಧವನ್ನು ಒಂದೆಡೆ, ಒಂದೇ ಪುಸ್ತಕದಲ್ಲಿ ಸೇರಿಸಿರುವ ಪ್ರಾಯೋಗಿಕತೆಯೇ ಈ ಕಥಾಸಂಕಲನದ ಶಕ್ತಿ ಕೂಡ. *ಸಂಸಾರವೆಂಬ ಸಾಂಸ್ಥೀಕರಣದ ಬಿಡುಗಡೆಯ ಹಲವು ವಿಧದಲ್ಲಿ ವಿಧವೆಯೊಬ್ಬಳನ್ನು ಭಾವಮೈದುನನೊಂದಿಗೆ ವಿವಾಹ ಮಾಡುವ ಕ್ರಮದ ಹಿಂದೆ ಆಸ್ತಿಯನ್ನು ಉಳಿಸಿಕೊಳ್ಳುವ ಮಾವನ ಉಪಾಯವೂ ಸಾಂಸಾರಿಕ ನೆಮ್ಮದಿಯ ಆಚೆಗಿನ ಅನುಭವ. ಬಿಡುಗಡೆಯ ಹಾದಿಯಲ್ಲಿಯೇ ಬಂಧನದ, ರೂಢಿಗತ ಸಾಂತ್ವನದ ಹಿಂದೆಯೇ ಮಾನಸಿಕ ಪೈಶಾಚಿಕತೆಯ ಚಿತ್ರಣಗಳೂ ಓದುಗರನ್ನು ನೆಮ್ಮದಿಯ ನೆಲೆಯಿಂದ ವ್ಯತ್ಯಸ್ಥಗೊಳಿಸಿಬಿಡುತ್ತವೆ. ಇಲ್ಲಿ ರೂಢಿಗತ ಸಂಸಾರವೆಂಬುದು ಒಡೆಯುವುದು ಹೀಗೆಯೇ. ಇದು ಸುನಂದರ ಕಥೆಗಳ ಸ್ಥಾಯಿಭಾವ. ಆದರೆ ಯಾವಯಾವ ಕಥೆಗಳಲ್ಲಿ ಇಂತಹ ಕಥನದ ತೀವ್ರತೆಗಳಿವೆಯೋ ಅಲ್ಲೆಲ್ಲ ಸಮಾಧಾನಕರವಾದ, ಸುಲಭ ಹಾಗೂ ಜನಪ್ರಿಯವೆನ್ನಿಸಿಬಿಡುವ ಪರಿಹಾರಗಳನ್ನು ನೀಡಿಬಿಡುವ ಅಪಾಯಗಳೂ ಇಲ್ಲದಿಲ್ಲ – ಕಥೆಯೊಂದರ ಕೊನೆಯಲ್ಲಿ ಹಾವು ಕಂಡಾಗ, ಇದ್ದಲ್ಲೆ ಅಂತರ್ಧಾನವಾಗಿಬಿಡುವುದು; ಬಾಡಿಗೆ ಗರ್ಭಧಾರಣೆಯ ಮಾನಸಿಕ ತುಮುಲದಿಂದ ಸುಲಭ ಪರಿಹಾರವಾಗಿ ಮುಖ್ಯ ಪಾತ್ರಧಾರಿ ನೆಲೆ ಬಿಟ್ಟು ಹೋಗಿಬಿಡುವುದು, ಆಸ್ತಿ ಉಳಿಸಿಕೊಳ್ಳುವ ಸಲುವಾಗಿ ಅತ್ತಿಗೆಯೊಂದಿಗಿನ ಮದುವೆಯ ಹುನ್ನಾರದ ಗುಟ್ಟನ್ನು ಆ ಹುನ್ನಾರದ ಮುಖ್ಯ ಉದ್ದುರಿಯಾದ ಸ್ವತಃ ಭಾವಮೈದುನನೇ ಬಿಟ್ಟುಕೊಟ್ಟುಬಿಡುವುದು, ಇತ್ಯಾದಿ.ಹದಿನೈದು ಕಥೆಗಳಲ್ಲಿ ಮೂರ್ನಾಲ್ಕು ಕಥೆಗಳು ಮೇಲ್ಕಾಣಿಸಿದಂತಿವೆ. ಮಿಕ್ಕ ಕಥೆಗಳಲ್ಲಿ, ಸಮಸ್ಯೆ-ಪರಿಹಾರಗಳ ತೀವ್ರತೆಯನ್ನು ಉದ್ದೇಶಪೂರ್ವಕವಾಗಿ ಮೊಂಡು ಮಾಡಿರುವುದು ಕಂಡುಬರುತ್ತದೆ. ‘ಕುಟುಂಬವೆಂದರೆ ರಕ್ತಸಂಬಂಧಗಳ ವಿಸ್ತರಣವೇ’ ಎಂಬ ಇದಮಿತ್ಥಂ ಪರಿಕಲ್ಪನೆಯನ್ನು ಮುರಿವ ಕ್ರಮಕ್ಕೂ, ಕಥೆಗಳಲ್ಲಿ ಅಂತ್ಯಕ್ಕಿಂತಲೂ ವಿಭಿನ್ನ ನೆಲೆಯ ಅನುಭವ ದೊರಕಿಸಿಕೊಡುವ ಪ್ರಯತ್ನಕ್ಕೂ ಒಂದು ಅವಿನಾಭಾವ ಸಂಬಂಧವೂ ಏರ್ಪಟ್ಟಂತಾಗಿದೆ.ತನ್ನೊಳಗಿನ ಕಥನಕ್ರಮದ ಒತ್ತಡದ ಆಧಾರದ ಮೇಲೆಯೇ, ಇಲ್ಲಿನ ಪ್ರತಿಯೊಂದು ಕನ್ನಡದ ಕಥೆಯನ್ನೇ ಕುಟುಂಬವೆಂದು ಭಾವಿಸಬಹುದಾದರೆ, ಕಳೆದ ನಾಲ್ಕು ದಶಕಗಳಲ್ಲಿ ಕಥೆ ಹಾಗೂ ಕುಟುಂಬಗಳು ಒಡೆದು ಪುನರ್–ರೂಪಿತಗೊಂಡ ಸಾಂಸ್ಕೃತಿಕ ಕ್ರಮಗಳನ್ನು ಅಕ್ಕಪಕ್ಕ ಇರಿಸಿ ನೋಡಿದರೆ, ಈ ಕಥೆಗಾರ್ತಿಯು ಹೊಸದೊಂದು ಬದುಕಿನ ಆವರಣವನ್ನು ನಿರ್ಮಿಸಿರುವುದು ವೇದ್ಯವಾಗುತ್ತದೆ. ಕನ್ನಡದ ಕಥೆಯ ಒಳಾಂತರ್ಯವು ಭೌತಿಕ ಸಮಕಾಲೀನ ಪ್ರಸ್ತುತಿಯಿಂದ ಹಲವು ವಿಷಯಗಳಲ್ಲಿ ಹಿಂದುಳಿದಿರಬಹುದೆಂಬ ಅತಂಕದಿಂದ ಅದನ್ನು ಬೇಗ ಇಲ್ಲಿಗೆ, ಇಂದಿಗೆ ತಲುಪಿಸಿಬಿಡಬೇಕೆಂಬ ತುಡಿತವೂ ಇರಬಹುದೇನೋ. ‘ಏಳು ಬಣ್ಣ ಸೇರಿ ಬಿಳಿ’ ಕಥೆಯಲ್ಲಿ ಕುಟುಂಬದಾಚೆಗಿನ ಸಂಬಂಧಕ್ಕೆ ಪಾಪಪ್ರಜ್ಞೆಯನ್ನು ಕಳೆದು, ಸಮಕಾಲೀನ ಅರ್ಥದ ಆದ್ಯಾತ್ಮಿಕತೆಯನ್ನು ಆರೋಪಿಸುವ ತುಮುಲ ಇಂತಹದ್ದು.*ತನ್ನ ಸೀನಿಯಾರಿಟಿಯ ಹೊರತಾಗಿಯೂ ಕಳೆದುಕೊಂಡ ಪ್ರಾಂಶುಪಾಲರ ಹುದ್ದೆಯ ದೆಸೆಯಿಂದ ಮೂಡಿದ ಅವ್ಯಕ್ತ ದ್ವೇಷಸಾಧನೆಗಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಬಂದ ಅಗೋಚರ ಪತ್ರದ ಬೆನ್ನುಬೀಳುವ ಉಪಾಧ್ಯಾಯ (ಹೆಜ್ಜೆ ಸಾಗದ ಹಾದಿ), ಕಸದ ಬುಟ್ಟಿಯನ್ನು ಮನೆಯ ಎದುರಿನಿಂದ ಇಲ್ಲವಾಗಿಸಿದಾಗಲೂ ಅಲ್ಲಿಯೇ ಕಸ ಬಂದು ಬೀಳುವ ಮಾಂತ್ರಿಕ ಅಭ್ಯಾಸ (ಕಸದ ಬಾಗಿನ), ಮಕ್ಕಳಿಲ್ಲದ ದಂಪತಿಗಳ ಮನೆಯಲ್ಲಿ ನೀರು ಕಾಯಿಸುವ ಹಂಡೆಯಲ್ಲಿ ಎಷ್ಟು ನೀರು ಸುರಿದರೂ ತಳ ಸೇರುವ ಕ್ರಮದ ಪರಿಶೀಲನೆ (ಗೋಡೆಯೇರಿದ ತೇವ), ಪಕ್ಕದ ಮನೆಯ ಸಾಬರ ಬಾಳೆದಿಂಡನ್ನು ಸತ್ಯನಾರಾಯಣ ಪೂಜೆಗಾಗಿ ಕೇಳಿದಾಗ ನಿರಾಕರಣೆಗೊಳಗಾಗಿ ನಂತರ ಪಡೆದರೂ ಅದಕ್ಕೆ ಅಂಟಿದ ಸಾತ್ವಿಕ ಅಪವಾದ (ಬೇರು ಕಳಚುವ ಮುನ್ನ), ದಿನನಿತ್ಯ ಅಂಗಡಿಗಳಿಗೆ ಮಾರುವ ಹೂಗಳನ್ನು ಸ್ಮಶಾನದಿಂದ ಪುನರ್ ಬಳಕೆಗೊಂಡದ್ದೆಂಬ ಅನುಮಾನ (ಪೇಟೆ ಬಂಧನದೊಳಗೆ)- ಇವೆಲ್ಲವೂ ಮೊದಲ ಓದಿಗೆ ಕೇವಲ ದೈನಂದಿನ ಸಂಸಾರದ ಜಂಜಡಗಳಾಗಿ ಕಾಣುತ್ತವೆ.ಆದರೆ ಸೂಕ್ಷ್ಮವಾಗಿ ಈ ಸಂಕಲನದ ಒಟ್ಟಾರೆ ಕಥೆಗಳನ್ನು ಜೋಡಿಸಿರುವ ಕ್ರಮವನ್ನು ಅನುಸರಿಸಿ ನೋಡಿದರೆ, ಸಂಸಾರವೆಂಬ ಪರಿಕಲ್ಪನೆಯನ್ನು ಮನೆಯ ನಾಲ್ಕು ಗೋಡೆಗಳಿಂದ ಬಿಡುಗಡೆಗೊಳಿಸಿ, ವ್ಯಕ್ತಿಗಳನ್ನು ವಸ್ತುಗಳೊಂದಿಗೆ, ಅವರುಗಳ ಧಾರ್ಮಿಕ ನಂಬಿಕೆಗಳೊಂದಿಗೆ, ಆಚರಣೆಯ ಹಿಂದಿನ ರೂಢಿಗಳ ಬೀದಿಗಿಳಿಸಿ ಪರೀಕ್ಷಿಸುವ ರೀತಿಯಲ್ಲಿ ಮನೆ-ಬೀದಿಗಳ ನಡುವಣ ಗೋಡೆಗಳನ್ನು ಒಡೆದಂತಾಗಿಸಲಾಗಿದೆ. ಉದಾಹರಣೆಗೆ, ಹೂ ಮಾರುವವಳಿಗೆ ಆಕೆಯ ಕಾಯಕ ಕ್ಷೇತ್ರವಾದ ರಸ್ತೆ ಹಾಗೂ ಬೆಳಗು– ಇವೆರಡೂ ಸೇರಿ ಮನೆಯಾಗುತ್ತದೆ! ಅದರ ಆಚೆಗೆ ಆಕೆಗೆ ಆಸ್ತಿತ್ವವೇ ಇಲ್ಲ; ಆಕೆಗೆ ಸಾಂಪ್ರದಾಯಿಕ ಮನೆ ಎಂಬುದೇ ಇಲ್ಲ. ಅದರಿಂದಲೂ ತಮ್ಮನನ್ನು ಹೊರಹಾಕುವ ಹೂವಾಡಗಿತ್ತಿ ಆತನನ್ನು ತಳ್ಳುವುದು ಹಿನ್ನೆಲೆಯಲ್ಲಿಯೇ ಉಳಿದ ತನ್ನ ಮನೆಗೇ (’ಅಂಗಡಿ ಕಡೆ ತಲೆ ಹಾಕಿದಿಯೆಂದರೆ ಕಾಲು ಮುರಿತೀನಿ’)!ನಮ್ಮ ಸಾಧಾರಣ ಪರಿಕಲ್ಪನೆಯಲ್ಲಿ ಕಥೆ ಎಂಬುದು; ಮತ್ತು ನಮ್ಮ ಕಲ್ಪನೆಯಲ್ಲಿ ಸಾಧಾರಣ ಕಥೆಯೆಂಬುದರಲ್ಲಿ ಇಂತಹ ಕವಲು-ಘಟನೆಗಳನ್ನು ಜರ್ರನೆ ಓದಿ ಮುಂದೆ ಸಾಗುವುದು, ಭವಿಷ್ಯದ ಪುಟಗಳಲ್ಲಿಯೂ ಘಟನೆಗಳ ಮೊತ್ತ ನಮಗಾಗಿ ಕಾಯುತ್ತಿವೆ ಎಂಬ ಕಾರಣಕ್ಕೇ. ಇಲ್ಲಿ ಸುನಂದರ ಕಥೆಗಳು ಅಂತಹ ಯಾವ ಸಾಂಪ್ರದಾಯಿಕ ನಂಬಿಕೆಯ ನೆಲೆಗಳನ್ನೂ ಉಳಿಸದೆಯೇ ಏಕ ಸಂದರ್ಭಗಳ ಸುತ್ತಲಿನ ವೈವಿಧ್ಯ ಅನುಭವಗಳ ಆಯಾಮಗಳನ್ನು ಒಟ್ಟು ಪೋಣಿಸುತ್ತಾರೆ. ಈ ಕಟ್ಟುವಿಕೆ ಎಷ್ಟು ಸಂಕೀರ್ಣವೆಂದರೆ, ನಮ್ಮ ಇಚ್ಛೆ ಹಾಗೂ ತಯಾರಿಯ ಆಧಾರದ ಮೇಲೆಯೇ ಅವರ ಹೊಸಮನೆಯನ್ನು ನಾವು ಪ್ರವೇಶಿಸಬೇಕಾಗುತ್ತದೆ.*ಶೈಕ್ಷಣಿಕ ದೃಷ್ಟಿಕೋನದಿಂದ ಕಥೆಗಳಿಗೂ ಸ್ಪಂದನೆಗೂ (ನಾನ್-ಫಿಕ್ಷನ್) ಇರುವ ವ್ಯತ್ಯಾಸವೆಂದರೆ, ಎರಡನೆಯದರಲ್ಲಿ ಕಾಡುವ ಗುಣವಿದ್ದು, ಅದು ಕಾಲಾತೀತವಾಗಿ ಉಳಿಯಲ್ಲದು. ಕನ್ನಡದ ಸಂದರ್ಭದಲ್ಲಿ ಇವೆರಡರ ವ್ಯತ್ಯಾಸವು ಯಶವಂತ ಚಿತ್ತಾಲರ ಬರವಣಿಗೆಯಿಂದಲೇ ಅಳಿಸಿಹೋಗತೊಡಗಿತ್ತು. ಸುನಂದರ ಕಥೆಗಳು ಸಾಂದ್ರವಾಗಿ, ಒಂದೆರೆಡು ವಾಕ್ಯ-ಪ್ಯಾರಾಗಳಲ್ಲೇ ಹಲವು ಆದಿಅಂತ್ಯರಹಿತ ಕಥೆಗಳ ಸೂಚನೆಗಳನ್ನು ಒಳಗೊಳ್ಳುತ್ತಲೇ, ಇಡಿಯ ಕಥೆಯನ್ನು ಅಪೂರ್ಣವಾಗಿರಿಸುತ್ತವೆ. ಪ್ರಜ್ಞಾಪ್ರವಾಹವಲ್ಲದಿದ್ದರೂ ಇದು ಪ್ರಜ್ಞಾಪೂರ್ವಕ.ಸಂಸಾರವೆಂಬ ಪರಿಕಲ್ಪನೆಗೆ ಅವಶ್ಯವಿರುವ ಗೋಡೆಗಳನ್ನು (ನೈಜ ಹಾಗೂ ರೂಪಕದ) ಆಯ್ದು ಹೊಸಬಗೆಯಲ್ಲಿ ಪುನರ್ ರೂಪಿಸುವಾಗ ಇವರು ನವೀನ ಗೂಡನ್ನು ಕಟ್ಟುವುದಿಲ್ಲ. ಹೊಸ ಬಗೆಯ, ಒಳಾಂಗಣ-ಹೊರಾಂಗಣಗಳನ್ನು ಒಟ್ಟು ತರುವ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ. ಒಂದು ಪರ್ಯಾಯ ಉದಾಹರಣೆಯನ್ನು ನೀಡಬಹುದಾದರೆ: ಎಪ್ಪತ್ತರ ದಶಕಕ್ಕಿಂತಲೂ ಮುಂಚೆ ಕನ್ನಡದ ಕಪ್ಪುಬಿಳುಪಿನ, ಸ್ಟುಡಿಯೋ ನಿರ್ಮಿತ ಸೆಟ್ಟನ್ನೊಳಗೊಂಡ ಸಿನಿಮಾಗಳಲ್ಲಿ ಪಾತ್ರಧಾರಿಯನ್ನು ಅನುಸರಿಸುತ್ತಿದ್ದ ಕ್ಯಾಮೆರಾ, ಆತ/ಆಕೆ ಬಾಗಿಲಿನಿಂದ ಹೊಕ್ಕು ಮತ್ತೊಂದು ಕೋಣೆಯನ್ನು ಪ್ರವೇಶಿಸಿದಾಗ, ಕ್ಯಾಮೆರಾ ಗೋಡೆಯನ್ನು ಪಾರದರ್ಶಕವೋ ಎಂಬಂತೆ ಹಾಯ್ದು ಪಾತ್ರಧಾರಿಯನ್ನು ಅನುಸರಿಸುತ್ತಿತ್ತು. ನಮ್ಮ ಸಮಕಾಲೀನ ನಿಜದ ನೆಲೆಗೆ ನಮ್ಮದೇ ಕಥನದ ಇತಿಹಾಸದ ಭಾರವನ್ನು ಒಡೆದು, ಎಳೆದುತಂದು ನಿಲ್ಲಿಸಲು ಮಾಡಲಾದ ಇಂತಹ ಪ್ರಯತ್ನಗಳು ಸುನಂದಾರ ಕಥೆಗಳಿಗೊಂದು ಮೌಲ್ಯವನ್ನು ತಂದುಕೊಡುತ್ತವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.