ಕುಡಿವ ನೀರಿನ ಸಮಸ್ಯೆ: ರೈತರ ಪ್ರತಿಭಟನೆ

ಲಿಂಗಸುಗೂರು: ಕೃಷ್ಣಾ ನದಿ ಪಾತ್ರದ ಗ್ರಾಮಗಳು ಸೇರಿದಂತೆ ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರು ಪರ್ಯಾಯ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ವಿರೋಧಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಒಂದು ವಾರದಿಂದ ಉಪ ವಿಭಾಗಾ ಧಿಕಾರಿ ಮುಖಾಂತರ ತಾಲ್ಲೂಕಿನಲ್ಲಿ ಜನತೆ ಮತ್ತು ಜಾನುವಾರು ಕುಡಿವ ನೀರಿನ ಸಮಸ್ಯೆಯಿಂದ ಪರದಾಡುತ್ತಿ ರುವ ಕುರಿತು ಜಿಲ್ಲಾಡಳಿತದ ಗಮನ ಸೆಳೆದಿದ್ದರು ಕೂಡ ಈ ವರೆಗೆ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ. ಕೃಷ್ಣಾ ನದಿ ಪಾತ್ರದಲ್ಲಿ ಅಲ್ಲಲ್ಲಿ ಸಂಗ್ರಹವಾಗಿ ದುರ್ನಾತ ಬೀರುತ್ತಿರುವ ನೀರನ್ನೆ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷ್ಣಾ ನದಿ ತಟದ ಜಲದುರ್ಗ, ಹಂಚಿನಾಳ, ಯಳಗುಂದಿ, ಕಡದರಗಡ್ಡಿ, ಯರಗೋಡಿ, ಗೋನವಾಟ್ಲ, ಗದ್ದಗಿ, ಟಣಮಕಲ್ ಸೇರಿದಂತೆ ಇತರೆ ನಡುಗಡ್ಡೆ ಪ್ರದೇಶದ ಜನವಸತಿ ಪ್ರದೇಶದ ಜನರಿಗೆ ಶುದ್ಧ ಕುಡಿವ ನೀರಿಗೆ ಪರದಾಡು ತ್ತಿದ್ದಾರೆ. ನಾರಾಯಣಪುರ ಜಲಾಶಯ ದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಮನವಿ ಮಾಡಿದರು ಯಾವುದೇ ಬೆಲೆ ಇಲ್ಲ ಎಂದು ಆರೋಪಿಸಿದರು.
ನಾರಾಯಣಪುರ ಜಲಾಶಯದಲ್ಲಿ ಕುಡಿವ ನೀರಿಗಾಗಿ ಸಂಗ್ರಹಿಸಿದ ನೀರನ್ನು ವಾಮ ಮಾರ್ಗದ ಮೂಲಕ ವಿದ್ಯುತ್ ಉತ್ಪಾದಕರಿಗೆ ಹರಿಸುತ್ತಿದ್ದಾರೆ. ಆದರೆ, ಕುಡಿವ ನೀರಿಗೆ ಬೇಡಿಕೆ ಸಲ್ಲಿಸಿದರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗೌಡೂರು, ಕಡ್ಡೋಣ, ಸರ್ಜಾಪುರ ಸೇರಿದಂತೆ ಕೃಷ್ಣಾ ನದಿ ಪಾತ್ರದ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ಕುಡಿವ ನೀರು ಪೂರೈಸಬೇಕು. ಇಲ್ಲವಾದಲ್ಲಿ ಜನತೆ ಜಾನುವಾರು ಸಮೇತ ತಾಲ್ಲೂಕು ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾ ಗುವುದು ಎಂದು ಉಪ ವಿಭಾಗಾಧಿಕಾರಿ ಕಚೇರಿ ಶರಣಬಸವ ಅವರಿಗೆ ಸಲ್ಲಿಸಿದ ಮನವಿ ಮೂಲಕ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ. ತಾಲ್ಲೂಕು ಅಧ್ಯಕ್ಷ ಸಿದ್ಧೇಶ ಗೌಡೂರು. ಮುಖಂಡರಾದ ಕುಪ್ಪಣ್ಣ ಗೋನವಾಟ್ಲ, ಸಂಗಣ್ಣ ಮುದಗಲ್, ಚಂದಾವಲಿ, ಕನಕಪ್ಪ ಯರಗೋಡಿ, ಮಲ್ಲಣ್ಣ ಗೌಡೂರು, ಹೊಳೆಯಪ್ಪ, ಗ್ಯಾನಪ್ಪ, ಬಸಪ್ಪ, ಸಂಗಪ್ಪ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.