ಗುರುವಾರ , ಮೇ 19, 2022
21 °C

ಕುಮಾರಸ್ವಾಮಿ ಕೈಯಲ್ಲಿ ಮತ್ತೊಂದು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ (ಎರಡನೇ ಪ್ಯಾಕೇಜ್) ಗುತ್ತಿಗೆ ನೀಡುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ, ಇದರಲ್ಲಿ ಮುಖ್ಯಮಂತ್ರಿಗಳ ಪುತ್ರರ ಕಂಪೆನಿಗಳು ಆರ್ಥಿಕ ಲಾಭ ಪಡೆದುಕೊಂಡಿವೆ ಎಂದು ಜೆಡಿಎಸ್ ಆರೋಪಿಸಿದೆ.ಜೆಡಿಎಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ‘ಯಡಿಯೂರಪ್ಪ ಅವರು ಅಧ್ಯಕ್ಷರಾಗಿರುವ ಕರ್ನಾಟಕ ನೀರಾವರಿ ನಿಗಮವು ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಜ್ಯೋತಿ ಲಿಮಿಟೆಡ್ ಜಂಟಿ ಸಹಭಾಗಿತ್ವದ ಕಂಪೆನಿಗಳಿಗೆ ಭದ್ರಾ ಮೇಲ್ದಂಡೆ ಏತ ನೀರಾವರಿ ಯೋಜನೆ (ಎರಡನೇ ಪ್ಯಾಕೇಜ್) ಗುತ್ತಿಗೆ ನೀಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಆರೋಪಿಸಿದರು.ಇದಕ್ಕೆ ಪ್ರತಿಯಾಗಿ, ‘ಮುಖ್ಯಮಂತ್ರಿಗಳ ಪುತ್ರರು ನಡೆಸುತ್ತಿರುವ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸಹ್ಯಾದ್ರಿ ಹೆಲ್ತ್ ಕೇರ್ ಅಂಡ್ ಡಯಾಗ್ನಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳಿಗೆ ಆರ್‌ಎನ್‌ಎಸ್ ಸಂಸ್ಥೆಗೆ ಸೇರಿದ ಮುರ್ಡೇಶ್ವರ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎಂಪಿಸಿಎಲ್) ಸಂಸ್ಥೆ ರೂ 13 ಕೋಟಿ ಸಂದಾಯ ಮಾಡಿದೆ’ ಎಂದು ಆರೋಪಿಸಿದರು.‘ಎಂಪಿಸಿಎಲ್ ಸಂಸ್ಥೆಯು ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಲಿಮಿಟೆಡ್‌ಗೆ 2010-11ರಲ್ಲಿ ರೂ 11 ಕೋಟಿ ಮತ್ತು ಸಹ್ಯಾದ್ರಿ ಹೆಲ್ತ್ ಕೇರ್ ಅಂಡ್ ಡಯಾಗ್ನಾಸ್ಟಿಕ್ ಲಿಮಿಟೆಡ್ ಸಂಸ್ಥೆಗೆ 2009-10ರಲ್ಲಿ  ರೂ 2 ಕೋಟಿ ಹೂಡಿಕೆ ರೂಪದಲ್ಲಿ ಸಂದಾಯ ಮಾಡಿದೆ. ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆಯ ಅಧಿಕೃತ ಷೇರು ಬಂಡವಾಳವೇ ರೂ 5 ಲಕ್ಷ ಆಗಿರುವಾಗ ಅಲ್ಲಿ ರೂ 2 ಕೋಟಿ ಹೂಡಿಕೆ ಮಾಡಲು ಹೇಗೆ ಸಾಧ್ಯ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.‘2003-04ರಲ್ಲಿ ಈ ಯೋಜನೆಯ ಅಂದಾಜು ರೂ 550 ಕೋಟಿ ಆಗಿತ್ತು. ಆದರೆ 2008-09ರಲ್ಲಿ ಗುತ್ತಿಗೆ ನೀಡುವಾಗ ಈ ಯೋಜನೆಯ ಅಂದಾಜು ವೆಚ್ಚವನ್ನು ರೂ 1,032 ಕೋಟಿಗೆ ಏರಿಸಲಾಯಿತು. ಯೋಜನೆಯ ವೆಚ್ಚದಲ್ಲಿ ಇಷ್ಟೊಂದು ಏರಿಕೆ ಆಗಿದ್ದು ಹೇಗೆ’ ಎಂದು ಪ್ರಶ್ನಿಸಿದರು.ಯೋಜನೆ ಆರಂಭಿಸಲು ಮುಂಗಡ ಹಣವಾಗಿ ಸರ್ಕಾರ ಆರ್‌ಎನ್‌ಎಸ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಗೆ ರೂ 103 ಕೋಟಿ ನೀಡಿದ ನಂತರವೇ ಮುಖ್ಯಮಂತ್ರಿಗಳ ಪುತ್ರರ ಕಂಪೆನಿಗೆ ರೂ 13 ಕೋಟಿ ಸಂದಾಯವಾಗಿದೆ ಎಂದರು. ನಡೆದಿರುವ ವ್ಯವಹಾರಗಳ ಬಗ್ಗೆ ಕೆಲವು ದಾಖಲೆಗಳನ್ನೂ ಅವರು ಮಾಧ್ಯಮಗಳಿಗೆ ನೀಡಿದರು.‘ಸುಪ್ರೀಂ ಕೋರ್ಟ್‌ಗೆ’: ಪ್ರೇರಣಾ ಟ್ರಸ್ಟ್ ಪ್ರಕರಣ ಮತ್ತು ಮುಖ್ಯಮಂತ್ರಿಗಳ ಇತರ ಕೆಲವು ಹಗರಣಗಳ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಬೇಕು ಎಂದು ಕೋರಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗುವುದು ಎಂದರು.‘ಮಾಹಿತಿ ನೀಡುವೆ: ‘ಪ್ರೇರಣಾ ಟ್ರಸ್ಟ್‌ನಲ್ಲಿ 150 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ಹೂಡಲಾಗಿದೆ. ಅಲ್ಲಿ ಯಾರು, ಎಷ್ಟು ಹಣ ಹೂಡಿದ್ದಾರೆ ಎಂಬ ಬಗ್ಗೆ ಸದ್ಯದಲ್ಲೇ ಬಹಿರಂಗಗೊಳಿಸುತ್ತೇನೆ. ಪ್ರೇರಣಾ ಟ್ರಸ್ಟ್ ಹೆಸರಿನಲ್ಲಿ ಮಾಡಿದ ಆಕ್ರಮ ಚಟುವಟಿಕೆಗಳ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇನೆ’ ಎಂದರು.‘ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಇವರಿಗೆ (ಬಿಜೆಪಿ) ಅಧಿಕಾರ ಹಸ್ತಾಂತರಿಸಿದ್ದರೆ, ಮುಂದೆ ಇವರು ಮಾಡುವ ಎಲ್ಲ ಅವ್ಯವಹಾರಗಳಿಗೂ ನಾನು ತಲೆಕೊಡಬೇಕಾಗುತ್ತಿತ್ತು. ಹಾಗಾಗಿಯೇ ಅಧಿಕಾರ ಹಸ್ತಾಂತರ ಮಾಡಲಿಲ್ಲ’ ಎಂದು ಸಮರ್ಥಿಸಿಕೊಂಡರು.‘ನನ್ನ ವಿರುದ್ಧ ಮುಖ್ಯಮಂತ್ರಿಗಳು ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆಗಳಿದ್ದರೆ ಅದನ್ನು ಜನರ ಮುಂದೆ ತರಲಿ. ಇಷ್ಟು ದಿನ ನೀಡಿರುವುದು ಬಿಜೆಪಿಯವರು ಮಾಡಿರುವ ಭ್ರಷ್ಟಾಚಾರದ ಶೇ 15ರಷ್ಟು ಮಾತ್ರ. ಇನ್ನೂ ಶೇ 85ರಷ್ಟಿದೆ. ಅದನ್ನು ಮುಂದಿನ ದಿನಗಳಲ್ಲಿ ಜನರ ಮುಂದಿಡುತ್ತೇನೆ’ ಎಂದರು. ಜೆಡಿಸ್ ಮುಖಂಡರಾದ ಪುಟ್ಟಣ್ಣ ಮತ್ತಿತರರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಾಜಿಗಾಗಿ ದೂರವಾಣಿ ಕರೆ

ಪ್ರೇರಣಾ ಟ್ರಸ್ಟ್ ಕುರಿತ ವಿಚಾರವನ್ನು ತಿಳಿಸಲು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದ ಹಿಂದಿನ ದಿನ ಯಡಿಯೂರಪ್ಪ ಅವರು ‘ರಾಜಿ ಮಾಡಿಕೊಳ್ಳಲು’ ವಿಧಾನ ಪರಿಷತ್ ಸದಸ್ಯ, ಜೆಡಿಎಸ್‌ನ ಎಂ.ಸಿ. ನಾಣಯ್ಯ ಅವರಿಗೆ ದೂರವಾಣಿ ಕರೆ ಮಾಡಿದ್ದರು ಎಂಬ ವಿಷಯವನ್ನು ಕುಮಾರಸ್ವಾಮಿ ಬಹಿರಂಗಪಡಿಸಿದರು.‘ನಾಣಯ್ಯ ಅವರಿಗೆ ದೂರವಾಣಿ ಕರೆ ಮಾಡಿದ ಯಡಿಯೂರಪ್ಪ ಅವರು, ಕುಮಾರಸ್ವಾಮಿಯವರನ್ನು ಒಪ್ಪಿಸಿ, ನಾವು ರಾಜಿಯಾಗೋಣ ಎಂದು ಒತ್ತಾಯ ಮಾಡಿದ್ದರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಇದಲ್ಲದೆ, ‘ಮುಖ್ಯಮಂತ್ರಿಗಳ ಕಚೇರಿಯಿಂದ ನನ್ನ ಆಪ್ತ ಕಾರ್ಯದರ್ಶಿಗಳಿಗೂ ಕರೆ ಬಂದಿತ್ತು, ಆ ಬಗ್ಗೆ ಮೊಬೈಲ್‌ನಲ್ಲಿ ದಾಖಲೆಗಳಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.