ಗುರುವಾರ , ಮೇ 19, 2022
21 °C
ವಿಧಾನ ಮಂಡಲ ಕಲಾಪ

`ಕುರಿ'ಗಳು ಸಾರ್ `ಕುರಿ'ಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ಮಂಗಳವಾರ `ಕುರಿ' ಮೇಲೆ ಸ್ವಾರಸ್ಯಕರ ಚರ್ಚೆ ನಡೆಯಿತು.2013-14ನೇ ಸಾಲಿನ ಪರಿಷ್ಕೃತ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, `ಬಜೆಟ್‌ನಲ್ಲಿ ಕುರಿ ಅಥವಾ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ 3 ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ. ಆದರೆ ಈ ಪರಿಹಾರವನ್ನು ಕೇವಲ ಕುರಿಗಳಿಗೆ ಮಾತ್ರ ಸೀಮಿತಗೊಳಿಸದೆ ಎತ್ತು ಹಾಗೂ ಇತರ ಜಾನುವಾರುಗಳು ಮೃತಪಟ್ಟಾಗಲೂ ನೀಡುವಂತಾಗಬೇಕು' ಎಂದು ಸಲಹೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಎಸ್.ಆರ್. ಪಾಟೀಲ್, `ಕುರಿ ಎಂದರೆ ಲಕ್ಷ್ಮಿ ಇದ್ದಂತೆ! ಲಕ್ಷ್ಮಿ ಎಂದರೆ ಹಣ. ಹಣ ಎಂದರೆ ಬಜೆಟ್. ಇದಕ್ಕಾಗಿ ಕುರಿಗೆ ಬಜೆಟ್‌ನಲ್ಲಿ ಸಹಜವಾಗಿಯೇ ಪ್ರಾತಿನಿಧ್ಯ ದೊರೆತಿದೆ' ಎಂದು ಅರ್ಥೈಸಿದರು.ಪಾಟೀಲ್ ಅವರ ಈ ಮಾತಿಗೆ ದನಿಗೂಡಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, `ಕುರಿ ಲಕ್ಷ್ಮಿ ಎನ್ನುವುದಾದರೆ ಅದರ ವಧೆ ನಿಲ್ಲಿಸಬೇಕು. ಕುರಿಯನ್ನು ಬಲಿ ಕೊಡಬಾರದು' ಎಂಬ ತರ್ಕ ಮಂಡಿಸಿದರು. ಮಹಾತ್ಮಾ ಗಾಂಧೀಜಿಯವರು ಮೇಕೆ ಹಾಲನ್ನೇ ಕುಡಿಯುತ್ತಿದ್ದರು ಎಂಬುದನ್ನು ನೆನಪಿಸುತ್ತಲೇ, `ಸರ್ಕಾರ ಕುರಿ ಮತ್ತು ಮೇಕೆ ಡೈರಿ ಸ್ಥಾಪನೆಯನ್ನು ಪ್ರಕಟಿಸಬೇಕು' ಎಂಬ ಸಲಹೆ ನೀಡಿದರು.ಹೊರಟ್ಟಿಯವರ ತರ್ಕಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು `ಆರೋಗ್ಯಕ್ಕೆ ಮೇಕೆ ಹಾಲು ಉತ್ತಮ' ಎಂದೆನ್ನೆತ್ತಾ ತಲೆದೂಗಿದರು.

`ಕುರಿ ರಾಷ್ಟ್ರೀಯ ಪ್ರಾಣಿ ಆಗಲಿ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಬಜೆಟ್ ದಿನವೂ ವಿಧಾನಸೌಧಕ್ಕೆ ಕುರಿ ಬಂದಿತ್ತು. ಅದೇ ರೀತಿ ಕಾಂಗ್ರೆಸ್‌ಗೂ ಒಂದು ಪ್ರಾಣಿ ಕೊಡೋಣ' ಎಂದು ಸದಾನಂದಗೌಡರು ಚರ್ಚೆಗೆ ಹಾಸ್ಯದ ಲೇಪನ ನೀಡಲು ಯತ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.