ಗುರುವಾರ , ಜೂನ್ 24, 2021
24 °C

ಕುಷ್ಟಗಿ: ನೀರಿನ ತಾಪತ್ರಯ- ನಾಗರಿಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ನೀರಿನ ತಾಪತ್ರಯ- ನಾಗರಿಕರ ಆಕ್ರೋಶ

ಕುಷ್ಟಗಿ:  ಕುಡಿಯುವ ನೀರು ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿ ಬೇಸತ್ತಿರುವ ಪಟ್ಟಣದ 4ನೇ ವಾರ್ಡ್‌ನ ಮಹಿಳೆಯರು ಸೇರಿದಂತೆ ಅಲ್ಲಿಯ ನಾಗರಿಕರು ಪುರಸಭೆಗೆ ಮುತ್ತಿಗೆಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.ಏಕಾಏಕಿ ಪುರಸಭೆಗೆ ಬಂದ ಜನರ ಗುಂಪು ಅಲ್ಲಿದ್ದ ಸಿಬ್ಬಂದಿ ಮತ್ತು ಪುರಪಿತೃಗಳನ್ನು ತರಾಟೆಗೊಳಪಡಿಸಿ, ಜನ ನೀರು ಇತರೆ ಯಾವುದೇ ಅನುಕೂಲಗಳಿಲ್ಲದೇ ಪರದಾಡುತ್ತಿದ್ದರೂ ಸಂಬಂಧಿಸಿದ ವಾರ್ಡ್‌ನ ಸದಸ್ಯ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಹೆಸರಿಗೆ ಮಾತ್ರ ಪ್ರತಿನಿಧಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದರಿ ವಾರ್ಡ್‌ನಲ್ಲಿ ಅನಧಿಕೃತ ನಲ್ಲಿ ಸಂಪರ್ಕಗಳ ಸಂಖ್ಯೆ ಹೆಚ್ಚಿದೆ. ಕೆಲ ಪಟ್ಟಭದ್ರರು ಎಲ್ಲೆಂದರಲ್ಲಿ ಮುಖ್ಯಕೊಳವೆಗೆ `ಕನ್ನ~ಹಾಕಿ ಬೇಕಾದಷ್ಟು ನೀರು ಪಡೆದರೆ ಜನಸಾಮಾನ್ಯರು ನೀರಿಗಾಗಿ ಕೊಡ ಹೊತ್ತುಕೊಂಡು ಎಲ್ಲೆಂದರಲ್ಲಿ ಅಲೆಯುವಂಥ ಸ್ಥಿತಿ ಇದೆ.

 

ಕಿರು ನೀರು ಸರಬರಾಜು ಮುಖ್ಯಕೊಳವೆಯಿಂದ ಅನಧಿಕೃತ ಸಂಪರ್ಕ ಪಡೆದಿರುವುದರಿಂದ ಮುಂದಿನ ಭಾಗದ ನಲ್ಲಿಗಳಿಗೆ ನೀರು ಬರುವುದೇ ಇಲ್ಲ, ಎಷ್ಟೋ ದಿನಗಳಿಂದ ಸಮಸ್ಯೆ ಎದುರಿಸುತ್ತಿದ್ದೇವೆ ಯಾರೂ ನಮ್ಮ ಗೋಳು ಕೇಳುತ್ತಿಲ್ಲ ಎಂದು ಗುಂಪಿನಲ್ಲಿದ್ದ ಅಲ್ಲಿನ ನಿವಾಸಿಗಳಾದ ದ್ಯಾಮವ್ವ ವಡ್ಡರ, ಗೌರಮ್ಮ ಕೋರಿ, ಸಮದ್ ಆದೋನಿ, ಹುಬ್ಬೇಶ, ಹನುಮಂತಪ್ಪ ಮತ್ತಿತರರು ಅಲ್ಲಿದ್ದ ಅಧ್ಯಕ್ಷೆ ಕಾಳಮ್ಮ ಬಡಿಗೇರ ಅವರ ಬಳಿ ಅಳಲು ತೋಡಿಕೊಂಡರು.ಈ ಕುರಿತು ಸ್ಥಳದಲ್ಲಿದ್ದ ಕಿರಿಯ ಎಂಜಿನಿಯರ್ ರಾಜು ಚವ್ಹಾಣ ಅವರನ್ನು ಅಧ್ಯಕ್ಷೆ ವಿಚಾರಿಸಿದಾಗ, ದಿಬ್ಬದಲ್ಲಿ ಸಾರ್ವಜನಿಕ ನಲ್ಲಿಗಳಿವೆ, ಆದರೆ ಕೆಳಭಾಗದಲ್ಲೇ ಕೆಲವರು ಅನಧಿಕೃತ ಸಂಪರ್ಕ ಪಡೆದಿರುವುದರಿಂದ ನೀರು ಮುಂದೆ ಹೋಗುವುದಿಲ್ಲ. ತೆರವುಗೊಳಿಸಲು ಹೋದರೆ ಕೆಲವರು ಸಹಕರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಭೇಟಿ: ನಂತರ 4ನೇ ವಾರ್ಡ್‌ಗೆ ಭೇಟಿ ನೀಡಿದ ಅಧ್ಯಕ್ಷೆ ಕಾಳಮ್ಮ ಮತ್ತು ಇತರೆ ಕೆಲ ಸದಸ್ಯರು, ಬೆಳಕಿಗೆ ಬಂದ ಅನಧಿಕೃತ ಸಂಪರ್ಕಗಳನ್ನು ತಕ್ಷಣ ಬಂದ್ ಮಾಡಬೇಕು, ಮೂರು ಸಾರ್ವಜನಿಕ ನಲ್ಲಿಗಳನ್ನು ಅಳವಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು.ಬಹಿರ್ದೆಸೆ ಸಮಸ್ಯೆ: ಸದರಿ ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಮಹಿಳೆಯರು ರಾತ್ರಿ ಮತ್ತು ಬೆಳಕು ಮೂಡುವ ಮೊದಲೇ ಬಯಲಿಗೆ (ಬಹಿರ್ದೆಸೆಗೆ) ಹೋಗಬೇಕು, ಅಕ್ಕಪಕ್ಕದ ತೋಟ ಹೊಲದವರು ಮಹಿಳೆಯರನ್ನು ಬೆದರಿಸುತ್ತಾರೆ, ಮಾನ ಮರ್ಯಾದೆಯೇ ಇಲ್ಲದಂತಾಗಿದೆ. ವಾರ್ಡ್‌ನಲ್ಲಿ ಬೀದಿ ದೀಪಗಳಿಲ್ಲದೇ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಹೊರ ಬರಲು ಹೆದರುತ್ತಿದ್ದಾರೆ.ಇಷ್ಟೆಲ್ಲ ಸಮಸ್ಯೆಗಳಿದ್ದರೂ ವಾರ್ಡ್‌ನ ಸದಸ್ಯ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.