ಗುರುವಾರ , ಮೇ 6, 2021
26 °C

ಕೂಡುಂಕುಳಂ ಪರಮಾಣು ಶಕ್ತಿ ಸ್ಥಾವರ 40 ದಿನಗಳಲ್ಲಿ ಕಾರ್ಯಾರಂಭ- ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೂಡುಂಕುಳಂನ ಪರಮಾಣು ಶಕ್ತಿ ಸ್ಥಾವರದ ಮೊದಲ ಘಟಕವು ಇನ್ನು 40 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದೆ.`ಒಂದು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಮೊದಲ ಘಟಕವು ಇನ್ನು 40 ದಿವಸಗಳಲ್ಲಿ ಚಾಲನೆಗೊಳ್ಳಲಿದೆ~ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ವಿ. ನಾರಾಯಣಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.`ಅಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ಅಧಿಕಾರಿಗಳು ಕೂಡುಂಕುಳಂನಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದಾರೆ. ಉತ್ಪಾದನೆ ಆರಂಭಿಸಲು ಇನ್ನೊಂದು ವಾರದಲ್ಲಿ ಎಇಆರ್‌ಬಿ ಅನುಮತಿ ನೀಡುವ ಸಾಧ್ಯತೆ ಇದೆ. ಇದು ದೊರಕಿದ ತರುವಾಯ ಘಟಕಕ್ಕೆ ಯುರೇನಿಯಂ ಇಂಧನವನ್ನು ಭರ್ತಿ ಮಾಡಲಾಗುವುದು~ ಎಂದರು.`ಮೊದಲ 20 ದಿನಗಳು ಘಟಕದ ಪ್ರಯೋಗಾರ್ಥ ಚಾಲನೆ ನಡೆಯಲಿದ್ದು, ನಂತರವಷ್ಟೇ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ~ ಎಂದ ಅವರು, `ಮೊದಲ ಘಟಕ ಚಾಲನೆಗೊಂಡ ಎರಡು ತಿಂಗಳಲ್ಲೇ ಎರಡನೇ ಘಟಕವೂ ಕಾರ್ಯಾರಂಭ ಮಾಡಲಿದೆ. ಇದರ ಸಾಮರ್ಥ್ಯ ಕೂಡ ಒಂದು ಸಾವಿರ ಮೆಗಾವಾಟ್~ ಎಂದರು.

 

`ಈ ಅಣು ಸ್ಥಾವರದ ಕಾರ್ಯಾರಂಭಕ್ಕೆ ಭಾರತ ಮತ್ತು ರಷ್ಯಾದ ಎರಡು ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಸಹಕಾರ ನೀಡಿದೆ~ ಎಂದೂ ನಾರಾಯಣಸ್ವಾಮಿ ತಿಳಿಸಿದರು.ರಷ್ಯ ಸಹಭಾಗಿತ್ವದ ರೂ 15,824 ಕೋಟಿ ವೆಚ್ಚದ ಈ ಯೋಜನೆಯು ಪರಿಸರದ ಮೇಲೆ ಮಾರಕ ಪರಿಣಾಮ ಬೀರುವುದರಿಂದ ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ ಎಂದು ಆತಂಕಗೊಂಡ ಸ್ಥಳೀಯರು ಸತತ ಎಂಟು ತಿಂಗಳ ಕಾಲ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು.ಇವರಿಗೆ ಪರಮಾಣು ಕಾರ್ಯಕ್ರಮಗಳ ವಿರೋಧಿ ಗುಂಪುಗಳು ಬೆಂಬಲ ನೀಡಿದ್ದವು. ಜೊತೆಗೆ ತಮಿಳುನಾಡು ಸರ್ಕಾರ ಕೂಡ ಸುರಕ್ಷತೆ ಬಗ್ಗೆ ಖಾತರಿ ನೀಡದ ಹೊರತು ಯೋಜನೆ ಮುಂದುವರಿಯಲು ಬಿಡುವುದಿಲ್ಲ ಎಂದು ತಕರಾರು ತೆಗೆದಿತ್ತು. ಈ ಕಾರಣಗಳಿಂದಾಗಿ ಕಳೆದ ಅಕ್ಟೋಬರ್‌ನಲ್ಲೇ ಸ್ಥಾವರದ ಕೆಲಸ- ಕಾರ್ಯಗಳು ಸ್ಥಗಿತಗೊಂಡಿದ್ದವು.ಮೇ 1ರಿಂದ ಅನಿರ್ದಿಷ್ಟ ಉಪವಾಸಚೆನ್ನೈ (ಐಎಎನ್‌ಎಸ್): ಜನರಿಗೆ ನೀಡಿರುವ ಭರವಸೆಗಳನ್ನು ಮರೆತಿರುವ ತಮಿಳುನಾಡು ಸರ್ಕಾರದ ವಿರುದ್ಧ ಮೇ 1 ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಕೂಡುಂಕುಳಂ ಅಣುಸ್ಥಾವರ ವಿರೋಧಿ ಜನ ಸಂಘಟನೆ (ಪಿಎಮ್‌ಎಎನ್‌ಎ) ಸೋಮವಾರ ತಿಳಿಸಿದೆ.ಹಿಂದೆ ಪ್ರತಿಭಟನೆ ನಡೆಸಿದಾಗ ತಮಿಳುನಾಡು ಸರ್ಕಾರವು, ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಲಾಗುವುದು, ಪ್ರತಿಭಟನಾಕಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು, 2008ರಲ್ಲಿ ಪರಮಾಣು ಸ್ಥಾವರಗಳ ಸಾಧಕ ಬಾಧಕಗಳ ಬಗ್ಗೆ ಭಾರತ-ರಷ್ಯಾ  ಒಪ್ಪಂದಕ್ಕೆ ಸಂಬಂಧಿಸಿದ ಕರಡಿನ ಪ್ರತಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.