ಆನ್ಲೈನ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ರೈತರು ವರ್ತಕರ ಅಥವಾ ದಲ್ಲಾಳಿಗಳ ಬೆನ್ನುಹತ್ತಿ ಹಣಕ್ಕಾಗಿ ಅಲೆದಾಡಬೇಕಾಗಿಲ್ಲ.
ಕೃಷಿ ಉತ್ಪನ್ನಗಳು ಮಾರಾಟವಾದ ತಕ್ಷಣ ನೇರವಾಗಿ ರೈತರ ಖಾತೆಗೆ ಹಣ ಪಾವತಿಸುವ ವ್ಯವಸ್ಥೆಯೂ ಇಲ್ಲಿದೆ. ಕೃಷಿ ಮಾರಾಟ ಇಲಾಖೆ ಇಂತಹ ಪ್ರಯೋಗ ಜಾರಿಗೊಳಿಸುವ ಮೂಲಕ ರೈತರಿಗೆ ಸ್ಪರ್ಧಾತ್ಮಕ ದರದಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ದೊರಕಿಸಿಕೊಡುವ ಪ್ರಯತ್ನ ಆರಂಭಿಸಿದೆ.

ಕಿರಿದಾಗಿರುವ ಜಗತ್ತಿನಲ್ಲಿ ವ್ಯಾಪಾರ ವಹಿವಾಟು ಗಡಿಗಳನ್ನು ಮೀರಿ ಬೆಳೆದಿದೆ. ಬೆರಳ ತುದಿಯ ಸ್ಪರ್ಶದಲ್ಲೇ ನಡೆಯಲು ಆರಂಭವಾಗಿರುವ ವಹಿವಾಟು ಮಣ್ಣಿನ ಮಕ್ಕಳು ನಿಬ್ಬೆರಗಾಗುವಂತೆ ಮಾಡಿದೆ.

ಅಂತರ್ಜಾಲದ ನಂಟು ಬೆಸೆದುಕೊಂಡು ಕ್ಷಣ ಮಾತ್ರದಲ್ಲೇ ವಸ್ತುಗಳನ್ನು ಖರೀದಿಸಬಹುದಾದ ಅಥವಾ ಮಾರಾಟ ಮಾಡಬಹುದಾದ ಆನ್ಲೈನ್ ವ್ಯವಸ್ಥೆ ಈಗ ಮಾರುಕಟ್ಟೆಯ ಅವಿಭಾಜ್ಯ ಅಂಗ. ರಾಜ್ಯದಲ್ಲಿನ ಕೃಷಿ ಭೂಮಿಯಲ್ಲಿ ಬೆಳೆಯುವ ಉತ್ಪನ್ನಗಳೂ ಸಹ ಈಗ ಆನ್ಲೈನ್ ಮಾರಾಟ ವಹಿವಾಟಿಗೆ ಸೇರ್ಪಡೆಯಾಗುವ ಮೂಲಕ ಬದಲಾವಣೆಯ ಶಕೆ ಆರಂಭವಾಗಿದೆ. ಇಡೀ ರಾಜ್ಯದ ಮಾರುಕಟ್ಟೆಯನ್ನು ಒಂದೇ ಸೂರಿನ ಅಡಿಯಲ್ಲಿ ತರುವ ಪ್ರಯತ್ನ ಬೆಲೆ ಕುಸಿತವನ್ನು ಸಹ ನಿಯಂತ್ರಿಸಬಲ್ಲದು.

ಗುಲ್ಬರ್ಗದ ವರ್ತಕ ಅಲ್ಲಿಂದಲೇ ತಿಪಟೂರಿನಲ್ಲಿರುವ ಕೊಬ್ಬರಿಯನ್ನು ಖರೀದಿಸಬಹುದು. ಬೆಂಗಳೂರಿನ ಖರೀದಿದಾರ ಚಿತ್ರದುರ್ಗದ ಮೆಕ್ಕೆಜೋಳವನ್ನು ರಾಜಧಾನಿಯಲ್ಲಿದ್ದುಕೊಂಡೇ ಆನ್ಲೈನ್ನಲ್ಲೇ ಖರೀದಿಸಬಹುದು. ಒಟ್ಟಾರೆಯಾಗಿ ದೇಶದೆಲ್ಲೆಡೆಯ ವರ್ತಕರಿಗೂ ರಾಜ್ಯದ ಕೃಷಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿಡಲಾಗಿರುವ ಕೃಷಿ ಉತ್ಪನ್ನಗಳ ಮಾಹಿತಿ ಸುಲಭದಲ್ಲಿ ಅಂತರ್ಜಾಲದಲ್ಲಿ ಲಭ್ಯವಾಗುತ್ತದೆ. ಕೃಷಿ ಉತ್ಪನ್ನ ಖರೀದಿಯಲ್ಲಿ ಸ್ಪರ್ಧೆ ಏರ್ಪಟ್ಟರೆ ಅತ್ಯುತ್ತಮ ಬೆಲೆಯೂ ರೈತರಿಗೆ ದೊರೆಯಲು ಅವಕಾಶವಾಗುತ್ತದೆ.

ರೈತರು ಸಹ ವರ್ತಕರ ಅಥವಾ ದಲ್ಲಾಲರ ಬೆನ್ನುಹತ್ತಿ ಹಣಕ್ಕಾಗಿ ಅಲೆದಾಡಬೇಕಾಗಿಲ್ಲ. ಕೃಷಿ ಉತ್ಪನ್ನಗಳು ಮಾರಾಟವಾದ ತಕ್ಷಣ ನೇರವಾಗಿ ರೈತರ ಖಾತೆಗೆ ಹಣ ಪಾವತಿಸುವ ವ್ಯವಸ್ಥೆಯೂ ಇಲ್ಲಿದೆ. ಕೃಷಿ ಮಾರಾಟ ಇಲಾಖೆ ಇಂತಹ ಪ್ರಯೋಗ ಜಾರಿಗೊಳಿಸುವ ಮೂಲಕ ರೈತರಿಗೆ ಸ್ಪರ್ಧಾತ್ಮಕ ದರದಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ದೊರಕಿಸಿಕೊಡುವ ಪ್ರಯತ್ನ ಆರಂಭಿಸಿದೆ. ಜತೆಗೆ ದೇಶದ ಎಲ್ಲ ಮಾರುಕಟ್ಟೆಗಳ ಜತೆಗೂ ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಅಂತರ್ಜಾಲದ ಮೂಲಕ ಜೋಡಿಸುವ ಪ್ರಯತ್ನವೂ ಇದಾಗಿದೆ.

ಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ಬಂದಿರುವ ಆನ್ಲೈನ್ ಮಾರಾಟ ವ್ಯವಸ್ಥೆ ಕೃಷಿ ಕ್ಷೇತ್ರದಲ್ಲಿ ಮತ್ತು ರೈತರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದೇ ಆಶಿಸಲಾಗಿದೆ. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಸರಳ ಪ್ರಕ್ರಿಯೆ, ನಿಖರತೆ, ಪಾರದರ್ಶಕತೆ ತರುವ ಮೂಲಕ ಮಾರಾಟ ವ್ಯವಸ್ಥೆಯನ್ನು ಸುಗಮ ಹಾಗೂ ಸುವ್ಯವಸ್ಥಿತಗೊಳಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ‘ಕೃಷಿ ಮಾರಾಟ ನೀತಿ–2013’ ಜಾರಿಗೊಳಿಸಿದೆ. ನಿಗದಿತ ಸಮಯದಲ್ಲಿ ಸ್ಪರ್ಧಾತ್ಮಕ ಪೈಪೋಟಿಯೊಂದಿಗೆ ರೈತರ ಉತ್ಪನ್ನಗಳಿಗೆ ಗುಣಮಟ್ಟಕ್ಕೆ ತಕ್ಕ ಬೆಲೆ ಒದಗಿಸುವುದರ ಜತೆಗೆ ರೈತರಿಗೆ ತಮ್ಮ ಉತ್ಪನ್ನಗಳು ಮಾರಾಟವಾದ ತಕ್ಷಣ ಹಣ ಸಂದಾಯವಾಗುವಂತೆ ಪೂರಕ ವ್ಯವಸ್ಥೆ ಕಲ್ಪಿಸುವುದು ನೀತಿಯ ಉದ್ದೇಶ.

ರೈತರು ಬೆಳೆದ ಬೆಳೆಗಳ ಗುಣಮಟ್ಟಕ್ಕೆ ತಕ್ಕ ಬೆಲೆ ದೊರೆಯುವಂತಾಗಲು ಸ್ಪರ್ಧಾತ್ಮಕ ಪೈಪೋಟಿ ಬಹುಮುಖ್ಯ. ಒಂದು ಪ್ರದೇಶದಲ್ಲಿ ರೈತರು ಮಾರಾಟಕ್ಕಾಗಿ ತಂದ ಉತ್ಪನ್ನಗಳನ್ನು ವಿದ್ಯುನ್ಮಾನ ವೇದಿಕೆಯ ಮೂಲಕ ಅಂತರ್ಜಾಲದಲ್ಲಿ ಪ್ರಸಾರ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಪೈಪೋಟಿ ನಡೆಸುವುದರಿಂದ ಯೋಗ್ಯ ಬೆಲೆ ದೊರೆಯಲು ಸಹಕಾರಿಯಾಗುವುದು ಹಾಗೂ ಮಾರುಕಟ್ಟೆಯ ಕಾರ್ಯಕ್ಷಮತೆ ಹೆಚ್ಚಾಗುವುದು. ಈ ನಿಟ್ಟಿನಲ್ಲಿ ಕೃಷಿ ಮಾರಾಟ ಇಲಾಖೆ ಇಂತಹ ವೇದಿಕೆಯನ್ನು ನಿರ್ಮಿಸಿದೆ.

ರೈತರು ತಮ್ಮ ಉತ್ಪನ್ನದ ಗುಣಮಟ್ಟ, ವರ್ಗ ಹಾಗೂ ಇತರೆ ಗುಣಲಕ್ಷಣಗಳ ಮಾಹಿತಿಯನ್ನು ಅಂತರ್ಜಾಲದಲ್ಲಿ ನೀಡಿದ ನಂತರ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಂದ ಲೈಸನ್ಸ್ ಪಡೆದ ಯಾವುದೇ ಭಾಗದ ವರ್ತಕರು ತಾವಿರುವ ಸ್ಥಳದಿಂದಲೇ ಆನ್ಲೈನ್ ವೇದಿಕೆಯಲ್ಲಿ ಉತ್ಪನ್ನಗಳಿಗೆ ಬೆಲೆ ನಮೂದಿಸಿ ಖರೀದಿಸಬಹುದಾಗಿದೆ.

ಆನ್ಲೈನ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟದಿಂದ ಅನಧಿಕೃತ ಮಾರುಕಟ್ಟೆ ವ್ಯವಸ್ಥೆಗೆ ಕಡಿವಾಣ ಬೀಳುವುದರ ಜತೆಗೇ ರೈತರಿಗೆ ಸಮಯದ ಉಳಿತಾಯ ಹಾಗೂ ಪಾರದರ್ಶಕ ಮಾರಾಟ ವ್ಯವಸ್ಥೆ ಅನುಕೂಲ ದೊರೆಯುತ್ತದೆ.

ಶುಭಾರಂಭ
ಆರಂಭದಲ್ಲಿ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ತಿಪಟೂರು ಮತ್ತು ಅರಸಿಕೆರೆಯ ಕೊಬ್ಬರಿ ಹಾಗೂ ಚಾಮರಾಜನಗರದಲ್ಲಿ ಅರಿಶಿಣದ ಮಾರಾಟಕ್ಕೆ ಜಾರಿ ಮಾಡಲಾಗಿದೆ. ರಾಜ್ಯದ ಇತರ ಮಾರುಕಟ್ಟೆಗಳಲ್ಲಿಯೂ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಆನ್ಲೈನ್ ವ್ಯವಸ್ಥೆ ಆರಂಭವಾದ ಫೆ. 22ರಂದು ಕೊಬ್ಬರಿಗೆ ಬಂಪರ್ ಬೆಲೆ ದೊರೆಯಿತು. ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೊಬ್ಬರಿಗೆ ಆನ್ಲೈನ್ ಹರಾಜಿನಲ್ಲಿ ಕ್ವಿಂಟಲ್ಗೆ ₨9,106 ಧಾರಣೆ ಸಿಕ್ಕಿತು.

ಉಗ್ರಾಣ ಮೂಲಕ ಮಾರಾಟ!
ರೈತರು ಕೃಷಿ ಉತ್ಪನ್ನಗಳನ್ನು ತಮ್ಮ ಊರಿಗೆ ಹತ್ತಿರದ ವೈಜ್ಞಾನಿಕವಾದ ಉಗ್ರಾಣಗಳಲ್ಲಿಟ್ಟು ಮಾರಾಟ ಮಾಡಲು ಸಹ ಈ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಗ್ರಾಣಗಳಲ್ಲಿ ದಾಸ್ತಾನಿಟ್ಟ ಉತ್ಪನ್ನಗಳನ್ನು ವರ್ಗೀಕರಿಸಿ ಅದರ ಗುಣ ಲಕ್ಷಣಗಳ ವಿವರಗಳನ್ನು ಆನ್ಲೈನ್ ಮಾರುಕಟ್ಟೆಯ ವೆಬ್ಸೈಟ್ಗೆ ಅಪ್ಲೋಡ್ ಮಾಡಿ ವರ್ತಕರು ವೀಕ್ಷಿಸಲು ಅನುವು ಮಾಡಿಕೊಟ್ಟು ಮಾರಾಟ ಮಾಡುವ ಅವಕಾಶವೂ ರೈತರಿಗಿದೆ.

ಹತಾಶರಾಗಬೇಕಿಲ್ಲ
ಒಂದೊಮ್ಮೆ ವರ್ತಕ ಅಥವಾ ಖರೀದಿ ಸಂಸ್ಥೆ ಸೂಚಿಸಿದ ಬೆಲೆ ರೈತರಿಗೆ ಒಪ್ಪಿಗೆ ಆಗದೇ ಮಾರಾಟ ಮಾಡದೇ ಇರಲು ನಿರ್ಧರಿಸುವ ಹಕ್ಕು ರೈತರಿಗೆ ಇದೆ. ಹಾಗೆಂದು ಬಹಳ ಕಷ್ಟಪಟ್ಟು ಬೆಳೆದ ಕೃಷಿ ಉತ್ಪನ್ನಕ್ಕೆ ಒಳ್ಳೆ ಬೆಲೆ ಸಿಗಲಿಲ್ಲ ಅಥವಾ ಮಾರಾಟವೇ ಆಗಲಿಲ್ಲ ಎಂದು ರೈತರು ಹತಾಶರಾಗಬೇಕಿಲ್ಲ. ಇನ್ನೂ ಕೆಲ ಕಾಲ ಅಥವಾ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬರುವವರೆಗೂ ಕೃಷಿ ಉತ್ಪನ್ನವನ್ನು ಉಗ್ರಾಣದಲ್ಲಿಯೇ ಮತ್ತಷ್ಟು ದಿನ ಇಡಬಹುದು.

ತುರ್ತಿಗೆ ಹಣ ಲಭ್ಯ
ಆದರೆ, ತುರ್ತಾಗಿ ಹಣವೇನಾದರೂ ಬೇಕಿದ್ದರೆ ಗೋದಾಮಿನಲ್ಲಿರುವ ಕೃಷಿ ಉತ್ಪನ್ನಗಳನ್ನೇ ಖಾತರಿಯಾಗಿ ನೀಡಿ ಬ್ಯಾಂಕ್ಗಳಿಂದ ಸಾಲ ಪಡೆಯಬಹುದು. ನಂತರ ಸೂಕ್ತ ಸಮಯದಲ್ಲಿ ಬೆಲೆ ಏರಿಕೆಯಾಗಿದ್ದನ್ನು ನೋಡಿಕೊಂಡು ಮಾರಾಟ ಮಾಡಬಹುದು. ಇದರ ಹಣ ರೈತರ ಖಾತೆಗೆ ಜಮಾ ಆಗುವಾಗಲೇ ಈ ಕೃಷಿ ಉತ್ಪನ್ನ ಆಧರಿಸಿ ಪಡೆದಿದ್ದ ಸಾಲ ಮತ್ತು ಬಡ್ಡಿ ಬ್ಯಾಂಕ್ಗೆ ಜಮಾ ಆಗುತ್ತದೆ.

ವಿವಾದ ಇತ್ಯರ್ಥ ಹೇಗೆ?
ಆನ್ಲೈನ್ ಮಾರಾಟ ವೇದಿಕೆಯ ಮೂಲಕ ಉತ್ಪನ್ನಗಳು ಮಾರಾಟವಾಗುವ ಹಂತದಲ್ಲಿ ದರ ನಿಗದಿಪಡಿಸುವುದು, ಉತ್ಪನ್ನಗಳ ಗುಣಮಟ್ಟ, ತೂಕ, ಹಣ ಪಾವತಿ ಮುಂತಾದ ವಿಷಯಗಳ ಬಗ್ಗೆ ಉದ್ಭವವಾಗುವ ವಿವಾದಗಳನ್ನು ಮಾರುಕಟ್ಟೆ ಸಮಿತಿ ಹಂತದಲ್ಲಿಯೇ ಇತ್ಯರ್ಥಗೊಳಿಸಲು ‘ವಿವಾದ ಇತ್ಯರ್ಥ ಸಮಿತಿ’ಯನ್ನೂ ರಚಿಸಲಾಗಿದೆ. ರೈತರು ಅಥವಾ ವರ್ತಕರು ಸಮಸ್ಯೆಗಳ ಬಗ್ಗೆ ಸಮಿತಿಗೆ ದೂರು ನೀಡಿ ಸಮರ್ಪಕ ಪರಿಹಾರ ಪಡೆದುಕೊಳ್ಳಬಹುದು.

ವರ್ತಕರಿಗೆ ಒಂದೇ ಲೈಸನ್ಸ್
ವರ್ತಕರು ಒಂದೇ ಲೈಸನ್ಸ್ ಪಡೆದು ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳ ಖರೀದಿಯಲ್ಲಿ ಭಾಗವಹಿಸಲೂ ಈಗ ಅವಕಾಶ ಕಲ್ಪಿಸಲಾಗಿದೆ.

ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ಅಥವಾ ಅವರಿಂದ ಅಧಿಕಾರ ಪಡೆದ ಅಧಿಕಾರಿ ವರ್ತಕರಿಗೆ ಲೈಸನ್ಸ್ ನೀಡಲು ಅವಕಾಶ ಕಲ್ಪಿಸಿ ಶಾಸನಕ್ಕೆ ತಿದ್ದುಪಡಿಯನ್ನೂ ಮಾಡಲಾಗಿದೆ.

ಆನ್ಲೈನ್ ಮಾರುಕಟ್ಟೆ ವೇದಿಕೆಯ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಹಾಗೂ ‘ಎನ್ಸ್ಪಾಟ್‘ ಪಾಲುದಾರಿಕೆಯಲ್ಲಿ ‘ರಾಷ್ಟ್ರೀಯ ಇ–ಮಾರ್ಕೆಟ್ ಸರ್ವಿಸಸ್ ಸಂಸ್ಥೆ’ಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯಲ್ಲಿ ವರ್ತಕರು ತಮ್ಮ ಹೆಸರು ನೋಂದಾಯಿಸಬಹುದು. ಆನ್ಲೈನ್ ಮಾರಾಟ ವೇದಿಕೆಯಲ್ಲಿ ವರ್ತಕರು ತಾವಿರುವ ಸ್ಥಳದಿಂದಲೇ ಉತ್ಪನ್ನಗಳ ಗುಣಲಕ್ಷಣಗಳ ಮಾಹಿತಿಯನ್ನು ಪರಿಶೀಲಿಸಿ ಆನ್ಲೈನ್ನಲ್ಲಿ ಬೆಲೆ ನಮೂದಿಸಬಹುದು. ನಿಗದಿತ ಸಮಯದ ನಂತರ ಉತ್ಪನ್ನಕ್ಕೆ ನೀಡಿರುವ ಅತಿ ಹೆಚ್ಚಿನ ಬೆಲೆ ಹಾಗೂ ವರ್ತಕರ ವಿವರಗಳು ಆನ್ಲೈನ್ ವೇದಿಕೆಯಲ್ಲಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ.

ಒಂದು ವೇಳೆ ಆನ್ಲೈನ್ ಮಾರಾಟ ಫಲಕದಲ್ಲಿ ನೀಡಿದ ಗುಣಲಕ್ಷಣಗಳಿಗೂ, ಭೌತಿಕವಾಗಿ ಉತ್ಪನ್ನಗಳನ್ನು ಹಸ್ತಾಂತರ ಮಾಡುವಾಗ ಗುಣಮಟ್ಟದ ವ್ಯತ್ಯಾಸಗಳು ಕಂಡು ಬಂದರೆ ಸಂಬಂಧಪಟ್ಟವರು ನಷ್ಟವನ್ನು ತುಂಬಿಕೊಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಉತ್ಪನ್ನಗಳು ವಿಲೇವಾರಿಯಾಗುವವರೆಗೂ ದಲ್ಲಾಲಿಗಳು ಅಥವಾ ಉಗ್ರಾಣ ನಿರ್ವಹಣಾ ಸಂಸ್ಥೆಗಳು ಸಂದರ್ಭಕ್ಕೆ ಅನುಸಾರವಾಗಿ ಸಂರಕ್ಷಣೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.

ಉತ್ಪನ್ನ ಸ್ವೀಕಾರ ಹೇಗೆ?
ದರ ನಿಗದಿಪಡಿಸುವ ಪ್ರಕ್ರಿಯೆ ಬಳಿಕ ರೈತರಿಗೆ ಹಣ ಪಾವತಿಯಾಗಿರುವ ವಿಷಯ ಖಚಿತಪಡಿಸಿಕೊಂಡ ನಂತರವೇ ದಲ್ಲಾಲರು ಖರೀದಿದಾರರಿಗೆ ಉತ್ಪನ್ನಗಳನ್ನು ಹಸ್ತಾಂತರಿಸುತ್ತಾರೆ. ಈ ಸಂದರ್ಭದಲ್ಲಿ ಖರೀದಿದಾರರು ಇಚ್ಛಿಸಿದರೆ ಉತ್ಪನ್ನಗಳ ತೂಕವನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು. ಇಲ್ಲದಿದ್ದರೆ ಮಾರಾಟ ಪೂರ್ವದ ತೂಕದಂತೆಯೇ ಉತ್ಪನ್ನಗಳನ್ನು ಖರೀದಿದಾರರು ಪಡೆಯಬಹುದು.

ಉತ್ಪನ್ನಗಳ ಖರೀದಿ ನಂತರ ವರ್ತಕರು ತಮ್ಮ ಲೈಸನ್ಸ್ ದಾಖಲಾತಿಯೊಂದಿಗೆ ದಲ್ಲಾಲರ ಅಂಗಡಿಯಲ್ಲಿ ಉತ್ಪನ್ನಗಳನ್ನು ಪರಿಶೀಲಿಸಿ ಪಡೆದುಕೊಳ್ಳಬಹುದು ಅಥವಾ ತಮ್ಮ ಏಜೆಂಟರಿಗೆ ಅಧಿಕಾರ ಪತ್ರ ನೀಡಿ ದಲ್ಲಾಲರಿಂದ ಉತ್ಪನ್ನಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು.

ಆನ್ಲೈನ್ ವಹಿವಾಟು ವೈಖರಿ
* ರೈತರು ಮಾರಾಟಕ್ಕಿಡಲಿರುವ ಕೃಷಿ ಉತ್ಪನ್ನಗಳ ವಿವರಗಳನ್ನು ಎಪಿಎಂಸಿ ಪ್ರವೇಶ ದ್ವಾರದಲ್ಲಿಯೇ ಪ್ರತ್ಯೇಕವಾಗಿ ದಾಖಲಿಸಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳುವುದು

* ದಲ್ಲಾಲರ ಅಂಗಡಿ ಮುಂದೆ ಕೃಷಿ ಉತ್ಪನ್ನವನ್ನು ಇಳಿಸುವುದು

* ದಲ್ಲಾಲರು ಆ ಕೃಷಿ ಉತ್ಪನ್ನಗಳು ಸಂಗ್ರಹವಾಗಿದ್ದನ್ನು ದಾಖಲಿಸಿಕೊಳ್ಳುವುದು

* ಕೃಷಿ ಉತ್ಪನ್ನಗಳನ್ನು ಪ್ರಾಂಗಣದಲ್ಲಿ ರಾಶಿ ಹಾಕುವುದು ಮತ್ತು ಉತ್ಪನ್ನದ ಸ್ಯಾಂಪಲ್ (ಮಾದರಿ) ಪ್ರದರ್ಶಿಸುವುದು

* ಪ್ರವೇಶ ದ್ವಾರದಲ್ಲಿ ನೀಡಿದ ವಿಶಿಷ್ಟ ಗುರುತಿನ ಸಂಖ್ಯೆಗೆ ಅನುಗುಣವಾಗಿ ಕೃಷಿ ಉತ್ಪನ್ನಗಳ ನಿರೀಕ್ಷಿತ ಧಾರಣೆಯನ್ನು ವಿದ್ಯುನ್ಮಾನ ವ್ಯವಸ್ಥೆ ಮೂಲಕ ಆನ್ಲೈನ್ ಮಾರುಕಟ್ಟೆಗೆ ದಾಖಲಿಸುವುದು

* ಮಾರಾಟಕ್ಕಿಟ್ಟ ಕೃಷಿ ಉತ್ಪನ್ನಕ್ಕೆ ಆನ್ಲೈನ್ ವ್ಯವಸ್ಥೆಯಡಿ ವರ್ತಕರಿಂದ ನಮೂದಾದ ಅತಿ ಹೆಚ್ಚಿನ ಧಾರಣೆಯ ಮಾಹಿತಿ ಪ್ರಕಟಣೆ, ರೈತರ ಮೊಬೈಲ್ ಫೋನ್ಗೆ ಎಸ್ಎಂಎಸ್ ರವಾನೆ

* ನಂತರ ವಿದ್ಯುನ್ಮಾನ ವ್ಯವಸ್ಥೆಯಡಿ ಕೃಷಿ ಉತ್ಪನ್ನವನ್ನು ತೂಕ ಮಾಡುವುದು

* ಆನ್ಲೈನ್ನಲ್ಲಿ ನಿಗದಿಯಾದ ಗರಿಷ್ಠ ಬೆಲೆ ರೈತರಿಗೆ ಒಪ್ಪಿಗೆಯಾದರೆ ಮಾರಾಟದ ರಶೀತಿ ಸಿದ್ಧಪಡಿಸುವುದು

* ನಂತರ ಖರೀದಿದಾರರು ಅಥವಾ ಅವರ ಪ್ರತಿನಿಧಿಯಾದ ದಲ್ಲಾಳರಿಂದ ಮಾರುಕಟ್ಟೆ ಸಮಿತಿಗೆ ಹಣ ಪಾವತಿ

* ರೈತರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ

* ಹಣ ಪಾವತಿಯಾಗಿದ್ದಕ್ಕೆ ರೈತರಿಂದ ರಶೀದಿ/ಸ್ವೀಕೃತಿ ಪತ್ರ ಪಡೆಯುವುದು

* ಅಂತಿಮವಾಗಿ ಮಾರಾಟವಾದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಹೊರ ಹೋಗಿದ್ದನ್ನು ದಾಖಲಿಸಿಕೊಂಡು ಒಟ್ಟು ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸುವುದು.

ವ್ಯವಸ್ಥೆಯಲ್ಲಿ ಭಾಗೀದಾರರು
ಕರ್ನಾಟಕ ಸರ್ಕಾರದ ಕೃಷಿ ಮಾರುಕಟ್ಟೆ ಸಚಿವಾಲಯದ ಮಾರ್ಗದರ್ಶನದಲ್ಲಿ ಆರಂಭಗೊಂಡಿರುವ ‘ಕೃಷಿ ಉತ್ಪನ್ನಗಳ ಆನ್ಲೈನ್ ಮಾರುಕಟ್ಟೆ’ ವ್ಯವಸ್ಥೆಯಲ್ಲಿ ಇನ್ನೂ ಎರಡು ಸಂಸ್ಥೆಗಳು ಭಾಗಿಯಾಗಿವೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮತ್ತು ರಾಷ್ಟ್ರೀಯ ಇ ಮಾರ್ಕೆಟ್ ಸರ್ವಿಸಸ್(ಆರ್ಇಎಂಎಸ್).

ಬದಲಾವಣೆಯ ಪರ್ವಕ್ಕೆ ನಾಂದಿ
‘ಮಾರುಕಟ್ಟೆಯ ಸಾಮರ್ಥ್ಯ, ದಕ್ಷತೆ ಹೆಚ್ಚಿಸುವುದು ಏಕೀಕೃತ (ಆನ್ಲೈನ್) ಮಾರುಕಟ್ಟೆಯ ಉದ್ದೇಶ. ಏಕೀಕೃತ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ವರ್ತಕರಿಗೆ ಪಾಲ್ಗೊಳ್ಳಲು ಅವಕಾಶವಾಗಲಿದೆ. ಜತೆಗೆ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲೂ ಸಾಧ್ಯವಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ರೈತರು, ವರ್ತಕರು, ಗ್ರಾಹಕರು ಸೇರಿದಂತೆ ಪ್ರತಿಯೊಬ್ಬರಿಗೂ ಲಾಭವಾಗುತ್ತದೆ’ ಎನ್ನುತ್ತಾರೆ ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಇ– ಮಾರುಕಟ್ಟೆ ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಆರ್. ಮನೋಜ್.

‘ಮಾರಾಟ ಮಾಡಿದ ಕೃಷಿ ಉತ್ಪನ್ನದ ಹಣ ಬ್ಯಾಂಕ್ ಖಾತೆಗೇ ನೇರ ಜಮಾ ಆಗುವುದರಿಂದ ರೈತರನ್ನು ಆದಾಯ ತೆರಿಗೆ ವ್ಯಾಪ್ತಿಗೆ ಸೇರಲಿಸಲಾಗುತ್ತದೆ ಎನ್ನುವ ಮಾಹಿತಿ ತಪ್ಪು. ಕೃಷಿ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ ಎಂದು ಆದಾಯ ತೆರಿಗೆ ಇಲಾಖೆಯೇ ಸ್ಪಷ್ಟಪಡಿಸಿದೆ. ಆದ್ದರಿಂದ, ರೈತರು ಆತಂಕ ಪಡಬೇಕಾಗಿಲ್ಲ. ಪ್ರಸಕ್ತ ಸಾಲಿನ ಅಂತ್ಯಕ್ಕೆ ರಾಜ್ಯದ ಕನಿಷ್ಠ 30 ಮಾರುಕಟ್ಟೆಗಳಲ್ಲಿ ‘ಆನ್ಲೈನ್ ಮಾರುಕಟ್ಟೆ’ ವ್ಯವಸ್ಥೆ ಜಾರಿಯಾಗಲಿದೆ. ರೈತರ ಸಬಲೀಕರಣ ಆಶಯದ ಈ ವ್ಯವಸ್ಥೆ ಈಗಿನ ಮಾರುಕಟ್ಟೆಯಲ್ಲಿ ತೀವ್ರಗತಿಯ ಬದಲಾವಣೆಗಳನ್ನು ತರಲಿದೆ’ ಎಂದು ಮನೋಜ್ ಆಶಾವಾದ ವ್ಯಕ್ತಪಡಿಸುತ್ತಾರೆ.

ನೇರ ಹಣ ಪಾವತಿ
ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಮುಗಿದ ತಕ್ಷಣವೇ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸುವುದು ಆನ್ಲೈನ್ ಮಾರುಕಟ್ಟೆಯ ಮತ್ತೊಂದು ವಿಶೇಷ.

ಮಾರುಕಟ್ಟೆಗೆ ಉತ್ಪನ್ನಗಳನ್ನು ತಂದಾಗ ಪ್ರವೇಶ ದ್ವಾರದಲ್ಲಿ ರೈತರ ಹೆಸರು, ವಿಳಾಸ, ಮೊಬೈಲ್ ದೂರವಾಣಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಶಾಖೆಯ ‘ಐಎಫ್ಎಸ್ಸಿ’ ಕೋಡ್, ಕೃಷಿ ಉತ್ಪನ್ನದ ಹೆಸರು ಮತ್ತು ಪ್ರಮಾಣ ಮೊದಲಾದ ವಿವರಗಳನ್ನು ಪೂರ್ಣವಾಗಿ ದಾಖಲಿಸಿಕೊಂಡು ವಿಶೇಷ ಸಂಕೇತದ ‘ಲಾಟ್’ ಸಂಖ್ಯೆ ನೀಡಲಾಗುತ್ತದೆ.

ರೈತರು ವಿಶೇಷ ಸಂಕೇತದ ‘ಲಾಟ್’ ಸಂಖ್ಯೆಯ ಚೀಟಿಯೊಂದಿಗೆ ದಲ್ಲಾಲರ ಅಂಗಡಿಗೆ ಹೋಗಿ ಅಥವಾ ನೇರ ಖರೀದಿ ವ್ಯವಸ್ಥೆಯಲ್ಲಿ ಉತ್ಪನ್ನಗಳನ್ನು ಮಾರಾಟಕ್ಕೆ ಇಡಬಹುದು. ಇಂತಹ ಸಂದರ್ಭಗಳಲ್ಲಿ ಉತ್ಪನ್ನಗಳ ವಿಶ್ಲೇಷಣೆ ಮಾಡಿ ಅದರ ಎಲ್ಲ ಗುಣ ಲಕ್ಷಣಗಳ ವಿವರಗಳನ್ನು ಆನ್ಲೈನ್ ಮಾರಾಟ ವೇದಿಕೆಯಲ್ಲಿ (ಕೃಷಿ ಉತ್ಪನ್ನ ಆನ್ಲೈನ್ ಮಾರುಕಟ್ಟೆ ವೆಬ್ಸೈಟ್ನಲ್ಲಿ) ಪ್ರದರ್ಶಿಸಲಾಗುವುದು.

ಮಾರಾಟದ ಹಂತದಲ್ಲಿ ಉತ್ಪನ್ನಗಳ ತೂಕ, ಬೆಲೆ, ಹಣಪಾವತಿ ಮುಂತಾದ ವಿವರಗಳು ರೈತರ ಮೊಬೈಲ್ ಫೋನ್ಗೆ ‘ಎಸ್ಎಂಎಸ್’ ಮೂಲಕ ರವಾನೆಯಾಗುತ್ತವೆ. ಇದರಿಂದ ರೈತರು ಹೆಚ್ಚಿನ ಸಮಯವನ್ನು ಮಾರುಕಟ್ಟೆಯಲ್ಲಿ ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ.
ಬೆಲೆ ನಿಗದಿಪಡಿಸಿದ ನಂತರ ರೈತರ ಒಪ್ಪಿಗೆ ಪಡೆದು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಇದಕ್ಕೆ ಪೂರ್ವದಲ್ಲಿ ವರ್ತಕರ ಬ್ಯಾಂಕ್ ಖಾತೆಯಿಂದ ಉತ್ಪನ್ನದ ಮೌಲ್ಯ ಹಾಗೂ ನಿಯಮಾನುಸಾರ ಅವರು ಭರಿಸಬೇಕಾದ ವೆಚ್ಚಗಳನ್ನು ಆನ್ಲೈನ್ ವೇದಿಕೆ ನಿರ್ವಹಣಾ ಸಂಸ್ಥೆಯು ವರ್ಗಾಯಿಸಲಿದೆ.

ಕೃಷಿ ಉತ್ಪನ್ನ ಮಾರಾಟವಾಗಿದ್ದರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಉತ್ಪನ್ನ ಮಾರಾಟವಾದ ದಿನವೇ ಆನ್ಲೈನ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ.

‘ಪಾರದರ್ಶಕ ವ್ಯವಸ್ಥೆ’
‘ಆನ್ಲೈನ್ ವ್ಯವಸ್ಥೆ ಪಾರದರ್ಶಕತೆಯಿಂದ ಕೂಡಿದ್ದು, ರೈತರಿಗೂ ಉತ್ತಮ ಬೆಲೆ ದೊರೆಯಲು ಹೆಚ್ಚಿನ ಅವಕಾಶವಿದೆ. ತೂಕದಲ್ಲೂ ಮೋಸವಾಗುವುದು ತಪ್ಪುತ್ತದೆ ಮತ್ತು ರೈತರ ಬ್ಯಾಂಕ್ ಖಾತೆಗೆ ನೇರ ಹಣ ಬರುತ್ತದೆ. ಕೊಬ್ಬರಿಯ ಗ್ರೇಡಿಂಗ್ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುವುದಿಲ್ಲ. ಆದರೆ, ರೈತರು ತಮ್ಮ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತಿರುವ ವರ್ತಕರು ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಸುಳ್ಳು ಮಾಹಿತಿ ನೀಡಿ ಗೊಂದಲ ಮೂಡಿಸಲೆತ್ನಿಸುತ್ತಿದ್ದಾರೆ.

ದೇವರಾಜ್, ಅಧ್ಯಕ್ಷರು
ತುಮಕೂರು ಜಿಲ್ಲಾ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.