ಭಾನುವಾರ, ಜೂನ್ 13, 2021
22 °C

ಕೃಷಿ, ತೋಟಗಾರಿಕೆ: ಹೆಚ್ಚಿನ ಸಂಶೋಧನೆಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆ ಕೈಗೊಳ್ಳುವ ಮೂಲಕ ದೇಶದ ಆಹಾರ ಸಮಸ್ಯೆ ನೀಗಿಸುವತ್ತ ವಿಜ್ಞಾನಿಗಳು ಗಮನಹರಿಸಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಪಿ. ರಮೇಶ್ ಕರೆ ನೀಡಿದರು.ನಗರದ ವಾಣಿ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ `ಮಹಾವಿದ್ಯಾಲಯ ಮತ್ತು ವಸತಿ ನಿಲಯಗಳ ವಾರ್ಷಿಕೋತ್ಸವ~ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಚಿತ್ರದುರ್ಗ ಜಿಲ್ಲೆಯಲ್ಲಿ ನೀರಾವರಿ ಆಶ್ರಿತ ಕೃಷಿ ಕಡಿಮೆ. ಬಹುತೇಕ ರೈತರು ಮಳೆಯನ್ನಾಧರಿಸಿ ವ್ಯವಸಾಯ ಚಟುವಟಿಕೆ ನಡೆಸುತ್ತಿದ್ದಾರೆ. ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಹೊಂದುವ ಹೊಸ ತಳಿಗಳ ಆವಿಷ್ಕಾರ ಆಗಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳು ಪ್ರಯತ್ನ ನಡೆಸಬೇಕು ಎಂದ ತಿಳಿಸಿದರು.

ವಿದ್ಯಾರ್ಥಿಗಳಿಗೆ ಪದವಿಗಿಂತ ಹೆಚ್ಚಾಗಿ ಸಂಶೋಧನೆಯತ್ತ ಆಸಕ್ತಿ ತೋರುವಂತೆ ಪ್ರೇರೇಪಿಸಬೇಕು ಎಂದು ಉಪನ್ಯಾಸಕರಿಗೆ ಸಲಹೆ ನೀಡಿದರು.ತೋಟಗಾರಿಕೆ ಕ್ಷೇತ್ರದಲ್ಲಿ ಸತತ ಪ್ರಯೋಗ ನಡೆಸುವ ಪ್ರಗತಿಪರ ರೈತರಿರುವ ಹಿರಿಯೂರಿಗೆ ತೋಟಗಾರಿಕೆ ಕಾಲೇಜು ಮಂಜೂರಾಗಿರುವುದು ಈ ಭಾಗದ ರೈತರ ಮತ್ತು ವಿದ್ಯಾರ್ಥಿಗಳ ಪುಣ್ಯ. ಸಂಶೋಧನಾ ಕ್ಷೇತ್ರದಲ್ಲಿ ಈ ಕಾಲೇಜು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುವಂತಾಗಬೇಕು ಎಂದು ಆಶಿಸಿದರು.ವಿಜ್ಞಾನ ಮಹಾವಿದ್ಯಾಲಯದ ಕುಲಸಚಿವ ಡಾ.ಎ.ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿಪತ್ರ ಪಡೆಯಲು ಮುಂದಾಗದೆ, ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆಯ ಮೂಲಕ ಕಾಲೇಜಿನ ಘನತೆ ಎತ್ತಿ ಹಿಡಿಯುವಂತಹ ಸಾಧನೆ ತೋರಬೇಕು ಎಂದು ತಿಳಿಸಿದರು.ವ್ಯವಸ್ಥಾಪನಾ ಮಂಡಳಿ ಸದಸ್ಯ ಕೆ.ಎನ್. ಓಂಕಾರಪ್ಪ ಮಾತನಾಡಿದರು. ಮಹಾವಿದ್ಯಾಲಯದ ಡೀನ್ ಡಾ.ಪಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಡಿ. ತಿಮ್ಮಣ್ಣ, ಕೆ.ಬಿ. ವಿದ್ಯಾವತಿ, ತಿಪ್ಪೇಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.