ಶನಿವಾರ, ಜೂನ್ 19, 2021
23 °C

ಕೃಷಿ ಪಥದ ಯಶೋಗಾಥೆ

ಮುಕ್ತೇಶ್ವರ ಪಿ. ಕೂರಗುಂದಮಠ. Updated:

ಅಕ್ಷರ ಗಾತ್ರ : | |

ಕುಮುಧ್ವತಿ ಮತ್ತು ತುಂಗಭದ್ರೆ ಎರಡೂ ನದಿ ದಂಡೆಯ ಬದಿ ಕಣ್ಣಿಗೆ ಕಾಣುವಷ್ಟು ಭತ್ತದ ಗದ್ದೆಗಳು, ಮಧ್ಯೆ ಸುಂದರ ತೋಟ, ತೋಟದಲ್ಲಿ ಪಕ್ಷಿಗಳ ಕಲರವ...ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮುದೇನೂರು ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಇಂಥದ್ದೊಂದು ಸುಂದರ ದೃಶ್ಯ ಕಂಡು ಬಂತೆಂದರೆ ಅದು ಸುನಿತಾ ಶಂಕರಗೌಡ ಗಂಗನಗೌಡ್ರ ತೋಟ ಬಂತೆಂದೇ ಅರ್ಥ.೧೫ ವರ್ಷಗಳಿಂದ ಉಳುಮೆ ಕಾಣದ, ರಸಗೊಬ್ಬರ, ಕೀಟನಾಶಕಗಳ ರುಚಿಯನ್ನೂ ನೋಡದ ಈ ತೋಟ ಒಂದರ್ಥದಲ್ಲಿ ಕಾಡು ಇದ್ದಂತೆ. ಅಷ್ಟೇ ಏಕೆ, ಹಲವು ಬಗೆಯ ಪಶು ಪಕ್ಷಿಗಳ ತಾಣವೂ ಹೌದು! ಒಂದೆಡೆ ತೆಂಗು, ಅಡಿಕೆ, ಬಾಳೆ, ಹಲಸು, ಪಪ್ಪಾಯಿ, ಅಗಸೆ, ಶ್ರೀಗಂಧ, ಕಾಫಿ, ನೇರಳೆ, ಸೀಬೆ, ದಾಳಿಂಬೆ, ಮೆಣಸು, ಏಲಕ್ಕಿ, ಚಕ್ಕೆ, ತೇಗ, ಅಂಟುವಾಳ, ಅತ್ತಿ, ಆಲ, ರೈನ್ ಟ್ರೀ, ಹೊಂಗೆ, ಅರಿಶಿಣ, ಶುಂಠಿ, ಔಷಧಿ ಸಸ್ಯಗಳು, ಗಡ್ಡೆ ಗೆಣಸು...ಇನ್ನೊಂದೆಡೆ ಸುಬಾಬುಲ್, ಬಿದಿರು, ಲಿಂಬೆ, ದಾಳಿಂಬೆ, ೨೦ ತರಹದ ಹಣ್ಣು ಹಂಪಲ, ೫೦ ವಿಧದ ತರಕಾರಿ,೧೦ ವಿಧದ ಮಾವು -ಬೇವು, ೫ ತರಹದ ಹಲಸು, ಹುಣಸೆ... ಮತ್ತೊಂದೆಡೆ ತೆಂಗು, ಅಡಿಕೆ... ಹೀಗೆ ಕಣ್ಣು ಹಾಯಿಸಿ­ದ­ಲ್ಲೆಲ್ಲಾ ಅಚ್ಚರಿ ಪಡುವಷ್ಟು ವೈವಿಧ್ಯಮಯ ಬೆಳೆಗಳು.ಇಂಥದ್ದೊಂದು ಅಪೂರ್ವ ತೋಟಕ್ಕೆ ಕಾರಣರಾದವರು ಸುನಿತಾ. ಕೋಳಿ ಕೂಗುವ ಮೊದಲೇ ಎದ್ದು, ಯೋಗ ಧ್ಯಾನ ನೆರವೇರಿಸಿ ನಿಂಬೆ ಹಣ್ಣಿನ ಪಾನಕ ಹೀರಿ, ಚಳಿ- ಮಳೆ ಎನ್ನದೇ  ಸೈಕಲ್ ಏರಿ ತೋಟದತ್ತ ಮುಖ ಮಾಡಿದರೆ ಮುಗಿಯಿತು. ಪಿಕಾಸಿ, ಸಲಿಕೆ ಮತ್ತು ಕುರ್ಚಿಗೆ ಹಿಡಿದು ಎಲೆ ಗಿಡ ಗಂಟಿಗಳನ್ನು ಕೀಳುತ್ತಾ ತೋಟದಲ್ಲಿ ಸಂಜೆಯವರೆಗೂ ಇವರ ದುಡಿತ. ಇವರನ್ನು ನೋಡಿದರೆ ಎಂಥವರೂ ‘ಅಬ್ಬಾ! ಈಕೆ ಇಷ್ಟೆಲ್ಲ ಕೆಲಸ ಮಾಡುತ್ತಾರಾ?’ ಎಂದು ಅಚ್ಚರಿ ಪಡುವಷ್ಟು ದುಡಿಮೆ ಇವರದ್ದು.‘ನಮ್ಮದು ತೋಟವಲ್ಲ, ಕಾಡು ಇದ್ದ ಹಾಗೆ. ಪ್ರಾಣಿ ಪಕ್ಷಿಗಳು, ಮಂಗ, ಮೊಲ, ನರಿ, ನವಿಲು, ಇಲಿ, ಹಾವುಗಳಿಗೆ ಭಯವಿಲ್ಲ. ತಂಪಿನ ನಿದ್ದೆಗೆ ಬರವಿಲ್ಲ, ನಮ್ಮ ಜೀವನದಲ್ಲಿ ಕಾರು ಬೈಕುಗಳ ಹಾವಳಿಯಿಲ್ಲ, ಪೆಟ್ರೋಲ್, ಡೀಸೆಲ್ ಬೇಕಾಗಿಲ್ಲ. ಊಟಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ಹೊರಗಡೆಯಿಂದ ತರಬೇಕಾಗಿಲ್ಲ, ಹೆಗಲಿಗೆ ಸಾಲದ ಹೊರೆಯಿಲ್ಲ, ಎಲ್ಲದಕ್ಕೂ ಸಾಕಷ್ಟು ಸಮಯವಿದೆ’ ಎನ್ನುವುದು ಸುನಿತಾ ಅವರ ಹೆಮ್ಮೆಯ ನುಡಿ.ಬದಲಾವಣೆಯ ರೂವಾರಿ

ಶಿವಮೊಗ್ಗದ ಸುನಿತಾ ಶಂಕರಗೌಡ ಗಂಗನಗೌಡರನ್ನು ಮದುವೆಯಾದ ನಂತರ ಇವರ ತೋಟದಲ್ಲಿ ಇಂಥದ್ದೊಂದು ಬದಲಾವಣೆ ತಂದಿದ್ದಾರೆ. ಬೆಳಗಾವಿ ಸಂತೋಷ ಕೌಜಲಗಿ ಅವರ ಕನ್ನಡ ಅನುವಾದದ ‘ಫುಕುವೋಕರ್’ ಅವರ ‘ಒಂದು ಹುಲ್ಲಿನ ಕ್ರಾಂತಿ’ ಕೈಪಿಡಿ ಓದಿ ಪ್ರಭಾವಿತರಾದ ಈ ದಂಪತಿ ಸಹಜ ಕೃಷಿಯತ್ತ ಹೆಜ್ಜೆ ಹಾಕಿದ್ದಾರೆ.‘ನಮಗೆ ಲಾಭ ನಷ್ಟದ ಲೆಕ್ಕಾಚಾರವಿಲ್ಲ, ದಣಿದು ಬಂದವರು ಇಲ್ಲಿ ವಿಶ್ರಮಿಸಿ ‘ಭಾಳ ಚೊಲು ಮಾಡೀರಿ’ ಅಂದರೆ ಸಾಕು, ನಮ್ಮ ಬದುಕು ಧನ್ಯ’ ಎನ್ನುತ್ತಾರೆ ಸುನಿತಾ.‘ನಾವು ಬದುಕುವ ರೀತಿ ಪರಿಸರಕ್ಕೆ ಘಾಸಿ ಮಾಡಕೂಡದು. ಪರಿಸರ ಪೂರಕ ಜೀವನ ನಡೆಸಬೇಕು. ಅರಣ್ಯ ಪ್ರದೇಶ ಈಗ ನಶಿಸುತ್ತಿವೆ. ಹಾಗಾಗಿ ಪಕ್ಷಿಗಳಿಗೆ ತಿನ್ನಲು ಬೀಜಗಳಾಗಲೀ, ಹಣ್ಣು ಹಂಪಲಾಗಲೀ ಸಿಗುತ್ತಿಲ್ಲ. ಆದ್ದರಿಂದ ಪೇರಲ ಹಣ್ಣು ಬಿಟ್ಟಾಗ ಹಲವು ಹಕ್ಕಿಗಳು ಇಲ್ಲಿಗೆ ಬರುತ್ತವೆ. ನದಿಯೂ ಹತ್ತಿರ ಇರುವುದರಿಂದ ಅಪರೂಪದ ಕೊಕ್ಕರೆಗಳು ಕಾಣಸಿಗುತ್ತವೆ. ನವಿಲುಗಳು ಹುಳ ಹುಪ್ಪಡಿ ತಿನ್ನಲು ಬರುತ್ತವೆ. ಇನ್ನು ತರಕಾರಿ ಹಾಕಿದರೆ ಶಂಖದ ಹುಳುಗಳು ಹೆಚ್ಚು. ತೋಟ ತಂಪಾದಾಗ ಅವು ಹೊರಗೆ ಬರುತ್ತವೆ. ಬೇಸಿಗೆಯಲ್ಲಿ ಭೂಮಿಯೊಳಗೆ ಹೋಗುತ್ತವೆ. ಆದ್ದರಿಂದ ನಮ್ಮ ತೋಟ ಪಶು ಪಕ್ಷಿಗಳ, ಹುಳು ಹುಪ್ಪಡಿಗಳ ತಾಣ ಎಂದೂ ಹೇಳಬಹುದು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುನಿತಾ.ಎರಡು ಅಡಿಕೆ ಸಾಲಿನಲ್ಲಿ ತೆಂಗಿನ ಚಪ್ಪರ ಹಾಕಿಕೊಂಡಿದ್ದಾರೆ. ಗೋಬರ್ ಗ್ಯಾಸ್‌ ಅಥವಾ ಕಟ್ಟಿಗೆ ಹಚ್ಚಿ ಅಡುಗೆ ಮಾಡುತ್ತಾರೆ. ಅಡುಗೆಗೂ ಅವರೇ ಬೆಳೆಯುವ ತೆಂಗಿನ ಎಣ್ಣೆ ಬಳಸುತ್ತಾರೆ. ಭರಣಿ, ಪಗಡ, ಮಣ್ಣಿನ ಪಾತ್ರೆಗಳನ್ನು ಬಳಸುತ್ತಾರೆ. ಬೆಳಿಗ್ಗೆ ಹಣ್ಣುಗಳನ್ನು ತಿಂದು ರಾಗಿ ಗಂಜಿ ಕುಡಿಯುತ್ತಾರೆ. ಎಲ್ಲವೂ ಅಲ್ಲಿಯೇ ಸಿಗುವ ಕಾರಣ, ಹೊರಗಿನ ಗೊಡವೆ ಇವರಿಗಿಲ್ಲ.೧೧ ಗಂಟೆಗೆ ಊಟ ಮಾಡಿ ಬಿಟ್ಟರೆ ಮತ್ತೆ ಸಂಜೆ ೬ ಗಂಟೆಗೆ ಇವರ ಊಟ. ಹಬ್ಬ ಹರಿದಿನ ನೆಂಟರು ಬಂದರೆ ಊರಿನ ಮನೇಲಿ ಇವರ ಅಡುಗೆ. ಇಷ್ಟವಾದದ್ದನ್ನು ಓದುತ್ತಾ, ಹಾಡುತ್ತಾ ಪರಿಸರದೊಂದಿಗೆ ಕಾಲ ಕಳೆಯುತ್ತಾರೆ. ಓಡಾಟಕ್ಕೆ ಇವರ ಬಳಿ ೬ ಸೈಕ್ಲಲುಗಳು, ಕುದುರೆ ಇದೆ.ಅಂದ ಹಾಗೆ, ಮುದೇನೂರಿನಲ್ಲಿ ಕಾರುಗಳು, ಬೈಕು, ಟ್ರ್ಯಾಕ್ಟರ್‌ಗಳು ತುಂಬಿವೆ. ಇವರ ಮನೆಯಲ್ಲಿ ೨೦ ವರ್ಷಗಳಿಂದ ಮೊಬೈಲ್‌ ರಿಂಗ್‌ ಟೋನ್‌, ಟಿ.ವಿ, ಮಿಕ್ಸರ್ ಸಪ್ಪಳ ಇಲ್ಲ. ಮನೆ ತುಂಬ ಸಾವಯವ ಬೆಲ್ಲದ ಪೆಂಟಿಗಳು, ಉಪ್ಪಿನಕಾಯಿ ತುಂಬಿದ ಡಬ್ಬಿಗಳು ಕಾಣುತ್ತವೆ. ಪ್ರತಿ ಭಾನುವಾರ ರಾಣೆಬೆನ್ನೂರು ದೊಡ್ಡಪೇಟೆ ಸಂತೆಗೆ ತೆರಳಿ ತರಕಾರಿ ಮಾರಾಟ ಮಾಡುತ್ತಾರೆ. ‘ರಾಜು ಟೈಟಸ್ ಅನ್ನುವವರ ಬಳಿ ಕೃಷಿ ತರಬೇತಿಗೆ ಪಡೆದ ಮೇಲೆ ಉಳುಮೆ ಮಾಡದೇ ಬೀಜಗಳನ್ನು ಚೆಲ್ಲುತ್ತಿದ್ದೇವೆ. ಅಲಸಂದೆ, ತೊಗರಿ, ಹೆಸರು, ಅವರೆ, ಉದ್ದು, ಮಡಕೆ ಬೀಜ ಹಾಕಿ ಮಲ್ಚಿಂಗ್ ಮಾಡುತ್ತೇವೆ. ಸಹಜ ಕೃಷಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡುತ್ತಾ, ಧಾನ್ಯಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಿದ್ದೇವೆ’ ಎನ್ನುತ್ತಾರೆ ಸುನಿತಾ. ಸಂಪರ್ಕಕ್ಕೆ 9964829336

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.