ಬುಧವಾರ, ಜನವರಿ 22, 2020
20 °C

ಕೃಷಿ ಭೂಮಿಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯದಲ್ಲಿರುವ 48 ಸಾವಿರ ದೇವದಾಸಿ ಮಹಿಳೆಯರಿಗೆ ವ್ಯವಸಾಯ ಮಾಡಲು ತಲಾ 5 ಎಕರೆ ಕೃಷಿಭೂಮಿ ನೀಡಬೇಕು ಎಂದು ಒತ್ತಾಯಿಸಿ ಮಹಿಳಾ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆಯ ಕಾರ್ಯಕರ್ತರು ಸುವರ್ಣ ವಿಧಾನಸೌಧದ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು.ಕೃಷಿಭೂಮಿ ಹೊಂದಿರುವ ದೇವ­ದಾಸಿ ಮಹಿಳೆಯರಿಗೆ ಡಾ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವತಿಯಿಂದ ಕೊಳವೆ ಬಾವಿಯಯ ಸೌಲಭ್ಯ ಒದಗಿಸ­ಬೇಕು. 45 ವರ್ಷ ಮೇಲ್ಪಟ್ಟಿರುವ ದೇವದಾಸಿ ಮಹಿಳೆಯರಿಗೆ ಮಾಸಿಕ ಮಾಸಾಶನ­ವನ್ನು ₨2000 ಗೆ ಹೆಚ್ಚಿಸ­ಬೇಕು. ಸರ್ಕಾರಿ ಯೋಜನೆಗಳಿಂದ ಪಡೆದಿರುವ ಮನೆಗಳ ದುರಸ್ತಿಗೊಳಿಸ­ಬೇಕು. ಸಣ್ಣ ಉದ್ಯೋಗ ಹಾಗೂ ಕೃಷಿಗಾಗಿ ಉಚಿತ ಸಾಲ ಸೌಲಭ್ಯ ಒದಗಿಸಬೇಕು. ಅಂತ್ಯೋ­ದಯ ಪಡಿತರ ಚೀಟಿ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ­ದರು.ಆಯುಷ್‌ ವೈದ್ಯರ ಆಗ್ರಹ

ನೋಂದಾಯಿತ ವೃತ್ತಿನಿರತ ಆಯುಷ್‌ ವೈದ್ಯರಿಗೆ ತುರ್ತು ಸಂದರ್ಭ­ಗಳಲ್ಲಿ ಆಲೋಪಥಿ ಔಷಧಿಗಳನ್ನು ಬಳಸಲು ಸರ್ಕಾರದಿಂದ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಭಾರ­ತೀಯ ಆಯುಷ್‌ ವೈದ್ಯರ ಒಕ್ಕೂಟದ ರಾಜ್ಯ ಘಟಕದ ಸದಸ್ಯರು ಸುವರ್ಣ ವಿಧಾನಸೌಧದ ಸಮೀಪ ಕೈಗೊಂಡಿ­ರುವ ಅನಿರ್ದಿಷ್ಟ ಅವಧಿ ಮುಷ್ಕರ ಸೋಮವಾರ ಪ್ರಾರಂಭವಾಯಿತು.ಆಯುಷ್‌ ವೈದ್ಯ ಪದ್ಧತಿಗಳ ಪಠ್ಯಕ್ರಮ ದೇಶದಲ್ಲಿ ಒಂದೇ ತೆರನಾಗಿದೆ. ಮಹಾರಾಷ್ಟ್ರ, ಗುಜರಾತ, ತಮಿಳುನಾಡು, ಪಂಜಾಬ್‌ ಸೇರಿದಂತೆ 12 ರಾಜ್ಯಗಳಲ್ಲಿ ಆಯುಷ್‌ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಆಲೋಪಥಿ ಔಷಧಿಗಳನ್ನು ಬಳಸಲು ಪರವಾನಿಗೆ ನೀಡಲಾಗಿದೆ. ಅದರಂತೆ ರಾಜ್ಯದ­ಲ್ಲಿಯೂ ನೀಡಬೇಕು ಎಂದು ಪ್ರತಿಭಟ­ನಾ­ಕಾರರು ಒತ್ತಾಯಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್‌ ವೈದ್ಯರನ್ನು ನೇಮಕ ಮಾಡಿ ಅವರನ್ನು ರಾಷ್ಟ್ರೀಯ ಆರೋಗ್ಯ ಯೋಜನೆಗಳ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಲೋಪಥಿ ವೈದ್ಯರ ಕೊರತೆ ಇದ್ದು, ಈ ಕೊರತೆ­ಯನ್ನು ನೀಗಿಸುವಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಆಯುಷ್‌ ವೈದ್ಯರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಆಲೋಪಥಿ ಔಷಧಿ­ಗಳನ್ನು ಬಳಸಲೇಬೇಕಾದ ಪರಿಸ್ಥಿತಿ ಇದೆ. ಈ ಅನಿವಾರ್ಯತೆ­ಯನ್ನು ಮನ­ಗಂಡು ಆಲೋಪಥಿ ಔಷಧಿಗಳನ್ನು ಬಳಸಲು ಅನುಮತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಯು.ಟಿ. ಖಾದರ್‌ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಆಯುಷ್‌ ವೈದ್ಯರ ಬೇಡಿಕೆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮೀಣಾಭಿ­ವೃದ್ಧಿ ಸಚಿವ ಎಚ್‌.ಕೆ. ಪಾಟೀಲ ಸಹ ಭೇಟಿ ನೀಡಿ ಮನವಿ ಸ್ವೀಕರಿಸಿದರು.ಒಕ್ಕೂಟದ ಅಧ್ಯಕ್ಷ ಡಾ. ಎನ್‌.ಎ. ಮಗದುಮ್‌, ಡಾ. ಮಹಾವೀರ ಹಾವೇರಿ, ಡಾ. ಸೋಮಶೇಖರ ಹುದ್ದಾರ, ಡಾ. ಆನಂದ ಕಿರಿಶಾಳ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ನೂರಾರು ವೈದ್ಯರು ಭಾಗವಹಿಸಿದ್ದರು.ಡಿಎಸ್‌ಎಸ್‌ ಒತ್ತಾಯ

ಸುವರ್ಣ ಸೌಧದ ಎದುರು ಬುದ್ಧ, ಬಸವ, ಅಂಬೇಡ್ಕರ್‌ ಪ್ರತಿಮೆಗಳನ್ನು ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ಸುವರ್ಣ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಮೂಢನಂಬಿಕೆ ಪ್ರತಿಬಂಧಕ ಮಸೂದೆಯನ್ನು ಕೂಡಲೇ ಜಾರಿಗೆ ತರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಶಿಷ್ಯವೇತನದ ದಿನಾಂಕವನ್ನು ಡಿ. 31ರ ವರೆಗೆ ಮುಂದುವರಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾನವಾಗಿ ಶಿಷ್ಯವೇತನ ಹಂಚಬೇಕು. ಏಕಗವಾಕ್ಷಿ ಕಾಯ್ದೆಯನ್ನು ಪರಿಣಾಮ­ಕಾರಿಯಾಗಿ ಅನುಷ್ಠಾನಗೊಳಿಸಬೇಕು. ಇದನ್ನು ಪರಿಣಾಮಕಾರಿ ಅನುಷ್ಠಾನ­ಗೊಳಿ­ಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜಾತಿ ಪದ್ಧತಿ ರದ್ದುಗೊಳಿಸಿ ಸಮಾನತೆಯ ಹಕ್ಕು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಗೌತಮ ಪಾಟೀಲ, ಕೆಂಪಣ್ಣ ಕಾಂಬಳೆ, ಸಿದ್ದಪ್ಪ ಕಾಂಬಳೆ, ಶಶಿ ಸಾಳ್ವೆ, ನಟರಾಜ ಮಾವುರಕರ, ಮನೋಹರ ಅಜ್ಜನಕಟ್ಟಿ, ಮಾರುತಿ ಕಾಂಬಳೆ, ಚಂದ್ರಕಾಂತ ತಳವಾರ, ರಮೇಶ ಕೋಚರಿಕರ, ಬಸವರಾಜ ತಳವಾರ, ಕಸ್ತೂರಿ ಶಹಾಬಂದರ, ಅರ್ಜುನ ದೊಡ್ಡಮನಿ, ಅಪ್ಪಾಸಾಹೇಬ ತಢಾಕೆ, ರಾಮಣ್ಣ ನೂಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸೇವೆ ಕಾಯಂಗೆ ಒತ್ತಾಯ

ಪೌರ ಸೇವಾ ಕಾರ್ಮಿಕರೆಂದು ಪರಿಗಣಿಸಿ ಕೋರ್ಟ್‌ ಆದೇಶವನ್ನು ಜಾರಿಗೆ ತಂದು ಸೇವೆ­ಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದ ಸದಸ್ಯರು ಸುವರ್ಣ ವಿಧಾನಸೌಧದ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು.ವಯೋಮಿತಿ ಮೀರಿರುವ ಆಯಾ­ಗಳಿಗೆ ತಲಾ ₨ 2 ಲಕ್ಷ ನೀಡಿ ಕೆಲಸ ಬಿಡಿಸಬಹುದು ಅಥವಾ ಅವರ ಹತ್ತಿರದ ಸಂಬಂಧಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಹುನಗುಂದ ತಾಲ್ಲೂಕಿನಲ್ಲಿ ವಜಾಗೊಂಡ ಆಯಾಗಳ ಈ ಅವಧಿಯನ್ನು ಸೇವಾವಧಿ ಎಂದು ಪರಿಗಣಿಸಿ ಪೂರ್ಣ ವೇತನ ನೀಡಬೇಕು. ಕಾರ್ಮಿಕ ಇಲಾಖೆಯ ಅಧಿಸೂಚನೆ­ಯಂತೆ ಕನಿಷ್ಠ ವೇತನ ₨ 8,000 ನೀಡಬೇಕು. ಬೇಸಿಗೆ ರಜೆಯ ಬಾಕಿ ವೇತನವನ್ನು ಕೊಡಬೇಕು. ಆಯಾಗಳಿಗೆ ಪ್ರತಿ ತಿಂಗಳು ವೇತನ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾ­ಕಾರರು ಒತ್ತಾಯಿಸಿದರು.ಮುಂದುವರಿದ ಪ್ರತಿಭಟನೆ

ರಾಜ್ಯದಲ್ಲಿ 1987ರಿಂದ 1995ರ ವರೆಗೆ ಆರಂಭವಾದ 274 ಅನುದಾನ­ರಹಿತ ಶಾಲೆಗಳನ್ನು ಅನುದಾನಕ್ಕೊಳ­ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವೇತನಾನುದಾನಕ್ಕೊಳಪಡುತ್ತಿರುವ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಹಾಗೂ ನೌಕರರ ಒಕ್ಕೂಟದ ಸದಸ್ಯರು ಸುವರ್ಣ ವಿಧಾನಸೌಧದ ಸಮೀಪ ನಡೆಸಿರುವ ಪ್ರತಿಭಟನೆ 7ನೇ ದಿನಕ್ಕೆ ಮುಂದುವರಿಯಿತು.

ಪ್ರತಿಕ್ರಿಯಿಸಿ (+)