ಭಾನುವಾರ, ಮಾರ್ಚ್ 7, 2021
22 °C

ಕೃಷಿ ಮಾಸ್ಟರ್ ಈ ಡಾಕ್ಟರ್!

ಪೂರ್ಣಿಮಾ ಕಾನಹಳ್ಳಿ Updated:

ಅಕ್ಷರ ಗಾತ್ರ : | |

ಕೃಷಿ ಮಾಸ್ಟರ್ ಈ ಡಾಕ್ಟರ್!

ಇವರು ಓದಿರುವುದು ಎಂ.ಬಿ.ಬಿ.ಎಸ್‌. ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗೂ ಉಚಿತ ಸೀಟ್ ದೊರಕಿತ್ತು. ವೈದ್ಯಕೀಯ ಕ್ಷೇತ್ರ‌ ಇವರ ಕಣ್ಣಮುಂದಿತ್ತು. ಆದರೆ ಇವರು ಆಯ್ದುಕೊಂಡದ್ದು ಕೃಷಿಕ್ಷೇತ್ರ, ಕೃಷಿಯಲ್ಲೀಗ ಈ ಡಾಕ್ಟರ್‌ ಮಾಸ್ಟರ್‌!ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಚೀಕನಹಳ್ಳಿಯ ಶ್ರೀನಂದಿ ಎಸ್ಟೇಟ್‌ನ ಎನ್.ಕೆ. ಪ್ರದೀಪ್‌ ಅವರಿಗೆ ತಂದೆಯ ಅಕಾಲಿಕ ಮರಣ ಕೃಷಿಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಾದರೂ ಇವರು ಮನಸ್ಸು ಮಾಡಿದ್ದರೆ ಡಾಕ್ಟರ್‌ ಆಗಬಹುದಿತ್ತು. ಪಿತ್ರಾರ್ಜಿತವಾಗಿ ಬಂದ ನೂರಾರು ಎಕರೆ ತೋಟದ ಮಾಲೀಕರಾಗಿರುವ ಇವರು,  ವೈದ್ಯಕೀಯ ವೃತ್ತಿಯಲ್ಲಿಯೇ ಮುಂದುವರೆದು ಮೇಲ್ವಿಚಾರಕರನ್ನಿಟ್ಟು ತೋಟ ಮಾಡಿಸಬಹುದಿತ್ತು. ಆದರೆ ನೂರಾರು ಜನರಿಗೆ  ಕೆಲಸ ನೀಡುವ ಸಾಮರ್ಥ್ಯ ಇರುವಾಗ ಬೇರೆ ಕ್ಷೇತ್ರದ ಹಂಗೇಕೆ ಎಂದು ಸಮಾಜಮುಖಿಯಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.ಕಾಫಿ, ಕಾಳು ಮೆಣಸು, ಭತ್ತ  ಪ್ರಮುಖ ಬೆಳೆಯಾಗಿ ಬೆಳೆದು ಅದರಿಂದ ಸಾಕಷ್ಟು ವರಮಾನ ಪಡೆಯುತ್ತಿದ್ದಾರೆ. ಆದರೆ ಇವರಿಗೆ ಸಮಗ್ರ ಕೃಷಿಯತ್ತ ಒಲವು. ಅದರಲ್ಲಿಯೇ ನಿರಂತರವಾಗಿ ಹೊಸತೇನಾದರೂ ಮಾಡುವ ಹಂಬಲ. ಹಾಗಾಗಿ ಯಾವುದೇ ಹೊಸ ತಳಿಗಳು, ಸಸ್ಯಗಳು ಬಂದರೂ ಮೊದಲು ತರಿಸಿ ಹಾಕುತ್ತಾರೆ.ಕಾಫಿಯಲ್ಲಿ ಕಾವೇರಿ ತಳಿ ಹೊಸದಾಗಿ ಪರಿಚಯಿಸಿದಾಗ ಇವರು ಪ್ರಾರಂಭಿಕ ಹಂತದಲ್ಲೇ ಚೆನ್ನಾಗಿ ಬೆಳೆದು ಸುತ್ತಮುತ್ತಲಿನ ತೋಟದವರಿಗೆ ‘ಸೀಡ್ ಮೆಟೀರಿಯಲ್’ ಒದಗಿಸಿಕೊಟ್ಟಿದ್ದಾರೆ. 2005ರಲ್ಲಿ ವೆನಿಲ್ಲಾ ಬೆಳೆ ಮಲೆನಾಡಿಗೆ ಇನ್ನೂ ಕಾಲಿಡುತ್ತಿದ್ದಾಗಲೇ ಅಧಿಕ ಪ್ರಮಾಣದಲ್ಲಿ ಬೆಳೆದು ಕೆ.ಜಿ. ಒಂದಕ್ಕೆ 3 ಸಾವಿರ ರೂಪಾಯಿಯಂತೆ ಲಾಭಗಳಿಸಿರುತ್ತಾರೆ. ಹಲವಾರು ಬೆಳೆಗಾರರಿಗೆ ವೆನಿಲ್ಲಾ ಬೀಳನ್ನು ನೀಡಿದ್ದಾರೆ.ಇಲ್ಲ ಎನ್ನುವುದು ಇಲ್ಲಿಲ್ಲ!

ಇವರ ತೋಟದಲ್ಲಿ ಇಲ್ಲ ಎನ್ನುವ ಬೆಳೆಯೇ ಇಲ್ಲ. ಕಿತ್ತಲೆ, ಅಡಿಕೆ, ಶುಂಠಿ, ಏಲಕ್ಕಿ, ಬಾಳೆ, ನಿಂಬೆ, ಸಿಟ್ರನೆಲ್ಲಾ ಲೆಮನ್ ಗ್ರಾಸ್‌ ಅನ್ನು ಸಂಸ್ಕರಿಸಿ ಎಣ್ಣೆ ತೆಗೆದಿದ್ದಾರೆ. ಸಿಕ್ವೆಡೋರ, ನೀಲಗಿರಿ, ಅಗರ್ ವುಡ್, ಮೆಕಡೋಮಿಯ ನಟ್ಸ್, ಹಲಸು, ಸಪೋಟ, ಮನೆಗೆ ಬೇಕಾದ ತರಕಾರಿಗಳು... ಹೀಗೆ ನೂರಾರು ಬಗೆಯ ಬೆಳೆಗಳು ಇಲ್ಲಿವೆ.ಪತಿಯ ಆಸಕ್ತಿಯಿಂದ ಪ್ರೇರಿತರಾದ ಇವರ ಪತ್ನಿ ಶ್ರೇಷ್ಠಾ ಕೂಡ 8 ಸಾವಿರ ಅಂಥೋರಿಯಂ ಬೆಳೆಸಿದ್ದಾರೆ. ಹೂಗಳನ್ನು ಬೆಂಗಳೂರಿನ ಹರಾಜು ಮಾರುಕಟ್ಟೆಗೆ ತಿಂಗಳಿಗೊಮ್ಮೆ ಕಳಿಸಿಕೊಡುತ್ತಾರೆ.ಹೈನುಗಾರಿಕೆಯಿಂದ ದೊರೆತ ಹಾಲನ್ನು ಸನಿಹದ ಡೈರಿಗೆ ಹಾಕುತ್ತಾರೆ. ಕೊಟ್ಟಿಗೆಯ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಸಿಕೊಳ್ಳುತ್ತಾರೆ. ನೀರಾವರಿಗಾಗಿ ಇರುವ ಕೆರೆಗಳಲ್ಲಿನ ಮೀನುಗಾರಿಕೆಯಿಂದಲೂ ಆದಾಯವಿದೆ.ದೇಶ ವಿದೇಶಗಳಲ್ಲಿ ಕೃಷಿ ಪ್ರವಾಸ ಮಾಡಿ, ಅಲ್ಲಿನ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಳವಡಿಸಿಕೊಂಡು ಹೊಸ ಆವಿಷ್ಕಾರಗಳೊಂದಿಗೆ ಹೆಚ್ಚು ಇಳುವರಿ ತೆಗೆಯುವ ಜಾಣ್ಮೆ ಇವರದ್ದು. ಇಸ್ರೇಲ್, ಶ್ರೀಲಂಕ, ಬ್ರೆಜಿಲ್, ಲಾವೂಸ್ ಇತ್ಯಾದಿ ದೇಶಗಳನ್ನು  ಸುತ್ತಾಡಿರುವುದರ ಫಲಶೃತಿಯನ್ನು ಇವರ ತೋಟದಲ್ಲಿ ಕಾಣಬಹುದು. ಹನಿನೀರಾವರಿ ಮುಖಾಂತರ ಗೊಬ್ಬರ ಕೊಡುವುದು, ಗನ್ ಸ್ಪ್ರೇ, ಯಾಂತ್ರೀಕರಣಕ್ಕೆ, ಕಾಫಿ ಪಲ್ಪ್ ಮಾಡಲು, ಪಲ್ಪರ್ ವಾಷರ್ , ಕಾಳುಮೆಣಸು ಬಿಡಿಸುವ ಯಂತ್ರ, ಸ್ಪ್ರೇ ಮಾಡಲು ಇವರಲ್ಲಿ ಆಧುನಿಕ ಯಂತ್ರಗಳಿವೆ.ಲ್ಲಿಯೂ ಡಾಕ್ಟರ್

ವೈದ್ಯರಾಗಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಮಾಡದಿದ್ದರೇನಂತೆ, ತೋಟದ ಕಾರ್ಮಿಕರಿಗೆ ಅಗತ್ಯವಿದ್ದಾಗ ಅವರಿಗೆ ಉಚಿತ ಚಿಕಿತ್ಸೆ ನೀಡು ತ್ತಾರೆ. ಹಲವಾರು ಬೆಳೆಗಳನ್ನು, ಹೊಸತನವನ್ನು ಹೊಂದಿರುವ ಇವರ ತೋಟ ಸುತ್ತ ಮುತ್ತಲಿನವರಿಗೆ ಅಧ್ಯಯನ ಕ್ಷೇತ್ರವೂ ಆಗಿದೆ. ‌ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ಇವರು ಬೆಳೆಗಾರರಿಗೆ ಪ್ಯಾಕೇಜ್ ತರುವಲ್ಲಿ ಸಾಕಷ್ಟು ನೆರವಾಗಿದ್ದಾರೆ. ಕೃಷಿಯಲ್ಲಿನ ಹಾಗೂ ಇವರ ಸಮಾಜಮುಖಿ ಚಟುವಟಿಕೆಗಳನ್ನು ಗುರುತಿಸಿ ಸಾಕಷ್ಟು ಪ್ರಶಸ್ತಿಗಳೂ ದೊರೆತಿವೆ.‘ಕೃಷಿಗೆ ಭವಿಷ್ಯವಿದೆ, ಆಯಾ ಪ್ರದೇಶದ ಸಾಂಪ್ರದಾಯಿಕ ಬೆಳೆಗೆ ಹೆಚ್ಚು ಒತ್ತುಕೊಡುವು ದಲ್ಲದೆ, ಬೇರೆ ಉಪಬೆಳೆಗಳನ್ನು ಸಮತೋಲನ ಮಾಡಿಕೊಂಡು ಬೆಳೆದರೆ ಕೃಷಿಯಲ್ಲಿ ಸುಸ್ಥಿರತೆ ಸಾಧಿಸಬಹುದು’ ಎನ್ನುತ್ತಾರೆ ಡಾ. ಪ್ರದೀಪ್. ಇವರ ಸಂಪರ್ಕಕ್ಕೆ 94481 06275.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.