ಶನಿವಾರ, ಜೂನ್ 19, 2021
21 °C

ಕೃಷ್ಣನ ಹೊಸ ಅವತಾರ!

ದೇವು ಪತ್ತಾರ Updated:

ಅಕ್ಷರ ಗಾತ್ರ : | |

ಸಿ.ಎಂ. ಎಂದರೆ ಮುಖ್ಯಮಂತ್ರೀನೇ ಆಗಬೇಕು ಅಂತೇನು ಇಲ್ಲ. ಸಿ.ಎಂ. ಅನ್ನುವುದಕ್ಕೆ ಬೇರೆ ಅರ್ಥಾನೂ ಇರಲಿಕ್ಕೆ ಸಾಧ್ಯ~ ಎಂದರು ಹಿರಿಯ ನಟ ಅವಿನಾಶ್. ಬೀದರ್ ನಗರದಲ್ಲಿ ನಡೆಯುತ್ತಿರುವ `ಕೃಷ್ಣ ಸನ್ ಆಫ್ ಸಿ.ಎಂ.~ ಚಿತ್ರೀಕರಣದ ಸಂದರ್ಭದಲ್ಲಿ ಮಾತಿಗಿಳಿದ ಅವರು, `ಬಹುತೇಕ ಚಿತ್ರಗಳಲ್ಲಿ ಇರುವ ಹಾಗೆ ಈ ಚಿತ್ರದಲ್ಲಿ ನನಗೆ ನೆಗೆಟಿವ್ ಪಾತ್ರ ಏನಿಲ್ಲ.ತನ್ನತನಕ್ಕಾಗಿ ಹುಡುಕಾಟ ನಡೆಸುತ್ತಿರುವ ನಾಯಕನ ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ~ ಎಂದರು. ಹಾಗಾದರೆ ಈ ಚಿತ್ರದಲ್ಲಿ ನೀವು `ಮುಖ್ಯಮಂತ್ರೀನಾ?~ ಎಂಬ ಪ್ರಶ್ನೆ ತೇಲಿ ಬಂತು. ಅದಕ್ಕೆ ಅವಿನಾಶ್ ಅವರು `ನಾನು ಸಿ.ಎಂ. ಆದರೆ, ಮುಖ್ಯಮಂತ್ರಿ ಅಲ್ಲ. ಸಿ.ಎಂ. ಅಂದರೆ ಮುಖ್ಯಮಂತ್ರಿ ಮಾತ್ರ ಅಂತ ಯಾಕೆ ಅಂದುಕೊಳ್ಳುತ್ತೀರಿ?~ ಮರುಪ್ರಶ್ನೆ ಹಾಕಿದರು.ಮಾಜಿ ಕೃಷಿ ಸಚಿವ ಹಾಲಿ ಶಾಸಕರಾದ ಬಂಡೆಪ್ಪಾ ಕಾಶೆಂಪೂರ್ ಅವರ ಮಹಲಿನಲ್ಲಿ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ನಿರ್ದೇಶಕ ಎಂ.ಎಸ್. ರಮೇಶ್ ಲವಲವಿಕೆಯಿಂದಲೇ ಓಡಾಡಿಕೊಂಡಿದ್ದರು. ಅವರಿಗಿದು ಹನ್ನೊಂದನೇ ಚಿತ್ರ. ಕಥೆ, ಚಿತ್ರಕತೆ, ಸಂಭಾಷಣೆ ಬರೆಯುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಮೇಶ್ ನಿರ್ದೇಶಕರಾಗಿ ಬಡ್ತಿ ಪಡೆದವರು.

 

ನಿರ್ಮಾಪಕ ತುಮಕೂರಿನ ಯೋಗೀಶ್ ಕೂಡ ನಿರ್ದೇಶಕ ರಮೇಶ್ ಅವರಂತೆ ರೈಟರ್ ಆಗಿ ಸಿನಿಮಾಕ್ಕೆ ಬಂದವರಂತೆ. ಹಾಗಾಗಿ ನಿರ್ಮಾಪಕರಿಗೆ ಕಥೆಯನ್ನು ವಿವರಿಸಿ ಶೂಟಿಂಗ್ ಬಗ್ಗೆ ನಿರ್ಧರಿಸುವುದು ಕಷ್ಟವಾಗಲಿಲ್ಲ ಎಂದರು ರಮೇಶ್.`ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಓಡಾಡಿ ಶೂಟಿಂಗ್ ಮಾಡಿದ ಅನುಭವ ಇದೆ. `ಹುಲಿಯಾ~ ಚಿತ್ರೀಕರಣಕ್ಕಾಗಿ ಸವದತ್ತಿಯವರೆಗೂ ಹೋಗಿ ಬಂದಿದ್ದೆವು. ಆದರೆ, ಬೀದರಿಗೆ ಬರುತ್ತಿರುವುದು ಮಾತ್ರ ಇದೇ ಮೊದಲು. ಲೋಕೇಶನ್ ಸೆಲೆಕ್ಷನ್‌ಗಾಗಿ ಬಂದಾಗಲೇ ಇಲ್ಲಿಯೇ ಶೂಟ್ ಮಾಡಬೇಕು ಅಂತ ನಿರ್ಧರಿಸಿದೆವು.ಕರ್ನಾಟಕದಲ್ಲಿ ಬೀದರಿಗಿಂತ ದೂರದ ಊರು ಮತ್ತೊಂದಿಲ್ಲ. ನಾನು ಕೆ.ವಿ.ರಾಜು ಅವರಿಗೆ ಅಸೋಸಿಯೇಟ್ ಆಗಿದ್ದಾಗಿನಿಂದಲೂ ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣ ನಡೆಸುವ ಆಸಕ್ತಿ ಬೆಳೆಸಿಕೊಂಡೆ. ಇಲ್ಲಿಯ ವಾತಾವರಣ ಚೆನ್ನಾಗಿದೆ. ಜನರಿಂದ ಒಳ್ಳೆಯ ಪ್ರೋತ್ಸಾಹ ಸಿಗುತ್ತಿದೆ. ಒಂದು ಸೂಪರ್‌ಹಿಟ್ ಸಿನಿಮಾ ಕೊಡುವ ಭರವಸೆ ಇದೆ~ ಎಂದು ನಿರ್ದೇಶಕ ರಮೇಶ್ ಪಟಪಟನೆ ವರದಿ ಒಪ್ಪಿಸಿದರು.ಇದುವರೆಗೆ 98 ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದೇನೆ. ಇನ್ನೆರಡಾದರೆ ನೂರಾಗುತ್ತೆ. ನಿರ್ದೇಶಕ ಓಂಪ್ರಕಾಶರಾವ್ ಧಾರಾವಾಹಿಗೆ ಸಂಭಾಷಣೆ ಬರೆಯಲು ಹಚ್ಚಿದರು. ಸಿನಿಮಾಗೆ ಬರೆಯುವಂತೆ ಮಾಡಿದವರು ಗುರುಗಳಾದ ಕೆ.ವಿ.ರಾಜು ಮತ್ತು ರಾಜಶೇಖರ್. ನಾನು ಬರೆದ ಡೈಲಾಗ್‌ಗಳನ್ನು ಪರ್ಫೆಕ್ಟ್ ಆಗಿ ಹೇಳಿ ಅದಕ್ಕೆ ಮೆರಗು ತಂದಿದ್ದಾರೆ.ಸಂಗೀತ ನಿರ್ದೇಶಕರು ಕೂಡ ನನ್ನ ಯಶಸ್ಸಿಗೆ ಕಾರಣ ಎಂದು ರಮೇಶ್ ವಿವರಿಸಿದರು.

`ಇದುವರೆಗೆ ನಾನು ನೋಡಿರುವ ಮತ್ತು ಮಾಡಿರುವ ಚಿತ್ರಗಳ ಪೈಕಿ ಇಂತಹ ವಿಭಿನ್ನ- ವಿಶಿಷ್ಟ ಚಿತ್ರ ಮತ್ತೊಂದಿಲ್ಲ~ ಎಂದು ಮಾತು ಆರಂಭಿಸಿದ ರಮೇಶ್ `ಐಡಿಂಟಿಟಿ -ತನ್ನತನ ಕಳೆದುಕೊಂಡು ಬದುಕೋದು ಎಷ್ಟು ಕಷ್ಟ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ~ ಎಂದರು.`ಇಡೀ ಮಾತಿನ ಭಾಗವನ್ನು ಬೀದರ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಶೇ. 60ರಷ್ಟು ಭಾಗದ ಶೂಟಿಂಗ್ ಇಲ್ಲಿಯೇ ನಡೆಸಲಾಗುತ್ತದೆ. ಬೀದರಿಗೆ ಹೊರಡುವಾಗ ಅಲ್ಲಿ `ಬಹಳ ಬಿಸಿಲು~ ಅಂತ ಹೆದರಿಸಿದ್ದರು. ಬೆಂಗಳೂರಿನ ಬಿಸಿಲಿಗೂ ಬೀದರಿನ ಬಿಸಿಲಿಗೂ ಅಂತಹ ವ್ಯತ್ಯಾಸ ಏನಿಲ್ಲ ಅನ್ನಿಸುತ್ತಿದೆ. ಬೆಂಗಳೂರಿನಲ್ಲಿ ಪ್ರೀತಿ ಕಮರ್ಷಿಯಲ್ ಆಗಿದೆ.

 

ಬೀದರಿನಲ್ಲಿ ಅದಿನ್ನೂ ಕರಪ್ಟ್ ಆಗಿಲ್ಲ. ಅದು ಆಗದೇ ಇರಲಿ ಅಂತ ಆಸೆ~ ಎಂದು ರಮೇಶ್ ಹೇಳಿದರು.ಮೈಸೂರು-ಬೆಂಗಳೂರಲ್ಲಿ ಫಿಲಂಸಿಟಿ ಆಗಬೇಕು ಎಲ್ಲರೂ ಮಾತನಾಡುತ್ತಾರೆ. ಆದರೆ, ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಸಿಗಬೇಕು ಅಂದರೆ ಈ ಭಾಗದಲ್ಲಿಯೇ ಒಂದು ಫಿಲಂ ಸಿಟಿ ಆರಂಭಿಸುವ ಅಗತ್ಯವಿದೆ. ಚಲನಚಿತ್ರ ಅಕಾಡೆಮಿ, ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಬರೀ ನಿರ್ದೇಶಕರು ಮಾತ್ರ ಮಾತನಾಡಿ ನಾಯಕನೇ ಸುಮ್ಮನಿದ್ದರೆ ಹೇಗೆ ಅಂತ ಅಂದುಕೊಂಡ ಅಜಯ್‌ರಾವ್, `ಸಮಾಜದಲ್ಲಿ ಯುವಕ ಎಷ್ಟು ಪವರ್‌ಫುಲ್ ಅಂತ ಈ ಚಿತ್ರದ ಪಾತ್ರದಲ್ಲಿ ತೋರಿಸಲಾಗುತ್ತದೆ~ ಎಂದು ಹೇಳಿ- `ಕೃಷ್ಣ~ ನನಗೆ ಲಕ್ಕಿ, ಹ್ಯಾಟ್ರಿಕ್ ಹೊಡೆಯೋಣ ಅಂತ ಈ ಟೈಟಲ್~ ಎಂದು ನಗೆ ಬೀರಿದರು. ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಮನುಷ್ಯ ಕೂಡ ಎಷ್ಟು ಇಂಪಾರ್ಟೆಂಟ್ ಅಂತ ತೋರಿಸ್ತಿವಿ.ಚಿತ್ರದ ನಾಯಕಿ ಡಾ. ಭಾರತಿ ಮಾತ್ರ ಮಾತಿಗಿಂತ ಮೌನವೇ ಲೇಸು ಎಂಬಂತೆ ಸುಮ್ಮನೆ ಕುಳಿತಿದ್ದರು. ಕೊನೆಗೆ `ನಾನು ಓದಿರೋದು ಎಂಬಿಬಿಎಸ್. ವೃತ್ತಿಯಿಂದ ಡಾಕ್ಟರ್. ಪ್ರವೃತ್ತಿಯಿಂದ ಆ್ಯಕ್ಟರ್. ಸಿನಿಮಾ ನನಗೆ ಫ್ಯಾಷನ್ ಅಲ್ಲ, ಪ್ಯಾಶನ್~ ಎಂದು ಉಲಿದರು. ನಾಯಕನ ತಾಯಿಯ ಪಾತ್ರದಲ್ಲಿ ಭವ್ಯಾ ನಟಿಸುತ್ತಿದ್ದಾರೆ.ಕಿರುತೆರೆ ರಂಗಭೂಮಿ ನಟಿ ಮಾಲತಿ ಸರದೇಶಪಾಂಡೆ, ರಂಗಾಯಣ ರಘು ಚಿತ್ರದಲ್ಲಿದ್ದಾರೆ. ಬೀದರ್ ನಗರದ ಕೋಟೆ, ಅಲಿ ಬರೀದ್ ಸ್ಮಾರಕದ ಮುಂಭಾಗ, ಚೌಬಾರ, ಎಸ್‌ಪಿ ಆಫೀಸ್, ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಆವರಣದಲ್ಲಿ ಚಿತ್ರೀಕರಣ ನಡೆಸಲಾಗಿದೆ.  

ಚಿತ್ರ: ಗುರುಪಾದಪ್ಪ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.