ಗುರುವಾರ , ಮೇ 13, 2021
19 °C

ಕೃಷ್ಣ ಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣ ಸಿ.ಎಂ. ಮಗ ಇರಬಹುದು. ಆದರೆ ಆ ಸಿ.ಎಂ ಚೀಫ್ ಮಿನಿಸ್ಟರ್ ಅಲ್ಲ. ಅವನು ಕಾಮನ್ ಮ್ಯಾನ್ ಆಗಿರಬಹುದು ಅಥವಾ ಕ್ರಿಮಿನಲ್ ಮೈಂಡ್ ಇರಬಹುದು.ಹೀಗೆ ಹೇಳಿದ್ದು `ಕೃಷ್ಣ ಸನ್ ಆಫ್ ಸಿ.ಎಂ~ ಚಿತ್ರದ ನಿರ್ದೇಶಕ ಎಂ.ಎಸ್.ರಮೇಶ್.  ಅಪ್ಪನ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಇಂಥ ಅಪ್ಪನಿಗೆ ಪುತ್ರನಾಗಿರುವುದು ನಟ ಅಜಯ್ ರಾವ್.`ಕೃಷ್ಣನ್ ಲವ್ ಸ್ಟೋರಿ~ ಜನಮನ ಗೆದ್ದಮೇಲೆ ಅಜಯ್‌ರಾವ್ ಜತೆಗೇ ಕೃಷ್ಣ ತಳುಕು ಹಾಕಿಕೊಂಡು ಬಿಟ್ಟ. ನಂತರ ಬಂದ `ಕೃಷ್ಣನ್ ಮ್ಯಾರೇಜ್ ಸ್ಟೋರಿ~ಯಲ್ಲೂ ಅಜಯ್‌ಗೆ ಕೃಷ್ಣ ನಂಟು. ಈಗ ಆ ಕೃಷ್ಣ ಸಿ.ಎಂ ಮಗ. ಹೀಗಾಗಿ ಅಜಯ್ ಮಟ್ಟಿಗೆ ದೇವರೊಬ್ಬನೇ ನಾಮಹಲವು ಎನ್ನಬಹುದೇನೋ.ಕಣ್ಣೀರು ಹಾಕುವ ಅಸಹಾಯಕ ಪಾತ್ರಗಳಲ್ಲೇ ನಟಿಸುತ್ತಿದ್ದ ಅಜಯ್‌ಗೆ ಇಲ್ಲಿ ವಿಭಿನ್ನ ಪಾತ್ರವಂತೆ. `ಎಷ್ಟೋ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರೂ ನಾಯಕನ ಅನುಭವ ನೀಡಿದ್ದು ಈ ಚಿತ್ರ~ ಎಂದರು ಅವರು. ಚಿತ್ರದಲ್ಲಿ ಸಾಮಾಜಿಕ ಜವಾಬ್ದಾರಿಯನ್ನೂ ಅವರು ಹೊರುತ್ತಾರಂತೆ. ಕತೆ ಶಕ್ತಿಶಾಲಿಯಾಗಿರುವುದಕ್ಕೆ ಅವರು ಹಿರಿಹಿರಿ ಹಿಗ್ಗಿದರು. ಈಗಾಗಲೇ ಚಿತ್ರದ ಮಾತಿನ ಭಾಗ ಮುಗಿದಿದೆ. ಹಾಡಿನ ಚಿತ್ರೀಕರಣ ಮುಗಿದರೆ ಚಿತ್ರಕ್ಕೆ ಕತ್ತರಿ ಪ್ರಯೋಗ ಆರಂಭವಾಗುತ್ತದೆ. ಅಂದಹಾಗೆ ಜೀವನದಲ್ಲಿ ಏನನ್ನೋ ಕಳೆದುಕೊಂಡ ಕೃಷ್ಣನದು ದೂರ ತೀರ ಯಾನ. ಅದಕ್ಕಾಗಿ ಆತ ಆಯ್ಕೆ ಮಾಡಿಕೊಳ್ಳುವುದು ದೂರ ತೀರದಷ್ಟೇ ದೂರವಿರುವ ಬೀದರ್ ಅನ್ನು. ಅಲ್ಲಿಗೆ ಚಿತ್ರದ ಕತೆ ಬೆಂಗಳೂರು ಬಿಟ್ಟು ಬೀದರ್‌ಗೆ ವರ್ಗವಾಗುತ್ತದೆ. ಬೀದರ್‌ನ ಪರಂಪರೆ, ಸುಂದರ ಭೂದೃಶ್ಯಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆಯಂತೆ.ಇದೇ ವೇಳೆ ಚಿತ್ರತಂಡ ಬೀದರ್ ಜನರ ಗುಣಗಾನದಲ್ಲಿ ತೊಡಗಿತು. ಅಲ್ಲಿ ಎಷ್ಟೇ ಬಿಸಿಲಿರಬಹುದು, ಆದರೆ ಅಲ್ಲಿನ ಜನ ಮಾತ್ರ ತಂಪು ತಂಪು ಎಂದು ಕೊಂಡಾಡಿತು. ಚಿತ್ರೀಕರಣಕ್ಕೆ ಸಹಕರಿಸಿದ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳನ್ನು ಸ್ಮರಿಸಿತು. ಒಟ್ಟು 21 ದಿನಗಳ ಕಾಲ ಅಲ್ಲಿ ಚಿತ್ರೀಕರಣ ನಡೆದಿದೆ.ಚಿತ್ರದ ಖಳನಾಯಕ ರಂಗಾಯಣ ರಘು. ಶೋಭರಾಜ್‌ಗೆ ನಾಯಕಿಯ ತಂದೆ ಪಾತ್ರ. ಇದೇ ತಿಂಗಳ ಹದಿನೈದರ ಹೊತ್ತಿಗೆ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡು ಚಿತ್ರ ಒಂದು ಹಂತಕ್ಕೆ ಬರಲಿದೆಯಂತೆ. ನಾಯಕಿ ಡಾ.ಭಾರತಿ, ನಿರ್ಮಾಪಕ ಯೋಗೀಶ್ ಹುಣಸೂರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.