ಸೋಮವಾರ, ಮಾರ್ಚ್ 1, 2021
29 °C
ಎಸ್‌.ಆರ್‌. ಹಿರೇಮಠ ವಾಗ್ದಾಳಿ

ಕೃಷ್ಣ ಸುಸಂಸ್ಕೃತ ಕ್ರಿಮಿನಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣ ಸುಸಂಸ್ಕೃತ ಕ್ರಿಮಿನಲ್‌

ರಾಮನಗರ: ‘ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಒಬ್ಬ ‘ಸುಸಂಸ್ಕೃತ (ಸೊಫಿಸ್ಟಿಕೇಟೆಡ್) ಕ್ರಿಮಿನಲ್‌’. ಅವರ ಬಳಿ ತರಬೇತಿ ಪಡೆದಿರುವ ಸಚಿವ ಡಿ.ಕೆ.ಶಿವ­ಕುಮಾರ್‌ ಕೂಡಾ ಅವರಂತೆಯೇ ಸುಶಿಕ್ಷಿತ ಕ್ರಿಮಿನಲ್‌’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆರೋಪಿಸಿದರು.ಬೆಂಗಳೂರು ಗ್ರಾಮಾಂತರ ಲೋಕ­ಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಪರ ಭಾನುವಾರ ರಾಮನಗರ­ದಲ್ಲಿ ಪ್ರಚಾರ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತ­ನಾಡಿ, ‘ಕೋಟ್ಯಂತರ ರೂಪಾಯಿ ಅವ್ಯವ­ಹಾರ, ಅಕ್ರಮ, ಅಧಿಕಾರ ದುರ್ಬಳಕೆ, ನಿಸರ್ಗ ಸಂಪತ್ತಿನ ಲೂಟಿಯಲ್ಲಿ ತೊಡಗಿರುವ ಶಿವ­ಕುಮಾರ್‌ ಹಾಗೂ ಅವರ ಪ್ರತಿ ಚಟುವಟಿಕೆಯಲ್ಲಿ ಮುಂಚೂಣಿ­ಯಲ್ಲಿರುವ ಸಂಸದ ಡಿ.ಕೆ.ಸುರೇಶ್‌ ಅವರನ್ನು ಜೈಲಿಗೆ ಕಳುಹಿಸಿ, ಲೂಟಿ­ಯಾಗಿರುವ ಹಣದ ಪ್ರತಿ ಪೈಸೆಯೂ ಸರ್ಕಾರಕ್ಕೆ ವಾಪಸಾ­ಗುವ ತನಕ ಹೋರಾಟ ನಡೆಸುತ್ತೇನೆ’ ಎಂದು ಗುಡುಗಿದರು.‘ಕನಕಪುರ ತಾಲ್ಲೂಕಿನ ಹಾರೋ­ಹಳ್ಳಿ, ಕನಕಪುರ ಟೌನ್‌ ಹಾಗೂ ಸಾತನೂರಿನಲ್ಲಿ ನಾನು ಶನಿವಾರ ಪ್ರಚಾರ ನಡೆಸಿದೆ. ಇಲ್ಲೆಲ್ಲಾ ಡಿಕೆಶಿ ಸಹೋದರರ ತೋಳ್ಬಲ, ಅಧಿಕಾರ ದುರುಪಯೋಗ, ಹಣದ ಪ್ರಭಾವಗಳು ಕಣ್ಣಿಗೆ ರಾಚುವಂತಿತ್ತು. ಒಂದು ಕಾಲದಲ್ಲಿ ಬಳ್ಳಾರಿ ರಿಪಬ್ಲಿಕ್‌ನ ಜನರಲ್ಲಿ ಇದ್ದಂತಹುದೇ ಆತಂಕ, ಭಯ ಕನಕಪುರದ ಜನರಲ್ಲೂ ಗೋಚರಿಸಿತು. ಬಳ್ಳಾರಿ ರಿಪಬ್ಲಿಕ್‌ ರೀತಿಯಲ್ಲಿಯೇ ಕನಕಪುರ ರಿಪಬ್ಲಿಕ್‌ಗೂ ತಾರ್ಕಿಕ ಅಂತ್ಯ ಕಾಣಿಸುವ ತನಕ ನಾನು ವಿರಮಿಸು­ವುದಿಲ್ಲ’  ಎಂದು ಅವರು ವಿವರಿಸಿದರು.‘ಈಗಾಗಲೇ ಶಿವಕುಮಾರ್‌ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದ 391 ಪುಟಗಳ ದಾಖಲೆಯನ್ನು ರಾಜ್ಯಪಾಲರಿಗೆ ನೀಡಲಾಗಿತ್ತು. ಕ್ರಮಕ್ಕಾಗಿ ತಿಂಗಳ ಗಡುವು ಕೊಡಲಾಗಿತ್ತು. ಆ ಗಡುವು ಈಗ ಮುಗಿದಿದೆ. ಈ ದಾಖಲೆ­ಗಳನ್ನೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುವುದು. ಅಲ್ಲೂ ಪ್ರಯೋಜವಾಗದಿದ್ದರೆ,  ಸುಪ್ರೀಂಕೋರ್ಟ್‌­ನಲ್ಲಿ ಕಾನೂನು ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.‘ಕುಮಾರಸ್ವಾಮಿಕೂಡ ಭ್ರಷ್ಟ’

‘ರಾಮನಗರದ ಶಾಸಕ ಎಚ್‌.ಡಿ.­ಕುಮಾರಸ್ವಾಮಿ ಅವರು ಮುಖ್ಯ­ಮಂತ್ರಿ ಆಗಿದ್ದಾಗ ಕೇವಲ ಎರಡು ಗಂಟೆ ಅವಧಿಯಲ್ಲಿ ಮಹ­ತ್ವದ ಕಡತವೊಂದಕ್ಕೆ ಸಹಿ ಹಾಕಿ, ಸರ್ಕಾ­ರಕ್ಕೆ ಕೋಟ್ಯಂತರ ರೂಪಾಯಿ ನಷ್ಟ­ವಾ­ಗುವಂತೆ ಮಾಡಿದ್ದಾರೆ. ಇದು ಭ್ರಷ್ಟತೆಯ ಇನ್ನೊಂದು ಮುಖವೇ ಆಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ­ವುಂಟು ಮಾಡಿದ­ವರು ಸಾರ್ವ­ಜನಿಕ ಜೀವನದಲ್ಲಿ ಮುಂದುವರಿ­ಯಲು ಯೋಗ್ಯರಲ್ಲ. ಇದನ್ನು ಕುಮಾರ­ಸ್ವಾಮಿ ಅರ್ಥ ಮಾಡಿ­ಕೊಳ್ಳಬೇಕು’ ಎಂದು ಅವರು ಟೀಕಿಸಿದರು.

‘ಅಧಿಕಾರದ ದಾಹ ಮತ್ತು ‘ಕಿಂಗ್‌ ಮೇಕರ್‌’ ಆಗಬೇಕು ಎಂಬ ಹಂಬಲದಿಂದ ಎಚ್‌ಡಿಕೆ ಅವರು ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆ­ಗಳು ಎದುರಾ­ದಾಗೆಲ್ಲ ಸ್ಪರ್ಧಿಸುತ್ತಿ­ದ್ದಾರೆ. ಇದು ಒಳ್ಳೆಯ ಬೆಳವಣಿಗೆ­ಯಲ್ಲ. ಒಮ್ಮೆ ಜನರು ವ್ಯಕ್ತಪಡಿಸಿದ ವಿಶ್ವಾಸಕ್ಕೆ ರಾಜ­ಕಾರಣಿ ಕೃತಜ್ಞ­ನಾಗಿಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.