ಸೋಮವಾರ, ಏಪ್ರಿಲ್ 12, 2021
24 °C

ಕೆಆರ್‌ಎಸ್ ಬಂದ್ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಹಲವು ದಶಕಗಳಿಂದ ನೆಲೆ ನಿಂತಿದ್ದರೂ ಮನೆ ಹಾಗೂ ನಿವೇಶನ ಹಕ್ಕುಪತ್ರ ನೀಡಿಲ್ಲ. ಮೂಲ ಸೌಕರ್ಯ ಕಲ್ಪಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಕೆಆರ್‌ಎಸ್ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರಲ್ಲದೇ ಬಂದ್ ಆಚರಿಸಿದರು.ಕೆಆರ್‌ಎಸ್‌ನ ಅರಳಿಮರ ವೃತ್ತದಿಂದ ಪೊಲೀಸ್ ಠಾಣೆ, ರೈಲ್ವೆ ನಿಲ್ದಾಣ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಫಲಕಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಸಾಗಿದ ಗ್ರಾಮಸ್ಥರು ಕಂದಾಯ ಹಾಗೂ ಪಂಚಾಯತ್‌ರಾಜ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಕಾವೇರಿ ನೀರಾವರಿ ನಿಗಮ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸಿದರು. ಶಾಲೆ, ಕಾಲೇಜು, ಬ್ಯಾಂಕ್‌ಗಲೂ ನಡೆಯಲಿಲ್ಲ. ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಅರಳಿಮರ ವೃತ್ತದಲ್ಲಿ ಅರ್ಧ ದಿನ ಧರಣಿ ನಡೆಯಿತು.ಕೆಆರ್‌ಎಸ್ ಜಲಾಶಯ ಹಾಗೂ ಬೃಂದಾವನ ನಿರ್ಮಾಣ ಕಾರ್ಯಕ್ಕಾಗಿ ಆಂಧ್ರ ಇತರೆಡೆಗಳಿಂದ ಇಲ್ಲಿಗೆ ಬಂದ ಕೂಲಿ ಕಾರ್ಮಿಕರು ಆಗ ಖಾಲಿ ಇದ್ದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಹಾಗೆ ನಿರ್ಮಿಸಿಕೊಂಡಿರುವ ಮನೆಗಳಿಗೆ ಯಾವುದೇ ದಾಖಲೆಗಳಿಲ್ಲ. ಕಂದಾಯ, ಪಂಚಾಯತ್‌ರಾಜ್ ಇಲಾಖೆಗಳು ನಮಗೆ ಹಕ್ಕುಪತ್ರ ನೀಡಲು ಮನಸ್ಸು ಮಾಡಿಲ್ಲ.ಇರುವ 3,800 ಮನೆಗಳ ಪೈಕಿ 2,800 ಮನೆಗಳಿಗೆ ದಾಖಲೆಗಳೇ ಇಲ್ಲ. ಕೆಆರ್‌ಎಸ್‌ನಲ್ಲಿ ಲಭ್ಯ ಇರುವ ಗ್ರಾಮ ಠಾಣಾ ಗುರುತಿಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಈ ನಡುವೆ ಕಂದಾಯ ಇಲಾಖೆ ಸರ್ಕಾರಿ ಜಾಗದ ಅಳತೆ ಕಾರ್ಯಕ್ಕೆ ಮುಂದಾಗಿದ್ದು ಜನರನ್ನು ಒಕ್ಕಲೆಬ್ಬಿಸುವ ಆತಂಕ ಹುಟ್ಟಿಸುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಲೋಕೇಶ್, ಮಾಜಿ ಅಧ್ಯಕ್ಷ ಪ್ರಕಾಶ್, ಸದಸ್ಯ ಎಂ.ಬಿ.ಕುಮಾರ್ ಇತರರು ಸಮಸ್ಯೆ ಬಿಚ್ಚಿಟ್ಟರು.

ಕೆಆರ್‌ಎಸ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಮೂಲ ಸೌಕರ್ಯ ಮರೀಚಿಕೆಯಾಗಿದೆ.ಬೃಂದಾವನದ ರಸ್ತೆಗಳು ಗುಂಡಿ ಬಿದ್ದಿವೆ. ಸ್ವಚ್ಛತೆ ಮರೀಚಿಕೆಯಾಗಿದೆ. ಬಸ್ ತಂಗುದಾಣ ನಿರ್ಮಿಸಬೇಕು ಎಂಬ ಬೇಡಿಕೆ ಇದುವರೆಗೆ ಈಡೇರಿಲ್ಲ. ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ. ಶಿಥಿಲ ವಿದ್ಯುತ್ ಕಂಬಗಳನ್ನು ಬದಲಿಸಿಲ್ಲ. ಹಲವು ಕಡೆ ಬೀದಿ ದೀಪ ಬೆಳಗುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.