ಬುಧವಾರ, ಜೂನ್ 3, 2020
27 °C

ಕೆಆರ್‌ಎಸ್ ಸೆರಗಿನಲ್ಲಿ ಗಣಿಗಾರಿಕೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ:  ತಾಲ್ಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಕೂಗಳತೆ ದೂರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಆತಂಕಕಾರಿ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭದ್ರತೆ ಒದಗಿಸಿರುವ ಬೆನ್ನಲ್ಲೇ ಜಲಾಶಯದ ಮಗ್ಗುಲಲ್ಲಿ ಗಣಿಗಾರಿಕೆ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ.ಜಲಾಶಯದ ಉತ್ತರ ದಡದ ಬಳಿ ಈ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಕೆಆರ್‌ಎಸ್ ಪೊಲೀಸರು ಪತ್ತೆ ಹಚ್ಚಿದ್ದು, ಕಲ್ಲುಗಣಿ ಸ್ಫೋಟಿಸಲು ಕುಳಿ ಹಿಡಿಯುತ್ತಿದ್ದ ಕೆಆರ್‌ಎಸ್‌ನ ನಿಂಗಶೆಟ್ಟಿ ಎಂಬವರ ಮಗ ಮಹದೇವ ಎಂಬಾತನನ್ನು ಬಂಧಿಸಿದ್ದಾರೆ. ಗಣಿಗಾರಿಕೆಗೆ ಬಳಸುತ್ತಿದ್ದ ಕಂಪ್ರೆಸರ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು ಎನ್ನಲಾದ ಹಳೆ ಉಂಡವಾಡಿಯ ನಾರಾಯಣಸ್ವಾಮಿ ಅವರ ಮಕ್ಕಳಾದ ಉಮೇಶ್, ರಮೇಶ್, ಹೊಸ ಕನ್ನಂಬಾಡಿ ಗ್ರಾಮದ ಜವರಯ್ಯ ಅವರ ಮಗ ಶಂಕರ್ ಮತ್ತು ಚಂದಗಿರಿಕೊಪ್ಪಲು ಬಸವೇಗೌಡರ ಮಗ ಮಹದೇವ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರಸನ್ನಕುಮಾರ್ ಮಂಗಳವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ‘ಉಮೇಶ್, ರಮೇಶ್, ಶಂಕರ್ ಹಾಗೂ ಮಹದೇವು ಎಂಬುವವರಿಗೆ ಈ ಹಿಂದೆ ಅದೇ ಸ್ಥಳದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಆದರೆ ಬಂಡೆ ಸ್ಫೋಟಿಸಲು ಇಲಾಖೆ ಯಾವುದೇ  ಅನುಮತಿ ನೀಡಿಲ್ಲ.ಜಲಾಶಯಕ್ಕೆ 500 ಮೀಟರ್ ಅಂತರದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಸಂಗತಿ ನಮಗೆ  ಇದುವರೆಗೆ ತಿಳಿದಿರಲಿಲ್ಲ. ಕೆಆರ್‌ಎಸ್ ಜಲಾಶಯದ ಬಳಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಂದಿ ಸ್ಫೋಟಕ  ಬಳಸಲು ಅಗತ್ಯ ನಮೂನೆ 18, 22 ಹಾಗೂ 30 ಸಲ್ಲಿಸಿಲ್ಲ. ಹಾಗಾಗಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಪೊಲೀಸರಿಗೆ ಪ್ರತ್ಯೇಕ ದೂರು ನೀಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಕೆಆರ್‌ಎಸ್ ಜಲಾಶಯದ ಮಗ್ಗುಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಅದನ್ನು ತಡೆಯಲು ಸಂಬಂಧಿಸಿದ ಇಲಾಖೆ ವಿಫಲವಾಗಿದೆ. ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ಬಳಸುತ್ತಿದ್ದರೂ ಗಣಿಗಾರಿಕೆ ಹಾಗೂ  ಸ್ಫೋಟ ತಡೆಗೆ ಕ್ರಮ ಕೈಗೊಂಡಿಲ್ಲ. ಜಲಾಶಯಕ್ಕೆ ಗಂಡಾಂತರ ಎದುರಾಗುವ ಭೀತಿಯ ಬಗ್ಗೆ ಸ್ಥಳೀಯರು  ಹಲವು ಬಾರಿ ಗಮನ ಸೆಳೆದಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಸಹಕಾರದಿಂದ ಇಂತಹ  ಅಕ್ರಮಗಳು ನಡೆಯುತ್ತಿರುವ ಬಗ್ಗೆ ಸಂಶಯ ಇದ್ದು, ಪ್ರಕರಣ ಕುರಿತು ತನಿಖೆ ನಡೆಸಬೇಕು.ತಪ್ಪಿತಸ್ಥರ  ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಒತ್ತಾಯಿಸಿದ್ದಾರೆ.   ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.