ಮಂಗಳವಾರ, ಮೇ 11, 2021
21 °C

ಕೆಎಸ್‌ಎನ್ ಕಾವ್ಯದಲ್ಲಿ ಭಾವನೆಗಳ ಹೃದಯಸ್ಪರ್ಶಿ ಚಿತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಸ್‌ಎನ್ ಕಾವ್ಯದಲ್ಲಿ ಭಾವನೆಗಳ ಹೃದಯಸ್ಪರ್ಶಿ ಚಿತ್ರಣ

ಬೆಂಗಳೂರು: `ಪ್ರೇಮದ ಕಲ್ಪನೆಯನ್ನು ಪ್ರಜಾಪ್ರಭುತ್ವಕರಣ ಮಾಡಿದವರು ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು. ಸರಳ ಶೈಲಿಯಲ್ಲಿ ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಕ್ರಾಂತಿ ಮಾಡಿದರು' ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಬಣ್ಣಿಸಿದರು.`ರೂವಾರಿ' ಹಾಗೂ `ಅಭಿನವ ಇಂಪ್ರಿಂಟ್' ಆಶ್ರಯದಲ್ಲಿ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ `ಮೈಸೂರು ಮಲ್ಲಿಗೆ'ಯ ಆಯ್ದ ಕವಿತೆಗಳ ಅನುವಾದ `ಬ್ರೈಡ್ ಕಮ್ಸ ಹೋಮ್' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.`ಶ್ರೀಮಂತರಿಗೆ ಹಾಗೂ ರಾಜ ಮಹಾರಾಜರಿಗೆ ಶೃಂಗಾರ ರಸ ಸೀಮಿತ ಎಂಬ ಭಾವನೆ ಇತ್ತು. ಸಂಸ್ಕೃತ ಸಾಹಿತ್ಯ ಹಾಗೂ ಪ್ರಾಚೀನ ಸಾಹಿತ್ಯದಲ್ಲೂ ಇದೇ ಬಗೆಯ ಭಾವನೆಯನ್ನು ಬಿತ್ತಲಾಗಿತ್ತು. ನರಸಿಂಹಸ್ವಾಮಿ ಅವರು ಜನಸಾಮಾನ್ಯರ ದಾಂಪತ್ಯ, ಸರಸ ಸಲ್ಲಾಪಗಳು, ಹುಸಿ ಮುನಿಸುಗಳು, ಪ್ರೇಮ ಅನುಭವಗಳು, ಕೋಮಲ ಭಾವನೆಗಳನ್ನು ಕಾವ್ಯದ ಮೂಲಕ ಹೃದಯಸ್ಪರ್ಶಿಯಾಗಿ ಚಿತ್ರಿಸಿದರು' ಎಂದು ಅವರು ವಿಶ್ಲೇಷಿಸಿದರು.`ಅವರು ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ಶ್ರೇಷ್ಠ ಕವಿ. ಮೊದಲ ಘಟ್ಟದಲ್ಲಿ ಸಂಪೂರ್ಣ ಪ್ರತಿಮಾಬದ್ಧವಾದ ಕವಿತೆಗಳನ್ನು ರಚಿಸಿದರು. ಅವರ `ಗಡಿಯಾರದ ಅಂಗಡಿಯ ಮುಂದೆ' ಕವನ ಅತ್ಯಂತ ಶ್ರೇಷ್ಠ ಕಾವ್ಯ. ಎರಡನೇ ಘಟ್ಟದಲ್ಲಿ ಮೊದಲಿನ ಗೇಯತೆಯನ್ನು ಬಿಟ್ಟು ನಾಟಕೀಯತೆ ಶೈಲಿಯಲ್ಲಿ ಕವಿತೆಗಳನ್ನು ರಚಿಸಿದರು. ಕಳೆದ ಶತಮಾನದ 7-8 ದಶಕದಲ್ಲಿ ಮೂಡಿಬಂದ ಅವರ ಕವಿತೆಗಳು ಇಂದಿಗೂ ಬೆರಗು ಹುಟ್ಟಿಸುತ್ತಿವೆ' ಎಂದು  ಪ್ರತಿಪಾದಿಸಿದರು.ಕನಸಿನಲ್ಲಿ ಅನುವಾದ: `ಅನುವಾದ ಅತ್ಯಂತ ಸವಾಲಿನ ಕೆಲಸ. ಸೃಜನಶೀಲ ಸಾಹಿತ್ಯ ರಚನೆಗಿಂತಲೂ ಅನುವಾದ ಕಷ್ಟದ ಕೆಲಸ. ಸೃಜನಶೀಲ ಕವಿಗೆ ನಿರಾಳತೆ ಇರುತ್ತದೆ. ಆದರೆ, ಅನುವಾದಕನಿಗೆ ಈ ಸ್ವಾತಂತ್ರ್ಯ ಇರುವುದಿಲ್ಲ. ಅನುವಾದಕ ಮೂಲ ಪದ್ಯ ಬಿಟ್ಟು ಹೊರಗೆ ಹೋಗುವ ಹಾಗಿಲ್ಲ' ಎಂದು  ಅಭಿಪ್ರಾಯಪಟ್ಟರು.`ಅನುವಾದ ಕಾಲ್ಪನಿಕ ಗಂಡಭೇರುಂಡ ಪಕ್ಷಿ ಇದ್ದಂತೆ. ಒಂದು ಕಡೆ ಮೂಲ ಪದ್ಯಕ್ಕೆ ನಿಷ್ಠವಾಗಿರಬೇಕು ಹಾಗೂ ಇನ್ನೊಂದು ಕಡೆ ನಿರೀಕ್ಷಿತ ಓದುಗನನ್ನು ಗುರಿಯಲ್ಲಿರಿಸಿಕೊಂಡು ಅನುವಾದ ಮಾಡಬೇಕಿದೆ. ಎರಡು ವಿರುದ್ಧ ಒತ್ತಡಗಳಿಗೆ ಸಮಾನ ನ್ಯಾಯ ಒದಗಿಸುವುದು ಕಷ್ಟದ ಕೆಲಸ. ಅನುವಾದ ಯಶಸ್ವಿಯಾಗುವುದು ಕನಸಿನಲ್ಲಿ ಮಾತ್ರ' ಎಂದರು.`ಅನುವಾದದ ಹಾದಿಯಲ್ಲಿ ಹೂವುಗಳು ಇರುವುದಿಲ್ಲ, ಮುಳ್ಳುಗಳೇ ಇರುತ್ತವೆ. ಸ್ವಲ್ಪ ದೂರ ಕ್ರಮಿಸಿದ ಕೂಡಲೇ ದಾರಿ ಒಡೆಯುತ್ತದೆ. ಇದರೊಂದಿಗೆ ಅನುವಾದ ಮಾಡುವವರಿಗೆ ಮೋಹಗಳು ಕಾಡುತ್ತವೆ. ಈ ಮೋಹ, ಕಳ್ಳ ದಾರಿಗಳು ಅನುವಾದಕನ ದಾರಿ ತಪ್ಪಿಸುತ್ತವೆ. ಓದುಗನಿಗೆ ತಿಳಿಯುವ ಭಾಷೆಯಲ್ಲಿ ಹೇಳುವ ಮೋಹ ಅನುವಾದ ಮಾಡುವವರಿಗೆ ಕಾಡುತ್ತದೆ. ಇದನ್ನು `ಪರಿಚಿತೀಕರಣ' ಎಂದೂ ಕರೆಯಬಹುದು. ಧ್ವನಿ ಮೂಲ ಭಾಷೆಯದ್ದೇ ಆಗಿರುವಂತೆ ಅನುವಾದಕರು ಎಚ್ಚರ ವಹಿಸಬೇಕು' ಎಂದು ಕಿವಿಮಾತು ಹೇಳಿದರು.ಕೃತಿಯ ಅನುವಾದಕರಲ್ಲಿ ಒಬ್ಬರಾದ ಪ್ರಾಧ್ಯಾಪಕ ಪ್ರೊ.ಎಂ.ಸಿ.ಪ್ರಕಾಶ್ ಮಾತನಾಡಿ, `ಮೂಲ ಕವನಕ್ಕೆ ನ್ಯಾಯ ಒದಗಿಸುವುದು ಅನುವಾದಕನಿಗೆ ದೊಡ್ಡ ಸವಾಲು. ಕವನಕ್ಕೆ ಪ್ರಾಸ ಹೊಸ ನೋಟ ನೀಡುತ್ತದೆ ಎಂಬ ಕಾರಣಕ್ಕೆ ಕೆಲವು ಕವನಗಳನ್ನು ಪ್ರಾಸಬದ್ಧವಾಗಿ ರಚಿಸಲಾಗಿದೆ. ಈ ಪುಸ್ತಕದಲ್ಲಿ ಒಂದು ಭಾಗದಲ್ಲಿ ಕನ್ನಡ ಕವಿತೆಗಳು, ಮತ್ತೊಂದು ಭಾಗದಲ್ಲಿ ಇಂಗ್ಲಿಷ್ ಕವಿತೆಗಳು ಇವೆ' ಎಂದರು. ವಿಮರ್ಶಕಿ ಎಂ.ಎಸ್.ಆಶಾದೇವಿ, ಕೃತಿಯ ಅನುವಾದಕಿ ಮೇಖಲಾ ವೆಂಕಟೇಶ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.