ಬುಧವಾರ, ಜೂಲೈ 8, 2020
21 °C

ಕೆಟ್ಟಾರಾಮ ಅಂಗಳದಲ್ಲಿ ದಿಟ್ಟ ಆಟವಾಡಿದವರು, ಕೆಟ್ಟು ಹೋದವರು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಟ್ಟಾರಾಮ ಅಂಗಳದಲ್ಲಿ ದಿಟ್ಟ ಆಟವಾಡಿದವರು, ಕೆಟ್ಟು ಹೋದವರು...!

 ಕೊಲಂಬೊ: ರಣಸಿಂಘೆ ಪ್ರೇಮದಾಸಾ ಕ್ರೀಡಾಂಗಣ(ಆರ್‌ಪಿಎಸ್)ಗೆ ಹೋಗಬೇಕು ಎಂದು ಆಟೋ ಚಾಲಕರನ್ನು ಕೇಳಿದರೆ, ಮತ್ತೊಮ್ಮೆ ಅವರು ಪ್ರಶ್ನಿಸುತ್ತಾರೆ ‘ಕೆಟ್ಟಾರಾಮ ಸ್ಟೇಡಿಯಂ...?’ ಎಂದು. ಹೌದು; 1994ರ ಜೂನ್‌ನಲ್ಲಿಯೇ ಕೆಟ್ಟಾರಾಮ ಕ್ರೀಡಾಂಗಣಕ್ಕೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಆರ್.ಪ್ರೇಮದಾಸಾ ಹೆಸರು ನೀಡಿದ್ದರೂ, ಇಲ್ಲಿನ ಜನರು ಮಾತ್ರ ಈಗಲೂ ಹಳೆಯ ಹೆಸರಿನಿಂದಲೇ ಕರೆಯುತ್ತಾರೆ.

ಕೆಟ್ಟಾರಾಮ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಹಾಗೂ ಕೆಟ್ಟಾರಾಮ ಪ್ರದೇಶದಲ್ಲಿರುವ ಈ ಕ್ರೀಡಾಂಗಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರ್.ಪ್ರೇಮದಾಸಾ ಹೆಸರಿನಿಂದ ಪರಿಚಿತವಾಗಿದ್ದರೂ, ಸಿಂಹಳೀಯರ ನಾಡಿನ ಸ್ಥಳೀಯ ಮಾಧ್ಯಮಗಳು ಮಾತ್ರ ಕೆಟ್ಟಾರಾಮ ಕ್ರೀಡಾಂಗಣವೆಂದೇ ಗುರುತಿಸುತ್ತವೆ. ಜನರಿಗೆ ಕೂಡ ಅದೇ ಪರಿಚಿತವಾದ ಹೆಸರು.

ಕೊಲಂಬೊ ಜನರ ಅಚ್ಚುಮೆಚ್ಚಿನ ಈ ಕೆಟ್ಟಾರಾಮ ಕ್ರಿಕೆಟ್ ಕ್ರೀಡಾಂಗಣವು ಅನೇಕ ವಿಶಿಷ್ಟವಾದ ಇತಿಹಾಸವನ್ನು ತನ್ನ ಒಡಲೊಳಗೆ ತುಂಬಿಟ್ಟುಕೊಂಡಿದೆ. ಆತಿಥೇಯರು ಮಾತ್ರವಲ್ಲ ಪ್ರವಾಸಿ ತಂಡಗಳು ಕೂಡ ಅಬ್ಬರಿಸಿದ ಘಟನೆಗಳು ಇತಿಹಾಸದ ಪುಟಗಳನ್ನು ತಿರುವಿದಾಗ ಕಣ್ಣೆದುರು ನಿಲ್ಲುತ್ತವೆ. ಅಂಥ ಕೆಲವು ಆಸಕ್ತಿಕರ ಅಂಕಿ-ಅಂಶಗಳು ಇಲ್ಲಿವೆ.* 1986ರ ಫೆಬ್ರುವರಿ 2ರಂದು ‘ಕೆಟ್ಟಾರಾಮ’ ಕ್ರೀಡಾಂಗಣ ಉದ್ಘಾಟನೆ ಗೊಂಡಿತು. ಇದೇ ಶ್ರೀಲಂಕಾದ ಅತಿ ದೊಡ್ಡ ಕ್ರೀಡಾಂಗಣ. ಮೊದಲ ನಿಗದಿತ ಓವರುಗಳ ಪಂದ್ಯ ನಡೆದಿದ್ದು ಶ್ರೀಲಂಕಾ ‘ಬಿ’ ಹಾಗೂ ಇಂಗ್ಲೆಂಡ್ ‘ಬಿ’ ತಂಡಗಳ ನಡುವೆ. ಉದ್ಘಾಟನಾ ಏಕದಿನ ಅಂತರರಾಷ್ಟ್ರೀಯ ಪಂದ್ಯ ಆಯೋಜಿಸಿದ್ದು 1986ರ ಏಪ್ರಿಲ್ 5ರಂದು ಆತಿಥೇಯ ಲಂಕಾ ಹಾಗೂ ಪ್ರವಾಸಿ ನ್ಯೂಜಿಲೆಂಡ್ ತಂಡಗಳ ನಡುವೆ. ಆದರೆ ಅದೇ ವರ್ಷ ಮಾರ್ಚ್ 9ರಂದು ನಡೆದ ಲಂಕಾ ಮತ್ತು ಪಾಕಿಸ್ತಾನ ನಡುವಣ ಪಂದ್ಯವನ್ನು ಅಧಿಕೃತವಾಗಿ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯವೆಂದು ಪರಿಗಣಿಸಲಾಗುತ್ತದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವೊಂದು ಅತ್ಯಂತ ಗರಿಷ್ಠ ಮೊತ್ತ ಗಳಿಸಿದ್ದಕ್ಕಾಗಿ ಈ ಕ್ರೀಡಾಂಗಣ ಖ್ಯಾತಿ ಪಡೆದಿದೆ. 1997-98ರಲ್ಲಿ ಸಿಂಹಳೀಯರು ಭಾರತದ ವಿರುದ್ಧ 6 ವಿಕೆಟ್ ನಷ್ಟಕ್ಕೆ 952 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು ವಿಶ್ವ ದಾಖಲೆ. ಆ ಪಂದ್ಯದಲ್ಲಿ ಸನತ್ ಜಯಸೂರ್ಯ 340 ರನ್ ಹಾಗೂ ರೋಶನ್ ಮಹಾನಾಮಾ 225 ರನ್ ಸೇರಿಸಿದ್ದರು.

* ಶ್ರೀಲಂಕಾ 49 ಏಕದಿನ ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದು, ಕೇವಲ 24 ಪಂದ್ಯಗಳಲ್ಲಿ ನಿರಾಸೆ ಹೊಂದಿದೆ. ಆರು ಪಂದ್ಯಗಳಲ್ಲಿ ಮಳೆಯ ತೊಡಕಿನ ಕಾರಣ ಫಲಿತಾಂಶ ಹೊರಹೊಮ್ಮಿರಲಿಲ್ಲ. ವಿಶೇಷವೆಂದರೆ ಈ ಅಂಗಳದಲ್ಲಿ ನಾಲ್ಕು ಬಾರಿ ಇಂಗ್ಲೆಂಡ್ ತಂಡವನ್ನು ಎದುರಿಸಿ, ಮೂರು ಬಾರಿ ಗೆದ್ದಿದೆ. ಸೋತಿದ್ದು ಒಂದೇ ಒಂದು ಪಂದ್ಯದಲ್ಲಿ. ಇದೇ ಲೆಕ್ಕಾಚಾರದ ಆಧಾರದಲ್ಲಿ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಲಂಕಾ ಜಯದ ಸಾಧ್ಯತೆ ಶೇ.75ರಷ್ಟು ಎಂದು ನಿರ್ಧರಿಸಲಾಗಿದೆ.

* 1996ರ ನಂತರ 2011ರಲ್ಲಿ ಅಂದರೆ ಈ ಬಾರಿ, ವಿಶ್ವಕಪ್ ಪಂದ್ಯಗಳು ‘ಆರ್‌ಪಿಎಸ್’ನಲ್ಲಿ ನಡೆದಿವೆ. ಇಲ್ಲಿಯವರೆಗೆ ಒಟ್ಟು ಏಳು ವಿಶ್ವಕಪ್ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿದೆ. ಆದರೆ 1996ರಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡದವರು ಭದ್ರತೆಯ ಕಾರಣ ನೀಡಿ ಇಲ್ಲಿ ಆಡಲು ನಿರಾಕರಿಸಿದ್ದರು. ಆಗ ಐಸಿಸಿಯು ನಿಯಮದ ಪ್ರಕಾರ ಆತಿಥೇಯ ಲಂಕಾ ವಿಜಯಿ ಎಂದು ಪ್ರಕಟಿಸಿತ್ತು.

 

ವಾಕ್‌ಔವರ್ ನೀಡಿದ ಪಂದ್ಯಗಳೆಂದು ಅವುಗಳನ್ನು ಪರಿಗಣಿಸಲಾಗಿದೆ. ಈ ಲೆಕ್ಕವೂ ಸೇರಿದಂತೆ ಸಿಂಹಳೀಯರು ವಿಶ್ವಕಪ್‌ನ ಒಟ್ಟು ನಾಲ್ಕು ಪಂದ್ಯಗಳನ್ನು ಜಯಿಸಿದ್ದಾರೆ. ಸೋತಿದ್ದು ಒಮ್ಮೆ ಪಾಕಿಸ್ತಾನ ವಿರುದ್ಧ ಮಾತ್ರ. ಅದೂ ಇದೇ ವಿಶ್ವಕಪ್‌ನ ಲೀಗ್ ಹಂತದಲ್ಲಿ.

* ಲಂಕಾ ಪಡೆಯು ಇಲ್ಲಿ ಭಾರತದ ವಿರುದ್ಧವೇ ನಾಲ್ಕು ಪಂದ್ಯಗಳಲ್ಲಿ ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದೆ. ಇಂಗ್ಲೆಂಡ್ ಎದುರು 250ರ ಗಡಿಯನ್ನು ಕೂಡ ದಾಟಿಲ್ಲ ಎನ್ನುವುದು ಗಮನ ಸೆಳೆಯುವ ಅಂಶ. 1993ರ ಮಾರ್ಚ್ 10ರಂದು ನಡೆದ ಪಂದ್ಯದಲ್ಲಿ 47 ಓವರುಗಳಲ್ಲಿ ಐದು ವಿಕೆಟ್ ಕಳೆದುಕೊಂಡು 250 ರನ್ ಗಳಿಸಿದ್ದರು ಆತಿಥೇಯರು.

 ಇಂಗ್ಲೆಂಡ್‌ನವರು ಇದೇ ಅಂಗಳದಲ್ಲಿ 18ನೇ ಸೆಪ್ಟೆಂಬರ್ 2002ರಲ್ಲಿ ಜಿಂಬಾಬ್ವೆ ಎದುರು 50 ಓವರುಗಳಲ್ಲಿ 298 ರನ್ ಗಳಿಸಿದ್ದರು. ಲಂಕಾದ ಗರಿಷ್ಠ ಮೊತ್ತ ಬಂದಿದ್ದು 8ನೇ ಫೆಬ್ರುವರಿ 2009ರಲ್ಲಿ ಭಾರತದ ಎದುರು. ಆಗ ಅದು 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 320 ರನ್ ಕಲೆಹಾಕಿತ್ತು.* ಆತಿಥೇಯರು 1993ರ ಸೆಪ್ಟೆಂಬರ್ 2ರಂದು ದಕ್ಷಿಣ ಆಫ್ರಿಕಾ ವಿರುದ್ಧ 34 ಓವರುಗಳಲ್ಲಿ 98 ರನ್‌ಗೆ ಆಲ್‌ಔಟ್ ಆಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಇಂಗ್ಲೆಂಡ್ ಇಲ್ಲಿ ನೂರರ ಒಳಗೆ ಕುಸಿದಿಲ್ಲ. 2007ರ ಅಕ್ಟೋಬರ್ 13ರಂದು ಲಂಕಾ ವಿರುದ್ಧ 29.1 ಓವರುಗಳಲ್ಲಿ 104 ರನ್‌ಗೆ ಆಲ್‌ಔಟ್ ಆಗಿದ್ದೇ ಇಂಗ್ಲೆಂಡ್‌ನ ಕಡಿಮೆ ಮೊತ್ತ.

* ಸನತ್ ಜಯಸೂರ್ಯ (2514) ಹಾಗೂ ಮರ್ವನ್ ಅಟಪಟ್ಟು (1467) ಅವರ ನಂತರ ಆರ್‌ಪಿಎಸ್‌ನಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ್ದು ಲಂಕಾ ತಂಡದ ಹಾಲಿ ನಾಯಕ ಕುಮಾರ ಸಂಗಕ್ಕಾರ (1297). ಲಂಕಾದವರೇ ಆದ ಮಾಹೇಲ ಜಯವರ್ಧನೆ (1206), ಅರವಿಂದ ಡಿಸಿಲ್ವಾ (1196) ಹಾಗೂ  ಭಾರತದ ಸಚಿನ್ ತೆಂಡೂಲ್ಕರ್ (1096) ಅವರು ಏಕದಿನ ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ಶ್ರೇಯ ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.