ಬುಧವಾರ, ಮೇ 12, 2021
24 °C

ಕೆತ್ತನೆ ಕೈ ಚಳಕವೇ ಅಂದ...

-ಕಾಂತರಾಜ್ Updated:

ಅಕ್ಷರ ಗಾತ್ರ : | |

ಹಲ್ಲು ಚುಚ್ಚುವ ಕಡ್ಡಿಯಲ್ಲಿ 28 ಕೊಂಡಿ ಕೆತ್ತಬಹುದೇ? ಇಂಥ ಸೂಕ್ಷ್ಮಕಲೆಯಲ್ಲಿ ಗಿನ್ನಿಸ್ ದಾಖಲೆ ಬರೆದು ಕೋಲಾರದವರು ಮಿಂಚಬಹುದೇ?ಈ ಪ್ರಶ್ನೆಗಳಿಗೆ ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿಯ ಯುವಕ ಮಲ್ಲಿಕಾರ್ಜುನರೆಡ್ಡಿ ಉತ್ತರವಾಗಿ ಕಾಣುತ್ತಾರೆ. ಮಹತ್ವಾಕಾಂಕ್ಷೆಯ ಕನಸುಗಳುಳ್ಳ ಈ ಯುವಕ ಅಮೇರಿಕಾ ದೇಶದ ಗಮನ ಸೆಳೆದಿರುವ ವಿಶಿಷ್ಟ ಪ್ರತಿಭಾವಂತ ಎಂಬುದು ಮತ್ತೊಂದು ವಿಶೇಷ. ಸೂಕ್ಷ್ಮ ಕಲೆಯಲ್ಲಿ ಆಸಕ್ತಿ ಹೊಂದಿರುವ ವಿಶ್ವದ ಅದೆಷ್ಟೋ ವಿದ್ಯಾರ್ಥಿಗಳಿಗೆ ಈ ಯುವಕ ಸ್ಫೂರ್ತಿಯ ಸೆಲೆ.ತಾಲ್ಲೂಕಿನ ಗಡಿ ಭಾಗದ ತೊಪ್ಪನಹಳ್ಳಿ ಗ್ರಾಮದ ಈ ಯುವಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಗುರುಗಳ ಮಾರ್ಗದರ್ಶನ ಇಲ್ಲದೆ ಸೂಕ್ಷ್ಮಕಲೆಯಲ್ಲಿ ಪರಿಣಿತಿ ಪಡೆದಿರುವುದು ಇವರ ವಿಶೇಷ.ಅಮೇರಿಕ ದೇಶದ ಬಾಬ್ ಶ್ಯಾಮಿ ಎಂಬ ಮಹಿಳೆಯ ದಾಖಲೆ ಮುರಿದು ಆ ಸ್ಥಾನದಲ್ಲಿ ಭಾರತ ದೇಶದ ಹೆಸರನ್ನು ಕೆತ್ತಿರುವ ಕೀರ್ತಿ ಇವರದು.ಬಾಬ್ ಶ್ಯಾಮಿ 17 ಕೊಂಡಿ ಕೆತ್ತಿ ದಾಖಲೆ ಬರೆದಿದ್ದರು. ಇತರರು ಆ ದಾಖಲೆ ಅಳಿಸುವುದು ಅಮೇರಿಕಕ್ಕೆ ಇಷ್ಟವಾಗಿರಲಿಲ್ಲ. ಆ ಕಾರಣದಿಂದ ದಾಖಲೆ ಮುರಿಯದಂತೆ ಮಲ್ಲಿಕಾರ್ಜುನರೆಡ್ಡಿ ಅವರಿಗೆ ಅಮೇರಿಕ ಒತ್ತಡ ಹೇರಿತ್ತು. ಅಲ್ಲದೆ ರೂ 2 ಕೋಟಿ ಮತ್ತು ಹಸಿರು ಕಾರ್ಡ್ ನೀಡುವ ಆಮಿಷ ಕೂಡ ಒಡ್ಡಿತ್ತು. ಇದ್ಯಾವುದನ್ನು ಲೆಕ್ಕಿಸದೆ ರೆಡ್ಡಿ 2005ರ ಫೆ. 21 ರಂದು ಅಮೇರಿಕಾದ ದಾಖಲೆ ಮುರಿದು ಆ ಸ್ಥಾನದಲ್ಲಿ ಭಾರತದ ಹೆಸರು ಕೆತ್ತಿದ್ದಾರೆ.ರೆಡ್ಡಿಯವರ ಕಲೆ ಬಗ್ಗೆ ಅರಿತ ನೂರಾರು ವಿದೇಶಿ ಕಂಪನಿಗಳು ತಮ್ಮ ದೇಶಕ್ಕೆ ಬರುವಂತೆ ಕೈಬೀಸಿ ಕರೆದಿವೆ. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು ವಿದೇಶಕ್ಕೆ ಹೋಗುವ ಮನಸು ಮಾಡಿಲ್ಲ. ಬದಲಾಗಿ ತನ್ನ ಹುಟ್ಟೂರಿನಲ್ಲಿ ಅಕ್ಷರ ಅಂತರರಾಷ್ಟ್ರಿಯ ಶಾಲೆ ಆರಂಭಿಸಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಅಕ್ಷರ ಕಲಿಸುವ ಜತೆಗೆ ಸೂಕ್ಷ್ಮ ಕಲೆಯನ್ನೂ ಮಕ್ಕಳಿಗೆ ಪರಿಚಯಿಸುತ್ತಿದ್ದಾರೆ.ಚಂಗಲರಾಯರೆಡ್ಡಿ ಮತ್ತು ಅಕ್ಕಮ್ಮ ದಂಪತಿಯ ಮಗನಾದ ರೆಡ್ಡಿ ಶಾಲೆಯಲ್ಲಿ ಪಾಠ ಕೇಳುವುದು ಬೇಸರ ಎನಿಸಿದಾಗ ಕೈಗೆ ಸಿಕ್ಕ ಚಾಕ್ ಪೀಸ್ ಮೇಲೆ ಕಾಂಪಸ್‌ನಿಂದ ಕೆತ್ತಲು ಆರಂಭಿಸಿದಾಗಿನಿಂದ ಕಲಾ ಯಾನ ಶುರುವಾಯಿತು. ಚಿಕ್ಕ ವಯಸ್ಸಿನಲ್ಲಿ ಚಾಕ್ ಪೀಸ್‌ನಲ್ಲಿ ಮೂಡಿಸುತ್ತಿದ್ದ ಚಿತ್ರಗಳಿಗೆ ಪ್ರೋತ್ಸಾಹ ದೊರೆತಿರಲಿಲ್ಲ. ಬದಲಾಗಿ ಶಿಕ್ಷಕರ ಕೋಪಕ್ಕೆ ಗುರಿಯಾಗಿದ್ದರು. ಪೋಷಕರಿಗೆ ನೀಡಿದ ದೂರಿನ ಮೇರೆಗೆ ಅಲ್ಲಿಯೂ ಬೈಸಿಕೊಳ್ಳುತ್ತಿದ್ದರು.

ಕೆಜಿಎಫ್ ಸುಮತಿ ಜೈನ್ ಶಾಲೆಯಿಂದ ಕಾಲೇಜು ಶಿಕ್ಷಣಕ್ಕೆ ಬೆಂಗಳೂರಿಗೆ ಹೋದ ಮೇಲೆ ಅವರ ಕಲೆ ಇಡೀ ವಿಶ್ವಕ್ಕೆ ಪರಿಚಯವಾಯಿತು.2000ದಲ್ಲಿ ಬೆಂಗಳೂರಿನ ರೆಡ್ಡಿ ಜನಸಂಘ ಕಾಲೇಜಿನಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದ ರೆಡ್ಡಿ ಆ ಸಂದರ್ಭ ತಮ್ಮ ಗೆಳೆಯರ ಸಹಕಾರದಿಂದ ತನ್ನಲ್ಲಿದ್ದ ಸುಮಾರು 40 ಸಾವಿರ ಚಾಕ್ ಪೀಸ್ ಹಾಗೂ ಸೂಕ್ಷ್ಮ ಕಲಾಕೃತಿಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶಿಸಿದರು. ಪ್ರದರ್ಶನ ನೋಡಲು ಬಂದಿದ್ದ ಮಹಿಳೆಯೊಬ್ಬರು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದ `ಈ ಕಲೆ ಗಿನ್ನೆಸ್ ದಾಖಲೆಗೆ ಅರ್ಹ'  ಎಂಬ ಸಾಲುಗಳು ಹಾಗೂ ಆಕೆ ನೀಡಿದ ಸಲಹೆ ದಾಖಲೆಗೆ ಸ್ಫೂರ್ತಿ ನೀಡಿತು ಎಂಬುದು ಅವರ ನುಡಿ.2001 ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ ಸೇರಿ ಶಿಲ್ಪಕಲೆ ಹಾಗೂ ಕೆತ್ತನೆಯ ಕೆಲಸದ ಬಗ್ಗೆ ಹೆಚ್ಚು ಪರಿಣಿತಿ ಪಡೆದರು. ಸೀಮೆಸುಣ್ಣದಲ್ಲಿ ಚೈನ್ ಲಿಂಕ್ ಕೆತ್ತನೆ, ಪ್ರಧಾನಮಂತ್ರಿ ಮನಮೋಹನ್‌ಸಿಂಗ್, ಬೇಲೂರಿನ ಶಿಲಾಬಾಲಿಕೆ, ಪ್ರಾಣಿ ಪಕ್ಷಿಗಳ ಚಿತ್ರಗಳು ಸೇರಿದಂತೆ ಹಲ ವಸ್ತುಗಳ ಚಿತ್ರ ಬಿಡಿಸಿರುವುದು ಇವರ ಕಲಾ ನೈಪುಣ್ಯತೆಗೆ ಸಾಕ್ಷಿ.ವಿದ್ಯಾರ್ಥಿ ಜೀವನದ ಜತೆಗೆ ಹವ್ಯಾಸವಾಗಿ ಸೂಕ್ಷ್ಮಕಲೆಯಲ್ಲಿ ತೊಡಗಿಸಿಕೊಂಡಿದ್ದ ಮಲ್ಲಿಕಾರ್ಜುನ ರೆಡ್ಡಿಯ ಹಗಲು ಇರಳು ಎನ್ನದೆ ಶ್ರಮಿಸಿ ಕಲೆಯ ನೈಪುಣ್ಯತೆ ಪಡೆದರು ಎನ್ನುವುದು ತೊಪ್ಪನಹಳ್ಳಿ ಶಾಲೆಯ ಶಿಕ್ಷಕ ಕೇಶವಮೂರ್ತಿ ಅವರ ಮೆಚ್ಚುಗೆಯ ನುಡಿ.ಸೂಕ್ಷ್ಮ ಕೆತ್ತನೆ ಕಲೆ ಕರಗತ ಮಾಡಿಕೊಂಡ ಇವರಿಗೆ 2004 ರಲ್ಲಿ ಲಿಮ್ಕೋ ದಾಖಲೆ, 2005 ರಲ್ಲಿ ಗಿನ್ನೆಸ್ ದಾಖಲೆ, 2005 ರಲ್ಲಿ ಶ್ರೀ ಸಾಯಿ ಸೇವಾ ಅವಾರ್ಡ್, 2006 ರಲ್ಲಿ ಕನ್ನಡ ರಾಜ್ಯೋತ್ಸವ ಸ್ವಾಭಿಮಾನ ಅವಾರ್ಡ್, 2007 ರಲ್ಲಿ ಆಲ್ ಇಂಡಿಯಾ ಅಚೀವರ್ಸ್‌ ಅವಾರ್ಡ್, 2009 ರಲ್ಲಿ ಫೆಲೋಶಿಪ್ ಔಟ್‌ಸ್ಟಾಂಡಿಂಗ್ ಆರ‌್ಟಿಸ್ಟ್ ಅವಾರ್ಡ್, 2011 ರಲ್ಲಿ ಕೆಂಗಲ್ ಹನುಮಂತಯ್ಯ ಅವಾರ್ಡ್, ಪ್ರತ್ಯೇಕ ಪುರಸ್ಕಾರ್ ಅವಾರ್ಡ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ದಕ್ಕಿವೆ.ಪ್ರಸ್ತುತ ಪುರಾತನ ದೇವಾಲಯಗಳ ವಾಸ್ತುಶಿಲ್ಪ, ಪ್ರಾಚೀನ ಸ್ಮಾರಕಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ರೆಡ್ಡಿ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.