ಬುಧವಾರ, ಏಪ್ರಿಲ್ 21, 2021
24 °C

ಕೆಪಿಎಸ್‌ಸಿಯಲ್ಲಿ ಬಡವರಿಗೆ ನ್ಯಾಯ ಸಿಗುವುದೆಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಕರ್ನಾಟಕ ಲೋಕಸೇವಾ ಆಯೋಗವು ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಕರೆದಿರುವುದು ಸಂತೋಷದ ಸಂಗತಿ. ಈ ಹುದ್ದೆಗಳ ನೇಮಕಾತಿಯಲ್ಲಿ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಇರುವುದಿಲ್ಲ. ಮೇಲಾಗಿ ಪರೀಕ್ಷೆಯಲ್ಲಿ  ಓಎಮ್‌ಆರ್ ಶೀಟ್‌ನಲ್ಲಿ ಉತ್ತರಗಳನ್ನು ಗುರುತಿಸುವ ಕ್ರಮ ಇದ್ದದ್ದರಿಂದ ಬೇಕಾದವರಿಗೆ ಹೆಚ್ಚಿನ ಅಂಕಗಳನ್ನು ನೀಡುವುದಕ್ಕೂ ಸಾಧ್ಯವಿರಲಿಲ್ಲ ಎನ್ನುವ ಸಮಾಧಾನವಿತ್ತು.ಹೀಗಾಗಿ ಈ ಹುದ್ದೆಗಳ ನೇಮಕಾತಿಯಲ್ಲಿ ಕೆಪಿಎಸ್‌ಸಿಯ ಭ್ರ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಕ್ಕೆ ಅವಕಾಶ ಇರಲಿಲ್ಲ. ಇದರಿಂದಾಗಿ ನಮ್ಮಂತಹ ಬಡವರು ಈ ಕೆಳ ದರ್ಜೆಯ ಹುದ್ದೆಗಳನ್ನಾದರೂ ಲಂಚ ಕೊಡದೆ ಪಡಿಯಬಹುದು ಎನ್ನುವ ನಂಬಿಕೆ ಇತ್ತು.  ಆದರೆ ಇದರಲ್ಲೂ ಕಳ್ಳದಾರಿ ಕಂಡು ಹಿಡಿದುಕೊಂಡಿರುವವರಿದ್ದಾರೆ. ಅಂದರೆ ಎಫ್‌ಡಿಎ ಹಾಗೂ ಎಸ್‌ಡಿಎಗಳಂತಹ ಹುದ್ದೆಗಳ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.ಈ ನೇಮಕದ ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಿ, ಅದರಲ್ಲಿ ಒಂದನ್ನು ಆಯ್ಕೆ ಮಾಡಿ, ಓಎಮ್‌ಆರ್ ಶೀಟ್‌ನಲ್ಲಿ ಸಂಬಂಧಿಸಿದ ಪ್ರಶ್ನೆ ಸಂಖ್ಯೆಯ ಎದುರಿಗೆ ಕೊಟ್ಟಿರುವ ನಾಲ್ಕು ಖಾನೆಗಳಲ್ಲಿ ಒಂದನ್ನು ಗುರುತಿಸಬೇಕಾಗಿರುತ್ತದೆ. ನಾವು ಎಷ್ಟು ಸರಿ ಉತ್ತರಗಳನ್ನು ಗುರುತಿಸಿರುತ್ತೇವೆಯೋ ಅಷ್ಟು ಅಂಕಗಳು ಬರಬೇಕು.ಅದನ್ನು ಕಂಪ್ಯೂಟರ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲೇಬೇಕೆನ್ನುವ  ನಿರ್ಬಂಧ ಇಲ್ಲ. ಇಲ್ಲಿಯೇ ಭ್ರಷ್ಟಾಚಾರಕ್ಕೆ ಅವಕಾಶ ಇರುವುದು. ಈ ಭ್ರಷ್ಟ ವ್ಯವಸ್ಥೆಯನ್ನು ತಿಳಿದಿರುವ ಅಭ್ಯರ್ಥಿ ತನಗೆ ನಿಖರವಾಗಿ ಗೊತ್ತಿರುವ ಕೆಲವೇ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಿ ಉಳಿದ ಉತ್ತರಪತ್ರಿಕೆಯನ್ನು ಹಾಗೆಯೇ ಖಾಲಿಬಿಟ್ಟು ಕೊಟ್ಟು ಹೋಗುತ್ತಾನೆ. ನಂತರ ಕೆಪಿಎಸ್‌ಸಿಯಲ್ಲಿ ನಡೆಯಬೇಕಾದುದೆಲ್ಲ ನಡೆಯುತ್ತದೆ ಎನ್ನುವ ಮಾತುಗಳಿವೆ.ನಮಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ  ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಂದ ಹಿಡಿದು ಕಂಪ್ಯೂಟರ್‌ನಿಂದ ಆ ಓಎಮ್‌ಆರ್ ಶೀಟ್ ಮೌಲ್ಯಮಾಪನವಾಗುವವರೆಗೆ ಸಂಬಂಧಿಸಿದವರ ಚಮತ್ಕಾರದಿಂದ ಆ ಓಎಮ್‌ಆರ್ ಶೀಟ್‌ನ ಖಾಲಿ ಜಾಗದಲ್ಲಿ ಸರಿಯಾದ ಉತ್ತರ ಗುರುತಿಸಲಾಗುತ್ತದೆಯಂತೆ. ಈ ಅನೈತಿಕ ಕ್ರಮದಿಂದ ಆಯೋಗದಲ್ಲಿರುವ ಭ್ರಷ್ಟರು ತಮಗೆ ಬೇಕಾದವರಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತಾರಂತೆ! ಈ ಭ್ರಷ್ಟ ವ್ಯವಸ್ಥೆಯನ್ನು ಒಳಹೊಕ್ಕಿ ನೋಡಿದರೆ ನಮ್ಮಂತಹ ಬಡವರಿಗೆ ದಾರಿಯೇ ಇಲ್ಲ ಎನಿಸುತ್ತದೆ. ಅಸಹಾಯಕರಾದ ನಾವೇನು ಮಾಡಬೇಕು ಎಂದು ತಿಳಿಯದಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.