ಶನಿವಾರ, ಮೇ 15, 2021
22 °C

ಕೆರೆಯಲ್ಲಿ ಅನಂತ ಪದ್ಮನಾಭ ದೇಗುಲ ನಿರ್ಮಾಣ

ಪ್ರಜಾವಾಣಿ ವಾರ್ತೆ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಕಂಬಾಲ ಹಳ್ಳಿಯ ಒಡೆಯನಕೆರೆಯಲ್ಲಿ ಅನಂತಪದ್ಮನಾಭ ಸ್ವಾಮಿ ದೇಗುಲವನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಕೆರೆ ಮಧ್ಯದಲ್ಲಿಯೇ ದೇಗುಲ ನಿರ್ಮಿಸುವುದರ ಜೊತೆಗೆ ವಿಭಿನ್ನ ಬಗೆಯ ಪರಿಕಲ್ಪನೆ ನೀಡಲು ಸಿದ್ಧತೆ ನಡೆದಿದೆ. ಧಾರ್ಮಿಕ ಕಾರ್ಯಗಳು ಈಗಾಗಲೇ ಆರಂಭ ಗೊಂಡಿವೆ.  ಇದರ ನಡುವೆ ಕೆಲ ರೈತರ ಮತ್ತು ಪರಿಸರವಾದಿಗಳು ಕೆರೆ ಮಧ್ಯದಲ್ಲಿ ದೇಗುಲ ನಿರ್ಮಾಣಕ್ಕೆ  ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.ಕೆರೆ ದಡದಲ್ಲಿ ಅಥವಾ ಸಮೀಪದಲ್ಲಿ ದೇಗುಲ ನಿರ್ಮಿಸುವುದರ ಬದಲು ನೀರಿನಲ್ಲೇ ದೇಗುಲ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳುವ ಕೆಲ ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

`ನೀರಿನ ಸಮಸ್ಯೆಯನ್ನು ಜಿಲ್ಲೆಯು ಈಗಾಗಲೇ ಹಲವಾರು ಕೆರೆಗಳನ್ನು ಕಳೆದುಕೊಂಡಿದೆ. ಕೆರೆಗಳು ಕಣ್ಮರೆಯಾಗುತ್ತಿರುವ ಕಾರಣ ಅಂತರ್ಜಲವು ಬತ್ತುತ್ತಿದೆ. ಇಂತಹ ಸಂದರ್ಭದಲ್ಲಿ ಕೆರೆ ಮಧ್ಯದಲ್ಲಿ ದೇವಾಲಯ ನಿರ್ಮಿಸುವುದು ಎಷ್ಟು ಸರಿ~ ಎಂದು ಅವರು ಪ್ರಶ್ನಿಸುತ್ತಿದ್ದಾರೆ.`ಕೆರೆಗೆ ಹಾನಿಯಿಲ್ಲ~: ಆದರೆ ದೇವಾಲಯ ನಿರ್ಮಿಸುತ್ತಿರುವ ಅನಂತಪದ್ಮನಾಭ ಸ್ವಾಮಿ ಟ್ರಸ್ಟ್‌ನವರು ಬೇರೆಯದ್ದೇ ಅನಿಸಿಕೆ ವ್ಯಕ್ತಪಡಿಸುತ್ತಾರೆ. `ಅನಂತಪದ್ಮನಾಭ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೆರೆ ಒಳಗಡೆಯೇ ಕಿರಿದಾದ ದೇವಾಲಯವಿದೆ. ಅದರ ಮೇಲೆ ವಿಶಿಷ್ಟ ರೀತಿಯ ದೇವಾಲಯ ನಿರ್ಮಿಸುತ್ತಿದ್ದೇವೆ. ಕೆರೆಗೆ ಯಾವುದೇ ಕಾರಣಕ್ಕೂ ಹಾನಿಯಾಗುವುದಿಲ್ಲ. ದೇವಾಲಯದ ಸುತ್ತಲೂ ಕೆರೆ ಆವರಿಸಿಕೊಳ್ಳುವುದರಿಂದ ಸುಂದರ ದೃಶ್ಯ ಕಾಣಸಿಗುತ್ತದೆ~ ಎಂದು ಟ್ರಸ್ಟ್‌ನ ಸದಸ್ಯರು ಹೇಳುತ್ತಾರೆ.`ಕೆರೆಗೆ ಯಾವುದೇ ರೀತಿಯಲ್ಲೂ ಹಾನಿ ಮಾಡದೇ ದೇಗುಲವನ್ನು ನಿರ್ಮಿಸುತ್ತವೆ. 25 ಅಡಿ ಅಡಿಪಾಯವನ್ನು ಹಾಕಿ ಸುಮಾರು 422 ಅಡಿಗಳಷ್ಟು ಸುತ್ತಳತೆಯಲ್ಲಿ ದೇವಾಲಯ ನಿರ್ಮಿಸುತ್ತೇವೆ.ಸಾವಿರಾರು ವರ್ಷಗಳ ಹಿಂದೆಯೇ ಕೆರೆಯಲ್ಲಿ ಕಿರಿದಾದ ಅನಂತ ಪದ್ಮನಾಭನ ದೇವಾಲಯವಿದ್ದ ಕಾರಣ ಇಲ್ಲಿ ನಿರ್ಮಿಸುತ್ತಿದ್ದೇವೆ. ಕೆರೆ ಪ್ರದೇಶದ ಸ್ವಲ್ಪ ಭಾಗವನ್ನು ಮಾತ್ರವೇ ತೆಗೆದುಕೊಳ್ಳುತ್ತೇವೆ ಹೊರತು ಬಹುಪಾಲು ಕೆರೆಗೆ ಯಾವುದೇ ರೀತಿಯಲ್ಲೂ ಹಾನಿ ಮಾಡುವುದಿಲ್ಲ. ಕೆರೆ ನೀರು ತುಂಬಿಕೊಂಡೇ ಇರುತ್ತದೆ. ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳಲಿದೆ. ಸುತ್ತಲೂ ಹಾವಿನ ಆಕಾರದ ಕಟ್ಟಡ ನಿರ್ಮಿಸಿ, ಮಧ್ಯೆ ದೇವಾಲಯ ಕಟ್ಟಲಾಗುವುದು~ ಎಂದು ದೇವಾಲಯದ ಅರ್ಚಕ ಅಶ್ವತ್ಥನಾರಾಯಣ ಆಚಾರ್ಯ ತಿಳಿಸಿದರು.`ಕೆರೆಗಳ ರಕ್ಷಣೆ ಅಗತ್ಯ~: `ನಮ್ಮ ಜಿಲ್ಲೆಯಲ್ಲಿ ಅಂತರ್ಜಲ ಬತ್ತುತ್ತಿದ್ದು, ಅಭಿವೃದ್ದಿ ಮತ್ತು ಇನ್ನಿತರ ಕಾರಣಗಳಿಗೆ ಕೆರೆಗಳನ್ನು ಮುಚ್ಚಲಾಗುತ್ತಿದೆ. ಕೆರೆಗಳನ್ನು ಸಂರಕ್ಷಿಸುವಂತೆ ಸರ್ಕಾರ ಹೇಳುತ್ತಿದೆ. ದೇವಾಲಯ ನಿರ್ಮಿಸುವ ಇಚ್ಛೆಯಿದ್ದರೆ, ಕೆರೆ ದಡದಲ್ಲಿ ಅಥವಾ ಸಮೀಪದಲ್ಲೇ ನಿರ್ಮಿಸಲಿ. ಕೆರೆಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೇ ಕೆರೆ ತುಂಬಿರುವ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ದೇವಾಲಯ ನಿರ್ಮಿಸುವುದು ಒಳ್ಳೆಯದಲ್ಲ. ನಿರ್ಮಾಣ ಕಾರ್ಯ ಪರಿಸರಕ್ಕೆ ಹಾನಿ ಮಾಡಿದಂತಾಗುತ್ತದೆ~ ಎಂದು ರೈತ ಮುಖಂಡ ಮಳ್ಳೂರು ಹರೀಶ್ ತಿಳಿಸಿದರು.`ನಮ್ಮ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಈಗಾಗಲೇ ಹಲವಾರು ದೇವಾಲಯಗಳಿವೆ. ಕೆಲವು ಶಿಥಿಲಾವಸ್ಥೆಯಲ್ಲಿದ್ದರೆ, ಇನ್ನೂ ಕೆಲವು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ರೀತಿಯ ದೇವಾಲಯಗಳಿಗೆ ಹೆಚ್ಚಿನ ಗಮನವನ್ನು ನೀಡಿ, ಅವುಗಳನ್ನು ಅಭಿವೃದ್ಧಿಪಡಿಸುವುದರ ಬದಲು ಹೊಸ ದೇವಾಲಯ ನಿರ್ಮಿಸುವ ಅಗತ್ಯವಿಲ್ಲ. ದೇವಾಲಯಕ್ಕೆ ವೆಚ್ಚ ಮಾಡಲಾಗುತ್ತಿರುವ ಕೋಟ್ಯಂತರ ರೂಪಾಯಿ ಹಣವನ್ನು ಜನರ ಕಲ್ಯಾಣಕ್ಕೆ ಅಥವಾ ನೀರಿನ ಸಮಸ್ಯೆ ಪರಿಹಾರಕ್ಕೆ ಸದ್ಬಳಕೆಯಾದರೆ, ಎಲ್ಲರಿಗೂ ಅನುಕೂಲವಾಗುತ್ತದೆ~ ಎಂದು ಅವರು ತಿಳಿಸಿದರು.`ಒತ್ತುವರಿ ಬಗ್ಗೆ ಗೊತ್ತಿಲ್ಲ~: `ಒಡೆಯನಕೆರೆಯಲ್ಲಿ ದೇವಾಲಯ ಕಟ್ಟುತ್ತಿರುವ ಅಂಶ ಗಮನಕ್ಕೆ ಬಂದಿದೆ. ಆದರೆ ಆ ಕೆರೆಯು ಒತ್ತುವರಿಯಾಗಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಿಲ್ಲ. ದಾಖಲೆಪತ್ರಗಳನ್ನು ಪರಿಶೀಲಿಸಿದರೆ ಮತ್ತು ಇನ್ನಿತರ ಮಾಹಿತಿ ಕಲೆ ಹಾಕಿದರೆ, ವಿಷಯವು ಸ್ಪಷ್ಟವಾಗುತ್ತದೆ. ಮುಂದಿನ ಕ್ರಮದ ಬಗ್ಗೆ ಚಿಂತನೆ ಮಾಡಲಾಗುವುದು~ ಎಂದು ಶಿಡ್ಲಘಟ್ಟದ ತಹಶೀಲ್ದಾರ ಭೀಮಾ ನಾಯಕ್ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.