ಮಂಗಳವಾರ, ಮೇ 24, 2022
30 °C

ಕೇಂದ್ರದ ಯೋಜನೆಗೆ ರಾಜ್ಯದ ಅಸಹಕಾರ - ಮಲ್ಲಿಖಾರ್ಜುನ ಖರ್ಗೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯಕ್ಕೆ ಮಂಜೂರಾದ ಯೋಜನೆಗಳು ಇತರ ರಾಜ್ಯಗಳ ಪಾಲಾಗಲಿವೆ’ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ ಸಚಿವ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಎಚ್ಚರಿಕೆ ನೀಡಿದರು.ಇಂದಿರಾನಗರದ ಕಾರ್ಮಿಕರ ರಾಜ್ಯ ವಿಮಾ ನಿಗಮದ ಆಸ್ಪತ್ರೆಯ ಮುಂಭಾಗದಲ್ಲಿ ರೂ 82 ಕೋಟಿ ವೆಚ್ಚದಲ್ಲಿ ಇಎಸ್‌ಐ ನರ್ಸಿಂಗ್ ಕಾಲೇಜು ಹಾಗೂ 1000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಇಂಥ ಬೃಹತ್ ವೆಚ್ಚದ ಕಾಮಗಾರಿಗಳ ಉದ್ಘಾಟನೆಗೆ ಬರುವುದಿಲ್ಲ. ಆದರೆ ಐದು ಕೋಟಿ ವೆಚ್ಚದ ರಾಜ್ಯದ ಯೋಜನೆಗಳಿಗೆ ಚಾಲನೆ ನೀಡಲು ಎಲ್ಲಿದ್ದರೂ ಹಾಜರಾಗುತ್ತಾರೆ’ ಎಂದು ವ್ಯಂಗ್ಯವಾಡಿದರು.‘ಸುಮಾರು ರೂ 1900 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಹೈಟೆಕ್ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಸಂಬಂಧಿ ಕಾಲೇಜುಗಳ ಸ್ಥಾಪನೆಗೆ ವ್ಯಯಿಸಲಾಗುತ್ತಿದೆ. ಕೇಂದ್ರದ ಕೌಶಲ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಈ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಭೂಮಿ ನೀಡುವಂತೆ ಕೋರಲಾಗಿತ್ತು. ಆದರೆ ಇನ್ನೂವರೆಗೂ ಮಂಜೂರು ಮಾಡಿಲ್ಲ. 20 ಎಕರೆ ಕೇಳಿದರೆ ಕೇವಲ ಐದು ಎಕರೆ ನೀಡುತ್ತಾರೆ. ಇಂಥ ಅಸಹಕಾರ ಧೋರಣೆಯನ್ನು ನಿಲ್ಲಿಸಬೇಕು. ಸರ್ಕಾರ ತನಗೆ ಬೇಕಾದಷ್ಟು ಭೂಮಿಯನ್ನು ಇಟ್ಟುಕೊಂಡು, ಉಳಿದದ್ದನ್ನಾದರೂ ಯೋಜನೆಗಳ ಅನುಷ್ಠಾನಕ್ಕೆ ನೀಡಲಿ’ ಎಂದು ಕುಟುಕಿದರು.‘ಈಗಾಗಲೇ ರೂ 900 ಕೋಟಿ ವೆಚ್ಚದಲ್ಲಿ ಗುಲ್ಬರ್ಗದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ವಿವಿಧೆಡೆ ಹಾಗೂ ರಾಜ್ಯದಾದ್ಯಂತ ರೂ 650 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ಮೆಡಿಕಲ್, ಡೆಂಟಲ್ ಕಾಲೇಜು ಹಾಗೂ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು.‘ಭಾರತ ಸರ್ಕಾರವು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ’ (ಆರ್‌ಎಸ್‌ಬಿವೈ) ಎಂಬ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಂತೆ ಬಡವರಿಗೆ ವಾರ್ಷಿಕ ರೂ 30 ಸಾವಿರ ಮೊತ್ತದವರೆಗೂ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗುವುದು. ಈ ಯೋಜನೆ ವಿವಿಧ ಜಿಲ್ಲೆಗಳಲ್ಲಿ ಹೇಗೆ ನಡೆದಿದೆ ಎಂಬುದನ್ನಾದರೂ ಸಚಿವರು ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.ಉದ್ಧಾರ ಆಗುವುದಿಲ್ಲ: ಬಡವರು ಹಾಗೂ ಕೇಂದ್ರ ಸರ್ಕಾರದ ಮಧ್ಯೆ ರಾಜ್ಯ ಸರ್ಕಾರವು ಸೇತುವೆಯಂತೆ ಕೆಲಸ ಮಾಡಬೇಕು. ಅದು ಬಿಟ್ಟು ನನಗೆ ಮಾಟ, ಮಂತ್ರ ಮಾಡಿಸಿದ್ದಾರೆ ಎಂದು ಹೇಳುತ್ತಾ ಕುಳಿತರೆ ಅವರೂ ಉದ್ಧಾರ ಆಗುವುದಿಲ್ಲ. ನಾವೂ ಉದ್ಧಾರ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳನ್ನು ಚುಚ್ಚಿದರು.ರಾಜ್ಯ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರು ಮಾತನಾಡಿ, ‘ಇಎಸ್‌ಐ ನಿಗಮದ ಮೂಲಕ ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರ ಒಟ್ಟು ರೂ. 1500 ಕೋಟಿ ಹಣವನ್ನು ಮಂಜೂರು ಮಾಡಿದೆ. ಕಾರ್ಮಿಕ ಸಚಿವರು ನಮ್ಮವರೇ ಆದುದರಿಂದ ಹಲವಾರು ಯೋಜನೆಗಳು ರಾಜ್ಯಕ್ಕೆ ಒಲಿದಿವೆ’ ಎಂದು ಅಭಿನಂದಿಸಿದರು.

‘ಸರ್ಕಾರ ಸಹಕಾರ ನೀಡುತ್ತಿಲ್ಲ ಎಂಬ ಸಚಿವ ಖರ್ಗೆ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧ. ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ಯೋಜನೆ ಕೇಂದ್ರವನ್ನು ತೆರೆಯಲು ಬೆಂಗಳೂರಿನಲ್ಲಿ ಐದು ಎಕರೆ ಜಮೀನು ಕೊಡಿಸುವ ಕುರಿತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡಿ, ಶೀಘ್ರವೇ ಮಂಜೂರು ಮಾಡಿಸುತ್ತೇನೆ’ ಎಂದರು.ಸಂಸದ ಪಿ.ಸಿ.ಮೋಹನ್, ಶಾಸಕರಾದ ಎನ್.ಎ.ಹ್ಯಾರೀಸ್, ಎಸ್.ರಘು, ಬಿಬಿಎಂಪಿ ಸದಸ್ಯೆ ಗೀತಾ ಶ್ರೀನಿವಾಸರೆಡ್ಡಿ, ಇಎಸ್‌ಐ ನಿಗಮದ ಮಹಾ ನಿರ್ದೇಶಕ ಡಾ.ಸಿ.ಎಸ್.ಕೇದಾರ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.