ಬುಧವಾರ, ಮೇ 25, 2022
24 °C

ಕೈಕೊಟ್ಟ ಮೆಣಸು, ಕೈ ಹಿಡಿದ ಕಾಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈಕೊಟ್ಟ ಮೆಣಸು, ಕೈ ಹಿಡಿದ ಕಾಫಿ

ಯಳಂದೂರು:  ಕಪ್ಪು ಚಿನ್ನವೆಂದೆ ಭಾವಿಸಿದ್ದ ಕಾಳು ಮೆಣಸಿಗೀಗ ಎಲೆ ಮುದುರು ರೋಗ, ಬುಡದಲ್ಲಿ ಕಾಳು ಕಟ್ಟದ ಸಾಂಬಾರ ಪದಾರ್ಥಗಳ ರಾಣಿ ಏಲಕ್ಕಿ, ಇವುಗಳ ನಡುವೆಯೇ ರೈತರ ಆಶಾಕಿರಣವಾಗಿ ಕಾಫಿ ಫಸಲು ಮಾತ್ರ ಇವರ ಕೈ ಹಿಡಿದಿದೆ. ಮೆಣಸು ಹಾಗೂ ಏಲಕ್ಕಿಯ ನಷ್ಟವನ್ನು ಕಾಫಿ ಬೆಳೆದು ಲಾಭ ಕಾಣುವ ಆಸೆಯಲ್ಲಿದ್ದಾರೆ ತೋಟಗಾರಿಕ ಕ್ಷೇತ್ರದಲ್ಲಿ ತೊಡಗಿರುವ ಹಿಡುವಳಿದಾರರು.ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಇತ್ತೀಚಿಗೆ ಕೆಲ ಕೃಷಿಕರೂ ಜೇನು ಸಂಗ್ರಹಿಸುವುದರ ಜತೆಗೆ ಹಣ್ಣು, ಸಾಂಬಾರ ಬೆಳೆ ಹಾಗೂ ಪಾನೀಯ ಬೆಳೆಗಳಿಗೂ ಒತ್ತು ನೀಡಿದ್ದಾರೆ. ಇದು ಕಳೆದ ವರ್ಷ ಅಧಿಕ ಇಳುವರಿ ಹಾಗೂ ಉತ್ತಮ ಆದಾಯವನ್ನು ತಂದು ಕೊಟ್ಟಿತ್ತು. ಆದರೆ ಅತಿಯಾದ ತೇವಾಂಶ ಹಾಗೂ ಆಳು-ಕಾಳುಗಳ ಸಮಸ್ಯೆಯೂ ಅಧಿಕ ಉತ್ಪನ್ನ ಪಡೆಯುವ ಬೇಸಾಯಗಾರರ ಆಸೆಗೆ ಹಿನ್ನಡೆಯಾಗಿ ಪರಿಣಮಿಸಿದೆ.ಕಾಳು ಮೇಣಸಿಗೆ ಎಲೆ ಚುಕ್ಕೆ ಬಾಧೆ, ಸೊರಗು ರೋಗ, ಬೇರು ಕೊಳೆಯುವ ಮೂಲಕ ಉತ್ಪಾದಕರಿಗೆ ನಷ್ಟ ಉಂಟುಮಾಡಿದೆ. ಬಹುತೇಕ ಅಲ್ಪ ಪ್ರಮಾಣದಲ್ಲಿ ಬೆಳೆಯುವ ಸೋಲಿಗರೂ ಇದರಿಂದ ಲಾಭದಲ್ಲಿ ಇಳಿತವಾಗಲಿದೆ.  `ನಮ್ಮ 5 ಎಕರೆ ಜಮೀನಿನಲ್ಲಿ ಕಾಫಿಯ ಜೊತೆ, ಏಲಕ್ಕಿ ಹಾಗೂ ಮೆಣಸು ಗಿಡಗಳನ್ನು ಫಸಲು ಮಾಡಿದ್ದೇವೆ. ಕಳೆದ ಬಾರಿ ಕಾಳು ಮೆಣಸನ್ನು 2.5 ಟನ್‌ಗಳ ಇಳುವರಿಯನ್ನು 200 ಸಸಿಗಳಿಂದ ಸಂಗ್ರಹಿಸಲಾಗಿತ್ತು. ಈ ಬಾರಿ 250 ಕಿಲೋ ಪಡೆಯಲು ಪರದಾಡುವಂತಾಗಿದೆ.  100ಕ್ಕೂ ಅಧಿಕ ಏಲಕ್ಕಿ ಗಿಡಗಳು ಫಲ ಕಚ್ಚಿವೆ. ಆದರೆ ಬೆರಳೆಣಿಕೆಯಷ್ಟು ಮಾತ್ರ ಕಾಯಿಗಟ್ಟಿವೆ. ಉಳಿದವು ನಿರೀಕ್ಷಿಸಿದಷ್ಟು ಇಳುವರಿ ಇಲ್ಲ. ಇದರಿಂದ 20 ಕಿಲೋ ಪಡೆಯುತ್ತಿದ್ದ ಕಡೆ ಕೇವಲ ಒಂದೆರಡು ಕಿಲೋ ಮಾತ್ರ ಈ ವರ್ಷ ನಿರೀಕ್ಷಿಸಬಹುದು. ಹಾಗಾಗಿ ವಿಶೇಷ ಆರೈಕೆ ಮಾಡುವುದನ್ನು ಬಿಟ್ಟಿದ್ದೇವೆ~ ಎನ್ನುತ್ತಾರೆ ರೈತ ವಾಸುದೇವ್.ಸಾವಯವ ಕೃಷಿಯಲ್ಲಿ ಕಾಫಿಯೂ ನಿರೀಕ್ಷೆಗೂ ಮೀರಿ ಫಲಕಚ್ಚಿದೆ. ಡಿಸೆಂಬರ್ ವೇಳೆಗೆ ಕೂಯ್ಲಿಗೆ ಬರುತ್ತದೆ. ಇಲ್ಲಿ ಸಿಗುವ ಕಾಫಿಗೆ ಬೇಡಿಕೆ ಇರುವುದರಿಂದ ಹೆಚ್ಚಿನ ವರಮಾನ ನಿರೀಕ್ಷಿಸಬಹುದು ಎನ್ನುತ್ತಾರೆ ಅವರು.`ಶೀಘ್ರ ಹಾಗೂ ನಿಧಾನ ಸೊರಗು ರೋಗಗಳು ಬಂದಾಗ ಗಿಡವನ್ನು ಕಿತ್ತು ಸುಡಬೇಕು. ನಾಟಿ ಮಾಡುವಾಗ ಆರೋಗ್ಯಪೂರಿತ ಗಿಡವನ್ನೇ ನೆಡಬೇಕು. ಜಮೀನಿನಲ್ಲಿ ನೀರು ಬಸಿದು ಹೋಗಬೇಕು. ಬೇರಿಗೆ ಗಾಯವಾಗದಂತೆ ಬಳ್ಳಿ ಕತ್ತರಿಸಿ ನೆಡಬೇಕು. ಚಿಗುರು ನೆಲಕ್ಕೆ ತಾಗದಂತಿರಬೇಕು. ಪ್ರತಿ ಲೀ. ನೀರಿಗೆ  2 ಗ್ರಾಂ ಕಾರ್ಬನ್‌ಡೈಜಿನ್ ಬಳಸಿ ಸಿಂಪಡಿಸಬೇಕು. ನಿಧಾನ ಸೊರಗು ರೋಗಕ್ಕೆ ಪ್ರತಿ ಲೀ ನೀರಿಗೆ 3 ಗ್ರಾಂ ಕಾಫರ್ ಆಕ್ಸಿಫ್ಲೋರೈಡ್ ಹಾಕಿ ಬಳಸಬೇಕು. 50 ರಿಂದ 60 ಗ್ರಾಂ ಟ್ರೈಕೊಡರ್ಮ ಕೊಟ್ಟಿಗೆ ಗೊಬ್ಬರಕ್ಕೆ ಸೇರಿಸಿ ಬಳಸಬೇಕು~ ಎಂದು ಕೃಷಿ ವಿಜ್ಞಾನಿ ಹಾಗೂ ಕೀಟತಜ್ಞ ಶಿವರಾಯ ನಾವಿ `ಪ್ರಜಾವಾಣಿ~ಗೆ ತಿಳಿಸಿದರು.`ಬಿಳಿಗಿರಿಬೆಟ್ಟದಲ್ಲಿ ಗಿರಿಜನರು ಹೆಚ್ಚಾಗಿ ಕಾಫಿ, ಮೆಣಸು ಹಾಗೂ ಏಲಕ್ಕಿ ಬೆಳೆಯುತ್ತಾರೆ. ಹುಲಿ ಯೋಜನೆಯಡಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ ನಿಷೇಧ ಇರುವುದರಿಂದ ಇವುಗಳ ಮೇಲೆ ಅವಲಂಬನೆ ಇದೆ. ಆದರೆ ಇವುಗಳನ್ನು ವೈಜ್ಞಾನಿಕವಾಗಿ ಹೇಗೆ ಸಿದ್ದಪಡಿಸಬೇಕು. ರೋಗ ಬಂದಾಗ ನಿರ್ವಹಣೆ ಹೇಗೆ ಎಂಬುದರ ಬಗ್ಗೆ  ತಿಳಿಸಿಕೊಟ್ಟರೆ ಉತ್ತಮ~ ಎನ್ನುತ್ತಾರೆ ಜಿ.ಪಂ. ಸದಸ್ಯೆ ಕೇತಮ್ಮ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.