ಶುಕ್ರವಾರ, ಮೇ 7, 2021
22 °C

ಕೈಗಾರಿಕೆಗೆ ಭೂ ಸ್ವಾಧೀನ: ಸಿಬಿಐ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಸತಿ ಹಾಗೂ ಕೈಗಾರಿಕೆ ಸ್ಥಾಪನೆಗಾಗಿ 2010ರಿಂದ ಇದುವರೆಗೂ ರಾಜ್ಯದಲ್ಲಿ ನಡೆದಿರುವ ಎಲ್ಲ ಭೂ ಸ್ವಾಧೀನ ಹಾಗೂ ಹಂಚಿಕೆ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ ಪ್ರಮುಖರು ನಗರದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರುವಂತೆ ಕರ್ನಾಟಕದಲ್ಲೂ ಕೈಗಾರಿಕೆ ಸ್ಥಾಪನೆಗೆ ಭೂಮಿಯನ್ನು ಗುತ್ತಿಗೆಗೆ ನೀಡುವ ಪರಿಪಾಠ ಇತ್ತು. ಆದರೆ ಬಿಜೆಪಿ ಸರ್ಕಾರ ಈ ಮಸೂದೆಗೆ ತಿದ್ದುಪಡಿ ಮಾಡಿ ಕೈಗಾರಿಕೆಗಳಿಗೆ ಭೂಮಿಯನ್ನು ಕ್ರಯ ಮಾಡಿಕೊಡುವ ಹೊಸ ಸಾಂಪ್ರದಾಯಕ್ಕೆ ನಾಂದಿ ಹಾಡಿತ್ತು. ಈ ಮೂಲಕ ರಾಜ್ಯದ ಭೂಮಿಯನ್ನು ಹೊರ ರಾಷ್ಟ್ರಗಳ ಕೈಗಾರಿಕೋದ್ಯಮಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.ಸ್ವಾತಂತ್ರ್ಯ ಬಂದಂದಿನಿಂದ 2010ರವರೆಗೂ ಎಲ್ಲ ಸರ್ಕಾರಗಳು ಕೇವಲ 60 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಗುತ್ತಿಗೆ ನೀಡಿದ್ದವು. ಆದರೆ ಬಿಜೆಪಿ ಸರ್ಕಾರ 2010ರಿಂದ ಈಚಿನವರೆಗೆ ಎರಡೂವರೆ ವರ್ಷ ಕಾಲದಲ್ಲಿ ಒಟ್ಟು 2 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಕೈಗಾರಿಕೋದ್ಯಮಿಗಳಿಗೆ ಅತಿ ಹೆಚ್ಚು ರಿಯಾಯಿತಿ ದರದಲ್ಲಿ ನೇರವಾಗಿ ಮಾರಾಟ ಮಾಡಿದೆ ಎಂದು ದೂರಿದರು.ರಾಜ್ಯವಿಡಿ ನಡೆದಿರುವ ಭೂ ಸ್ವಾಧೀನ ಹಾಗೂ ದುರುಪಯೋಗದಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದೆ. ಸಂಪನ್ಮೂಲಗಳ ದುರ್ಬಳಕೆ ನಡೆದಿದೆ. ಅತಿ ದೊಡ್ಡ ಪ್ರಮಾಣದ ಅಕ್ರಮ, ಅವ್ಯವಹಾರ ನಡೆದಿದೆ. ಆದ್ದರಿಂದ ವಸತಿ ಹಾಗೂ ಕೈಗಾರಿಕೆ ಸ್ಥಾಪನೆಗಾಗಿ ನಡೆದಿರುವ ಎಲ್ಲ ಭೂ ಸ್ವಾಧೀನ, ಹಂಚಿಕೆ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.ವಕೀಲರಾದ ಕೆ.ನರೇಂದ್ರಬಾಬು, ಕೆ.ಸುಮನ್, ಸೋಮಶೇಖರ್, ಶ್ರೀನಿವಾಸ್, ಎ.ವಿ.ಆನಂದ್, ಎನ್.ವೆಂಕಟೇಶಪ್ಪ, ಚಂದ್ರಪ್ಪ, ಟಿ.ಶ್ರೀನಿವಾಸ್, ಸಹನಾಮೂರ್ತಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.