ಗುರುವಾರ , ಮೇ 19, 2022
22 °C

ಕೈ, ಜೆಡಿಎಸ್‌ನಲ್ಲಿ ಟಿಕೆಟ್ ಹಣಾಹಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಏ. 9 ರಂದು ನಡೆಯಲಿರುವ ಮಧ್ಯಂತರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮೊದಲನೇ ದಿನವಾದ ಬುಧವಾರವೇ ನಾಮಪತ್ರ ಸಲ್ಲಿಸಲು ಸರ್ವ ಸಿದ್ಧತೆ ನಡೆಸಿದ್ದರೂ ಇತರೆ ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳ ತಲಾಶೆ ಇನ್ನೂ ಮುಂದುವರೆದಿದೆ. ಹೀಗಾಗಿ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಮೂಡಿದೆ. ಇನ್ನಿಲ್ಲದ ಊಹಾಪೋಹಗಳಿಗೆ ಎಡೆಯಾಗಿದೆ.ಬಿ.ಪಿ.ವೆಂಕಟಮುನಿಯಪ್ಪ ತಾವೂ ಚುನಾವಣಾ ಆಕಾಂಕ್ಷಿಯೆಂದು ಸಾರುವ ಮೂಲಕ ಬಿಜೆಪಿ ವಲಯದಲ್ಲಿ ಸಂಚಲನೆ ಮೂಡಿಸಿದ್ದರು. ಆದರೆ ಮಂಗಳವಾರ ಬೆಳಗ್ಗೆಯೇ ಬೆಂಗಳೂರಿನಲ್ಲಿ ನಡೆದ ಪಕ್ಷ ಮುಖಂಡರ ಉನ್ನತ ಮಟ್ಟದ ಸಭೆಯಲ್ಲಿ ಎಂ.ನಾರಾಯಣಸ್ವಾಮಿ ಅವರನ್ನೇ ಅಧಿಕೃತ ಅಭ್ಯರ್ಥಿಯೆಂದು ಸರ್ವಾನುಮತದಿಂದ ಅನುಮೋಧಿಸಿರುವ ಹಿನ್ನೆಲೆಯಲ್ಲಿ  ಗೊಂದಲಕ್ಕೆ ತೆರೆ ಕಂಡಿದೆ. ಎಂ.ನಾರಾಯಣಸ್ವಾಮಿ ಅವರ ಸ್ವಂತ ಊರಾದ ಬೆಳಗಾನಹಳ್ಳಿಯ ಮಾರಿಯಮ್ಮ ದೇವಸ್ಥಾನದಲ್ಲಿ ಬಿ.ಪಿ.ವೆಂಕಟಮುನಿಯಪ್ಪ ಸೇರಿದಂತೆ ಜಿಲ್ಲಾ ಪಕ್ಷ ಪ್ರಮುಖರೆಲ್ಲಾ ಸೇರಿ ವಿಶೇಷ ಪೂಜೆ ಮಾಡುವ ಮೂಲಕ ತಮ್ಮಲ್ಲಿ ಸಧ್ಯಕ್ಕೆ ಯಾವುದೇ ಭಿನ್ನಮತವಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.ಜೆ.ಡಿ.ಎಸ್‌ನಲ್ಲಿ ಟಿಕೆಟ್ ಆಕಾಂಕ್ಷಿ ಎಸ್.ಬಿ.ಮುನಿವೆಂಕಟಪ್ಪ ಅವರ ಪರವಾಗಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡರೇ ಕಣಕ್ಕೆ ಇಳಿದಿದ್ದಾರೆ. ಅವರೊಂದಿಗೆ ಮಂಗಮ್ಮ ಮುನಿಸ್ವಾಮಿ, ಶ್ರೀಕೃಷ್ಣ, ಮಾಜಿ ಶಾಸಕ ಸಿ.ವೆಂಕಟೇಶಪ್ಪ ಹೆಸರೂ ಕೇಳಿ ಬರುತ್ತಿವೆ. ಆದರೆ ಕಳೆದ 25 ವರ್ಷಗಳಿಂದ ಜಿಲ್ಲಾ ರಾಜಕಾರಣದಲ್ಲಿ ಅಜಾತಶತ್ರು, ಸಜ್ಜನಿಕೆಯ ರಾಜಕಾರಣಿ ಎಂಬ ಹೆಸರು ಗಳಿಸಿರುವ ಎಸ್.ಬಿ.ಮುನಿವೆಂಕಟಪ್ಪ ಅವರಿಗೆ ಟಿಕೆಟ್ ಸಿಗುವ ಅವಕಾಶಗಳು ಹೆಚ್ಚಾಗಿದೆ. ಆದರೆ ನಾಮಪತ್ರ ಸಲ್ಲಿಕೆ ದಿನ ಸಮೀಪಿಸಿದ್ದರೂ ಅಭ್ಯರ್ಥಿ ತೀರ್ಮಾನದಲ್ಲಿ ಇನ್ನೂ ಮೂಡದ ಒಮ್ಮತವು ಆಕಾಂಕ್ಷಿಗಳಲ್ಲಿ ಪೈಪೋಟಿಯನ್ನು ತೀವ್ರಗೊಳಿಸಿದೆ.ಕಾಂಗ್ರೆಸ್ ವಲಯದಲ್ಲಿ ಎಸ್.ಎನ್.ನಾರಾಯಣಸ್ವಾಮಿ ಅವರಿಗೇ ಟಿಕೆಟ್ ಎಂಬ ಗಾಢವಾದ ವದಂತಿ ಹರಡಿದೆ. ಅದರ ಬೆನ್ನಲ್ಲೇ ಜಿ.ಪಂ.ಮಾಜಿ ಅಧ್ಯಕ್ಷ ರಾಮಚಂದ್ರ ಹೆಸರೂ ಕೇಳಿಬರುತ್ತಿದೆ. ಎಸ್.ಎನ್.ನಾರಾಯಣಸ್ವಾಮಿ ಹಣ, ಜನ ಬಲದಲ್ಲಿ ಸದ್ಯಕ್ಕೆ ಪ್ರಚಾರದಲ್ಲಿರುವ ಆಕಾಂಕ್ಷಿಗಳಲ್ಲಿ ಒಂದು ಕೈ ಮಿಗಿಲು. ಹೀಗಾಗಿ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಪೈಪೋಟಿ ಸಿಗುತ್ತದೆ. ಇಲ್ಲವಾದರೆ ಎಷ್ಟೇ ಶತಪ್ರಯತ್ನ ಪಟ್ಟರೂ ಸೋಲು ಖಚಿತ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗೆ ಇತರೆ ಪಕ್ಷಗಳಲ್ಲಿ ಆಕಾಂಕ್ಷಿಗಳು ಮುಸುಕಿನಲ್ಲಿ ಗುದ್ದಾಟ ನಡೆಸಿದ್ದರೂ ಬಿಜೆಪಿ ಅಭ್ಯರ್ಥಿಯು ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಮೊದಲಿಗರಾಗಲಿದ್ದಾರೆ.   ಇತರರು ನಾಮಪತ್ರ ಸಲ್ಲಿಸುವಲ್ಲಿಯೇ ಹಿನ್ನಡೆ ಅನುಭವಿಸಲಿದ್ದಾರೆ. ನಾರಾಯಣಸ್ವಾಮಿ  ಇಂದು ನಾಮಪತ್ರ ಸಲ್ಲಿಕೆ

ಬಂಗಾರಪೇಟೆ: ಮಾಜಿ ಶಾಸಕ ಎಂ.ನಾರಾಯಣಸ್ವಾಮಿ  ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ಆ ಸಂದರ್ಭದಲ್ಲಿ ರಾಜ್ಯ ಘಟಕ ಅಧ್ಯಕ್ಷ ಈಶ್ವರಪ್ಪ, ಗೃಹ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ, ಜಿ.ಪಂ.ಅಧ್ಯಕ್ಷೆ ಮಂಜುಳ, ಶಾಸಕ ವರ್ತೂರು ಪ್ರಕಾಶ್, ಎಸ್.ಎನ್.ಕೃಷ್ಣಯ್ಯಶೆಟ್ಟಿ ಆಗಮಿಸುವರು ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್.ಲಕ್ಷ್ಮಯ್ಯ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಲಾಗಿದೆ. ಪಕ್ಷದಲ್ಲಿ, ಕ್ಷೇತ್ರದಲ್ಲಿ ಯಾರಿಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಅಸಮಾಧಾನಕ್ಕೆ ಎಡೆಯಿಲ್ಲ. ಸಭೆ ಮುಗಿಸಿಕೊಂಡು ನೇರವಾಗಿ ಎಂ.ನಾರಾಯಣಸ್ವಾಮಿ ಅವರ ಸ್ವಂತ ಊರಾದ ಬೆಳಗಾನಹಳ್ಳಿಯ ಮಾರಿಯಮ್ಮ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಬರಲಾಗಿದೆ ಎಂದರು. ಬುಧವಾರ ಬೆಳಗ್ಗೆ 11 ಗಂಟೆಗೆ ಎ.ಪಿ.ಎಂ.ಸಿ. ಯಾರ್ಡ್ ಮುಂದಿನ ಜಾಗದಲ್ಲಿ ಪಕ್ಷದ

 

 

  

ಕಾರ್ಯಕರ್ತರ ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ. ಸಭೆಗೆ ರಾಜ್ಯ ಮಟ್ಟದ ಮುಖಂಡರೆಲ್ಲರೂ  ಆಗಮಿಸುವರು.

ಸಭೆಯ ನಂತರ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

 ಬಿಜೆಪಿ ಘಟಕ ಅಧ್ಯಕ್ಷ ಎನ್.ಲಕ್ಷ್ಮಯ್ಯ, ಕೃಷಿ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ಜಿ.ಪಂ.ಸದಸ್ಯೆ ಮುತ್ಯಾಲಮ್ಮ, ತಾ.ಪಂ.ಅಧ್ಯಕ್ಷೆ ತೇಜ, ಉಪಾಧ್ಯಕ್ಷ ಅಮರೇಶ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಡಾ.ಕೃಷ್ಣಮೂರ್ತಿ, ಓಂ ಶಕ್ತಿ ಚಲಪತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.