ಶನಿವಾರ, ಜನವರಿ 18, 2020
20 °C
ಮಿತಿ ಕಥೆ

ಕೊಂಡಿ

–ಶಾಂತಿ ನಾಯಕ Updated:

ಅಕ್ಷರ ಗಾತ್ರ : | |

ಲತಾ ಊಟಕ್ಕೆ ಬಡಿಸು, ಲತಾ ಮಜ್ಜಿಗೆ ತಾ, ಇಂಥ ವಾಕ್ಯಗಳು ಇತ್ತೀಚೆಗೆ  ನನ್ನ ಕಿವಿ­ಯನ್ನು ಇರಿಯತೊಡಗಿವೆ. ಆದರೇನು ಮಾಡು­ವುದು? ಅವನ್ನು ಕೇಳುವುದರಿಂದ  ತಪ್ಪಿಸಿಕೊಳ್ಳ­ಲಾ­ಗು­ತ್ತಿಲ್ಲ. ಇದು ಅನಿವಾರ್ಯವಾಗಿದೆ.ಇಂದು ನನ್ನ  ಆಫೀಸಿಗೆ ರಜೆ. ಮನೆಯ­ಲ್ಲಿದ್ದೇನೆ. ಮನೆಗೆಲಸದಲ್ಲಿ ಇವ­ಳಿಗೆ ಚಿಕ್ಕಪುಟ್ಟ ಸಹಾಯ ಮಾಡುತ್ತಿದ್ದೇನೆ. ಇಂಥ ದಿನ­ಗಳಲ್ಲಾದರೂ ಇವರು ನನ್ನನ್ನು ಕರೆದು  ಸ್ನಾನಕ್ಕೆ ಪಂಚೆ ಕೊಡು, ಊಟಕ್ಕೆ ಬಡಿಸು ಎಂದು ಹೇಳಬಾರದೇ?ನಾನು ಮುಂಜಾನೆಯೇ ಕೆಲಸಕ್ಕೆ ಹೊರಡಬೇಕು. ಮನೆಯಲ್ಲಿ ಚಿಕ್ಕ ಮಕ್ಕಳು, ನನ್ನ ಆಫೀಸಂತೂ ಬಹಳ ದೂರ. ಇವರದು ಮನೆಗೆ ಸಮೀಪವೇ ಇದೆ.  ಆಫೀಸಿನಿಂದ ಇವರು ಬೇಗ ಮನೆಗೆ ಬರುತ್ತಾರೆ. ಆದರೆ ನನ್ನ ಹೆಚ್ಚಿನ ವೇಳೆ ಬಸ್ ಪ್ರಯಾಣದಲ್ಲೇ ಕಳೆದು ಹೋಗುತ್ತದೆ. ಸಂಜೆ ಅಡುಗೆ ಮನೆಗೆ ಕಾಲಿಡು­ವುದು ಬೇಡವೆನಿಸಿ ಹಾಸಿಗೆ ಮೇಲೆ ಉರುಳು­ತ್ತೇನೆ ಅಥವಾ ಮಕ್ಕಳೊಂದಿಗಿರುತ್ತೇನೆ. ನಮ್ಮ ಅಗತ್ಯದ ಅಡುಗೆಗಳನ್ನೆಲ್ಲ ಇವಳಿಗೆ  ಕಲಿಸಿದ್ದೇನೆ. ಇವಳು ಚೆನ್ನಾಗಿ ಕಲಿತುಕೊಂಡು  ಮನಸ್ಸಿಟ್ಟು ಮಾಡು­ತ್ತಾಳೆ. ಇವರೇ ಒಮ್ಮೆ ಹೇಳಿದ್ದರು ‘ಲತಾ ನಿನಗಿಂತ ಚೆನ್ನಾಗಿ ಅಡುಗೆ ಮಾಡುತ್ತಾಳೆ’. ‘ಹೌದು ಅದು ಅವಳ ವೃತ್ತಿ. ಅದರಲ್ಲಿ ಚ್ಯುತಿ ಬಂದರೆ  ಅವಳು ಒಳ್ಳೆಯ ಕೆಲಸದವಳಾ­ಗುವು­ದಿಲ್ಲ’ ಎಂದು ಟಿಪ್ಪಣಿ ಹೇಳಿದ್ದೆ.ಅಡುಗೆಯಷ್ಟೇ ಅಲ್ಲ, ಮನೆ– ಮಕ್ಕ­ಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಈಗಿನ ಕಾಲದಲ್ಲಿ ಇಂಥ  ಕೆಲಸದವರು ಸಿಗುವುದು ದುರ್ಲಭ. ಆದರೆ ಇಲ್ಲಿ ಏನೋ ಕೊರತೆ ಇದ್ದಂತೆ  ನನಗನಿಸುತ್ತದೆ. ಇವಳು ನನ್ನ ಹಕ್ಕನ್ನು ಕಸಿದು­ಕೊಳ್ಳು­ತ್ತಿದ್ದಾಳೆಯೇ? ಹಕ್ಕು ಎಂಬ ಶಬ್ದ ಬಹಳ  ಗಂಭೀರ ಎನಿಸಬಹುದು. ಹಾಗಲ್ಲ, ನನ್ನ ಗಂಡನಿಗೆ ಬಡಿಸುವ, ಚಹಾ ಕಪ್‌, ಬಟ್ಟೆಬರೆ ಒಯ್ದು ಕೊಡು­ವಂಥ ಚಿಕ್ಕ­ಪುಟ್ಟ ಕೆಲಸವನ್ನು ಅಥವಾ ನಮ್ಮಿಬ್ಬರ ನಡುವೆ  ಆತ್ಮೀಯ ಪರಿಸರ  ನಿರ್ಮಾ­ಣಕ್ಕೆ  ಅವಶ್ಯವಾದ ಕೊಂಡಿ­ಯನ್ನು  ನನಗಾಗಿ ಉಳಿಸುವ, ಕಲ್ಪಿಸಿಕೊಡುವ  ಪ್ರೌಢತೆ ಇವಳ­ಲ್ಲಿಲ್ಲ.  ಇವಳಲ್ಲಿ ಇರದಿದ್ದರೆ ಏನಾಯಿತು  ಇದು ನನ್ನ ಮನೆ. ಈತ ನನ್ನ ಗಂಡ. ಈ ಅವಕಾಶವನ್ನು ನಾನೇ  ಬಳಸಿಕೊಳ್ಳಬಹುದ­ಲ್ಲವೇ?  ಹೌದು, ಅದೂ ನಿಜ ಅನ್ನಿ. ಇವಳಿಗೆ ಸರಿಯಾದ ನಡವಳಿಕೆಯ ಕಲಿಸಿಕೊಡಲು ನಾನ­ಲ್ಲದೇ  ಬೇರೆ ಯಾರಿದ್ದಾರೆ? ಇಂಥ ನಡವಳಿಕೆ­ಗಳೆಲ್ಲ ಕುಟುಂಬದಲ್ಲಿ ಹಿರಿಯರನ್ನು ನೋಡಿ ಕಿರಿಯರಿಗೆ ತಿಳಿದು ಬರಬೇಕು. ಆದರೆ ಇಲ್ಲಿ ಒಂಟಿ ಸಂಸಾರ. ನಾನೇ ನೇರವಾಗಿ ತಿಳಿ ಹೇಳಬೇಕು. ಆದರೆ ನನ್ನ ಮಾತನ್ನು ಇವಳು  ಅಪಾರ್ಥ ಮಾಡಿ­ಕೊಂಡರೆ?ನನಗೆ ರಜೆ ಇದ್ದಾಗಲಾದರೂ ಇವರ ಕೆಲಸಗ­ಳನ್ನು ಇವಳಿಗೆ ಬಿಟ್ಟು­ಕೊಡಬಾರದು ಎಂದು­ಕೊಳ್ಳುತ್ತೇನೆ. ಆದರೆ ಈ ಹುಡುಗಿ ಬಹಳ ಚೂಟಿ, ಪಾದರಸ­ದಂತೆ ಓಡಾ­ಡುತ್ತಾ ಸಮಯಕ್ಕೆ ಸರಿ­ಯಾಗಿ  ಇವರ ಬೇಕು ಬೇಡಗಳನ್ನೆಲ್ಲ ಸಿದ್ಧಪಡಿಸಿ­ಬಿಡು­ತ್ತಾಳೆ. ಊಟದ ಸಮಯದಲ್ಲಿ ಟೇಬಲ್ ಮೇಲೆ ಎಲ್ಲವನ್ನೂ ಜೋಡಿಸಿಟ್ಟಿರುತ್ತಾಳೆ. ಇವರು ಎಂದಿನಂತೆ  ‘ಲತಾ ಊಟ ಹಾಕು’ ಎನ್ನುತ್ತಲೇ ಕುರ್ಚಿ ಮೇಲೆ ಕೂರುತ್ತಾರೆ.  ನಾನು ಒಳ ಬರುವ ಮೊದಲೇ ಇವಳು ಅನ್ನ ಬಡಿಸಿ ಮುಗಿದಿರುತ್ತದೆ. ಸಾರು ಬಡಿಸಲು ಸೌಟನ್ನು ಎತ್ತಿಕೊಂಡು ತಕ್ಷಣ ಕೆಳಗಿಡುತ್ತೇನೆ. ಇವಳ ಕೆಲಸದಲ್ಲಿ ನಾನು ಮೂಗು ತೂರಿಸುತ್ತಿ­ದ್ದೇನೆಯೇ ಅಥವಾ ನನ್ನ ಹಕ್ಕನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಿದ್ದೇನೆಯೇ?  ಇವಳು ಬಡಿಸುವುದನ್ನು ಮುಂದುವರಿಸುತ್ತಾಳೆ.ಇವರಿಗೆ ರಾತ್ರಿ ಎಂಟು ಗಂಟೆಗೆ ಊಟವಾಗ­ಬೇಕು. ನಾನು ಆಫೀಸಿನಿಂದ ಬಂದವಳೇ ಏನಾದರೂ ತಿಂದಿರುತ್ತೇನೆ. ಅಷ್ಟು ಬೇಗ ಊಟ ರುಚಿಸುವುದಿಲ್ಲ.  ಮಕ್ಕಳದು  ಮೊದಲೇ ಮುಗಿದಿ­ರುತ್ತದೆ. ಇಲ್ಲೇ ಇವರ ಬಳಿ ಕುಳಿತಿರಲೇ ಎಂದುಕೊಳ್ಳುತ್ತೇನೆ. ಇವರು ನಡುನಡುವೆ, ಲತಾ ನೀರು ಕೊಡು, ಮೊಸರು ಬಡಿಸು ಎನ್ನು­ತ್ತಿ­­ರುತ್ತಾರೆ. ಇವಳು ಇವರ ಆಜ್ಞೆ ನೆರವೇರಿಸಲು  ಕಾದು ನಿಲ್ಲುತ್ತಾಳೆ. ನನಗೆ ಒಂಥರಾ ಮುಜುಗರ. ‘ಲತಾ ಬಾಗಿಲು ಹಾಕಿದ್ದೀಯಾ? ನೋಡಿ ಬಾ’ ಎನ್ನುತ್ತೇನೆ. ಆಕೆ ಬಾಗಿಲು ಅಗಳಿ ಹಾಕಲು ಮರೆ­ಯುವವಳಲ್ಲ, ಅದು ನನಗೂ ಗೊತ್ತು. ‘ಬಾಗಿಲನ್ನ ಆಗಲೇ ಹಾಕಿ­ದ್ದೇನೆ’ ಎನ್ನುತ್ತಾ ಇವಳು ಕದಲದೇ ನಿಲ್ಲುತ್ತಾಳೆ. ಇವರು ಊಟದಲ್ಲಿ ಮಗ್ನ. ನನ­ಗಿ­ಲ್ಲೇನು ಕೆಲಸ? ನಾನು ಹೊರಗೆ ನಡೆದು ಬಿಡುತ್ತೇನೆ.ನಾನಿಲ್ಲಿ ಯಜಮಾನಿಯೂ ಅಲ್ಲ, ಗೃಹಿಣಿಯೂ ಅಲ್ಲ.  ಯಜಮಾನ ಇವರು. ಇವರ ಆಜ್ಞೆ ಇವಳಿಗೆ, ಇವಳು ಆಜ್ಞಾಧಾರಿಣಿ. ಇಲ್ಲಿ ನನ್ನ ಸ್ಥಾನವೇನು?  ಏನೋ ಎಲ್ಲೋ ಕೊಂಡಿ ಕಳಚುತ್ತಿದೆಯೇ? ಇಲ್ಲಿ ಯಾರ  ನಡವಳಿಕೆ ದಿಕ್ಕು ತಪ್ಪುತ್ತಿದೆ? ನನ್ನದೇ? ಇವಳದೇ? ಇವರದೇ? ಹೇಳಿದಂತೆ ಮಾಡಬೇಕೆಂಬ ಸೇವಾ  ನೀತಿ ಇವಳದು.  ಈ ನಡವಳಿಕೆಗೆ ಪ್ರಾಯದ ಸೋಂಕು ತಗಲು­ತ್ತಿದೆಯೇ? ಗಂಡಸನ್ನು  ತೃಪ್ತಿಪಡಿಸುವ ಆಂತರ್ಯದ ಯಾವುದೋ ಸೆಳೆತ, ಸಹಜವಾದ ಪ್ರಾಕೃತಿಕ ಪ್ರೇರಣೆ ಇವಳನ್ನು  ಇಷ್ಟೊಂದು ಚೂಟಿಯಾಗಿ ಇರಿಸಿದೆಯೇ? ಇರಬಹುದು. ಆದರೆ ಇವಳಿಗೆ ಇದೀಗ ಇದರ ಸ್ಪಷ್ಟ  ಕಲ್ಪನೆಯಿಲ್ಲ. ಗಿಡ ಚಿಗುರೊಡೆಯುವಂತೆ ನೈಸರ್ಗಿ­ಕವಾಗಿ  ಕೆಲಸಗಳು ನಡೆಯುತ್ತಾ ಇವೆ.  ಈಗ ಇದು ಸಹಜವಾಗಿರಬಹುದು.  ಆದರೆ ಇನ್ನು ಕೆಲವು ತಿಂಗಳು, ವರ್ಷ ಕಳೆದಾಗ  ಏನಾಗಬಹುದು? ಇದೇ ರೀತಿ ಇವರು ಇವಳನ್ನು ಪ್ರತಿ ಬಾರಿಯೂ ಕರೆಯು­ವರು. ಇವಳು ಕೂಡಲೇ ಇವರ ಬೇಕು ಬೇಡಗಳನ್ನು ಪೂರೈಸುವುದು ಅವಿರತವಾಗಿ ನಡೆದರೆ  ತನ್ನ ನಡವಳಿಕೆಯಲ್ಲಿ ಏನೋ ವಿಶೇಷ ಇದೆಯೆಂಬುದು ಸ್ಪಷ್ಟವಾಗಿ ಇವಳಿಗೇ ತಿಳಿಯುತ್ತದೆ. ಆಗ ಇಬ್ಬರ ನಡುವಿನ ಕೊಂಡಿ ಗಟ್ಟಿಯಾದರೆ?ಇವಳೇನೋ ಮುಗ್ಧೆ ಬಿಡಿ. ಇವರು? ತನ್ನ ನಡವಳಿಕೆ ತುಸು ಅತಿಯಾಯಿತು ಎಂಬುದು ಇವರಿಗೆ ಅರ್ಥವಾಗುವುದಿಲ್ಲವೇ?  ಅರ್ಥವಾದರೆ ಅದು ಅವರಿಗೆ ಇಷ್ಟವೇ? ಇರಬಹುದು, ಹೆಂಡತಿ ಮನೆಯಲ್ಲಿದ್ದಾಗ  ಅವಳನ್ನೇ ಕರೆಯುತ್ತಾ ಅಡುಗೆ ಮನೆ ಪ್ರವೇಶಿಸುವ ಸುಖ ಇವರಿಗೆ ಬೇಡವೇ?‘ಶಶಿಯನ್ನು ಮಲಗಿಸುತ್ತಿದ್ದೆ. ನನ್ನನ್ನೇ ಕರೆಯಬೇಕಿತ್ತು.  ನಾನೇ ಬಡಿಸಲು ಬರುತ್ತಿದ್ದೆ’ ಮೆಲ್ಲನೆ ನುಡಿದವಳು ಟೇಬಲ್ ಬಳಿ ನಿಂತೆ. ಮತ್ತೆ ಹಿಂದಿರುಗಿದೆ.  ‘ಅಲ್ಲಾರೀ ಅವಳು ಮುಗ್ಧ ಹುಡುಗಿ ನಿಜ. ಆದರೆ ಈಗ ಅವಳ ಪ್ರಾಯ ಮೊಳೆಯುತ್ತಿದೆ. ನೀವು ಗಂಡಸು. ಮತ್ತೆ ಮತ್ತೆ ಅವಳನ್ನೇ ಕರೆಯುತ್ತ ಅವಳನ್ನೇ ಬಹುವಾಗಿ ಅವಲಂಬಿಸಿಕೊಂಡರೆ ಅವ­ಳಲ್ಲಿ ಪ್ರಾಯಕ್ಕೆ ಸಹಜ ಭಾವನೆಗಳು ತಾಳಬ­ಹುದು. ಇದಕ್ಕೆ ಇಂಬು ಕೊಡದ ಹಾಗೆ ನೋಡಿಕೊ­ಳ್ಳು­ವುದು ನಮ್ಮಿಬ್ಬರ ಕರ್ತವ್ಯ ಅಲ್ಲವೇ?’ ‘ಏನಾಯ್ತೀಗ, ಅಡುಗೆ ಮಾಡಿದವಳು ಅವಳು, ಅವಳೇ ಬಡಿಸಲಿ ಬಿಡು’. ‘ಆದರೂ ಇಲ್ಲಿಯ ಸೂಕ್ಷ್ಮವನ್ನು ನೀವು ತಿಳಿಯುವುದು ಒಳ್ಳೆಯದು’. ‘ಸೂಕ್ಷ್ಮ ಏನದು? ಅದು ನಿನ್ನ ಭ್ರಮೆ ಇರಬಹುದು’. ‘ಆದರೆ ಇದು ಭ್ರಮೆಯೋ ವಾಸ್ತವವೋ ತಿಳಿಯು­ವುದಕ್ಕೆ ಕಾಲ ಹಿಡಿಯುತ್ತದೆ. ಕೊಂಡಿ ಕಳಚುವು­ದಿಲ್ಲವೆಂದು ನಿರ್ದಿಷ್ಟವಾಗಿ ಯಾರೂ ಹೇಳಲಾರರು’. ‘ಏನದು ಕೊಂಡಿ ಗಿಂಡಿ,  ಹೋಗು ಮಲಗು ರಾತ್ರಿಯಾಯಿತು’.‘ಲತಾ ಈ ಹೊತ್ತು ನಾನು ಆಫೀಸಿಗೆ ಹೋಗುವುದಕ್ಕೆ ತಡವಾಗುತ್ತದೆ. ಚಹಾ ತಯಾರಾದ ಕೂಡಲೇ  ಹೇಳು, ನಾನೇ ಇವರಿಗೆ ಸೋಸಿ ಕೊಡುತ್ತೇನೆ’ ಎಂದಾಗ ಫೋನ್ ಕರೆ. ನಾನು ಮಾತು ಮುಗಿಸಿ ಒಳ ಬರುತ್ತೇನೆ.ಇವಳು ಸೋಸಿಟ್ಟ ಚಹಾದ ಕಪ್ ಎತ್ತಿಕೊಳ್ಳಲು ಪ್ರಯತ್ನಿಸುತ್ತೇನೆ. ‘ಪರವಾಗಿಲ್ಲ ಬಿಡಿ. ನಿಮಗೂ ಚಹಾ ಸೋಸಿ ಇಟ್ಟಿದ್ದೇನೆ’ ಎನ್ನುತ್ತಾ ಕಪ್ ಎತ್ತಿಕೊಂಡು ಇವರತ್ತ ನಡೆದೇಬಿಡುತ್ತಾಳೆ ಅವಳು.

                       

ಪ್ರತಿಕ್ರಿಯಿಸಿ (+)