ಮಂಗಳವಾರ, ಮೇ 24, 2022
30 °C

ಕೊಟ್ಟ ಮಾತು ಮರೆತ ಸರ್ಕಾರ!

ಪ್ರಜಾವಾಣಿ ವಾರ್ತೆ, ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯುತ್ ಕಡಿತ ಆಗದೇ ಇರಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಕಡಿತ ಅನಿವಾರ್ಯವಾದಲ್ಲಿ ಯಾವ ಭಾಗದಲ್ಲಿ ಯಾವ ಅವಧಿಯಲ್ಲಿ ಕಡಿತವಾಗಲಿದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುವುದು.ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಕುರಿತು ಕೋರ್ಟ್ ನೀಡಿರುವ ಸೂಚನೆ ಪಾಲಿಸಲಾಗುವುದು, ವಿದ್ಯುತ್ ಪ್ರಸರಣ ನಿಗಮದ ವೆಬ್‌ಸೈಟ್‌ನಲ್ಲಿಯೂ ಈ ಬಗ್ಗೆ ಮಾಹಿತಿ ನೀಡಲಾಗುವುದು...~ಹೀಗೆ ಸರ್ಕಾರ ಕಳೆದ ಫೆಬ್ರುವರಿಯಲ್ಲಿ ಹೈಕೋರ್ಟ್‌ಗೆ ಲಿಖಿತ ಪ್ರಮಾಣ ಪತ್ರ ಸಲ್ಲಿಸಿತ್ತು. ತನ್ನ ಪ್ರಮಾಣ ಪತ್ರದ ಅನ್ವಯ ನಡೆದುಕೊಳ್ಳುವುದಾಗಿ ವಾಗ್ದಾನವನ್ನೂ ಮಾಡಿತ್ತು!ಈಗ ಪ್ರಮಾಣ ಪತ್ರ ಕೋರ್ಟ್ ಕಡತಗಳ ರಾಶಿಯಲ್ಲಿ ಸೇರಿಹೋಗಿದೆ. ಅದರಂತೆ ರಾಜ್ಯದ ಉನ್ನತ ನ್ಯಾಯಾಲಯದ ಮುಂದೆ ಸರ್ಕಾರ ಮಾಡಿರುವ ವಾಗ್ದಾನ ಜನಸಾಮಾನ್ಯರಿಗೆ ನೀಡುವ ಭರವಸೆಗಳಂತೆಯೇ ಮರೆಯಾಗಿದೆ.ವೇಳೆಯ ಮಿತಿಯೇ ಇಲ್ಲ: ವಿದ್ಯುತ್ ಕಡಿತ ಅನಿವಾರ್ಯ ಎನ್ನುವುದು ಸರ್ಕಾರದ ಸಮಜಾಯಿಷಿ. ಇದನ್ನು ಜನಸಾಮಾನ್ಯರೂ ಒಪ್ಪುತ್ತಾರೆ. ಆದರೆ ಕೋರ್ಟ್‌ಗೆ ಮಾಡಿರುವ ವಾಗ್ದಾನ ಏನಾಯಿತು ಎನ್ನುವುದು ಈಗಿರುವ ಪ್ರಶ್ನೆ. ವೇಳೆಯ ಮಿತಿ ಇಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ಇಲ್ಲ. ಕೊನೆಯ ಪಕ್ಷ ನಿಗಮದ ವೆಬ್‌ಸೈಟ್‌ನಲ್ಲಿಯೂ ಮಾಹಿತಿ ಇಲ್ಲ.ಇಂದು ವಿದ್ಯುತ್ ಕಡಿತಗೊಂಡ ಅವಧಿಯನ್ನು ಗಣನೆಗೆ ತೆಗೆದುಕೊಂಡು ಮಾರನೇ ದಿನದ ಕಾರ್ಯಕ್ರಮ ರೂಪಿಸಿದರೆ ಎಲ್ಲವೂ ಬುಡಮೇಲು. ಒಮ್ಮೆ ವಿದ್ಯುತ್ ಕಡಿತಗೊಳಿಸಿದರೆ ಅದು ಯಾವಾಗ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಒಂದು ದಿನ ಒಂದು ಗಂಟೆ, ಇನ್ನೊಂದು ದಿನ ಒಂದೂವರೆ, ಮತ್ತೊಮ್ಮೆ 2 ಗಂಟೆ. ರಾತ್ರಿ- ಹಗಲು ಎನ್ನದೆ ಮನಸೋಇಚ್ಛೆ ವಿದ್ಯುತ್ ಕಡಿತಗೊಳ್ಳುತ್ತಿರುವುದು ಸಾರ್ವಜನಿಕರಿಗೆ ನುಂಗಲಾಗದ ತುತ್ತಾಗಿದೆ.ಹೈಕೋರ್ಟ್‌ನಿಂದ ಕಿವಿಮಾತು: ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ವಕೀಲ ಜಿ.ಆರ್.ಮೋಹನ ಅವರು ಕಳೆದ ವರ್ಷ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ, ಗ್ರಾಮೀಣ ಪ್ರದೇಶದ ರೈತಾಪಿ ಜನರಿಗೆ ತೊಂದರೆ ಆಗದ ರೀತಿಯಲ್ಲಿ ವಿದ್ಯುತ್ ಕಡಿತಗೊಳಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಕಿವಿಮಾತು ಹೇಳಿತ್ತು.`ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಆರು ಗಂಟೆಯಾದರೂ ವಿದ್ಯುತ್ ಪೂರೈಕೆ ಆಗದಿದ್ದರೆ, ರೈತರು ಏನು ಮಾಡಬೇಕು. ಕೃಷಿ ಚಟುವಟಿಕೆಯ ಗತಿ ಏನಾಗಬೇಕು~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು.`ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುದ್ದೀಪ ನೀಡಬೇಕೆನ್ನುವ `ಗ್ರಾಮೀಣ ವಿದ್ಯುದೀಕರಣ ಕಾಯ್ದೆ~ ಜಾರಿಗೆ ಬಂದು ಅರ್ಧ ದಶಕ ಕಳೆದಿದೆ (ಇದು 1954ರ ಕಾಯ್ದೆ). ಆದರೆ ಇದುವರೆಗೆ ಏನೂ ಮಾಡಿದಂತೆ ತೋರುತ್ತಿಲ್ಲ~ ಎಂದು ಸರ್ಕಾರವನ್ನು ನ್ಯಾಯಮೂರ್ತಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ಕಾಯ್ದೆಯ ಜಾರಿಗೆ ಕ್ರಮ ತೆಗೆದುಕೊಳ್ಳುವಂತೆಯೂ ಅವರು ಸೂಚಿಸಿದ್ದರು.ಪಾಲನೆಯಾಗದ ಆದೇಶ: `ಆದರೆ ಕೋರ್ಟ್‌ನ ಆದೇಶವನ್ನಾಗಲೀ, ಮೌಖಿಕ ಸೂಚನೆಯನ್ನಾಗಲೀ ಸರ್ಕಾರ ಕಿವಿ ಮೇಲೆ ಹಾಕಿಕೊಂಡಂತಿಲ್ಲ. ಈ ರೀತಿಯ ವಿದ್ಯುತ್ ಸಮಸ್ಯೆ ಎದುರಾದರೆ ಅದನ್ನು ಯಾವ ರೀತಿ ನಿವಾರಿಸಿಕೊಳ್ಳಬೇಕು ಎಂದು 2003ರ ವಿದ್ಯುತ್ ಕಾಯ್ದೆ ಹಾಗೂ 2005ರ ವಿದ್ಯುತ್ ನಿಯಮಗಳಲ್ಲಿ  ಉಲ್ಲೇಖಿಸಲಾಗಿದೆ. ಆದರೆ ಅದನ್ನು ಸರ್ಕಾರ ಅನುಸರಿಸುತ್ತಿಲ್ಲ.ರಾಷ್ಟ್ರೀಯ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಅನ್ನು ಆಯಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಇದರ ದುರ್ಬಳಕೆ ಆಗುತ್ತಿದೆ~ ಎನ್ನುತ್ತಾರೆ ವಕೀಲ ಮೋಹನ್. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 45,982 ವಿದ್ಯುತ್ ಕಳ್ಳತನ ಪ್ರಕರಣಗಳು ದಾಖಲಾಗಿವೆ.ಸಂಜೆ 6ರಿಂದ ಬೆಳಿಗ್ಗೆ 9ರವರೆಗೂ ಬೀದಿ ದೀಪಗಳು ಉರಿಯುತ್ತಲೇ ಇರುತ್ತವೆ. ಇದರಿಂದ ವಿದ್ಯುತ್ ಕೊರತೆ ಉಂಟಾಗಿದೆ ಎನ್ನುವುದು ಅವರ ಆರೋಪ. ಹೈಕೋರ್ಟ್ ಆದೇಶದ ಉಲ್ಲಂಘನೆ ಆರೋಪದ ಮೇಲೆ ನಿಗಮಕ್ಕೆ ಈಗಾಗಲೇ ಅವರು `ಲೀಗಲ್ ನೋಟಿಸ್~ ನೀಡಿ ಅದರ ಉತ್ತರಕ್ಕೆ ಕಾದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.