ಸೋಮವಾರ, ಮೇ 17, 2021
21 °C

ಕೊಡವ ಅಕಾಡೆಮಿ: ರೂ. 1 ಕೋಟಿ ಕ್ರಿಯಾ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಹಾಗೂ ಅವರ ತಂಡವು ಪ್ರಸಕ್ತ 2012-13ನೇ ಸಾಲಿಗಾಗಿ ಸುಮಾರು ರೂ1.02 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ರೂಪಿಸಿದೆ.ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಡ್ಡಂಡ ಕಾರ್ಯಪ್ಪ ಅವರು ಇದರ ಬಗ್ಗೆ ಮಾಹಿತಿ ನೀಡಿದರು. ಕೊಡವ ಭಾಷೆಯ ಜಾಗೃತಿಯ ಕಾರ್ಯಕ್ರಮದ ಅಂಗವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ `ಕೊಡವ ಭಾಷೆ ಕಲಿಯಿರಿ ಮತ್ತು ಕಲಿಸಿರಿ~ ಎನ್ನುವ ಅಭಿಯಾನ ಹೊರಡಿಸಲಾಗುವುದು. ಕೊಡವ ಕಲಿಕೆಯ ಶಿಬಿರಗಳನ್ನು ಏರ್ಪಡಿಸುವುದು ಮುಖ್ಯ ಉದ್ದೇಶಎಂದರು.ಕೊಡವ ಸಂಸ್ಕೃತಿ ಹಾಗೂ ಕೃಷಿ ಸಂಸ್ಕೃತಿ ವಿಷಯದಲ್ಲಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ. ಮಳೆ-ಬೊಳೆ ವಿಷಯದಲ್ಲಿ ಕವಿಗೋಷ್ಠಿ ಮತ್ತು ನಾಟಿ ಗದ್ದೆಯಲ್ಲಿ ವಿಶೇಷ ಕಾರ್ಯಕ್ರಮಗಳೂ ಇದರಲ್ಲಿ ಸೇರಿವೆ ಎಂದು ಹೇಳಿದರು.ಐನ್‌ಮನೆ ಮಹತ್ವದ ಬಗ್ಗೆ ಜಾಗೃತಿ, ವಿಚಾರ ಸಂಕಿರಣ, ಕೊಡಗಿನ ಎಲ್ಲ ದೇವಸ್ಥಾನಗಳ ಬಗ್ಗೆ ಪರಿಚಯಿಸುವ ಪುಸ್ತಕ ಪ್ರಕಟಣೆ, ಕೊಡವ ಜನಪದ ಕಲೆಗಳ ಬಗ್ಗೆ ತರಬೇತಿ ಶಿಬಿರ ಹಾಗೂ ದೇವರ ಕಾಡುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗುವುದು ಎಂದರು.ಖ್ಯಾತ ತ್ರಿಭಾಷಾ ಕವಿಯಾದ ಡಾ.ಐ.ಮಾ. ಮುತ್ತಣ್ಣರ ಸಮಗ್ರ ಸಾಹಿತ್ಯ ಪರಿಚಯಿಸುವುದು, ವಿಚಾರಗೋಷ್ಠಿ, ನಾಟಕ ಪ್ರದರ್ಶನ, ಕೆಲವು ಪುಸ್ತಕಗಳ ಅನುವಾದ, ಕವನಗಳ ಸಿ.ಡಿ. ಪ್ರಕಟಣೆ, ಆದಿಕವಿ ಹರದಾಸ ಅಪ್ಪಚ್ಚಕವಿಯ ನಾಟಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕೊಡವ ನಾಟಕಗಳ ಶಿಬಿರ, ಖ್ಯಾತ ಸಂಗೀತ ವಿದ್ವಾಂಸ `ಕೂರ್ಗ್ ಸ್ಟಾರ್~ ಎಂದೇ ಖ್ಯಾತರಾದ ಚಕ್ಕೇರ ಅಪ್ಪಯ್ಯನವರ ಸ್ಮರಣೆಯಲ್ಲಿ ಕೊಡವ, ಹಿಂದೂಸ್ಥಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವ ನಡೆಸಲಾಗುವುದು ಎಂದು ಹೇಳಿದರು.   ಪರಿಶಿಷ್ಟ ಜನಪದೋತ್ಸವ, ಖ್ಯಾತ ಸಾಹಿತಿ ಬಿ.ಡಿ. ಗಣಪತಿಯವರ ಸ್ಮರಣೆಯಲ್ಲಿ ಸಾಹಿತ್ಯದ ಬಗ್ಗೆ ವಿಚಾರಗೋಷ್ಠಿ, ಮಡಿಕೇರಿ ಕೋಟೆ ಮತ್ತು ಗದ್ದುಗೆಯಲ್ಲಿ ಕೊಡವ ಸಂಗೀತ ರಸಮಂಜರಿ ಕಾರ್ಯಕ್ರಮ, ಕೊಡವ ಭಾಷೆ, ಸಂಸ್ಕೃತಿಗಾಗಿ, ಶಿಲ್ಪ ಕಲಾವಿದರಿಗೆ ಸನ್ಮಾನ, ಹೊರ ಜಿಲ್ಲೆಗಳಲ್ಲಿಯೂ ಕೊಡವ-ಕನ್ನಡ ಕವಿಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.ಡಿಸೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಕೊಡವ ಸಾಹಿತ್ಯ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸುವುದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ನಡಿಕೇರಿಯಂಡ ಚಿಣ್ಣಪ್ಪ, ಡಾ.ಐ.ಮಾ. ಮುತ್ತಣ್ಣ, ಬಿ.ಡಿ.ಗಣಪತಿ, ಕೊಡಗ್‌ರ ನಕ್ಷತ್ರ ಚಕ್ಕೇರ ಅಪ್ಪಯ್ಯ, ಈ ಖ್ಯಾತನಾಮರ ಜಯಂತಿಯನ್ನು ಆಚರಿಸಲಾಗುವುದು ಎಂದರು.ಕೊಡವ ಚಲನಚಿತ್ರಗಳ ಪ್ರದರ್ಶನ, ಚಿತ್ರ ಬಿಡಿಸುವ ಸ್ಪರ್ಧೆ, ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವುದು, ವಿವಿಧ ಜಾನಪದ ಹಾಡು-ನೃತ್ಯಗಳ ಶಿಬಿರ ನಡೆಸುವುದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಕಾಡೆಮಿ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.ಬೇರೆ ಭಾಷಿಕರ ಉತ್ತಮ ಸಾಹಿತ್ಯಗಳನ್ನು ಕೊಡವ ಭಾಷೆಗೆ ಅನುವಾದ ಮಾಡುವುದು, ಅಕಾಡೆಮಿಯ ಕಾರ್ಯಚಟುವಟಿಕಗಳ ಬಗ್ಗೆ `ಅಕಾಡೆಮಿರ ಪಳಮೆ~ ಎನ್ನುವ ತ್ರೈಮಾಸಿಕ ಪತ್ರಿಕೆಯನ್ನು ಹೊರತರುವುದು, ಕೊಡವ ವಾದ್ಯದ ಪರಿಕರಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.ಇದರ ಜೊತೆಗೆ ಕನ್ನಡ ಸಾಂಸ್ಕೃತಿಕ ಸಮುಚ್ಚಯ ಭವನದ ನಿರ್ಮಾಣಕ್ಕೆ ಸಹಕಾರ ನೀಡುವುದು ಹಾಗೂ ಕೊಡವ ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಲು ಅಗತ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.ಈಗಾಗಲೇ ಅಕಾಡೆಮಿಯ ಬಳಿ ರೂ 37 ಲಕ್ಷ ಅನುದಾನ ಇದ್ದು, ಬಾಕಿ ಎರಡನೇ ಹಂತದಲ್ಲಿ ರೂ 40 ಲಕ್ಷ ಹಾಗೂ ಮೂರನೇ ಹಂತದಲ್ಲಿ ರೂ 25 ಲಕ್ಷ ಅನುದಾನವನ್ನು ಪಡೆಯಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಕಸ್ತೂರಿ ಗೋವಿಂದಮಯ್ಯ, ಚೇರ್ಮಂಡ ಪೂವಯ್ಯ, ರಿಜಿಸ್ಟ್ರಾರ್ ಎನ್.ಶಾಂತಮ್ಮ, ಖಜಾಂಚಿ ಎಚ್.ವಿ. ಇಂದಿರಮ್ಮ, ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.